Farmers App: ರೈತರೇ, ಸಹಾಯಧನ ಪಡೆಯಲು ಈ ಆ್ಯಪ್ನಲ್ಲಿ ಬೆಳೆ ಮಾಹಿತಿ ಸಲ್ಲಿಸಿ
ಕೃಷಿ ಚಟುವಟಿಕೆ ನಡೆಸುವ ರೈತರು ಕೂಡಲೇ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಸುಲಭವಾಗಿ ಸರಕಾರದ ಜೊತೆಗೆ ಹಂಚಿಕೊಳ್ಳಿ. ಕೃಷಿ ಸಂಬಂಧಿತ ಆ್ಯಪ್ ಮುಖಾಂತರ ನೀವು ನೀಡುವ ಮಾಹಿತಿ ಸಹಾಯಧನ, ಪರಿಹಾರ ಪಡೆಯಲು ಮುಂದೆ ಸಹಕಾರಿಯಾಗಲಿದೆ.
ಮಂಗಳೂರು: ಕರಾವಳಿಯಾದ್ಯಂತ ಮುಂಗಾರು ಮಳೆ (Monsoon Rain Updates) ಬಿರುಸುಗೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಜೂನ್ ತಿಂಗಳಾಂತ್ಯಕ್ಕೆ ಸುರಿದ ಧಾರಾಕಾರ ಮಳೆಗೆ ಕೆಲವೊಂದು ಕೃಷಿಭೂಮಿಗಳು ಕೂಡಾ ನೀರಿನಿಂದ ಆವೃತವಾಗಿ ಬಿತ್ತನೆ ವ್ಯರ್ಥವಾಗಿದೆ. ರಾಜ್ಯ ಸರಕಾರ (Karnataka Government) ಈ ಬಾರಿಯೂ ಬೆಳೆಗಳ ಸಮೀಕ್ಷೆ ಮಾಡಲು (Kharif Farmer Crop 2022-23 )ರೈತರಿಗೆ ಅವಕಾಶ ಕಲ್ಪಿಸಿದೆ. ರೈತರು ತಾವು ಬೆಳೆದ ಬೆಳೆಗಳ ಸ್ಥಿತಿ ಗತಿಗಳನ್ನು ಸುಲಭವಾಗಿ ಆ್ಯಪ್ ಮೂಲಕವೇ ತಾವೇ ಸಲ್ಲಿಸಬಹುದಾಗಿದೆ. ಹಾಗಿದ್ರೆ ಆ್ಯಪ್ ಡೌನ್ಲೋಡ್ ಮಾಡುವ ವಿಧಾನ, ಬೆಳೆ ಸಮೀಕ್ಷೆ ಮಾಹಿತಿ ಅಪ್ಲೋಡ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ..
ಮಾಹಿತಿ ಅಪ್ಲೋಡ್ ಕಡ್ಡಾಯ ರೈತರು ತಾವು ಬೆಳೆದ ಮಾಹಿತಿಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಲೇಬೇಕು. ಒಂದು ವೇಳೆ ಅಪ್ಲೋಡ್ ಮಾಡದೇ ಇದ್ದಲ್ಲಿ ಕೃಷಿ ಇಲಾಖೆಯಿಂದ ಸಿಗುವ ಯಾವುದೇ ಸವಲತ್ತುಗಳು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಈ ಆ್ಯಪ್ ನಲ್ಲಿ ಮಾಹಿತಿ ಸಲ್ಲಿಸಿ ರೈತರು ರಾಜ್ಯ ಸರಕಾರದ ಅಧಿಕೃತ ಆ್ಯಪ್ನಲ್ಲಷ್ಟೇ ಮಾಹಿತಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ರೈತರು ಆ್ಯಂಡ್ರಾಯ್ಡ್ ಫೋನ್ ಗಳ ಮೂಲಕ ಗೂಗಲ್ ಪ್ಲೇ ಸ್ಟೋರ್ ನಲ್ಲಿ Kharif Farmer Crop 2022-23 (ಮುಂಗಾರು ರೈತರ ಬೆಳೆ ಸಮೀಕ್ಷೆ 2022-23) ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು.
ಮಾಹಿತಿ ಅಪ್ಲೋಡ್ ಮಾಡುವ ವಿಧಾನ ಅರ್ಜಿ ಸಲ್ಲಿಸುವ ರೈತರು ಆ್ಯಪ್ ಡೌನ್ಲೋಡ್ ಮಾಡಿಕೊಂಡ ಬಳಿಕ ಅದರಲ್ಲಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಹೆಸರು, ವಿಳಾಸಗಳನ್ನು ಭರ್ತಿ ಮಾಡಿಕೊಂಡು ಲಾಗಿನ್ ಪಡೆಯಬೇಕು.
ಬಳಿಕ ಒಟಿಪಿ ಪಡೆದು ಕೃಷಿ ಮಾಡಲಾದ ಭೂಮಿಯ ಸರ್ವೇ ನಂಬರ್ ನಮೂದಿಸಿ ಅಲ್ಲಿ ಮಾಡಲಾದ ಬೆಳೆಗಳ ಬಗ್ಗೆ ಖುದ್ದು ತಾವೇ ತಮ್ಮ ಜಮೀನಿನ ಬಳಿ ತೆರಳಿ ಮಾಹಿತಿ ಹಂಚಿಕೊಳ್ಳಬೇಕು. ಹೀಗೆ ಆನ್ ಲೈನ್ ಮುಖಾಂತರವೇ ತಾವು ಬೆಳೆದ ಬೆಳೆಗಳ ವಿವರಗಳನ್ನು ರೈತರು ನೀಡಬಹುದಾಗಿದೆ.
ಮಾಹಿತಿ ಅಪ್ಲೋಡ್ನಿಂದ ಆಗುವ ಲಾಭ ರೈತರು ಒಂದು ವೇಳೆ Kharif Farmer Crop 2022-23 (ಮುಂಗಾರು ರೈತರ ಬೆಳೆ ಸಮೀಕ್ಷೆ 2022-23) ಆ್ಯಪ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳದೇ ಹೋದಲ್ಲಿ ಪರಿಹಾರ ವಿತರಣೆ ಸಮಯದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹಂಚಿಕೊಳ್ಳಲಾಗುವ ಬೆಳೆಗಳ ಮಾಹಿತಿ ಆಧರಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಪ್ರಾಕೃತಿಕ ವಿಕೋಪದಡಿ ಪರಿಹಾರ ಧನ ಹಾಗೂ ಬೆಳೆ ಹಾನಿ ಕುರಿತು ವರದಿ ತಯಾರಿಸಲು ಇದು ಸಹಕಾರಿಯಾಗುವುದು.
ಹೆಚ್ಚಿನ ವಿವರಗಳಿಗಾಗಿ ಹೆಚ್ಚಿನ ವಿವರಗಳಿಗಾಗಿ ಹತ್ತಿರ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಅಲ್ಲದೇ ಸಹಾಯವಾಣಿ ಸಂಖ್ಯೆ 8448447715 ಸಂಪರ್ಕಿಸಬಹುದಾಗಿದೆ.