ಮಂಗಳೂರು: ಮಂಗಳೂರು ನಗರ ವ್ಯಾಪ್ತಿ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಇಂತಹದ್ದೇ ಬಣ್ಣ ಹಾಕಿಸಿಕೊಳ್ಳುವಂತೆ (Auto Colour Code) ದಕ್ಷಿಣ ಕನ್ನಡ (Daksina Kannada) ಜಿಲ್ಲಾಡಳಿತವು ಸೂಚನೆ ನೀಡಿದೆ. ನಗರ ವ್ಯಾಪ್ತಿಯ ವಲಯ 1 ಹಾಗೂ ಗ್ರಾಮಾಂತರ ವ್ಯಾಪ್ತಿಯ ವಲಯ 2 ರ ಆಟೋ ರಿಕ್ಷಾಗಳು (Auto Rickshaw) ಜಿಲ್ಲಾಡಳಿತದ ಸೂಚನೆ ಪ್ರಕಾರ ಇನ್ಮುಂದೆ ಬಣ್ಣದ ಜೊತೆಗೆ ಪೊಲೀಸ್ ಇಲಾಖೆ ನೀಡುವ ಗುರುತು ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕಾಗುತ್ತದೆ.
ಬಣ್ಣ ಹೇಗಿರಲಿದೆ?
ಸದ್ಯ ಮಂಗಳೂರು ನಗರ ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಬಹುತೇಕ ಬಾಡಿಗೆ ಆಟೋ ರಿಕ್ಷಾಗಳು ಕಪ್ಪು ಮತ್ತು ಹಳದಿ ಬಣ್ಣವನ್ನ ಹೊಂದಿದೆ. ಆದರೆ ಇನ್ಮುಂದೆ ವಲಯ 1 ರ ನಗರ ವ್ಯಾಪ್ತಿಯ ಆಟೋಗಳು ಹಳದಿ ಮತ್ತು ಕಪ್ಪು ಹಾಗೂ ಗ್ರಾಮಾಂತರ (ವಲಯ-2) ರಲ್ಲಿ ಬರುವ ಆಟೋ ರಿಕ್ಷಾ ಗಳಿಗೆ ಹಸಿರು ಹಾಗೂ ಹಳದಿ ಬಣ್ಣ ಹಾಕಿಸಿಕೊಳ್ಳಬೇಕಾಗುತ್ತದೆ.
ಎಲ್ಲ ಮಾದರಿಯ ಆಟೋಗಳಿಗೂ ಅನ್ವಯ
ವಲಯ ಒಂದು ಮತ್ತು ಎರಡರಲ್ಲಿ ಬರುವ ಎಲ್ಲಾ ಮಾದರಿಯ ಆಟೋ ರಿಕ್ಷಾಗಳು ಅಂದರೆ ಪೆಟ್ರೋಲ್ ಮಾತ್ರವಲ್ಲದೇ ಎಲೆಕ್ಟ್ರಿಕಲ್, ಸಿಎನ್ ಜಿ ಹಾಗೂ ಡೀಸೆಲ್ ಆಟೋಗಳು ಕಡ್ಡಾಯವಾಗಿ ಜಿಲ್ಲಾಡಳಿತ ನಿಗದಿಪಡಿಸಿದ ಬಣ್ಣವನ್ನ ಬಳಿಸಬೇಕಾಗುತ್ತದೆ. ಕಡ್ಡಾಯವಾಗಿ ಬಣ್ಣವನ್ನೇ ಹಾಕಬೇಕು ಹೊರತಾಗಿ ಯಾವುದೇ ಕಾರಣಕ್ಕೂ ಆ ಬಣ್ಣಗಳ ಸ್ಟಿಕ್ಕರ್ ಕಟ್ಟಿಂಗ್ ಮಾಡಿಕೊಳ್ಳುವಂತಿಲ್ಲ ಎಂದು ಜಿಲ್ಲಾಡಳಿತವು ಸ್ಪಷ್ಟವಾಗಿ ತಿಳಿಸಿದೆ.
ಗುರುತು ಸ್ಟಿಕ್ಕರ್ ಅಳವಡಿಕೆಯೂ ಕಡ್ಡಾಯ
ವಲಯ 1 ಹಾಗೂ ವಲಯ 2ಕ್ಕೆ ಪೊಲೀಸ್ ಇಲಾಖೆಯಿಂದ ನೀಡುವ ಗುರುತು ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ವಲಯ 1 ರ ಸ್ಟಿಕ್ಕರ್ ಚೌಕಾಕಾರದಲ್ಲಿದ್ದರೆ, ವಲಯ 2 ರ ಸ್ಟಿಕ್ಕರ್ ವೃತ್ತಾಕಾರದಲ್ಲಿರಲಿದೆ.
ಯಾಕಾಗಿ ಬಣ್ಣ ಬದಲಾವಣೆ?
ಬಣ್ಣ ಬದಲಾವಣೆ ಮೂಲಕ ಟ್ರಾಫಿಕ್ ಪೊಲೀಸರಿಗೆ ಸುಲಭವಾಗಿ ಆಟೋ ರಿಕ್ಷಾಗಳ ವ್ಯಾಪ್ತಿಯನ್ನ ಅಂದಾಜಿಸಬಹುದಾಗಿದೆ. ಯಾಕೆಂದರೆ ವಲಯ 1 ಕ್ಕೆ ವಲಯ 2 ರ ಆಟೋಗಳು ಸಂಚರಿಸುವಂತಿರುವುದಿಲ್ಲ. ಹೀಗಾಗಿ ಅವುಗಳ ವ್ಯಾಪ್ತಿಯನ್ನು ನಿರ್ಧರಿಸಿಕೊಳ್ಳಲು ಬಣ್ಣ ಬದಲಾವಣೆ ಅನುಕೂಲವಾಗಲಿದೆ. ಆ ಮೂಲಕ ಗೊಂದಲಗಳಿಗೆ ತೆರೆ ಎಳೆಯಬಹುದಾಗಿದೆ.
ಇದನ್ನೂ ಓದಿ: Mangaluru: 10 ಸಾವಿರ ಮೀನುಗಳ ಸ್ಥಳಾಂತರ! ಮಂಗಳೂರಿನಲ್ಲಿ ಮೀನು ರಕ್ಷಿಸಲು ಹೊಸ ಪ್ರಯತ್ನ
ವ್ಯಾಪ್ತಿ ಮೀರುವ ಅವಕಾಶ ಯಾವಾಗ?
ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ಆಟೋ ರಿಕ್ಷಾಗಳು ಮಾತ್ರ ತಮ್ಮ ವ್ಯಾಪ್ತಿಯನ್ನು ಮೀರಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಅಗತ್ಯ ದಾಖಲಾತಿ ಇಟ್ಟುಕೊಳ್ಳಬೇಕು. ಅದನ್ನ ಹೊರತುಪಡಿಸಿ ತಮ್ಮ ರಹದಾರಿಯ ವ್ಯಾಪ್ತಿ ಮೀರಿದರೆ, ಸಂಬಂಧಿಸಿದ ಪ್ರಾಧಿಕಾರದವರು ಕ್ರಮಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: Dharmasthala: ಮಂಜುನಾಥೇಶ್ವರನಿಗೆ ಲಕ್ಷ ದೀಪಗಳ ವೈಭವ! ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ
ಒಂದೊಮ್ಮೆ ಇಂಧನ ಅಥವಾ ಎಲ್ ಪಿ ಜಿ ಭರಿಸಿಕೊಂಡು ಹಿಂತಿರುಗುವಾಗಲೂ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಬಾಡಿಗೆ ಮಾಡುವಂತಿರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ