ದಕ್ಷಿಣ ಕನ್ನಡ: ಇದೇನಿದು ಪೈಪು ಒಡೆದು ನೀರು ಪೋಲಾಗ್ತಿದ್ಯಾ ಅಂತಾ ಅಂದ್ಕೊಂಡ್ರೆ ಅದು ನಿಮ್ಮ ತಪ್ಪಲ್ಲ. ಯಾಕೆಂದ್ರೆ ಅಲ್ಲೆಲ್ಲಾ ನೋಡ್ತಿದ್ರೆ ಹಾಗೇಯೇ ಅನ್ಸುತ್ತೆ ಕೂಡಾ. ಆದರೆ ಅಲ್ಲೇ ಹತ್ತಿರದಲ್ಲೇ ಹಾಕಿರೋ ಟರ್ಬೈನ್ ನೋಡಿದ್ರೆ ಇಲ್ಲಿನ ಕಥೆಯೇ ಬೇರೆ ಎಂದು ತಿಳಿಯುತ್ತದೆ. ದಶಕಗಳ ಹಿಂದೆಯೇ ಆತ್ಮನಿರ್ಭರತೆಯನ್ನ ಮೈಗೂಡಿಸಿಕೊಂಡಿದ್ದೂ ಗೊತ್ತಾಗುತ್ತದೆ.
ಜಲ ವಿದ್ಯುತ್ ಘಟಕ
ಹೌದು, ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಸುರೇಶ್. ಇವರು ಕಳೆದ 17 ವರ್ಷಗಳಿಂದ ವಿದ್ಯುತ್ಗಾಗಿ ಸರಕಾರದ ಬಳಿ ಅಂಗಲಾಚದೆ ತನ್ನದೇ ಸ್ವಂತ ಜಲ ವಿದ್ಯುತ್ ಘಟಕವನ್ನು ಸ್ಥಾಪಿಸುವ ಮೂಲಕ ನಿರಂತರ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ತನ್ನ ತೋಟದ ಸುಮಾರು 60 ಅಡಿ ಎತ್ತರದಲ್ಲಿ ಹರಿಯುವ ಹಳ್ಳದ ನೀರನ್ನು ಕೊಳವೆಯ ಮೂಲಕ ಟರ್ಬನ್ ಗೆ ಹರಿಸಿ 2 ಕೆ.ವಿ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Dakshina Kannada: ಕರಾವಳಿಯ ಭಾರೀ ಫೇಮಸ್ ಬೊಂಬೆಯಾಟದ ಹಿಂದಿರುವ ಮಾಂತ್ರಿಕ ಇವರೇ!
ವಿದ್ಯುತ್ ಉತ್ಪಾದನೆ
6 ಇಂಚು ಅಗಲದ ಕೊಳವೆಯ ಮೂಲಕ ನೀರನ್ನು ಹರಿಸಿ , 4 ಇಂಚು, 3 ಇಂಚು, 2.5 ಇಂಚು ಹಾಗೂ 1.50 ಇಂಚುಗಳ ಪೈಪ್ ಗಳನ್ನು ಜೋಡಿಸುವ ಮೂಲಕ ನೀರಿನ ಹರಿವಿನ ರಭಸವನ್ನು ಹೆಚ್ಚಿಸಿ, ಟರ್ಬೈನ್ ಗೆ 1 ಇಂಚಿನ ಪೈಪ್ ಮೂಲಕ ನೀರನ್ನು ಬಿಡುತ್ತಾರೆ. ಈ ವ್ಯವಸ್ಥೆಯಿಂದಾಗಿ ಟರ್ಬೈನ್ ವೇಗವಾಗಿ ತಿರುಗಿಸಲಾಗುತ್ತದೆ. ಈ ಟರ್ಬೈನ್ ಗೆ ಬೆಲ್ಟ್ ಅಳವಡಿಸಿ ಡೈನಮೋ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ.
ವಿದ್ಯುತ್ ಬಿಲ್ ಉಳಿಕೆ
ಹೀಗೆ ಸುರೇಶ್ ಅವರು ಮನೆಗೆ ಬೇಕಾದ ಎಲ್ಲಾ ವಿದ್ಯುತ್ ಸಲಕರಣೆಗೆ ಇದೇ ವಿದ್ಯುತ್ ಅನ್ನು ಉಪಯೋಗಿಸುತ್ತಿದ್ದಾರೆ. ವರ್ಷಕ್ಕೆ 9 ತಿಂಗಳು ಇದೇ ವಿದ್ಯುತ್ ಸುರೇಶ್ ಬಳಸುತ್ತಾರೆ. ಈ ಟರ್ಬೈನ್ನ್ನು ಸರಿ ಸುಮಾರು 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿದೆಯಾದರೂ, ಖರ್ಚು ಮಾಡಿದ ಹಣಕ್ಕಿಂತ ಎಷ್ಟೋ ಪಾಲು ಹಣವನ್ನು ವಿದ್ಯುತ್ ಬಿಲ್ ಪಡೆಯದೆ ಉಳಿಸಿದ್ದಾರೆ.
ಇದನ್ನೂ ಓದಿ: Dakshina Kannada: ಮೂಡುಬಿದಿರೆ ಬಾಲಕನ ಜೊತೆ ಪಿಎಂ ಮೋದಿ ಚರ್ಚೆ!
ಅಂತರ್ಜಲ ವೃದ್ಧಿ
ಪ್ರಗತಿಪರ ಕೃಷಿಕರಾಗಿರುವ ಸುರೇಶ್ ನೈಸರ್ಗಿಕವಾಗಿ ಹರಿಯುವ ನೀರನ್ನೇ ತಮ್ಮ ತೋಟಗಳಿಗೆ ಬಳಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಯಲ್ಲೂ ತಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ. ಹರಿಯುವ ನೀರನ್ನು ತೋಟದ ತುಂಬಾ ನೀರಿನ ಗುಂಡಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿ ಮಾಡುತ್ತಿದ್ದಾರೆ. ಈ ಕಿರು ಜಲವಿದ್ಯುತ್ ಘಟಕವನ್ನು ವೀಕ್ಷಿಸಲು ಹಾಗೂ ಮಾಹಿತಿ ಪಡೆದುಕೊಳ್ಳಲು ಊರು ಹಾಗೂ ಪರವೂರಿನಿಂದ ಹಲವರು ಸುರೇಶ್ ಅವರ ತೋಟಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.
ಹೀಗೆ ಸುರೇಶ್ ಅವರ ಸ್ವಾವಲಂಬನೆಯಿಂದಾಗಿ ಅವರ ತೋಟದಲ್ಲಿ ಕಿರು ಜಲ ವಿದ್ಯುತ್ ಘಟಕವೇ ತಲೆ ಎತ್ತಿ ನಿಂತಿದೆ. ಯಾರನ್ನೂ ಆಶ್ರಯಿಸದೇ ವಿದ್ಯುತ್ ತಯಾರಿಸಿಕೊಳ್ಳಬಹುದು ಅನ್ನೋದಕ್ಕೂ ಇವರು ಮಾದರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ