ಮಂಗಳೂರು: ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ಧ ವಾರಸುದಾರರಿಗೆ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುತ್ತಿದೆ. ಅದಾಗಲೇ ಕೋವಿಡ್ನಿಂದ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು (Covid 19 Death Relief Fund) ರಾಜ್ಯ ಸರಕಾರ ವಿತರಿಸಿದೆ. ಆದರೆ, ಕೋವಿಡ್ನಿಂದ ಸಾವನ್ನಪ್ಪಿದ್ದವರ ಸಂಖ್ಯೆ ಇತ್ತೀಚಿನವರೆಗೂ ವರದಿಯಾಗುತ್ತಲಿವೆ. ಹೀಗಾಗಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಬಾಕಿಯಿರುವವರಿಗಾಗಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಹೀಗಾಗಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರು ತಕ್ಷಣವೇ ಅರ್ಜಿ ಸಲ್ಲಿಸಿ ಪರಿಹಾರಕ್ಕಾಗಿ ಮನವಿ ಮಾಡಬಹುದಾಗಿದೆ. ಆದರೆ, ಅನಗತ್ಯವಾಗಿ ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನುಬದ್ಧ ಕ್ರಮವೂ ಜರುಗಿಸುವ ಎಚ್ಚರಿಕೆಯನ್ನು ಸಂಬಂಧಪಟ್ಟ ಇಲಾಖೆಯು ನೀಡಿದೆ.
₹50ಸಾವಿರ ಪರಿಹಾರ
ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲಾ ವ್ಯಕ್ತಿಗಳ ಕಾನೂನು ಬದ್ಧ ವಾರಸುದಾರರಿಗೆ ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳಂತೆ ತಲಾ ₹50,000 ಪರಿಹಾರ ಧನ ವಿತರಿಸಲು ರಾಜ್ಯ ಸರ್ಕಾರ ಆದೇಶ ನೀಡಿರುತ್ತದೆ.
ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯ
ಸುಪ್ರೀಂ ಕೋರ್ಟ್ ಆದೇಶದಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ದ ವಾರಸುದಾರರಿಗೆ ಪರಿಹಾರ ನೀಡಲು ಅರ್ಜಿ ಸ್ವೀಕಾರ ಹಾಗೂ ಅರ್ಹ ವ್ಯಕ್ತಿಗಳಿಗೆ ಪರಿಹಾರ ಪಾವತಿಸುವ ಕುರಿತು ನಿರ್ದೇಶನ ನೀಡಲಾಗಿದ್ದು, ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ನಿರ್ದೇಶನಗಳು ಇಂತಿವೆ.
1. 2022ರ ಮಾರ್ಚ್ 20 ಕ್ಕಿಂತ ಮೊದಲು ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು 2022ರ ಮಾರ್ಚ್ 20 ರಿಂದ 60 ದಿನಾಂಕವನ್ನು ಜೂನ್.30ರ ಅಂತ್ಯದೊಳಗೆ ಕಾಲಮಿತಿ ವಿಸ್ತರಿಸಲಾಗಿದೆ.
2. 2022ರ ಮಾರ್ಚ್ 20ರ ನಂತರ ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿಂದ 90 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
3. ಸ್ವೀಕೃತವಾದ ಅರ್ಜಿಗಳ ಪರಿಹಾರ ಪಾವತಿಗೆ ಅರ್ಜಿ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಕಾಲಮಿತಿ ಅನ್ವಯವಾಗುತ್ತದೆ.
4. ಕೋವಿಡ್ 19 ವೈರಾಣು ಸೋಂಕಿನಿಂದ ತಮ್ಮ ಬಂಧುಗಳನ್ನು, ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವನ್ನು ಗಮನದಲ್ಲಿರಿಸಿಕೊಂಡು, ಮಾನವೀಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ವಿಪತ್ತು ಪರಿಹಾರ ನಿಧಿಯಿಂದ 50,000 ರೂ.ಗಳ ಪರಿಹಾರ ಮೊತ್ತವನ್ನು ಮೃತರ ಕಾನೂನು ಬದ್ಧ ವಾರಸುದಾರರಿಗೆ ಪಾವತಿಸಲು ಎಲ್ಲಾ ರಾಜ್ಯಗಳಿಗೆ ಆದೇಶಿಸಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೈಜ ಫಲಾನುಭವಿಗಳು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಅವರಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ ಕೇಳುವ ಎಲ್ಲ ದಾಖಲೆ, ಮಾಹಿತಿಗಳು ಪೂರ್ಣ ಪ್ರಮಾಣದಲ್ಲಿ ಅರ್ಜಿದಾರರು ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ
ಮಾರ್ಚ್ 20ಕ್ಕಿಂತ ಮುಂಚಿತವಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಿಕರು ಜೂನ್ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಬೇಕಾದ ದಾಖಲಾತಿಗಳು
1. ಕೋವಿಡ್ನಿಂದ ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿಗಳು
2. ಮೃತಪಟ್ಟವರ ಆಧಾರ್ ಕಾರ್ಡ್ ಪ್ರತಿ
3. ಮರಣ ಪ್ರಮಾಣ ಪತ್ರ
4. ಅರ್ಜಿದಾರರ ಪಡಿತರ ಚೀಟಿ
5. ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
6. ಬ್ಯಾಂಕ್ ಪಾಸ್ ಬುಕ್ ಪ್ರತಿ
7. ಅರ್ಜಿದಾರರ ನಮೂನೆ -2 ಸ್ವಯಂ ಘೋಷಣಾ ಪತ್ರ
8. ಕುಟುಂಬಸ್ಥರ ಎಲ್ಲರ ನಿರಕ್ಷೇಪಣಾ ಪತ್ರ (ನಮೂನೆ – 3)
ಸುಳ್ಳು ಮಾಹಿತಿ ನೀಡದಿರಿ
ಯಾವುದೇ ವ್ಯಕ್ತಿಯು ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಗಳ ಆಧಾರದ ಮೇಲೆ ಪರಿಹಾರ ಪಡೆದು, ಸರ್ಕಾರದ ಉದ್ದೇಶವನ್ನು ದುರುಪಯೋಗ ಪಡಿಸಿಕೊಂಡಲ್ಲಿ ಅದು ನೈತಿಕತೆಗೆ ವಿರುದ್ಧವಾದ ಕ್ರಮವಾಗಿರುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯು ಸುಳ್ಳು ಮಾಹಿತಿ ಅಥವಾ ನಕಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದಿದ್ದು, ತದನಂತರ ಅದು ಸುಳ್ಳು ಎಂದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳ ಪರಿಹಾರ ಮೊತ್ತವನ್ನು ವಸೂಲು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.
ಇದನ್ನೂ ಓದಿ: Belagavi: ಈ ಸರ್ಕಾರಿ ಶಾಲೇಲಿ ಕಲಿಯಲು ಪುಣ್ಯ ಮಾಡಿರಬೇಕು! ಬೆಳಗಾವಿ ಶಾಲೆಯ ವಿಡಿಯೋ ನೋಡಿ
ಕಾನೂನು ಕ್ರಮದ ಎಚ್ಚರಿಕೆ
ಯಾವುದೇ ಅರ್ಜಿದಾರರು ಕೋವಿಡ್-19 ಮರಣ ಪರಿಹಾರ ಪಡೆಯುವ ಸಲುವಾಗಿ ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ಮಾಹಿತಿ, ನಕಲಿ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ಪಡೆದಿದ್ದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳು, ವಿಪತ್ತು ನಿರ್ವಹಣಾ ಅಧಿನಿಯಮ-2005ರ ನಿಯಮ 52ರಡಿ ಸೂಕ್ತ ದಂಡದೊಂದಿಗೆ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಇದನ್ನೂ ಓದಿ: Belagavi: ನಾಯಿ ಬರ್ತ್ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!
ಅಧಿಕಾರಿಗಳಿಗೂ ವಾರ್ನಿಂಗ್
ಕೋವಿಡ್-19 ಪರಿಹಾರ ಪಾವತಿಯ ಮಾರ್ಗಸೂಚಿಗಳಲ್ಲಿ ಸೂಚಿಸಿರುವಂತೆ ಸೂಕ್ತ ವಿಚಾರಣೆ ನಡೆಸದೆ, ಮನವಿಗಳನ್ನು ಪರಿಶೀಲಿಸದೇ ಕೋವಿಡ್-19 ಪರಿಹಾರ ವಿತರಣೆಗ ಶಿಫಾರಸ್ಸು ಮಾಡುವಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧವೂ ಸಹ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಶಿಸ್ತಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಕಂದಾಯ ಇಲಾಖೆ, ವಿಪತ್ತು ನಿರ್ವಹಣೆಯ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ