ಪುತ್ತೂರು: ಕಾರ್ ಬಂಪರ್ನಲ್ಲಿ ಸಿಕ್ಕಿ 70 ಕಿಲೋಮೀಟರ್ ಸಾಗಿದ ನಾಯಿಯ (Dog In Car Bumper) ಅಪ್ಡೇಟೆಡ್ ಕಥೆಯಿದು! ಹೌದು, ಇತ್ತೀಚಿಗಷ್ಟೇ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಬಂಪರ್ ಒಳಗೆ ಹೊಕ್ಕಿದ್ದ ನಾಯಿ ಭಾರೀ ವೈರಲ್ (Dog Video Viral) ಆಗಿತ್ತು. ಇದೀಗ ಈ ನಾಯಿಯನ್ನು ಹುಡುಕಿ ಅದರ ಮರಿಗಳ ಜೊತೆ ಬಿಡಲಾಗಿದೆ. ನಾಯಿಯ ಹಿಂದಿನ ಅವಿನಾಭಾವ ಸಂಬಂಧದ ಕಥೆ ಕಣ್ಣಂಚಲ್ಲಿ ನೀರು ತರಿಸುವಂತಿದೆ.
ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯಿ ಕಾರಿಗೆ ಡಿಕ್ಕಿಯಾಗಿತ್ತು. ಕಾರು ಸವಾರರು ಇಳಿದು ನೋಡಿದರೆ ನಾಯಿ ಎಲ್ಲೂ ಪತ್ತೆಯಾಗಿರ್ಲಿಲ್ಲ. ಆದ್ರೆ ನಾಯಿ ಬಂಪರ್ನಲ್ಲಿತ್ತು! ಡಿಕ್ಕಿ ಹೊಡೆದ ನಾಯಿಯನ್ನು ಸಾಕಿದ್ದು ಯಾರು? ಎಲ್ಲಿಯ ನಾಯಿ ಎಂಬ ಯಾವ ಗುರುತು ಸಹ ಪತ್ತೆಯಾಗಿರ್ಲಿಲ್ಲ.
ಅರಣ್ಯಾಧಿಕಾರಿ ಮಗಳಿಗೆ ನಾಯಿ ಅಂದ್ರೆ ಪಂಚಪ್ರಾಣ!
ಇದೇ ನಾಯಿ ಬಳ್ಪ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿಯ ಮನೆಗೆ ಬರುತ್ತಿತ್ತು. ಮನೆಗೆ ಬರುತ್ತಿದ್ದ ನಾಯಿಗೆ ಅರಣ್ಯಾಧಿಕಾರಿ ಸಂತೋಷ್ ರೈ ಅವರ ಐದು ವರ್ಷ ಪ್ರಾಯದ ಮಗಳು ತಿಂಡಿ ಹಾಕುತ್ತಿದ್ದಳು. ಆದ್ರೆ ಈ ನಾಯಿ ತನಗೆ ಡಿಕ್ಕಿಯಾದ ಕಾರಿನೊಂದಿಗೆ ಸೇರಿ ಪುತ್ತೂರು ಸೇರಿತ್ತು. ಮರಿಗಳನ್ನು ಬಿಟ್ಟು ಪುತ್ತೂರು ಸೇರಿದ್ದ ನಾಯಿಗಾಗಿ ಅರಣ್ಯಾಧಿಕಾರಿಯ ಮಗಳು ಹಾತೊರೆದಿದ್ದಳು. ನಾಯಿಯನ್ನು ಮರಳಿ ತರುವಂತೆ ತಂದೆಯ ಮುಂದೆ ಪಟ್ಟು ಹಿಡಿದಿದ್ದಳು.
ವೈರಲ್ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ
ಇದೇ ವೇಳೆ ಕಾರಿಗೆ ನಾಯಿ ಡಿಕ್ಕಿ ಹೊಡೆದು ಬಂಪರ್ ಸೇರಿ 70 ಕಿಲೋ ಮೀಟರ್ ಸಂಚರಿಸಿದ ಘಟನೆ ಭಾರೀ ವೈರಲ್ ಆಗಿತ್ತು. ಈ ಸುದ್ದಿ ಕೇಳಿದ ಅರಣ್ಯಾಧಿಕಾರಿ ನಾಯಿ ಇರುವ ಸ್ಥಳ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: Puttur: ಕಾರ್ಗೆ ಡಿಕ್ಕಿಯಾದ ನಾಯಿ ಬಂಪರ್ನೊಳಗೆ ಪ್ರತ್ಯಕ್ಷ; 70 ಕಿಲೋ ಮೀಟರ್ ಪ್ರಯಾಣಿಸಿದ ಶ್ವಾನ
ನಾಯಿ ಮಡಿಲು ಸೇರಿದ ಮರಿಗಳು!
ನಾಯಿ ಮೇಲಿನ ಮಗಳ ಪ್ರೀತಿಗೆ ಸೋತ ಅರಣ್ಯಾಧಿಕಾರಿ ಕೊನೆಗೂ ನಾಯಿಗಾಗಿ ಪುತ್ತೂರಿಗೆ ಹೋಗಿದ್ದಾರೆ. ಪುತ್ತೂರಿನ ಮನೆಯೊಂದರ ಪಕ್ಕ ನಾಯಿ ಇರುವ ಬಗ್ಗೆ ಗೊತ್ತಾಗಿ ನಾಯಿಯನ್ನು ಮತ್ತೆ ಅದರ ಮರಿಗಳ ಜೊತೆ ಒಂದುಗೂಡಿಸಿದ್ದಾರೆ. ನಾಯಿಮರಿಗಳು ತನ್ನ ತಾಯಿಯ ಮಡಿಲು ಸೇರಿದ್ದು ಕಂಡು ಅರಣ್ಯಾಧಿಕಾರಿ ಸಂತೋಷ್ ರೈ ಅವರ ಮಗಳು ಖುಷ್ ಆಗಿದ್ದಾಳೆ.
ಇದನ್ನೂ ಓದಿ: Mangaluru: ಒಣ ಮೀನು ತಯಾರಿಗೆ ಖಡಕ್ ನಿಯಮ! ಮಸಾಲೆ ಅರೆಯುವ ಮುನ್ನ ಹುಷಾರ್!
ಒಟ್ಟಾರೆ ಕಾರಿನ ಬಂಪರ್ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ್ದ ನಾಯಿ ಅಂತೂ ತನ್ನ ಮರಿಗಳನ್ನು ಸೇರಿದೆ. ವೈರಲ್ ಆಗಿದ್ದ ವಿಷಯವೊಂದು ಭಾವನಾತ್ಮಕ ತಿರುವು ಪಡೆದು ಮನಸು ಒದ್ದೆಯಾಗುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ