Mangaluru: ಮಧ್ಯವರ್ತಿಗಳಿಲ್ಲದೇ ವಿದೇಶಿ ಉದ್ಯೋಗಕ್ಕೆ ಹೀಗೆ ತೆರಳಿ; ಸರಕಾರ ನೀಡುತ್ತೆ ಸಾಥ್

ವಿದೇಶಗಳಲ್ಲಿ ಉದ್ಯೋಗ ದೊರಕಿಸಿ ಕೊಡುವ ನೆಪದಲ್ಲಿ ವಂಚಿಸುವ ಅದೆಷ್ಟೋ ಏಜೆನ್ಸಿಗಳಿವೆ. ಹೀಗಾಗಿ ರಾಜ್ಯ ಸರಕಾರ ಇಂತಹ ವಂಚನೆಯಿಂದ ಯುವ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು: ವಿದೇಶದಲ್ಲಿ ಉದ್ಯೋಗಕ್ಕಾಗಿ ಹಾತೊರೆಯುವ ಅದೆಷ್ಟೋ ಯುವ ಜನತೆಯು ಏಜೆನ್ಸಿಗಳಿಂದ ಮಹಾಮೋಸಕ್ಕೆ ಬಲಿಯಾಗುತ್ತಿರುವುದೇ ನಡೆದೇ ಇದೆ. ಲಕ್ಷಾಂತರ ರೂಪಾಯಿ ನೀಡಿ ವಿದೇಶಕ್ಕೆ ಹಾರುವ ಕನಸು ಕಂಡವರಿಗೆ ಕೊನೆ ಕ್ಷಣದಲ್ಲಿ ಏಜೆಂಟ್​​ಗಳು ಪಂಗನಾಮ ಹಾಕಿದ ಘಟನೆಗಳು ಮಂಗಳೂರಿನಲ್ಲಂತೂ (Mangaluru News) ವರದಿಯಾಗುತ್ತಲೇ ಇವೆ. ಇನ್ನೂ ಕೆಲವು ಯುವಕರು ಕೈ ತುಂಬಾ ಸಂಬಳದ ಆಸೆಯಿಟ್ಟುಕೊಂಡು ವಿದೇಶದ ವಿಮಾನ ಹಿಡಿದರೆ, ಅಲ್ಲಿ ಇನ್ಯಾವುದೋ ಕಷ್ಟಕರ ಕೆಲಸ ನೀಡಿ, ಸಂಬಳಕ್ಕಾಗಿ ಅಲೆದಾಡಿಸುವ, ಪಾಸ್​ಪೋರ್ಟ್ ತೆಗೆದಿರಿಸಿ ಸತಾಯಿಸುವ ಅದೆಷ್ಟೋ ಮಾಲೀಕರು ಇದ್ದಾರೆ. ಇಂತಹ ಸಮಯದಲ್ಲಿ ಹೇಗೆ ಏಜೆಂಟರನ್ನು ನಂಬಬೇಕು? ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಅನ್ನೋದಕ್ಕೆ ಸರಕಾರವೇ ವೇದಿಕೆ ಒದಗಿಸುತ್ತಿದೆ. ಹಾಗಾಗಿ ಇಲ್ಲಿ ನೋ ಚೀಟಿಂಗ್, ನೋ ಮಿಡ್ಲ್ ಮೆನ್.. ಸೋ, ಆರಾಮದಾಯಕವಾಗಿ ವಿದೇಶಕ್ಕೆ ತೆರಳುವ ಕನಸನ್ನು ಅಡ್ಡಿ ಆತಂಕವಿಲ್ಲದೆ ನನಸಾಗಿಸಬಹುದು.

  KSDC ಯಿಂದ ಹೊಸ ಯೋಜನೆ
  ಹೌದು, ಇಂತಹ ಹೊಸ ಯೋಜನೆಯನ್ನು ರಾಜ್ಯ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ತನ್ನ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಡಿ ಪರಿಚಯಿಸುತ್ತಿದೆ. ಈಗಾಗಲೇ 250ಕ್ಕೂ ಅಧಿಕ ಮಂದಿ ಈ ನೂತನ ಯೋಜನೆಯಡಿ ವಿವಿಧ ದೇಶಗಳಿಗೆ ತೆರಳಿ ಕೆಲಸಗಿಟ್ಟಿಸಿಕೊಂಡಿದ್ದಾರೆ.

  ಅರ್ಜಿ ಸಲ್ಲಿಸುವುದು ಹೇಗೆ?
  ವಿದೇಶಗಳಿಗೆ ತೆರಳಿ ಉದ್ಯೋಗ ಮಾಡಬೇಕೆನ್ನುವ ಕನಸು ಕಾಣುವ ಯುವ ಜನತೆ ತಮ್ಮ ಸವಿವರಗಳ ಜೊತೆಗೆ ಸ್ಥಳೀಯ ವಲಸಿಗ ಸಂಪನ್ಮೂಲ ಕೇಂದ್ರ Migration Resource Centre's (MRC)ಗಳಿಗೆ ತೆರಳಿ ಅರ್ಜಿ ಭರ್ತಿ ಮಾಡಬಹುದು. ನಂತರ ಅರ್ಜಿದಾರರ ಪ್ರೊಫೈಲ್ ಗೆ ಸೂಕ್ತವಾದ ಉದ್ಯೋಗವನ್ನು ಕೇಂದ್ರದಿಂದ ಮಾಹಿತಿ ನೀಡಲಾಗುವುದು.

  ಎಲ್ಲೆಲ್ಲ ಇವೆ MRC ಕೇಂದ್ರಗಳು?
  ಈಗಾಗಲೇ ರಾಜ್ಯದ ಹಲವೆಡೆ ಕೇಂದ್ರಗಳು ಕಾರ್ಯಾರಂಭಿಸಿವೆ. ಆಸಕ್ತರು ಈ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರಗಳ ವಿವರ ಇಂತಿವೆ.
  1. ಮಂಗಳೂರು
  2. ಬೆಂಗಳೂರು
  3. ಕಲಬುರ್ಗಿ
  4. ಬೆಳಗಾವಿ

  ಇಲ್ಲವೇ ಈ ವೆಬ್ ಸೈಟ್ ಮೂಲಕ ಪಾಸ್ ಪೋರ್ಟ್ ಸಂಖ್ಯೆ ಸಹಿತ ಸವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
  ವೆಬ್ ಸೈಟ್ ಲಿಂಕ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

  ಆನ್​ಲೈನ್ ಪರೀಕ್ಷೆ
  ಆದರೆ, ಆಸಕ್ತ ಅರ್ಜಿದಾರರು ವಿದೇಶಕ್ಕೆ ತೆರಳುವ ಮುನ್ನ ಆನ್ ಲೈನ್ ಮೂಲಕ ಪರೀಕ್ಷೆಯನ್ನು (Online entrance examination) ಎದುರಿಸಬೇಕಾಗುತ್ತದೆ. ಎಕ್ಸಾಂ ಫೀಸ್ ಆಗಿ ₹15,500 ಪಾವತಿಸಬೇಕಾಗುತ್ತದೆ. ಮೊದಲ ಸಲದ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಲ್ಲಿ, ಅದರ ನಂತರದ ವಾರದಲ್ಲಿ ಮತ್ತೊಂದು ಬಾರಿ ಅವಕಾಶವನ್ನು ನೀಡಲಾಗುತ್ತದೆ.

  ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ 9110248485 ಸಂಪರ್ಕಿಸಬಹುದಾಗಿದೆ.

  ಅಗತ್ಯ ಬಿದ್ದರೆ ಟ್ರೈನಿಂಗ್
  ಒಂದು ವೇಳೆ ಆನ್ ಲೈನ್ ಪರೀಕ್ಷೆ ಎದುರಿಸುವ ಬಗ್ಗೆ ಯಾವುದೇ ಆತಂಕವಿದ್ದರೆ ಅಂತಹ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ Pre Departure Orientation Training (PDOT) ನಲ್ಲಿ ನಿಗದಿತ ಅವಧಿಯ ತರಬೇತಿಯನ್ನು ಪಡೆಯಬಹುದಾಗಿದೆ.

  ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

  ಮನೆಗೆಲಸ ಖಾಲಿ ಇವೆ ನೋಡಿ
  ಪ್ರಸಕ್ತ ಗಲ್ಫ್ ರಾಷ್ಟ್ರಗಳಾದ ಅರಬ್ ಸಂಯುಕ್ತ ಸಂಸ್ಥಾನ (UAE)ದ ದುಬೈ ಹಾಗೂ ಕುವೈಟ್ ರಾಷ್ಟ್ರಗಳಲ್ಲಿ ಮನೆಗೆಲಸಕ್ಕೆ ಮಹಿಳೆಯರು ಬೇಕಾಗಿದ್ದಾರೆ. ತಿಂಗಳಿಗೆ ಊಟ ವಸತಿ ಉಚಿತದ ಜೊತೆ ₹30 ಸಾವಿರ ಸಂಬಳವನ್ನೂ ಪಡೆಯಬಹುದಾಗಿದೆ.
  ವಯೋಮಿತಿ: ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳ ವಯೋಮಿತಿ ಕಡ್ಡಾಯವಾಗಿ 30 ರಿಂದ 45 ವರ್ಷದ ಒಳಗಾಗಿರತಕ್ಕದ್ದು.
  ಆದರೆ, ಈ ಕೆಲಸಕ್ಕೆ 2 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

  ದುಬೈ, ಯುಕೆಯಲ್ಲಿ ಡ್ರೈವರ್ ಅವಕಾಶ
  ಯುನೈಟೆಡ್ ಕಿಂಗ್​​ಡಮ್​ನಲ್ಲಿ 200 ಮಂದಿ ಟ್ರಕ್ ಡ್ರೈವರ್​ಗಳ ಅವಶ್ಯಕತೆಯಿದ್ದು ನೇಮಕಾತಿ ನಡೆಯುತ್ತಿದೆ. ವಯೋಮಿತಿಯು 18 ರಿಂದ 40 ವರ್ಷ ಒಳಗಿನವರಾಗಿರಬೇಕಾಗುತ್ತದೆ. ಇನ್ನು ದುಬೈಯಲ್ಲೂ ನಾಲ್ವರು ಡ್ರೈವರ್ ಗಳ ಕೆಲಸಕ್ಕೆ ನೇಮಕಾತಿ ನಡೆಯುತ್ತಿದ್ದು, ಇಲ್ಲೂ 18 ರಿಂದ 40 ವರ್ಷ ಪ್ರಾಯದ ಒಳಗಿನವರಾಗಿರಬೇಕು.

  ಇದನ್ನೂ ಓದಿ: Belagavi Police Museum: ಬೆಳಗಾವಿ ಪೊಲೀಸ್ ಮ್ಯೂಸಿಯಂ ನೋಡಿದ್ದೀರಾ? ವಿಡಿಯೋ ನೋಡಿ!

  ನೋ ಏಜೆಂಟ್, ನೋ ಚೀಟಿಂಗ್
  ಸರಕಾರದ ಅಧೀನದಲ್ಲಿರುವ ಇಲಾಖೆಗಳಿಂದಲೇ ಉದ್ಯೋಗ ಕುರಿತ ಮಾಹಿತಿ ಹಾಗೂ ವಿವರ ಲಭಿಸುವುದು. ಹಾಗೂ ಯಾವುದೇ ರೀತಿಯಲ್ಲಿ ಮುಂಗಡ ಹಣ ನೀಡಲು ಇರದೇ ಇರುವುದರಿಂದ ಯಾವುದೇ ಅಡ್ಡಿ, ಆತಂಕವಿಲ್ಲದೇ, ಮೋಸಗಳಿಗೆ ಬಲಿಯಾಗದೇ ನೇರವಾಗಿ ವಿದೇಶಗಳಿಗೆ ತೆರಳಬಹುದಾಗಿದೆ. ಮಧ್ಯವರ್ತಿಗಳ ಬಗೆಗಿನ ಗೊಂದಲವೂ ಈ ಯೋಜನೆ ಮೂಲಕ ತೆರಳುವ ಅಭ್ಯರ್ಥಿಗಳಿಗೆ ಇರದು.
  Published by:guruganesh bhat
  First published: