• Home
  • »
  • News
  • »
  • mangaluru
  • »
  • Cricket News: ಕರಾವಳಿ ಕ್ರಿಕೆಟ್ ಪ್ರೇಮಿಗಳ ಬೇಡಿಕೆಗೆ ಕೊನೆಗೂ ಸಿಕ್ಕ ಮನ್ನಣೆ; ಪುತ್ತೂರಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ

Cricket News: ಕರಾವಳಿ ಕ್ರಿಕೆಟ್ ಪ್ರೇಮಿಗಳ ಬೇಡಿಕೆಗೆ ಕೊನೆಗೂ ಸಿಕ್ಕ ಮನ್ನಣೆ; ಪುತ್ತೂರಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣಕ್ಕಿಂತಲೂ‌ ಹೆಚ್ಚಿನ ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.  ಕ್ರಿಕೆಟ್ ತರಬೇತಿ, ರಣಜಿ ಪಂದ್ಯಗಳಿಗಾಗಿ ಈ ಕ್ರೀಡಾಂಗಣ ಬಳಕೆಯಾಗಲಿದೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ದಕ್ಷಿಣಕನ್ನಡದ ಕ್ರಿಕೆಟ್ ಪ್ರೇಮಿಗಳ  (Cricket Fans) ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣಕ್ಕೆ ಕರ್ನಾಟಕ ಸಚಿವ  ಸಚಿವ ಸಂಪುಟ ಸ್ಥಳ ಮೀಸಲಿಟ್ಟಿದೆ. ಪುತ್ತೂರಿನ  (Puttur) ಕಬಕ ಗ್ರಾಮದ ಪೆರಿಯತೋಡಿಯಲ್ಲಿ 23.25 ಎಕರೆ ಜಾಗವನ್ನು ನಿಗದಿಪಡಿಸಲಾಗಿದ್ದು ಸುಮಾರು 50 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಈ ಮೂಲಕ ಕಳೆದ 10 ವರ್ಷಗಳ ಬೇಡಿಕೆಗೆ ಸ್ಪಂದನೆ  ಸಿಕ್ಕಿದೆ. ದಕ್ಷಿಣ ಕನ್ನಡ ಕ್ರಿಕೆಟ್ ಅಭಿಮಾನಿಗಳ (Dakshina Kannada Cricket Fans) ಪಾಲಿಗೆ ಎಂದೇ  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಯೋಜನೆ ರೂಪಿಸಲಿದೆ.


    ಹಲವು ತರಬೇತಿಗಳಿಗೆ ಅವಕಾಶ
    ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಜಾಗ ಗುರುತಿಸಲಾಗಿತ್ತು.
    ಆದರೆ ಇದೀಗ ರಾಜ್ಯ ಸರಕಾರ ಪುತ್ತೂರಿನ ಜಾಗವನ್ನು ಕ್ರೀಡಾಂಗಣಕ್ಕಾಗಿ ಮೀಸಲಿಟ್ಟಿದೆ.
    ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣಕ್ಕಿಂತಲೂ‌ ಹೆಚ್ಚಿನ ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.  ಕ್ರಿಕೆಟ್ ತರಬೇತಿ, ರಣಜಿ ಪಂದ್ಯಗಳಿಗಾಗಿ ಈ ಕ್ರೀಡಾಂಗಣ ಬಳಕೆಯಾಗಲಿದೆ. ಕ್ರಿಕೆಟ್ ಕ್ರೀಡಾಂಗಣದ ಜೊತೆಗೆ ಈಜುಕೊಳ, ಶಟಲ್‌ ಬ್ಯಾಡ್ಮಿಂಟನ್, ಬಿಲಿಯರ್ಡ್ಸ್, ಬಾಸ್ಕೆಟ್‌ಬಾಲ್ ಗೂ ಅವಕಾಶ ದೊರೆಯಲಿದೆ ಎಂದು ಹೇಳಲಾಗಿದೆ.


    ಹಲವು ವರ್ಷಗಳ ಕೂಗಿಗೆ ದೊರೆತ ಮಾನ್ಯತೆ
    ರಾಜ್ಯದಲ್ಲಿ ಬೆಂಗಳೂರು ನಗರವನ್ನು ಹೊರತುಪಡಿಸಿ ಅಭಿವೃದ್ಧಿ ಹೊಂದುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣದ ಅಗತ್ಯ ಇದೆ ಎನ್ನುವ ಕೂಗು ಹಲವು ವರ್ಷಗಳದ್ದಾಗಿದೆ. ಕ್ರಿಕೆಟ್ ಪ್ರೇಮಿಗಳ ಈ ಬೇಡಿಕೆಗೆ ಇದೀಗ ಸ್ಪಂದನೆ ಸಿಗುವ ದಿನಗಳು ಹತ್ತಿರವಾಗುತ್ತಿದೆ. ಪುತ್ತೂರಿನ ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಯತ್ತೋಡಿ ಎಂಬಲ್ಲಿ ಈ ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು, ರಾಜ್ಯ‌ ಸರಕಾರ ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಾಗವನ್ನೂ ಮೀಸಲಿಟ್ಟಿದೆ.


    48.5 ಕೋಟಿ ರೂ. ಅನುದಾನ
    ಕಳೆದ 10 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್‌ ಕ್ರೀಡಾಂಗಣ ಬೇಡಿಕೆಯಿದ್ದು, ಮಂಗಳೂರಿನ ಕೊಣಾಜೆ, ಪುತ್ತೂರಿನ ಕಬಕ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿವೇಶನ ಕಾಯ್ದಿರಿಸಲಾಗಿದೆ. ಈ ಪೈಕಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೆರಿಯತ್ತೋಡಿ ಎನ್ನುವ ಪ್ರದೇಶದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಜಮೀನು ನೀಡಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
    ಶೀಘ್ರದಲ್ಲಿಯೇ ಕೆಎಸ್‌ಸಿಎ ಜತೆ ಜಮೀನಿಗೆ ಸಂಬಂಧಪಟ್ಟ ಕರಾರು ದಾಖಲೆಗಳ ವಿನಿಮಯ ಕಾರ್ಯ ನಡೆಯಲಿದೆ. ಸುಮಾರು 48.5 ಕೋಟಿ ರೂ. ಅನುದಾನದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಯೋಜನೆ ರೂಪಿಸಿದೆ.


    ಕ್ರಿಕೆಟಿಗ ಅನಿಲ್‌ ಕುಂಬ್ಳೆಯಿಂದ ಮನವರಿಕೆ
    ದಕ್ಷಿಣಕನ್ನಡ ಜಿಲ್ಲೆಯ ಕ್ರಿಕೆಟ್ ತರಬೇತಿಗಾಗಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ಅಗತ್ಯ ಎಂದು ಮಂಗಳೂರಿಗೆ ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಅದರಂತೆ ಮಂಗಳೂರು ನಗರದಲ್ಲಿ ನಿವೇಶನ ಕೊರತೆ ಇರುವುದರಿಂದ ಗ್ರಾಮಾಂತರ ಭಾಗದಲ್ಲಿ ನಿವೇಶನ ಕಾಯ್ದಿರಿಸಲು ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಹಸೀಲ್ದಾರ್‌ಗಳಿಗೆ, ಉಪವಿಭಾಗಾಧಿಕಾರಿ ಮೂಲಕ ಸೂಚಿಸಿದ್ದರು.


    2017ರಲ್ಲಿ ಡಾ.ರಾಜೇಂದ್ರ ಕೆ.ವಿ. ಪುತ್ತೂರಿನ ಸಹಾಯಕ ಕಮಿಷನರ್ ಆಗಿದ್ದಾಗ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ಕ್ರಿಕೆಟ್‌ ಕ್ರೀಡಾಂಗಣಕ್ಕಾಗಿ ಜಾಗ ಮೀಸಲಿಟ್ಟಿದ್ದರು.


    ಮಂಗಳೂರಿನ ಕೊಣಾಜೆ, ಮೇರಿಹಿಲ್‌ನಲ್ಲೂ ಜಮೀನು ನಿವೇಶನ ಕಾಯ್ದಿರಿಸುವಂತೆ ಕೆಎಸ್‌ಸಿಎ ಪದೇ ಪದೇ ಒತ್ತಡ ಹಾಕಿದ್ದರಿಂದ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕೆ.ವಿ. ಮಂಗಳೂರಿನ ಕೊಣಾಜೆಯಲ್ಲಿ 22 ಎಕರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಹಾಗೂ ಮೇರಿಹಿಲ್‌ನಲ್ಲಿ 6 ಎಕರೆ ಕಿರು ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿದ್ದಾರೆ. ಇದಕ್ಕೂ ಮುನ್ನ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 18 ಎಕರೆ ಜಾಗವನ್ನು ಕಾಯ್ದಿರಿಸಲಾಗಿತ್ತು.


    ಇದನ್ನೂ ಓದಿ: ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ


    ಅಲ್ಲದೆ ಪುತ್ತೂರಿನ ಕಬಕ ಗ್ರಾಮಪಂಚಾಯತ್ ನ ನಂ.260/1ಪಿಯಲ್ಲಿ 23.25 ಎಕರೆ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಕಾದಿರಿಸಿದ್ದರು. ಸರ್ಕಾರಿ ವಸತಿ ಪ್ರದೇಶ ನಿರ್ಮಾಣಕ್ಕೆ ಜಾಗ ಸೂಕ್ತವಾಗಿದ್ದು, ಕ್ರಿಕೆಟ್ ಕ್ರೀಡಾಂಗಣ ಬೇಡ ಸ್ಥಳೀಯಾಡಳಿತದಿಂದ ಎಂಬ ಅಗ್ರಹ ಅಂದು ಕೇಳಿಬಂದಿದ್ದರಿಂದ ಈ ಪ್ರಸ್ತಾವನೆ ಅರ್ಧದಲ್ಲೇ ಉಳಿದಿತ್ತು. ಇದೀಗ ರಾಜ್ಯ ಸರಕಾರ ಇದೇ ಜಾಗವನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆ ನೀಡಿದೆ.


    2024ಕ್ಕೆ ಸಿದ್ಧಗೊಳ್ಳಲಿದೆ ಸುಸಜ್ಜಿತ ಕ್ರೀಡಾಂಗಣ
    ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿ 23 ಎಕರೆ ಪ್ರದೇಶದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, 2024ಕ್ಕೆ ಸಿದ್ಧಗೊಳ್ಳಲಿದೆ. ಅದೇ ಮಾದರಿಯಲ್ಲಿ ಪುತ್ತೂರಿನಲ್ಲೂ ಸ್ಟೇಡಿಯಂ ನಿರ್ಮಾಣಕ್ಕೆ ಕೆಎಸ್‌ಸಿಎ ಯೋಜನೆ ರೂಪಿಸಿದೆ. ಈಜುಕೊಳ, ರೆಸ್ಟೋರೆಂಟ್, ಸಾವಿರ ಜನ ಸಾಮರ್ಥ್ಯದ ಸಭಾಂಗಣ, ಶಟಲ್ ಬ್ಯಾಡ್ಮಿಂಟನ್, ಬಿಲಿಯರ್ಡ್ಸ್, ಫ್ಲ್ಯಾಶ್, ಬಾಸ್ಕೆಟ್‌ಬಾಲ್ ಗೂ ವ್ಯವಸ್ಥೆಗಳಿವೆ.


    ಇದನ್ನೂ ಓದಿ: Surathkal Toll Gate: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು


    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ 40 ಸಾವಿರ ಆಸನಗಳ ಗರಿಷ್ಠ ಸಾಮರ್ಥ್ಯ ಹೊಂದಿದೆ. ಪುತ್ತೂರಿನಲ್ಲಿ ಇದಕ್ಕಿಂದ ದೊಡ್ಡದಾದ ಮತ್ತು ವಿಭಿನ್ನ ಮಾದರಿಯ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ. ಆದರೆ ಸ್ಟೇಡಿಯಂ ಆರಂಭದಲ್ಲಿ ತರಬೇತಿ ಹಾಗೂ ರಣಜಿ, ದೇಶೀಯ ಪಂದ್ಯಾಟಕ್ಕಾಗಿ ಮಾತ್ರ ಬಳಕೆಯಾಗಲಿದೆ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಬೇಕಿದ್ದರೆ ಐಸಿಸಿ ನಿಯಮದಂತೆ ಅಗತ್ಯ ಮಾರ್ಪಾಡುಗಳನ್ನು ಬಿಸಿಸಿಐ ಉಸ್ತುವಾರಿಯಲ್ಲಿ ಮಾಡಬೇಕಾಗುತ್ತದೆ.


    ವರದಿ: ಅಜಿತ್ ಕುಮಾರ್ ಪುತ್ತೂರು

    Published by:ಗುರುಗಣೇಶ ಡಬ್ಗುಳಿ
    First published: