ಮಂಗಳೂರು: ಕಣ್ಮನ ಸೆಳೆಯುವ ಉದ್ಯಾನವನ, ಸುತ್ತಲೂ ಚಿಲಿಪಿಲಿ ಹಕ್ಕಿಗಳ ಕಲರವ, ಒಳ ಬರುತ್ತಿದ್ದಂತೆ ಸ್ವಾಗತಿಸೋ ರಾಮ ಬಂಟ ಆಂಜನೇಯ.. ಇಷ್ಟೇ ಅಲ್ಲ, ಪಕ್ಕದಲ್ಲೆ ಇದೆ ಸಾಯಿ ಕುಟೀರ, ಅಲ್ಲಿಂದೀಚೆಗೆ ಕೃಷ್ಣ ರಾಧೆಯ ಸಲ್ಲಾಪ, ಬಂದವರೆಲ್ಲರನ್ನ ಸೊಂಡಿಲಲ್ಲೇ ತಬ್ಬಿಕೊಳ್ಳುವ ಗಜರಾಜ. ಇದ್ಯಾವುದಿದು ದೇವಲೋಕ ಅಂತೀರಾ? ಒಳಹೊಕ್ಕಿ ನೋಡೋಣ ಬನ್ನಿ. ಇದು ದಕ್ಷಿಣ ಕನ್ನಡ ಜಿಲ್ಲೆಯ (Temple's In Dakshina Kannada) ಮೂಡುಬಿದಿರೆಯ ಪಾಲಡ್ಕದಲ್ಲಿರೋ ಕೊಡ್ಯಡ್ಕ ಶ್ರೀಅನ್ನಪೂರ್ಣೇಶ್ವರಿ ದೇಗುಲದ (Annapoorneshwari Temple) ಸೌಂದರ್ಯ.
ದೇಗುಲಕ್ಕೆ ಬರುತ್ತಿದ್ದಂತೆ ಮೊದಲು ಎದುರುಗೊಳ್ಳುವುದೇ 61 ಅಡಿ ಎತ್ತರದ ಹನುಮನ ವಿಗ್ರಹ. ಅಲ್ಲೆ ಸಮೀಪದಲ್ಲಿರೋ ಗಜರಾಜ ಎಲ್ಲ ಭಕ್ತರ, ಪ್ರವಾಸಿಗರ ಪ್ರೀತಿಗೆ ಪಾತ್ರನಾಗಿದ್ದಾನೆ. ದಿನನಿತ್ಯ ಬರುವ ಭಕ್ತರಿಗೆ ಅನ್ನ ನೀಡೋ ತಾಯಿ ಅನ್ನ ಪೂರ್ಣೇಶ್ವರಿ ಕಾಣಲು ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ.
ಇಲ್ಲಿ ಪ್ರಸಾದ ಸೇವಿಸುವುದೇ ಒಂದು ಪುಣ್ಯ
ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಕ್ಕೆ ಬಂದವರು ಕೊಡ್ಯಡ್ಕಕ್ಕೆ ಬಂದು ಅನ್ನಪೂರ್ಣೇಶ್ವರಿಯ ಅನ್ನ ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಇನ್ನು ದೇಗುಲದ ಪ್ರಾಂಗಣದಲ್ಲಿ, ಗಣೇಶ, ಅಯ್ಯಪ್ಪನ ದೇಗುಲಗಳಿದ್ದು ಒಮ್ಮೆ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ.
ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ
ಸುಮಾರು ನಾಲ್ಕು ನೂರು ಮಂದಿ ಕುಳಿತುಕೊಳ್ಳಬಹುದಾದ ತೀರ್ಥಮಂಟಪ, ಸೀರೆಯಿಂದ ಅಲಂಕೃತವಾದ ಐವತ್ತೈದು ಅಡಿ ಎತ್ತರದ ಪಂಚಲೋಹದ ಅನ್ನಪೂರ್ಣೇಶ್ವರಿಯ ಮೂರ್ತಿ ಇಲ್ಲಿನ ವಿಶೇಷ.
ಅಮ್ಮನಿಗೆ ಅಕ್ಕಿ ಸೇವೆ ವಿಶೇಷ
ಆಗಮಿಸಿದ ಭಕ್ತಾದಿಗಳು ಅಮ್ಮನಿಗೆ ಅಕ್ಕಿ ಸೇವೆ ಸಲ್ಲಿಸಿ ಕಾಪಾಡು ತಾಯಿ ಅಂತಾ ಬೇಡಿಕೊಳ್ಳುತ್ತಾರೆ. ಈ ಮಹಾತಾಯಿಯೂ ಅಷ್ಟೇ, ತನ್ನ ಬಳಿ ಬಂದ ಭಕ್ತರನ್ನ ಹರಸಿ ಕಳುಹಿಸದೇ ಇರಲ್ಲ. ಹಾಗಾಗಿಯೆ ಭಕ್ತರ ಪಾಲಿಗಿದು ಶಾಂತಿಯ ಧಾಮವೂ ಹೌದು. ಜೊತೆಗೆ ಪ್ರೇಕ್ಷಣೀಯ ಸ್ಥಳವೂ ಹೌದು.
ಇದನ್ನೂ ಓದಿ: Dakshina Kannada: ಭೇಷ್ ಎನಿಸಿಕೊಂಡ ಹೊಸಂಗಡಿ ಫ್ರೆಂಡ್ಸ್ ಕ್ಲಬ್! ಈ ಗೆಳೆಯರ ಸಾಧನೆ ನೀವೂ ನೋಡಿ
ಒಟ್ಟಿನಲ್ಲಿ ಕೊಡ್ಯಡ್ಕ ಅನ್ನಪೂರ್ಣೇಶ್ವರಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಮಂಗಳೂರು ಪ್ರವಾಸಕ್ಕೆಂದು ಆಗಮಿಸುವವರು ಕೊಡ್ಯಡ್ಕ ಕ್ಷೇತ್ರವನ್ನು ಮರೆತು ಹೋಗಿ ನಿರಾಶರಾಗದಿರಿ.
ವರದಿ: ನಾಗರಾಜ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ