ಮಂಗಳೂರು: ಕಪ್ಪರೊಟ್ಟಿ, ಓಡುಪಾಳೆ, ಓಡುರೊಟ್ಟಿ, ಓಡುದೋಸೆ ಹೀಗೆ ಏನೇ ಕರೆಯಿರಿ ಈ ರೊಟ್ಟಿಯ ಟೇಸ್ಟ್ (Kappa Rotti) ಕಡಿಮೆಯಾಗದು. ಅದ್ರಲ್ಲೂ ಮಣ್ಣಿನ ಹಂಚಿನ ಕಾವಲಿ ಅಥವಾ ತವಾದಲ್ಲಿ ಮಾಡುವ ಈ ದೋಸೆಯಂತೂ ಸಖತ್ ಟೇಸ್ಟ್. ಕರಾವಳಿಯಲ್ಲಂತೂ ಈ ಕಪ್ಪರೊಟ್ಟಿಗೆ (Kappa Rotti Recipe) ಫಿದಾ ಆಗದವರೇ ಇಲ್ಲ. ಪುಂಡಿಯಂತೆಯೇ ಓಡುಪಾಳೆ ಕೂಡಾ ಸಖತ್ ಡಿಮ್ಯಾಂಡ್ ಹೊಂದಿರುವ ಹಳ್ಳಿ ಸೊಗಡಿನ ತಿನಿಸು.
ಕೋಳಿಗೆ ಸೂಪರ್, ಮೀನಿಗೂ ಓಕೆ!
ವಿಶೇಷ ಅಂದ್ರೆ ಈ ಕಪ್ಪರೊಟ್ಟಿ ಪುಂಡಿಯಂತೆಯೇ ಕೋಳಿ ಸಾರಿಗೆ ಉತ್ತಮ ಕಾಂಬಿನೇಶನ್. ಅಷ್ಟೇ ಅಲ್ದೇ, ಮೀನು ಸಾರಿಗೂ ಅಷ್ಟೇ ಟೇಸ್ಟಿ ನೀಡಬಲ್ಲದು. ಇನ್ನು ತರಕಾರಿ ಸಾಂಬಾರಿಗೂ ಇದು ಒಗ್ಗಿಕೊಳ್ಳೋದಿಲ್ಲ ಅಂತೇನಿಲ್ಲ. ಹಾಗಾಗಿ ಕರಾವಳಿಯ ಬಹುತೇಕ ಮನೆಗಳಲ್ಲಿ ಇಂದಿಗೂ ಮುಂಜಾನೆಯ ಚಾ ಕ್ಕೆ ಕಪ್ಪರೊಟ್ಟಿ ಮಾಡ್ತಾರೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಂತೂ ಈ ಕಪ್ಪರೊಟ್ಟಿ ಮನೆ ಮನೆಯಲ್ಲೂ ಸ್ಥಾನ ಪಡೆದುಕೊಂಡಿದೆ.
ಜೇನುಗೂಡಿನಂತ ರೊಟ್ಟಿ
ಮಣ್ಣಿನ ಹಂಚಿನ ʼಓಡುʼನಲ್ಲಿ ತಯಾರಿಸುವ ಈ ರೊಟ್ಟಿಯು ಜೇನುಗೂಡಿನಂತೆ ಕಣ್ಣು ಕಣ್ಣುಗಳಾಗಿ ದೋಸೆಯಲ್ಲಿ ತೂತುಗಳು ಕಾಣಿಸಿಕೊಂಡರೆ, ಅದಂತೂ ಭಾರೀ ರುಚಿಯಾಗಿರುತ್ತೆ ಅಂತಾನೇ ಅರ್ಥ. ಹಾಗಾಗಿ ಮೃದುವಾದ ಈ ಕಪ್ಪರೊಟ್ಟಿ ತಿನ್ನುವುದೇ ಎಲ್ಲಿಲ್ಲದ ಖುಷಿ. ಸಾಮಾನ್ಯವಾಗಿ ಕರಾವಳಿಗರು ಕುಚಲಕ್ಕಿಯನ್ನ ಅನ್ನಕ್ಕೆ ಬಳಸಿದರೂ, ಕಪ್ಪರೊಟ್ಟಿಯನ್ನು ಬೆಳ್ತಿಗೆ ಅಕ್ಕಿಯಿಂದ ಮಾಡುತ್ತಾರೆ.
ಕಪ್ಪರೊಟ್ಟಿ ಮಾಡೋದು ಹೇಗೆ?
ಓಡುಪಾಳೆ, ಕಪ್ಪರೊಟ್ಟಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ರೊಟ್ಟಿಯು ಬೆಳಗಿನ ತಿಂಡಿಗೆ ಹೇಳಿಟ್ಟಂತಹ ರೆಸಿಪಿ. ಯಾಕೆಂದ್ರೆ, ಇದು ಮಾಡೋದಕ್ಕೂ ಸುಲಭ.. ತಿನೋದಕ್ಕೂ ಸುಲಭ!. ಹೌದು, ತಮಗೆ ಬೇಕಾದಷ್ಟು ಬೆಳ್ತಿಗೆಯನ್ನು ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಯಲು ಹಾಕಬೇಕು. ಹೀಗೆ ಸರಿಸುಮಾರು 6 ಗಂಟೆ ಕಾಲ ನೆನೆದ ಈ ಅಕ್ಕಿಯನ್ನು ನೀರಿನಿಂದ ಮತ್ತೊಮ್ಮೆ ಸ್ವಚ್ಛಗೊಳಿಸಿ, ಗ್ರೈಂಡರ್ ಅಥವಾ ಮಿಕ್ಸಿಗೆ ಹಾಕಬೇಕು. ಹೀಗೆ ಹಾಕಬೇಕಾದರೆ ಅದಕ್ಕೆ ಗಂಜಿ ಅನ್ನವನ್ನು (ಬಹುತೇಕ ಹಿಂದಿನ ದಿನದ ರಾತ್ರಿಯ ಕುಚಲಕ್ಕಿ ಅನ್ನವನ್ನು) ಹಾಕಬೇಕು.
ಇದು ಹಿಟ್ಟು ಹೆಚ್ಚು ಮೃದುವಾಗಲು ಸಹಾಯ ಮಾಡುತ್ತದೆ. ಜೊತೆಗೆ ರುಚಿಗೆ ತಕ್ಕಷ್ಟು ಸ್ವಲ್ಪ ಪ್ರಮಾಣದಲ್ಲಿ ತೆಂಗಿನಕಾಯಿ ತುರಿ, ಒಂದು ಸ್ಪೂನ್ ತೆಂಗಿನಕಾಯಿ ಎಣ್ಣೆ ಹಾಕಬಹುದಾಗಿದೆ. ನಂತರ ಗ್ರೈಂಡ್ ಮಾಡಿದ ಹಿಟ್ಟನ್ನು, ಹೆಚ್ಚು ತಿಳಿಯಾಗದಂತೆ ನೋಡಿಕೊಂಡು ಸಣ್ಣಗೆ ಅರಿಯಬೇಕು.
ಇದನ್ನೂ ಓದಿ: Pundi Gasi Recipe: ಪುಂಡಿ ಬೇಯಿಸ್ಬೇಡಿ, ಮನೆಯಲ್ಲೇ ಮಾಡ್ಕೊಂಡು ತಿನ್ನಿ! ರೆಸಿಪಿ ಇಲ್ಲಿದೆ
ಹೀಗೆ ಹೆಚ್ಚು ತೆಳುವೂ ಅಲ್ಲದ, ಹೆಚ್ಚು ಗಟ್ಟಿಯೂ ಅಲ್ಲದ ಮಟ್ಟಿಗೆ ನುಣ್ಣಗೆ ಅರಿದ ಹಿಟ್ಟನ್ನು, ಒಲೆಯಲ್ಲಿಟ್ಟ ಮಣ್ಣಿನ ಹಂಚಿನ ಕಾವಲಿ (ಓಡು)ಗೆ ಹಾಕಿ ಮುಚ್ಚಳವಿಟ್ಟು ಸ್ವಲ್ಪ ಹೊತ್ತು ಬಿಟ್ಟರೆ ರುಚಿ ರುಚಿಯಾದ ಓಡುಪಾಳೆ ರೆಡಿಯಾಗ್ತವೆ. ಮಣ್ಣಿನ ಗುಂಡಿಯಿರುವ ಕಾವಲಿಯು ಇದಕ್ಕಾಗಿಯೇ ತಯಾರು ಮಾಡಿದ್ದು, ಮಾರುಕಟ್ಟೆಗಳಲ್ಲಿ ಸಿಗುತ್ತವೆ. ಅದನ್ನಷ್ಟೇ ಬಳಸಿ ಈ ಕಪ್ಪರೊಟ್ಟಿ ತಯಾರಿಸಬಹುದಾಗಿದೆ.
ಇನ್ನು ಕಪ್ಪರೊಟ್ಟಿ ಹಿಟ್ಟನ್ನು ಮಣ್ಣಿನ ಹಂಚಿಗೆ ಹೊಯ್ಯುವಾಗ ಕೂಡಲೇ ಮುಚ್ಚಳ ಹಾಕದೇ, ಅದ್ರಲ್ಲಿ ಜೇನುಗೂಡಿನಂತೆ ಕಣ್ಣುಗಳು ಬರೋವರೆಗೆ ಕಾದು, ಅನಂತರ ಮುಚ್ಚಳ ಹಾಕುವ ಮೂಲಕ ಕಪ್ಪರೊಟ್ಟಿಯ ಸಾಫ್ಟ್ ನೆಸ್ ಹೆಚ್ಚಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Dharwad Peda History: ಪ್ಲೇಗ್ನಿಂದ ಹುಟ್ಟಿತು ಧಾರವಾಡ ಪೇಡೆ!
ಒಟ್ಟಿನಲ್ಲಿ ಕರಾವಳಿಯಲ್ಲಿ ಸಖತ್ ಟೇಸ್ಟಿ ಆಗಿರುವ ಓಡುಪಾಳೆ, ಕಪ್ಪರೊಟ್ಟಿಯು ನಾಲಗೆಯ ರುಚಿ ಹೆಚ್ಚಿಸುವುದರ ಜೊತೆಗೆ, ಎಲ್ಲ ವಯೋಮಾನದವರಿಗೂ ಇಷ್ಟವಾಗೇ ಆಗುತ್ತೆ.
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ