ದಕ್ಷಿಣ ಕನ್ನಡ: ಗೋಡೆ ತುಂಬೆಲ್ಲ ಗಡಿಯಾರಗಳ ಗತ್ತು. ಸಾಲಾಗಿ ಜೋಡಿಸಿಟ್ಟಿರೋ ಈ ಗೋಡೆ ಗಡಿಯಾರ ನೋಡ್ತಾ ಇದೇನು ವಾಚ್ ವರ್ಕ್ಸ್ ಅಂಗಡಿನೋ ಅಂದ್ಕೋಬೇಕು. ಅದೆಷ್ಟೋ ಹಳೆಯದಾದ ಕೀ ಕೊಟ್ಟು ಸ್ಟಾರ್ಟ್ ಮಾಡೋ ಗಡಿಯಾರದಿಂದ ಅಪರೂಪದ ಕ್ಲಾಕ್ಗಳ (Clock Museum) ಸಂಗ್ರಹ ಇಲ್ಲಿದೆ. ಅಷ್ಟೇ ಅಂತೀರ? ಇಲ್ಲ, ವಿವಿಧ ಬಗೆಯ ವಾದ್ಯ, ದೇವರ ವಿಗ್ರಹ, ಪೆಟ್ರೋಮ್ಯಾಕ್ಸ್ ದೀಪ ಹೀಗೆ ಪಳೆಯುಳಿಕೆಗಳ ಸಂಗ್ರಹವೇ ಈ (Clock Museum In Mangaluru) ಮ್ಯೂಸಿಯಂನಲ್ಲಿದೆ.
ಗಡಿಯಾರಗಳ ಮ್ಯೂಸಿಯಂ
ಯೆಸ್, ಮನುಷ್ಯನ ಜೀವನದಲ್ಲಿ ಸಮಯಕ್ಕೆ ಎಷ್ಟು ಮಹತ್ವವಿದೆಯೋ, ಸಮಯವನ್ನು ಸೂಚಿಸುವ ಗಡಿಯಾರಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇಂದಿನ ಮೊಬೈಲ್ ಯುಗದಲ್ಲಿ ಮನೆಯಲ್ಲಿ ಕನಿಷ್ಟ ಒಂದು ಗಡಿಯಾರವೂ ಇಲ್ಲದ ಪರಿಸ್ಥಿತಿ. ಆದರೆ ಈ ಮನೆಯಲ್ಲಿ ಮಾತ್ರ ಎಲ್ಲಿ ನೋಡಿದರೂ ಅಲ್ಲಿ ಗಡಿಯಾರ. 170 ಕ್ಕಿಂತಲೂ ಹೆಚ್ಚು ಗಡಿಯಾರಗಳಿರುವ ಈ ಮನೆ ಒಂದು ಗಡಿಯಾರಗಳ ಮ್ಯೂಸಿಯಂ.
170ಕ್ಕೂ ಮಿಕ್ಕ ಗಡಿಯಾರ
ಅಂದಹಾಗೆ ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್ ಎಂಬವರಿಗೆ ಸೇರಿದ ಮನೆ. ಮನೆ ಅನ್ನೋದಕ್ಕಿಂತ ಇದನ್ನು ಗಡಿಯಾರಗಳ ಮ್ಯೂಸಿಯಂ ಎಂದು ಕರೆದರೆ ತಪ್ಪಿಲ್ಲ. ಹೌದು, 170 ಕ್ಕೂ ಹೆಚ್ಚು 150 ವರ್ಷಕ್ಕೂ ಹಳೆಯ ಆ್ಯಂಟಿಕ್ ಗಡಿಯಾರಗಳ ಕಲೆಕ್ಷನ್ಸ್ ಇವರ ಬಳಿಯಿದೆ.
ವೆರೈಟಿ ಗಡಿಯಾರ!
ಕಳೆದ 15 ವರ್ಷಗಳ ಹಿಂದೆ ಹಳೆಯ ಮಾಡೆಲ್ನ ಗಡಿಯಾರಗಳನ್ನು ಮನೆಯಲ್ಲಿ ಜೋಡಿಸಿಡುವ ಕಾಯಕ ಆರಂಭಿಸಿದ ಶಶಿ ಭಟ್ ಬಳಿ ಇದೀಗ ಅತೀ ಅಪರೂಪದ 170 ಕ್ಕೂ ಹೆಚ್ಚು ಗಡಿಯಾರಗಳಿವೆ. 7 ಅಡಿ ಉದ್ದದ ಗ್ರ್ಯಾಂಡ್ ಫಾದರ್ ಕ್ಲಾಕ್ನಿಂದ ಹಿಡಿದು 6 ಅಡಿ ಉದ್ದದ ಮದರ್ ಕ್ಲಾಕ್ ಸಹ ಇದೆ. ಅತೀ ಸಣ್ಣ ಕೂ ಕೂ ಕ್ಲಾಕ್ ತನಕ ಪ್ರಪಂಚದೆಲ್ಲೆಡೆಯ ವೆರೈಟಿ ಗಡಿಯಾರಗಳು ಇವರ ಬಳಿಯಿದೆ. ವಾರಕ್ಕೊಮ್ಮೆ ಕೀ ಕೊಡುವ ಗಡಿಯಾರದಿಂದ ಹಿಡಿದು ವರ್ಷಕ್ಕೊಮ್ಮೆ ಕೀ ಕೊಟ್ಟು ಚಲಿಸುವ ಗಡಿಯಾರಗಳು ಇಲ್ಲಿವೆ.
ಪ್ರಾಚೀನ ವಸ್ತುಗಳೇ ಆಕರ್ಷಕ!
ಗಡಿಯಾರಗಳಲ್ಲದೆ ಅಪರೂಪದ ಪೆಟ್ರೋಮ್ಯಾಕ್ಸ್ ದೀಪ, ತಾಮ್ರ, ಹಿತ್ತಾಳೆಯ ಚಿಮಿಣಿ ದೀಪಗಳು, ಅಪರೂಪದ ಅಂಬ್ರೆಲ್ಲಾ ಗಣಪತಿ ವಿಗ್ರಹ, ಪೂಜೆಗೆ ಬಳಸುವ ವಿವಿಧ ಪ್ರಕಾರದ ಹಳೆಯ ಪೂಜಾ ಸಾಮಾಗ್ರಿಗಳು, ಗ್ರಾಮಾಫೋನ್, ಟೆಲಿಫೋನ್, ಪಿಯಾನೋ, ಪ್ರಾಚೀನ ಕಾಲದ ಅಡಿಗೆಗೆ ಬಳಸುವ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಸಂಗ್ರಹಗಳು ಇವರ ಬಳಿಯಿದೆ.
ಇದನ್ನೂ ಓದಿ: Dakshina Kannada Viral News: ಇಲ್ಲಿ ರಾಜಕಾರಣಿಗಳಿಗೆ ಪ್ರವೇಶವೇ ಇಲ್ಲ!
ಮನೆಯೇ ಮಂತ್ರಾಲಯ
ಈಗಾಗಲೇ ಹಲವು ವೀಕ್ಷಕರನ್ನು ತನ್ನತ್ತ ಸೆಳೆದಿರುವ ಶಶಿ ಭಟ್ಟರ ಮನೆ ಅಧ್ಯಯನಕಾರರಿಗೆ ವಿಷಯ ಸಂಗ್ರಹದ ಹಬ್ ಕೂಡಾ ಆಗಿದೆ. ತನ್ನ ಸಂಗ್ರಹವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕೆಂದು ಕೊಂಡಿರುವ ಶಶಿ ಭಟ್ ಮನೆಯಲ್ಲಿಯೇ ಸಣ್ಣ ಮಟ್ಟದ ಮ್ಯೂಸಿಯಂ ಮಾಡಲು ಸಿದ್ಧತೆ ನಡೆಸಿದ್ದಾರೆ.
ಆ ಬಳಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆ ಮ್ಯೂಸಿಯಂಗೆ ಉಚಿತ ಪ್ರವೇಶವನ್ನು ಕಲ್ಪಿಸಿ ತನ್ನ ಬಳಿಯಿರುವ ಮಾಹಿತಿಯನ್ನು ಎಲ್ಲರಲ್ಲೂ ಹಂಚಿಕೊಳ್ಳಲು ಬಯಸಿದ್ದಾರೆ. ಹಳೆಯ ವಾಹನಗಳ ಕಲೆಕ್ಷನ್ ಕೂಡಾ ಶಶಿ ಭಟ್ ಮನೆಯಲ್ಲಿದ್ದು, ಇಡೀ ಮನೆಯೇ ಒಂದು ಸಂಗ್ರಹಾಲಯವಾಗಿ ಈ ಭಾಗದಲ್ಲಿ ಗುರುತಿಸಲ್ಪಟ್ಟಿದೆ.
ಇದನ್ನೂ ಓದಿ: Mangaluru: ದುರ್ಗಮ ರಸ್ತೆಯಲ್ಲಿ ಧೂಳೆಬ್ಬಿಸುವ ಮಂಗಳೂರಿನ ಕಾರ್ ರೇಸರ್!
ಒಟ್ಟಿನಲ್ಲಿ ಶಶಿ ಭಟ್ ಅವರ ಸಂಗ್ರಹ ಹವ್ಯಾಸ ತನ್ನಿಡೀ ಮನೆಯನ್ನೇ ಮ್ಯೂಸಿಯಂ ಆಗಿ ಬದಲಾಯಿಸಿದೆ. ಮೊಬೈಲ್ ಯುಗದ ಭರದಲ್ಲಿ ಗೋಡೆ ಗಡಿಯಾರ ಅಂದ್ರೇನು ಅಂತಾ ಮರೆತು ಬಿಡುವ ಕಾಲದಲ್ಲಿ ಇವ್ರ ಮನೆ ತುಂಬಾ ಇರುವ ಗೋಡೆ ಗಡಿಯಾರ ನಿಜಕ್ಕೂ ಸೋಜಿಗ ಎನಿಸುವಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ