ಮಂಗಳೂರು: ಕರಾವಳಿಯಾದ್ಯಂತ 'ಈದ್ ಉಲ್ ಫಿತರ್' (Eid al-Fitr) ಹಬ್ಬವನ್ನು ಶನಿವಾರದಂದು ಮುಸ್ಲಿಮ್ ಬಾಂಧವರು (Muslim Community) ಆಚರಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ನೆರೆಯ ಕೇರಳದ (Kerala) ಕಾಸರಗೋಡು ಜಿಲ್ಲೆಗಳಲ್ಲಿ ಮುಸ್ಲಿಂ ಬಾಂಧವರು ತಮ್ಮ ರಂಜಾನ್ ಉಪವಾಸ (Ramdan 2023) ಕೊನೆಗೊಳಿಸಿ ಹಬ್ಬ ಆಚರಿಸಲಿದ್ದಾರೆ. 'ಈದ್ ಉಲ್ ಫಿತರ್' ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವೃತ ಆಚರಿಸುತ್ತಾರೆ. ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳಾಗಿದೆ. ಈ ತಿಂಗಳ ಚಂದ್ರ ದರ್ಶನವಾಗುತ್ತಲೇ ಮುಸ್ಲಿಮರು ರಂಜಾನ್ ತಿಂಗಳಿಡೀ ಹಗಲಿನಲ್ಲಿ ಅನ್ನ, ಪಾನೀಯ ತೊರೆದು ಉಪವಾಸ ವೃತ ಆಚರಿಸುತ್ತಾರೆ.
ಶವ್ವಾಲ್ನಲ್ಲಿ ಈದುಲ್ ಫಿತ್ರ್
ಇಸ್ಲಾಮಿಕ್ ಕ್ಯಾಲೆಂಡರ್ ಚಾಂದ್ರಮಾನ ಪದ್ಧತಿಯನ್ನು ಅನುಸರಿಸುತ್ತದೆ. ಅದರಂತೆ ಒಂದು ತಿಂಗಳಿಗೆ 29 ಅಥವಾ 30 ದಿನಗಳಷ್ಟೇ ಇರುತ್ತವೆ. ಅಮಾವಾಸ್ಯೆ ನಂತರದ ಚಂದ್ರದರ್ಶನದ ಮೂಲಕ ಹೊಸ ತಿಂಗಳನ್ನು ನಿರ್ಧರಿಸಲಾಗುತ್ತದೆ. ರಂಜಾನ್ 29 ರ ರಾತ್ರಿ ಚಂದ್ರದರ್ಶನವಾದರೆ ಶವ್ವಾಲ್ ತಿಂಗಳ 1 ರಂದು ಈದ್ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಕರಾವಳಿಯಾದ್ಯಂತ ಚಂದ್ರದರ್ಶನವಾಗದ ಹಿನ್ನೆಲೆ ಶುಕ್ರವಾರ (ಎಪ್ರಿಲ್ 21) ಕೂಡಾ ಉಪವಾಸ ವೃತ ಕೈಗೊಳ್ಳಲಾಗಿದೆ. ಶನಿವಾರದಂದು ಈದ್ ಆಚರಿಸಲಿದ್ದಾರೆ.
ಈದ್ ವಿಶೇಷ ಪ್ರಾರ್ಥನೆ
ಈದ್ ಹಬ್ಬದಂದು ಪ್ರತೀ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿರುತ್ತದೆ. ಹೊಸ ಉಡುಪು, ಉತ್ಸಾಹದೊಂದಿಗೆ ಬೆಳಗ್ಗಿನ ಪ್ರಾರ್ಥನೆಗೆ, ವಿಶೇಷವಾಗಿ ಪುರುಷರು ಮಸೀದಿಗೆ ತೆರಳಿ ಈದ್ ನಮಾಜ್ ಸಲ್ಲಿಸುತ್ತಾರೆ.
ಇದನ್ನೂ ಓದಿ: Yellow Alert: ಕರ್ನಾಟಕದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ವಿಶೇಷ ಅಡುಗೆ, ಶುಭಾಶಯ ವಿನಿಮಯ
ಈದುಲ್ ಫಿತ್ರ್ ಹಬ್ಬವು ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು 'ಪೆರ್ನಾಳ್ ಹಬ್ಬ' ಎಂದೂ ಕರೆಯಲಾಗುತ್ತದೆ. ಈ ದಿನ ಮುಸ್ಲಿಮರ ಮನೆಗಳಲ್ಲಿ ವಿಶೇಷ ಅಡುಗೆ ತಯಾರಿಸಲಾಗುತ್ತದೆ. ಜೊತೆಗೆ, ನೆರೆಹೊರೆಯವರೊಂದಿಗೆ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಪರಸ್ಪರ ಕುಟುಂಬಿಕರೊಂದಿಗೆ ಬೆರೆತು ಶುಭಾಶಯ ವಿನಿಮಯ ಮಾಡಿಕೊಂಡು ಶುಭಾಶಯ ಕೋರುತ್ತಾರೆ. ಮದುವೆಯಾಗಿ ಗಂಡನ ಮನೆಗೆ ತೆರಳಿದ ಹೆಣ್ಮಕ್ಕಳು ಹಬ್ಬವನ್ನು ಮುಗಿಸಿ ಸಾಯಂಕಾಲವಾಗುತ್ತಲೇ ತಮ್ಮ ತವರಿಗೆ ತೆರಳುತ್ತಾರೆ.
ಕಡ್ಡಾಯ ದಾನ
ಇಸ್ಲಾಮಿನ ಐದು ಪಂಚ ಕರ್ಮಗಳಲ್ಲಿ ಒಂದಾದ ಕಡ್ಡಾಯ ದಾನ (ಝಕಾತ್) ಅನ್ನು ನೀಡಲು ರಂಜಾನ್ ಹೆಚ್ಚು ಶ್ರೇಷ್ಠ ತಿಂಗಳಾಗಿದೆ. ತಮ್ಮ ಆದಾಯದ ಉಳಿತಾಯದಲ್ಲಿರುವ ಶೇಕಡಾ 2.5 ನ್ನು ಕಡ್ಡಾಯವಾಗಿ ಬಡವರಿಗೆ, ನಿರ್ಗತಿಕರಿಗೆ ದಾನ ನೀಡುವಂತೆ ಕುರ್ ಆನ್ ತಿಳಿಸುತ್ತದೆ. ರಂಜಾನ್ ತಿಂಗಳಿನಲ್ಲಿಯೇ ಇಸ್ಲಾಮಿನ ಪವಿತ್ರ ಗ್ರಂಥ ಕುರ್ ಆನ್ ಅವತೀರ್ಣಗೊಂಡಿದೆ ಎಂದು ಮುಸ್ಲಿಮರು ನಂಬುತ್ತಾರೆ.
ಇದನ್ನೂ ಓದಿ: Pundi Gasi Recipe: ಪುಂಡಿ ಬೇಯಿಸ್ಬೇಡಿ, ಮನೆಯಲ್ಲೇ ಮಾಡ್ಕೊಂಡು ತಿನ್ನಿ! ರೆಸಿಪಿ ಇಲ್ಲಿದೆ
ಹೀಗಾಗಿ ಈ ತಿಂಗಳಿನಲ್ಲಿ ಉಪವಾಸವಿದ್ದು, ದೇವರ ಭಕ್ತಿಯನ್ನು ಹೆಚ್ಚಿಸುತ್ತಾರೆ. ಹೆಚ್ಚಿನ ಮುಸ್ಲಿಮರು 114 ಅಧ್ಯಾಯಗಳ ಸಂಪೂರ್ಣ ಕುರ್ ಆನ್ ಓದಿ ಮುಗಿಸಲು ಪ್ರಯತ್ನಿಸುವುದು ಈ ತಿಂಗಳಿನ ವಿಶೇಷವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ