ದಕ್ಷಿಣ ಕನ್ನಡ: ಪುಟ್ಟದಾದ ಗಾರ್ಡನ್, ಅಚ್ಚುಕಟ್ಟಾದ ಲೈಬ್ರೆರಿ, ಇಡೀ ನಗರವನ್ನೇ ಕಣ್ಗಾವಲಿಡೋ ಸಿಸಿ ಕ್ಯಾಮೆರಾ. ಹೌದು, ಹೀಗೆ ಇಡೀ ಗ್ರಾಮ ಪಂಚಾಯತ್ (Grama Panchayat) ವ್ಯಾಪ್ತಿಯಲ್ಲಿ ಸದಾ ಹದ್ದಿನ ಕಣ್ಣಿಡೋ ಈ ಪಂಚಾಯತ್ ಇರೋದಾದ್ರೂ ಎಲ್ಲಿ? ದಕ್ಷಿಣ ಕನ್ನಡದಲ್ಲಿರುವ (Dakshina Kannada News) ಇಂತಹ ಅಪರೂಪದ ಪಂಚಾಯತ್ (Sampaje Grama Panchayat) ವಿಶೇಷವಾದ್ರೂ ಏನು? ಇದೆಲ್ಲದರ ಪಿನ್ ಟು ಪಿನ್ ಮಾಹಿತಿಯನ್ನು ಕೊಡ್ತೀವಿ ನೋಡಿ.
ಮಾದರಿ ಗ್ರಾಮ ಪಂಚಾಯತ್
ಯೆಸ್, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ನಿಜಕ್ಕೂ ಮಾದರಿ ಪಂಚಾಯತೇ ಸರಿ. ಈ ಪಂಚಾಯತ್ಗೆ ಎರಡು ಬಾರಿ ಕೇಂದ್ರ ಸರಕಾರದ ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿಯೂ ಲಭಿಸಿದ್ದು, ಈ ಪಂಚಾಯತ್ ಆಡಳಿತ ವೈಖರಿಗೆ, ಸೇವೆಗೆ ಸಾಕ್ಷಿಯಂತಿದೆ.
ಸಿಸಿಟಿವಿ ಕಣ್ಗಾವಲು
ವಿಶೇಷ ಅಂದ್ರೆ ಎರಡು ಅಂತಸ್ತಿನ ಪಂಚಾಯತ್ ಕಟ್ಟಡದ ಕೆಳ ಅಂತಸ್ತಿನಲ್ಲಿ ಪಂಚಾಯತ್ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರೆ, ಮೇಲಿನ ಅಂತಸ್ತಿನಲ್ಲಿ ವಿಶಾಲವಾದ ಗ್ರಂಥಾಲಯವಿದೆ. ಇಷ್ಟೇ ಅಲ್ಲ, ಇಡೀ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸದಾ ಕಣ್ಗಾವಲಿಡುವ ಕೆಲಸ ಮಾಡುತ್ತಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಈ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ಕಲ್ಲುಗುಂಡಿ, ಸಂಪಾಜೆ ಪೇಟೆಯ ತುಂಬಾ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಎಲ್ಲಾ ಚಲನವಲನಗಳನ್ನು ನಿಯಂತ್ರಿಸುತ್ತಿದೆ.
ವಿಶಾಲವಾದ ಗ್ರಂಥಾಲಯ
ಇನ್ನು ಸಂಪಾಜೆ ಪಂಚಾಯತ್ನ ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಪುಸ್ತಕಗಳಿವೆ. ಪುಸ್ತಕ ಓದುವವರಿಗಾಗಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಗಳ ನಡುವೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಈ ಪಂಚಾಯತ್ ವಿದ್ಯಾರ್ಥಿಗಳಿಗಾಗಿ ಮಾಡಿದ ಸೇವೆಯು ಎಲ್ಲರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.
ಆನ್ ಲೈನ್ ಕ್ಲಾಸ್ ಗೆ ನೆರವಾಯ್ತು ಲೈಬ್ರೆರಿ
ಅತ್ಯಂತ ಹೆಚ್ಚು ಹಿಂದುಳಿದ ಪ್ರದೇಶಗಳನ್ನು ಹೊಂದಿರುವ ಸಂಪಾಜೆ ಗ್ರಾಮ ಪಂಚಾಯತ್ನ ಹಲವೆಡೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀರಾ ಹೆಚ್ಚಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಆನ್ ಲೈನ್ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ನಲ್ಲಿ ಆಶ್ರಯ ನೀಡುವ ಮೂಲಕ ನೆರವಾಗಿತ್ತು. ಈ ಪಂಚಾಯತ್ನ ಸಂಜೀವಿನಿ ಗುಂಪುಗಳ ಸದಸ್ಯರಿಗೆ ಹೊಲಿಯುವ ಯಂತ್ರಗಳನ್ನು ವಿತರಿಸಿ, ಆ ಸದಸ್ಯರಿಗೆ ತಮ್ಮದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿದೆ.
ಪ್ರಶಸ್ತಿಯ ಗರಿ
ಕಛೇರಿ, ಅಂಗನವಾಡಿ, ಸಭಾಂಗಣ, ಅತಿಥಿಗೃಹ ಹೀಗೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಸಂಪಾಜೆ ಪಂಚಾಯತ್ ಈ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಹೊಸ ವಾಹನವನ್ನೂ ಖರೀದಿಸಲಾಗಿದ್ದು, ಪಂಚಾಯತ್ನ ಈ ಕಾರ್ಯವೈಖರಿಗೆ ರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. ಎರಡು ಬಾರಿ ಕೇಂದ್ರ ಸರಕಾರದ ಗಾಂಧೀ ಗ್ರಾಮ ಪುರಸ್ಕಾರಕ್ಕೂ ಪಾತ್ರವಾಗಿದೆ.
ಒಟ್ಟಿನಲ್ಲಿ ಪುಟ್ಟದಾದ ವ್ಯಾಪ್ತಿ ಹೊಂದಿದ್ದರೂ ಅದನ್ನ ಚೊಕ್ಕದಾಗಿ ನಿರ್ವಹಿಸುತ್ತಾ ಸಾಗಿರುವ ಸಂಪಾಜೆ ಗ್ರಾಮ ಪಂಚಾಯತ್ ನಿಜಕ್ಕೂ ನಾಡಿಗೆ ಮಾದರಿ ಪಂಚಾಯತ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ