ಪುತ್ತೂರು(ಜ.05): ದಕ್ಷಿಣ ಕನ್ನಡದ ಗೋಶಾಲೆ ತುಂಬಾ ಹಬ್ಬದ ವಾತಾವರಣ. ಪುಟ್ಟ ಮಗುವಿಗೆ ಬರ್ತ್ ಡೇ ಸಂಭ್ರಮ. ಪಾರ್ಲರ್, ಪಾರ್ಕ್ ಬದಲು ಗೋಶಾಲೆಯೇ ಆಯ್ತು ಪಾರ್ಟಿ ಲೊಕೇಶನ್, ಕೇಕ್ ಕತ್ತರಿಸುವ ಬದಲು ಗೋವುಗಳಿಗೆ ನೀಡಿದ್ರು ಮೇವು. ಹೀಗೆ ವಿಶಿಷ್ಟವಾಗಿ ಪುಟ್ಟ ಮಗುವಿನ ಮೊದಲ ಹುಟ್ಟುಹಬ್ಬವನ್ನ ಆಚರಿಸಿಕೊಂಡರು ನೋಡಿ ಪುತ್ತೂರಿನ ದಂಪತಿ. ಅರೇ ಇದೇನಿದು ಅಂತೀರಾ? ಇಲ್ಲಿದೆ ನೋಡಿ ಪ್ರಾಣಿ ಪ್ರೇಮ ಸಾರುವ ಸುದ್ದಿಯ ವಿವರ.
ಗೋಶಾಲೆಯಲ್ಲಿ ಮಗು ಬರ್ತ್ ಡೇ
ಯೆಸ್, ತಮ್ಮ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬ ಅರ್ಥ ಪೂರ್ಣವಾಗಿಸಬೇಕೆನ್ನುವ ನಿಟ್ಟಿನಲ್ಲಿ ದಕ್ಷಿಣ ನ್ನಡದ ಕಡಬ ತಾಲೂಕಿನ ಕೊಂಬಾರು ನಿವಾಸಿಗಳಾದ ಚೇತನ್ ಮತ್ತು ಅಪೂರ್ವ ದಂಪತಿಗಳು ವಿಭಿನ್ನವಾಗಿ ಆಚರಿಸಿಕೊಂಡರು. ತಮ್ಮ ಪುತ್ರ ಶಿವಾಂಶ್ ಮೊದಲ ಬರ್ತ್ ಡೇ ಯನ್ನ ಗೋಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು. ಹೆತ್ತವರ ಜೊತೆ ಆಗಮಿಸಿದ ಶಿವಾಂಶ್ ಬರ್ತ್ ಡೇ ಭಾರೀ ಜೋರಾಗಿಯೇ ಗೋಶಾಲೆಯಲ್ಲಿ ನಡೆಯಿತು. ಕುಟುಂಬಿಕರು, ಹಿರಿಯರು, ಹಿತೈಷಿಗಳು ಶಿವಾಂಶ್ ಹರಸಿ ಹಾರೈಸಿದರೆ, ಶಿವಾಂಶ್ ತಂದೆ, ತಾಯಿಯ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಭಿನ್ನ ರೀತಿ ಆಚರಣೆಗೆ ಹೆತ್ತವರ ನಿರ್ಧಾರ
ಮಧ್ಯಮ ವರ್ಗಕ್ಕೆ ಸೇರಿದ ಚೇತನ್ ಮತ್ತು ಅಪೂರ್ವ ದಂಪತಿಗಳಿಗೆ ತಮ್ಮ ಮಗುವಿನ ಮೊದಲ ಹುಟ್ಟುಹಬ್ಬವನ್ನು ಯಾವುದಾದರೂ ಅನಾಥಾಶ್ರಮದಲ್ಲಿ ಆಚರಿಸಬೇಕು ಎಂಬ ಬಯಕೆಯಿತ್ತು. ಆದರೆ ಕಾರಣಾಂತರಗಳಿಂದ ಈ ಆಸೆ ನೆರವೇರದ ಹಿನ್ನಲೆಯಲ್ಲಿ ತಮ್ಮ ವಿಶಿಷ್ಟ ರೀತಿಯ ಹುಟ್ಟುಹಬ್ಬ ಆಚರಣೆಯ ಬಯಕೆಯನ್ನ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಐತಪ್ಪ ನಾಯ್ಕ ಅವರ ಮುಂದಿಟ್ಟಿದ್ದರು. ಆ ಸಮಯದಲ್ಲಿ ಐತಪ್ಪ ನಾಯ್ಕ್ ದೇವಸ್ಥಾನದ ಗೋಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸುವಂತೆ ಸಲಹೆ ನೀಡಿದ್ದರು.
ಪುತ್ತೂರಿನ ಗೋಶಾಲೆ
ಈ ಹಿನ್ನಲೆಯಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು. ಗೋವುಗಳಿಗೆ ಆಹಾರ ನೀಡುವ ಮೂಲಕ ಸಂಭ್ರಮಪಟ್ಟರು. ಈ ಸಮಯದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಸೇರಿದಂತೆ, ಸಿಬ್ಬಂದಿಗಳೆಲ್ಲರೂ ಖುದ್ದು ಹಾಜರಿದ್ದು ಶಿವಾಂಶ್ ಗೆ ಆಶೀರ್ವದಿಸಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ತಮ್ಮ ಮಕ್ಕಳ ಮೊದಲ ಹುಟ್ಟುಹಬ್ಬವನ್ನ ನೆನಪಿನಲ್ಲಿರುವಂತೆ ಮಾಡಲು ಅದೆಷ್ಟೋ ಹೊಸ ಹೊಸ ಐಡಿಯಾಗಳನ್ನ ಮಾಡೋದಿದೆ. ಆದ್ರೆ ಪುತ್ತೂರಿನ ಈ ದಂಪತಿ ಅದೆಲ್ಲಕ್ಕೂ ಭಿನ್ನವಾಗಿ ಗೋಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಹೀಗೂ ಬರ್ತ್ ಡೇ ಆಚರಿಸಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ