• Home
 • »
 • News
 • »
 • mangaluru
 • »
 • Mangaluru News: ಕಡಬ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ; ನಿಮ್ಮ ಸಮಸ್ಯೆಯನ್ನು ಇಲ್ಲೇ ಹೇಳಿಬಿಡಿ

Mangaluru News: ಕಡಬ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ; ನಿಮ್ಮ ಸಮಸ್ಯೆಯನ್ನು ಇಲ್ಲೇ ಹೇಳಿಬಿಡಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಈ ತಿಂಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಕಡಬ ತಾಲೂಕಿನ ಅಲಂಕಾರು ಗ್ರಾಮದಲ್ಲಿ ನಡೆಯಲಿದೆ.

 • Share this:

  ಮಂಗಳೂರು: ಸರಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದ ಜನರಿಗೆ ತಲುಪಿಸಲು ಹಾಗೂ ಜನರ ಸಮಸ್ಯೆಗಳನ್ನು ಆಲಿಸಲು ಖುದ್ದು ಜಿಲ್ಲಾಧಿಕಾರಿಯವರೇ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಹೂಡಿದರೆ? ಇಂತಹ ಒಂದು ಯೋಜನೆ ಆಗಾಗ ಕಾರ್ಯರೂಪಕ್ಕೆ ಬರುವುದನ್ನು ನೀವು ಗಮನಿಸಿರಬಹುದು. ಇದೇ ರೀತಿ ರಾಜ್ಯ ಸರ್ಕಾರದ (Karnataka Government) ಜನಪರ ಯೋಜನೆಗಳನ್ನು ತಳಮಟ್ಟದಲ್ಲಿರುವ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಈ ಬಾರಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ (Kadaba) ಅಲಂಕಾರು ಗ್ರಾಮದಲ್ಲಿ ನಡೆಯಲಿದೆ. ಖುದ್ದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರೇ ಹಾಜರಿದ್ದು ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಮಾತ್ರವಲ್ಲದೇ, ಸ್ಥಳದಲ್ಲಿಯೇ ಅರ್ಜಿಯನ್ನು ವಿಲೇವಾರಿ ಮಾಡಲಿದ್ದಾರೆ.


  ಕಂದಾಯ ಇಲಾಖೆಯಡಿ ಅಂದರೆ, ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್ ಕಚೇರಿಗಳಲ್ಲಿ ಆಗಬೇಕಿದ್ದ ಕೆಲಸ ಕಾರ್ಯಗಳು ಒಂದು ವೇಳೆ ಯಾವುದೋ ತೊಡಕಿನಿಂದ ಮಾಡಿಕೊಳ್ಳಲು ಸಾಧ್ಯವಾಗಿಲ್ಲವೇ? ಹಾಗಿದ್ದರೆ ಸುಲಭವಾಗಿ ಈ ಸಂದರ್ಭದಲ್ಲಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಒಂದು ವೇಳೆ ಸ್ಥಳದಲ್ಲಿಯೇ ಪರಿಹಾರ ಸಿಗದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ದಿನಾಂಕ ನಿಗದಿಪಡಿಸಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ಡಿಸಿ ಅವರು ನೀಡಲಿದ್ದಾರೆ.


  ಗ್ರಾಮ ವಾಸ್ತವ್ಯ ಎಲ್ಲಿ? ಯಾವಾಗ?
  ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಅವರ ‘ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ’ ಈ ತಿಂಗಳ ಕಾರ್ಯಕ್ರಮವು ಇದೇ ಜೂನ್ 18ರ ಶನಿವಾರದಂದು ನಡೆಯಲಿದೆ. ಆ ದಿನ ಜಿಲ್ಲಾಧಿಕಾರಿಯವರು ಕಡಬ ತಾಲೂಕಿನ ಅಲಂಕಾರು ಗ್ರಾಮದ ದೀನ್ ದಯಾಳು ರೈತ ಸಭಾಭವನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.


  ಪೂರ್ವ ತಯಾರಿ ಹೇಗಿದೆ?
  ಡಿಸಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮುಂಚಿತವಾಗಿ ಹಲವು ತಯಾರಿಗಳನ್ನು ನಡೆಸಲಾಗಿದೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರತಿಯೊಂದು ಸರ್ವೇ ಮಾಡಿಸಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸುವಂತೆ ನಿರ್ದೇಶನ ನೀಡಲಾಗಿದೆ. ಅದರಂತೆ ಗ್ರಾಮ ಲೆಕ್ಕಾಧಿಕಾರಿಗಳು ಸಾರ್ವಜನಿಕರಿಂದ ಹಲವು ಮನವಿಗಳನ್ನು ಸ್ವೀಕರಿಸಿದ್ದಾರೆ.


  ಡಿಸಿ ಜೊತೆ ಮುಖಾಮುಖಿಗೂ ಅವಕಾಶ
  ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಭೇಟಿ ಸುಲಭವಾಗಿ ಸಿಗುವುದಿಲ್ಲ. ಒಂದೊಮ್ಮೆ ರಜೆ, ಕಾರ್ಯಕ್ರಮದ ಒತ್ತಡಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರೂ ಅದೆಷ್ಟೋ ಜನರಿಗೆ ಡಿಸಿ ಭೇಟಿ ಸಾಧ್ಯವಾಗುವುದಿಲ್ಲ. ಆದರೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಹಳ್ಳಿಯ ನಾಗರಿಕರ ಅಹವಾಲಿಗೂ ಜಿಲ್ಲಾಧಿಕಾರಿಯವರು ಸ್ಪಂದಿಸಲಿದ್ದಾರೆ.


  ಮಂಗಳೂರು ನಗರದಿಂದ ಸುಮಾರು 85 ಕಿಲೋ ಮೀಟರ್ ದೂರದಲ್ಲಿರುವ ಕಡಬ ತಾಲೂಕಿನ ಮಂದಿಯ ಅಹವಾಲು ಕೂಡಾ ಖುದ್ದು ತಮ್ಮ ಗ್ರಾಮದಲ್ಲಿಯೇ ನೀಡುವ ಅವಕಾಶ ಗ್ರಾಮ ವಾಸ್ತವ್ಯದ ಮೂಲಕ ಸಾಕಾರಗೊಳ್ಳಲಿದೆ.


  ಇದನ್ನೂ ಓದಿ: Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಜನರೇ, ಈ ನಂಬರ್​ಗಳನ್ನು ಸೇವ್ ಮಾಡಿ ಇಟ್ಕೊಂಡಿರಿ


  ಈಗಾಗಲೇ ಗ್ರಾಮ ಲೆಕ್ಕಾಧಿಕಾರಿ ಅವರಲ್ಲಿ ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡಬಹುದು. ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ, ಗ್ರಾಮ ವಾಸ್ತವ್ಯ ದಿನವೇ ತಮ್ಮ ಅಹವಾಲನ್ನು ಖುದ್ದು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲು ಅವಕಾಶವಿದೆ.


  Alankar Village ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]


  ತ್ವರಿತ ಗತಿಯಲ್ಲಿ ವಿಲೇವಾರಿ
  ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸಮಯದಲ್ಲಿ ಸಾರ್ವಜನಿಕರು ನೀಡುವ ದೂರನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲಾಗುವುದು. ಒಂದು ವೇಳೆ, ಬಹುತೇಕ ಅಹವಾಲುಗಳು ಬಾಕಿಯುಳಿದಿದ್ದಲ್ಲಿ ಮತ್ತೊಂದು ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿಯವರು ಅದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸುತ್ತಾರೆ.


  ಇದನ್ನೂ ಓದಿ: Udupi Helpline: ಉಡುಪಿ ಜಿಲ್ಲೆಯ ಜನರೇ ಅಲರ್ಟ್! ನಿಮ್ಮ ಜೀವ ಉಳಿಸುತ್ತೆ ಈ ನಂಬರ್


  ಈ ಅಧಿಕಾರಿಗಳು ಹಾಜರಿರುತ್ತಾರೆ
  ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು ಮುಂತಾದವರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆಯಲ್ಲಿದ್ದು, ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತಾರೆ.

  Published by:guruganesh bhat
  First published: