ದಕ್ಷಿಣ ಕನ್ನಡ: ಸುತ್ತಲೂ ನೆರೆದಿರೋ ಭಕ್ತಾದಿಗಳು, ಮಧ್ಯದಲ್ಲೊಂದು ಬೃಹತ್ ಗುಹೆ. ಒಂದಲ್ಲ, ಎರಡಲ್ಲ ಬರೋಬ್ಬರಿ 12 ವರ್ಷಗಳ ನಂತರ ನಡೆಯುತ್ತಿರೋ ಈ ಗುಹೆಯ ಒಳಹೊಕ್ಕುವ ಪವಿತ್ರ ಕ್ಷಣ (Dakshina Kannada Special Rituals) ವೀಕ್ಷಿಸುವ ತವಕ. ಅರೇ! ಇದೇನು ಗುಹಾಪ್ರವೇಶ (Jambri Guhe) ಅಂದ್ಕೊಂಡ್ರಾ? ಹೀಗೊಂದು ಅತ್ಯಂತ ವಿಭಿನ್ನ ಸಂಪ್ರದಾಯದ ಕುರಿತು ನಾವ್ ಹೇಳ್ತೀವಿ ಕೇಳಿ.
ಈ ಗುಹೆಯನ್ನು ಪ್ರವೇಶಿಸಬೇಕಾದರೆ ಜೀವಂತದಲ್ಲೇ ಉತ್ತರಕ್ರಿಯಾದಿಗಳನ್ನು ನೆರವೇರಿಸಬೇಕು. 48 ದಿನಗಳ ಕಾಲ ಮನೆಯಿಂದ, ಊರಿಂದ ದೂರವಿದ್ದು, ಶ್ವೇತ ವಸ್ತ್ರಧಾರಿಯಾಗಿ ವೃತಾಚರಣೆ ಮಾಡಬೇಕು. ಅಂದಹಾಗೆ ಇದು ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಗಡಿಭಾಗದಲ್ಲಿರುವ ಜಾಂಬ್ರಿ ಗುಹಾ ಪ್ರವೇಶದ ವಿಶೇಷತೆ.
ಗುಹೆಯೊಳಗಿನ ಶಕ್ತಿಗೆ ಜೀವ ತುಂಬ್ತಾರೆ!
ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳ ಗಡಿಭಾಗದಲ್ಲಿರುವ ಚೆಂಡೆತ್ತಡ್ಕ ಎನ್ನುವ ರಕ್ಷಿತಾರಣ್ಯ ಪ್ರದೇಶದಲ್ಲಿರೋ ಜಾಂಬ್ರಿ ಗುಹೆಯ ರೋಚಕ ಕಥೆಯಿದು. ಹಲವು ವಿಶೇಷತೆಗಳ ಕೇಂದ್ರಬಿಂದುವಾಗಿರುವ ಈ ಗುಹೆಯ ಒಳಗಿರುವ ಶಕ್ತಿಗೆ 12 ವರ್ಷಗಳಿಗೊಮ್ಮೆ ಜೀವ ತುಂಬುವ ಪ್ರಕ್ರಿಯೆ ನಡೆಯುತ್ತೆ. ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಈ ಜಾಂಬ್ರಿ ಗುಹೆಗೂ , ದೇವಸ್ಥಾನಕ್ಕೂ ನಿಕಟ ಸಂಬಂಧವಿದೆ.
ಗೆಣಸು ಅಗೆಯುವಾಗ ಶಿವಲಿಂಗ ಪತ್ತೆ!
ಜಾಂಬ್ರಿ ಗುಹೆಯೊಳಗೆ ಕ್ಷೇತ್ರಕ್ಕೆ ಸಂಬಂಧಿಸಿದ 5 ಜನ ಮಾತ್ರ ಪ್ರವೇಶ ಮಾಡುತ್ತಾರೆ. ಮೂವರು ವೈದಿಕರು ಹಾಗೂ ಇಬ್ಬರು ಈ ಭಾಗದ ಮೂಲ ನಿವಾಸಿಗಳಾಗಿರುತ್ತಾರೆ. ಭೂಮಿಯಲ್ಲಿ ಹುದುಗಿದ ಶಿವಲಿಂಗ ನಿಟ್ಟೋಣಿ ಎನ್ನುವ ಮೂಲ ನಿವಾಸಿಗೆ ಗೆಡ್ಡೆ ಗೆಣಸನ್ನು ಅಗೆಯುತ್ತಿದ್ದ ಸಂದರ್ಭದಲ್ಲಿ ಗೋಚರಿಸಿತ್ತು. ಗೆಣಸು ಅಗೆಯುವ ಸಮಯದಲ್ಲಿ ಆತನ ಕತ್ತಿ ಶಿವಲಿಂಗಕ್ಕೆ ತಗುಲಿ ರಕ್ತ ಚಿಮ್ಮುತ್ತದೆ. ಈ ವಿಚಾರವನ್ನು ತಿಳಿದ ಆಗಿನ ರಾಜ ಸ್ಥಳಕ್ಕೆ ಆಗಮಿಸಿ ದೇವರಿಗೆ ದೇವಸ್ಥಾನವನ್ನು ಕಟ್ಟಿಸಿಕೊಡುತ್ತಾನೆ. ಈ ಕಾರಣಕ್ಕಾಗಿಯೇ ಜಾಂಬ್ರಿ ಗುಹೆಗೆ ಮೊದಲ ಪ್ರವೇಶ ಮಾಡುವ ಅವಕಾಶ ನೆಟ್ಟಣಿಗೆ ಗ್ರಾಮದ ಮೂಲ ನಿವಾಸಿಗಳಿಗಾಗಿದೆ.
48 ದಿನಗಳ ಕಠಿಣ ವೃತ
ಕಾಪಾಡರು ಎಂದು ಕರೆಯಲ್ಪಡುವ ಇವರು 48 ದಿನಗಳ ಕಾಲ ದೇವಸ್ಥಾನದ ಪಕ್ಕದಲ್ಲಿ ಯಾರಿಗೂ ಕಾಣದಂತೆ ಶ್ವೇತ ವಸ್ತ್ರಧಾರಿಯಾಗಿ ಕಠಿಣ ವೃತಾಚರಣೆ ಮಾಡಬೇಕಾಗುತ್ತದೆ. ಅಲ್ಲದೆ ಗುಹೆಯ ಪ್ರವೇಶಕ್ಕೆ ಮೊದಲು, ಕಾಪಾಡರಿಗೆ ಮದುವೆಯಾಗದೇ ಇದ್ದಲ್ಲಿ ದೇವಸ್ಥಾನದ ವತಿಯಿಂದಲೇ ಆತನಿಗೆ ಮದುವೆ ಮಾಡಿಸಲಾಗುತ್ತದೆ. ಅಲ್ಲದೆ ಆತನ ಉತ್ತರಕ್ರಿಯೆಯನ್ನೂ ಜೀವಂತವಿರುವಾಗಲೇ ಮಾಡಿಸಲಾಗುತ್ತದೆ. ಈ ಎಲ್ಲಾ ವಿಧಿಗಳು ನೆರವೇರಿದ ಬಳಿಕ ಕಾಪಾಡರ ಕುಟುಂಬ ವರ್ಗ ಇಬ್ಬರನ್ನೂ ದೇವಸ್ಥಾನಕ್ಕೆ ಒಪ್ಪಿಸುತ್ತಾರೆ.
ಇದನ್ನೂ ಓದಿ: Kumble Gopalakrishna Temple: ಸಿಡಿಮದ್ದು ಸಿಡಿಯೋದು ನೋಡೋಕೆ ದೇವರೇ ಬರ್ತಾರೆ! ಇದು ಗೋಪಾಲಕೃಷ್ಣ ದೇಗುಲದ 'ಕುಂಬ್ಳೆ ಬೆಡಿ'
ಇಬ್ಬರು ಕಾಪಾಡರು ಮೊದಲು ಜಾಂಬ್ರಿ ಗುಹೆಗೆ ಪ್ರವೇಶ ಮಾಡಿ, ಗುಹೆಯೊಳಗೆ ಸುಮಾರು ಒಂದೂವರೆ ತಾಸಿನ ಬಳಿಕ ಹೊರ ಬರುತ್ತಾರೆ. ಬಳಿಕ ತಂತ್ರಿಗಳು ಹಾಗೂ ಇಬ್ಬರು ವೈದಿಕರು ಗುಹೆಯೊಳಗೆ ದೀವಟಿಗೆಯೊಂದಿಗೆ ಪ್ರವೇಶಿಸಿ ವೈದಿಕ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಗುಹಾ ಪ್ರವೇಶದ ಕಟ್ಟುಪಾಡುಗಳು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: Parshurama Theme Park: ತುಳುನಾಡ ಸೃಷ್ಟಿಕರ್ತನ ಕಂಚಿನ ಪ್ರತಿಮೆ! ಪರಶುರಾಮ ಥೀಮ್ ಪಾರ್ಕ್ ಹೇಗಿದೆ ಗೊತ್ತಾ?
ಗುಹಾಪ್ರವೇಶದ ಈ ವಿಶೇಷ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳೂ ಇಲ್ಲಿ ಸೇರುತ್ತಿದ್ದು, ಗುಹೆಯೊಳಗಿಂದ ತರುವ ಮಣ್ಣೇ ಇಲ್ಲಿನ ಪ್ರಸಾದ! 12 ವರ್ಷಗಳಿಗೊಮ್ಮೆ ನಡೆಯುವ ಈ ವಿಶೇಷ ವಿಧಿವಿಧಾನಗಳ ವೀಕ್ಷಣೆಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಜನ ಈ ಗುಹೆಯತ್ತ ಬರುತ್ತಾರೆ. ಅಂದಹಾಗೆ 2017 ರಲ್ಲಿ ಕೊನೆಯ ಬಾರಿಗೆ ಈ ಗುಹಾ ಪ್ರವೇಶ ವಿಧಿ-ವಿಧಾನ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ