ದಕ್ಷಿಣ ಕನ್ನಡ: ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಸ್ಕ್ರೀನ್. ಹಿನ್ನೆಲೆ ಧ್ವನಿಯೊಂದಿಗೆ ಪಾಠ ಮಾಡೋ ಟೀಚರ್. ಹೆಚ್ಚೇನು ಪ್ರಯಾಸ ಇಲ್ಲ, ಬಿಡಿಸಿ ಹೇಳಬೇಕಾದ ಪ್ರಮೇಯ ಇಲ್ಲ. ಯಾಕೆಂದ್ರೆ ಎಲ್ಲವೂ, ಎಲ್ಲನೂ ಚಿತ್ರ ಸಮೇತವಾಗಿ ಮೂಡಿ ಬರ್ತವೆ. ಮಕ್ಕಳೂ (Students)ಅಷ್ಟೇ ಸಿನೆಮಾ ನೋಡ್ದಂಗೆ ಪಾಠ ಆಲಿಸ್ತಾರೆ. ಹೌದು, ಇದೆಲ್ಲವೂ ಸಾಧ್ಯವಾಗಿರೋದು ಮಕ್ಕಳ (Kalika Habba) ಕಲಿಕಾ ಹಬ್ಬದಲ್ಲಿ.
ಕಲಿಕಾ ಹಬ್ಬದ ಸಂಭ್ರಮ
ಯೆಸ್, ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ವರ್ಷ ಕಲಿಕಾ ಹಬ್ಬ ಎನ್ನುವ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಆಟದ ಮೂಲಕ ಕಲಿಕೆ ಈ ಪರಿಕಲ್ಪನೆಯ ಮೂಲ ಉದ್ಧೇಶವಾಗಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಪುತ್ತೂರಿನಲ್ಲಿ ಹಬ್ಬದ ಮೆರುಗು
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಶಾಲೆಗಳಲ್ಲಿ ಈ ಕಾರ್ಯಕ್ರಮಕ್ಕೆ ಮಕ್ಕಳು ಹೆಚ್ಚಿನ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಪುತ್ತೂರಿನ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ಸಂಭ್ರಮದಿಂದ ನಡೆದಿದೆ. ಆಗಮಿಸಿದ ಅತಿಥಿಗಳು ತಲೆ ಮೇಲೆ ಟೋಪಿ ಧರಿಸಿ ಕಲಿಕಾ ಹಬ್ಬದ ವಾತಾವರಣಕ್ಕೆ ಮೆರುಗು ನೀಡಿದರು. ಶಾಲೆಗಳನ್ನಂತೂ ಮಕ್ಕಳು, ಶಿಕ್ಷಕರು ಸೇರಿ ಆಕರ್ಷಕವಾಗಿ ಸಿಂಗರಿಸಿ ಮದುವಣಗಿತ್ತಿಯಂತೆ ಕಣ್ಮನ ಸೆಳೆಯುವಂತೆ ಮಾಡುತ್ತಾರೆ.
ಉತ್ತಮ ರೆಸ್ಪಾನ್ಸ್
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 20 ಕ್ಲಸ್ಟರ್ಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಂದು ಕ್ಲಸ್ಟರ್ನಲ್ಲಿ 120 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ 4,5 ಮತ್ತು 6 ನೇ ತರಗತಿಯ 60 ಮಕ್ಕಳು ಮತ್ತು 7,8 ಮತ್ತು 9 ನೇ ತರಗತಿಯ 60 ಮಕ್ಕಳಿರುತ್ತಾರೆ. ಮಕ್ಕಳೆಲ್ಲರೂ ಖುಷಿಯಿಂದ ಕಲಿಕಾ ಹಬ್ಬದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ನಾಲ್ಕು ವಿಭಾಗ
ಕಲಿಕಾ ಹಬ್ಬದಲ್ಲಿ 4 ಮುಖ್ಯ ವಿಭಾಗಗಳಿದ್ದು, ಇವುಗಳನ್ನು ಮಾಡು-ಆಡು, ಕಾಗದ-ಕತ್ತರಿ, ಹಾಡು-ಆಟ ಮತ್ತು ಊರು ತಿಳಿಯೋಣ ಎನ್ನುವುದಾಗಿ ವಿಂಗಡಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಪರಿಕಲ್ಪನೆಯ ಮುಖ್ಯ ಉದ್ಧೇಶ ಆಗಿದೆ. ಒಟ್ಟಿನಲ್ಲಿ ಕಲಿಕಾ ಹಬ್ಬ ಸರಕಾರಿ ಶಾಲೆಗಳಿಗೆ ಹೊಸ ಮೆರುಗನ್ನ ನೀಡ್ತಿದೆ. ಮುಂದೆಯೂ ಸರಕಾರದ ಬೆಂಬಲ ಸದಾ ಇಂತಹ ಶಾಲೆಗಳ ಮೇಲಿದ್ದು, ಮಾದರಿ ಶಾಲೆಗಳಾಗಿ ರೂಪುಗೊಳ್ಳಲಿ ಅನ್ನೋದೆ ನಮ್ಮ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ