• Home
  • »
  • News
  • »
  • mangaluru
  • »
  • Mangaluru: ಮಂಗಳೂರಿನ ಈ ರಸ್ತೆಗಳಲ್ಲಿ ಓಡಾಡ್ಬೇಡಿ!

Mangaluru: ಮಂಗಳೂರಿನ ಈ ರಸ್ತೆಗಳಲ್ಲಿ ಓಡಾಡ್ಬೇಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mangaluru Dasara: ಟ್ರಾಫಿಕ್ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಓಡಾಟ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.

  • Share this:

    ಮಂಗಳೂರು: ಅಕ್ಟೋಬರ್ 5 ರ ಬುಧವಾರದಂದು 'ಮಂಗಳೂರು ದಸರಾ' (Mangaluru Dasara) ಅದ್ಧೂರಿ ಮೆರವಣಿಗೆ ಮೂಲಕ ಸಂಪನ್ನಗೊಳ್ಳಲಿದೆ. ಭವ್ಯ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ಜಾತಿ, ಮತ ಮರೆತು ಮಂಗಳೂರು ನಗರದ ಹೃದಯಭಾಗದಲ್ಲಿ ಜಮಾವಣೆಗೊಳ್ಳಲಿದ್ದಾರೆ. ನಾಳೆ ಸಾಯಂಕಾಲ 4 ಗಂಟೆಗೆ ಪೂಜೆ ನಡೆದು ಬಳಿಕ ಶೋಭಾಯಾತ್ರೆ (Mangaluru Shobayatre) ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಅಕ್ಟೋಬರ್ 6 ರಂದು ಪ್ರಾತಃಕಾಲದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿಯೇ ವಿಸರ್ಜನೆಗೊಳ್ಳಲಿದೆ. ನಾಳೆ ಇಡೀ ಲಕ್ಷಾಂತರ ಮಂದಿ ಶಾರದೆ ಹಾಗೂ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ (Kudroli Gokarnath Temple Mangaluru) ಆಗಮಿಸಲಿದ್ದಾರೆ. ಹೀಗಾಗಿ ಟ್ರಾಫಿಕ್ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಓಡಾಟ ನಿಷೇಧಿಸಿ ಮಂಗಳೂರು ನಗರ ಪೊಲೀಸ್ (Mangaluru Police) ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.


    ನಿಷೇಧಾಜ್ಞೆ ಸಮಯ
    ಸಾರ್ವಜನಿಕ ವಾಹನಗಳ ಮೇಲಿನ ನಿಷೇಧಾಜ್ಞೆಯು ಅಕ್ಟೋಬರ್ 5ರ ಮಧ್ಯಾಹ್ನ 2 ಗಂಟೆಯಿಂದ ಅಕ್ಟೋಬರ್ 6ರ ಮುಂಜಾವ 6 ಗಂಟೆವರೆಗೆ ವಿಧಿಸಲಾಗಿದೆ.


    ಎಲ್ಲೆಲ್ಲ ಓಡಾಟ ನಿರ್ಬಂಧ?
    ಭವ್ಯ ಶೋಭಾಯಾತ್ರೆ ಹಾದು ಹೋಗುವ ಲಾಲ್ ಬಾಗ್, ಪಿವಿಎಸ್, ಎಂ.ಜಿ.ರೋಡ್ ಮಾತ್ರವಲ್ಲದೇ KSRTC, ಬಿಜೈ, ಉರ್ವ, ಬಂಟ್ಸ್ ಹಾಸ್ಟೆಲ್, ಕೊಟ್ಟಾರಚೌಕಿಯಿಂದ ನಗರದ ಒಳಪ್ರವೇಶಿಸುವ ರಸ್ತೆಗಳಲ್ಲೂ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.


    ಸಂಚಾರದಲ್ಲಿ ಬದಲಾವಣೆ ಹೀಗಿದೆ
    ಕೊಟ್ಟಾರ ಚೌಕಿ ಜಂಕ್ಷನ್ ಮುಖಾಂತರ ನಗರಕ್ಕೆ ಬರುವ ವಾಹನಗಳ ನಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗೂ ವಾಹನಗಳು ಕುಂಟಿಕಾನ, ಕೆ.ಪಿ.ಟಿ, ನಂತೂರು ಮಾರ್ಗವಾಗಿ ನಗರ ಪ್ರವೇಶಿಸಬಹುದು.


    ಬ್ರಹ್ಮಶ್ರೀ ನಾರಾಯಣಗುರು (ಲೇಡಿಹಿಲ್) ವೃತ್ತದ ಮುಖೇನ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
    ಇನ್ನು ಲಾಲ್‍ಬಾಗ್ ಮಾರ್ಗವಾಗಿ ಕುಂಟಿಕಾನ ಹಾಗೂ ಕೆ.ಪಿ.ಟಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.


    KSRTC ರಸ್ತೆಯಲ್ಲೂ ಸಂಚಾರ ನಿಷೇಧ
    ಕೆ.ಎಸ್.ಆರ್.ಟಿ.ಸಿ. (KSRTC) ರಸ್ತೆಯಿಂದ ಎಂ.ಜಿ. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಿ.ವಿ.ಎಸ್ ಮಾರ್ಗವಾಗಿ ಬಂಟ್ಸ್ ಹಾಸ್ಟೆಲ್ ಮೂಲಕ ಸಂಚರಿಸುವುದು. ಅಂಬೇಡ್ಕರ್ ಸರ್ಕಲ್ ಮೂಲಕ ಎಂ.ಜಿ ರಸ್ತೆಗೆ ಸಾಗುವ ವಾಹನಗಳು ಬಂಟ್ಸ್ ಹಾಸ್ಟೆಲ್‍ನಿಂದ ಸಂಚರಿಸಬಹುದು.


    ನಗರದಿಂದ ಹೊರ ಹೋಗಲು ಈ ಮಾರ್ಗ ಬಳಸಿ
    ನ್ಯೂ ಚಿತ್ರಾ ಜಂಕ್ಷನ್‍ನಿಂದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಕಡೆಗೆ ಸಂಚರಿಸುವ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ನ್ಯೂ ಚಿತ್ರಾ ಜಂಕ್ಷನ್‍ನಿಂದ ಕಂಡತ್‍ಪಳ್ಳಿ, ಮಂಡಿ, ಕುದ್ರೋಳಿ, ಬೊಕ್ಕಪಟ್ಟ, ಸುಲ್ತಾನ್‍ಬತ್ತೇರಿ ಮೂಲಕ ಉರ್ವಮಾರ್ಕೆಟ್ ಮಾರ್ಗವಾಗಿ ನಗರದಿಂದ ಹೊರ ಹೋಗುವುದು ಹಾಗೂ ನ್ಯೂ ಚಿತ್ರಾ ಜಂಕ್ಷನ್‍ನಿಂದ ಡೊಂಗರಕೇರಿ ವೆಂಕಟರಮಣ ದೇವಸ್ಥಾನ ಜಂಕ್ಷನ್, ರಾಷ್ಟ್ರ ಕವಿ ಎಂ. ಗೋವಿಂದ ಪೈ ವೃತ್ತ, ಪಿ.ವಿ.ಎಸ್ ಮಾರ್ಗವಾಗಿ ಮುಂದುವರೆದು ಬಂಟ್ಸ್ ಹಾಸ್ಟೆಲ್ ಕಡೆಗೆ ಸಂಚರಿಸಬಹುದು.


    ಇದನ್ನೂ ಓದಿ: Udupi Special: ಹಬ್ಬದ ಸ್ಪೆಷಲ್! 100 ಕಲಾವಿದರಿಂದ ಒಂದೇ ಸಲ ವೀಣಾ ವಾದನ ಕೇಳಿ


    ಕುದ್ರೋಳಿ ದೇಗುಲ ರಸ್ತೆ ಬಂದ್
    ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಕಡೆಯಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೆರವಣಿಗೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.


    KSRTC ಬಸ್​ನಲ್ಲಿ ಬರುವವರ ಗಮನಕ್ಕೆ
    ಕೆ.ಎಸ್.ಆರ್.ಟಿ.ಸಿ. (KSRTC) ಬಸ್ಸು ನಿಲ್ದಾಣಕ್ಕೆ ಬಂದು ಹೋಗುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಪೈಕಿ ಪಂಪ್‍ವೆಲ್ ಕಡೆಗೆ ಸಂಚರಿಸುವ ಬಸ್ಸುಗಳು ಕೆ.ಪಿ.ಟಿ ಜಂಕ್ಷನ್ ಮೂಲಕ ಮತ್ತು ಉಡುಪಿ ಕಡೆಗೆ ಸಂಚರಿಸುವ ಬಸ್ಸುಗಳು ಕುಂಟಿಕಾನ ಜಂಕ್ಷನ್ ಮೂಲಕ ಸಂಚರಿಸಲಿದೆ.


    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    ಟ್ಯಾಬ್ಲೋ ಇರುವ ರಸ್ತೆಯೂ ಬಂದ್
    ಕುದ್ರೋಳಿ ನಾರಾಯಣಗುರು ಕಾಲೇಜು ಬಳಿಯಿಂದ ನವದುರ್ಗೆಯರ ಟ್ಯಾಬ್ಲೊಗಳು ತಯಾರಿಗೊಂಡು ದೇವಸ್ಥಾನಕ್ಕೆ ಬರಲಿರುವುದರಿಂದ ಕುದ್ರೋಳಿ ನಾರಾಯಣ ಗುರು ಕಾಲೇಜು ಜಂಕ್ಷನ್ ರಸ್ತೆಯಿಂದ ಬರ್ಕೆ ಜಂಕ್ಷನ್ ತನಕ ಮತ್ತು ಬರ್ಕೆ ಜಂಕ್ಷನ್‍ನಿಂದ ದುರ್ಗಾಮಹಲ್ ಜಂಕ್ಷನ್‍ವರೆಗೆ ಹಾಗೂ ದುರ್ಗಾಮಹಲ್ ಜಂಕ್ಷನ್‍ನಿಂದ ಅಳಕೆ ಬ್ರಿಡ್ಜ್ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.


    ವರದಿ: ಇರ್ಷಾದ್ ಕಿನ್ನಿಗೋಳಿ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು