Balipa Narayana Bhagawatha: ಬಲಿಪ ಭಾಗವತರ ಅಗಲಿಕೆಗೆ ಮಿಡಿದ ಅಭಿಮಾನಿ ಬಳಗ, ಯಕ್ಷ ಭೀಷ್ಮನ ಬಗ್ಗೆ ಇಲ್ಲಿದೆ ಮಾಹಿತಿ

ಬಲಿಪ ಭಾಗವತರು

ಬಲಿಪ ಭಾಗವತರು

ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

    ಮಂಗಳೂರು: ಕಂಠಸಿರಿಯ ರಿಂಗ್‌ ಟೋನ್!‌ ಬಲಿಪರ ಕಂಠಸಿರಿ ಅಭಿಮಾನಿಗಳ ಪಾಲಿನ ರಿಂಗ್‌ ಟೋನ್!‌ ಹೌದು, ಸೂಪರ್ ಹಿಟ್ ಆಗಿದ್ದ ಕಂಚಿನ ಕಂಠದ ಪದಗಳನ್ನು ನೀಡಿದ್ದ ಯಕ್ಷರಂಗದ (Yakshagana) ದಿಗ್ಗಜ ಬಲಿಪ ನಾರಾಯಣ ಭಾಗವತರು ಭೌತಿಕವಾಗಿ ದೂರವಾಗಿದ್ದಾರೆ. ಇಂದಿಗೂ ಅನೇಕರು ಬಲಿಪರ ಯಕ್ಷಗಾನ ಪದ್ಯಗಳನ್ನು ತಮ್ಮ ಮೊಬೈಲ್‌ ರಿಂಗ್‌ ಟೋನ್‌ ಆಗಿ ಬಳಸುತ್ತಿದ್ದಾರೆ. ಕಪ್ಪು ಮೂರು ಬಿಳಿ ನಾಲ್ಕು, ಐದರ ಶ್ರುತಿಯಲ್ಲಿ ಹಾಡುತ್ತಿದ್ದ ಬಲಿಪರ ಹಾಡುಗಾರಿಕೆ (Balipa Narayana Bhagavatha)  ಎಂಥಹವರನ್ನೂ ಮೋಡಿ ಮಾಡದಿರದು. ಇವರ ಯಕ್ಷಗಾನ ಹಾಡುಗಾರಿಕೆಯ ಅನೇಕ ಕ್ಯಾಸೆಟ್‌, ಸಿ.ಡಿಗಳು ಹೊರಬಂದಿವೆ.


    6 ದಶಕಗಳ ಸಾರ್ಥಕ ಸೇವೆ
    ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪಡ್ರೆ ಜಠಾಧಾರಿ ಮೇಳವನ್ನು ಇವರು ಮೊದಲಿಗೆ ಆರಂಭಿಸಿದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪರಿಗಿದೆ. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಇವರನ್ನು ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಾರೆ. ಇವರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ.




    ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.


    ಗಡಿನಾಡಿನವರು ಈ ಬಲಿಪರು
    ಬಲಿಪರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾರ್ಚ್ 13, 1938ರಂದು ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಇವರು 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಾರೆ. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು.


    ʻಬಲಿಪʼ ಹೆಸರ ಹಿಂದಿದೆ ರೋಚಕ!
    ಬಲಿಪ ಹೆಸರ ಹಿಂದೆ ಒಂದು ರೋಚಕ ಕಥೆಯಿದೆ. ಇವರ ಹಿರಿಯರು ಮಡಿಕೇರಿಗೆ ತೀರ್ವೆ ಕಟ್ಟಲು ತೆರಳುತ್ತಿದ್ದ ಸಂದರ್ಭ. ಹಾದಿಮಧ್ಯೆ ಅಡ್ಡ ಬಲಿಪ (ಹೆಬ್ಬುಲಿ) ಎದುರಾಯಿತಂತೆ. ಅವರು ಹುಲಿಯೊಂದಿಗೆ ಹೋರಾಡಿ ಹುಲಿಯನ್ನು ಸಾಯಿಸಿದರಂತೆ. ರಾಜನಿಗೆ ಈ ವಿಚಾರ ಗೊತ್ತಾಗಿ, ಭೇಷ್! ನಿಮ್ಮ ಜಾಗೆಗೆತೀರ್ವೆ ಕಟ್ಟಬೇಕಾಗಿಲ್ಲ ಎಂದರಂತೆ. ಬಲಿಪರ ಹಿರಿಯರು ವಾಸವಿದ್ದ ಜಾಗೆಗೆ ಇಂದಿಗೂ ತೀರ್ವೆ ಕಟ್ಟಬೇಕೆಂದಿಲ್ಲ! ಅಡ್ಡ ಬಲಿಪನನ್ನು ಕೊಂದ ಸಾಧನೆಗೆ ʻಬಲಿಪʼ ಎಂಬ ನಾಮಾಂಕಿತ ಬಂತೆನ್ನಲಾಗುತ್ತಿದೆ.


    ಬಲಿಪರ ಮನೆ, ಪ್ರಶಸ್ತಿಗಳ ಗುಚ್ಛ


    ಪ್ರಶಸ್ತಿಗಳ ಸರಮಾಲೆ!
    ಫೆಬ್ರವರಿ 11 ರಂದು ಉಡುಪಿಯಲ್ಲೂ ಬಲಿಪ ನಾರಾಯಣ ಭಾಗವತರಿಗೆ ಸನ್ಮಾನ ನಡೆಸಲಾಗಿದೆ. ತನ್ನ 85ನೆಯ ವಯಸ್ಸಿನಲ್ಲೂ ಯಕ್ಷಗಾನ ಕ್ಷೇತ್ರದ ಮೇಲೆ ಅಪಾರ ಒಲವು ಹೊಂದಿದ್ದರು. ಇವರನ್ನರಸಿ ಹಲವು ಸನ್ಮಾನಗಳು ಬಂದಿವೆ.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2011, ಸಾಮಗ ಪ್ರಶಸ್ತಿ 2012, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' 2003, ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ, 2003 ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ' 2002 ಶೇಣಿ ಪ್ರಶಸ್ತಿ, 2002 ಕವಿ ಮುದ್ದಣ ಪುರಸ್ಕಾರ, 2003 ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, 2003 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ, 2003 ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, 2003 ಪಾರ್ತಿಸುಬ್ಬ ಪ್ರಶಸ್ತಿಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಲಭಿಸಿವೆ.


    ಇದನ್ನೂ ಓದಿ: Dakshina Kannada: ಈ ಊರಿಗೂ ನಂಬರ್ 18ಕ್ಕೂ ಇದೆ ಸಖತ್ ನಂಟು! ಇದೊಂಥರಾ ಬಿಡಿಸಲಾಗದ ಒಗಟು!


    ಬಲಿಪ ನಾರಾಯಣ ಭಾಗವತರ ಅಂತ್ಯಕ್ರಿಯೆ ಸ್ವಗೃಹ ಮಾರೂರಿನಲ್ಲಿ ತಡರಾತ್ರಿ ೧.೩೦ರ ಸುಮಾರಿಗೆ ನಡೆದಿದೆ. ಬಲಿಪರ ಅಭಿಮಾನಿಗಳು, ಇವತ್ತೂ ಕೂಡ ಬಂಧುವರ್ಗದವರು ಮನೆಯಲ್ಲಿ ಜಮಾಯಿಸಿದ್ದಾರೆ. ದೂರದೂರುಗಳಿಂದ ಬಲಿಪರ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಯಕ್ಷರಂಗದಲ್ಲಿ ದೊಡ್ಡ ಸಾಧನೆ ಮಾಡಿ, ಸರಳ ಸಜ್ಜನಿಕೆಯಿಂದ ಪ್ರತಿಯೊಬ್ಬರ ಪ್ರೀತಿಗೆ ಪಾತ್ರರಾಗಿದ್ದ ಬಲಿಪ ನಾರಾಯಣ ಭಾಗವತರು ಇನ್ನು ನೆನಪು ಮಾತ್ರ.




    ಇದನ್ನೂ ಓದಿ: Puttur Girl: ಪುಲ್ವಾಮಾ ವೀರ ಯೋಧರ ಗೌರವಾರ್ಥ ಬರ್ತ್​ಡೇಗೆ ಬ್ರೇಕ್, ಶಾಲೆಗೆ ಹಣ ದೇಣಿಗೆ ನೀಡುವ ಪುತ್ತೂರಿನ ಬಾಲಕಿ


    ಕಂಬನಿ ಮಿಡಿದ ಗಣ್ಯರು
    ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಶ್ರೀ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ,  ಶ್ರೀಪತಿ ಭಟ್‌, ಡಾ.ಎಂ.ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌, ಯುವರಾಜ ಜೈನ್‌ ಸಹಿತ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಉಜಿರೆ ಅಶೋಕ್‌ ಭಟ್‌, ಕಟೀಲು ಹರಿನಾರಾಯಣ ಆಸ್ರಣ್ಣ, ಸಹಿತ ಅನೇಕರು ಅಂತಿಮ ದರ್ಶನ ಪಡೆದಿದ್ದಾರೆ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: