ಪುತ್ತೂರು: ಝುಳುಝುಳು ಹರಿಯುತ್ತಿರೋ ನೀರು, ಎಷ್ಟು ನೀರು ತೆಗೆದು ತೋಟಕ್ಕೂ ಹಾಕಿದ್ರೂ ಖಾಲಿ ಆಗೋದೇ ಇಲ್ಲ! ಕೊಳವೆ ಬಾವಿ ತಲೆಬಿಸಿಯಿಲ್ಲ, ನೀರಿಲ್ಲ ಅನ್ನೋ (Water Problem) ಚಿಂತೆಯಿಲ್ಲ! ಇಂಥದ್ದೊಂದು ಮಾದರಿ ಪ್ರಯೋಗವೇ ಈ ಕೃಷಿಕರ (Farmer's Success Stroy) ಕೈ ಹಿಡಿದಿದೆ.
ಮಳೆಗಾಲ ಮುಗಿದು ಬೇಸಿಗೆ ಬಂದಾಗ ಮೊದಲು ಎದುರಾಗೋದೇ ಕುಡಿಯೋ ನೀರಿನ ಸಮಸ್ಯೆ. ಅದರಲ್ಲೂ ಅಂತರ್ಜಲ ಮಟ್ಟ ಕಡಿಮೆ ಇರೋ ಭಾಗದ ಜನರು ಕುಡಿಯುವ ನೀರಿಗೂ ತತ್ವಾರ ಎದುರಿಸಬೇಕಾಗುತ್ತೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಈ ಗ್ರಾಮದಲ್ಲಿ ಇಂದು ನೀರು ಬೇಸಿಗೆಯಲ್ಲೂ ಉಕ್ಕಿ ಹರಿಯುತ್ತಿದೆ. ಹೌದು ಈ ಗ್ರಾಮದ ಕೃಷಿಕನೋರ್ವ ಅಂತರ್ಗಂಗೆಯನ್ನೇ ಆ ಗ್ರಾಮಕ್ಕೆ ತಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಕೆ ಗ್ರಾಮದ ಬಾಂಡೀಲು ಗ್ರಾಮದಲ್ಲೇ ಈ ನೀರಿನ ಮ್ಯಾಜಿಕ್ ನಡೆದಿರೋದು.
ಈ ಯುವಕನ ಪ್ರಯತ್ನದ ಫಲ
ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೆಗೆ ಕೆರೆ, ಬಾವಿ ಎಲ್ಲದರಲ್ಲೂ ನೀರು ಬತ್ತಿಹೋಗಿ ಕೃಷಿ ಹಾಗೂ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದ ಬಾಂಡೀಲು ಪ್ರದೇಶದಲ್ಲಿ ಇಂದು ಯಥೇಚ್ಛವಾಗಿ ನೀರು ಹರಿಯುತ್ತಿದೆ. ಹೀಗೆ ನೀರು ಹರಿಯಲು ಕಾರಣ ಇಲ್ಲಿನ ಕೃಷಿಕ ಚಂದ್ರಹಾಸ್ ರೈಯವರ ಪ್ರಯತ್ನ.
ಕಲ್ಲು ಕೋರೆಯ ಗುಂಡಿಗಳೇ ನೀರಿನ ಸೆಲೆಗಳು
ಬಾಂಡೀಲು ಈ ಹಿಂದೆ ಕಪ್ಪು ಕಲ್ಲಿನ ಕೋರೆಗೆ ಹೆಸರುವಾಸಿಯಾಗಿದ್ದು, 2017 ರ ಬಳಿಕ ಇಲ್ಲಿ ಕಲ್ಲು ಕೋರೆಯನ್ನು ನಿಲ್ಲಿಸಲಾಗಿದೆ. ಕಲ್ಲು ಕೋರೆ ನಡೆಯುತ್ತಿದ್ದ ಪ್ರದೇಶಗಳ ತುಂಬಾ ಕಲ್ಲು ಗಣಿಗಾರಿಕೆ ನಡೆಸಿದ ಬಳಿಕ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದವು. ಈ ಗುಂಡಿಗಳನ್ನೇ ಬಳಸಿಕೊಂಡು ಚಂದ್ರಹಾಸ್ ರೈ ಬಾಂಡೀಲು ಗ್ರಾಮಕ್ಕೆ ಅಂತರ್ಗಂಗೆಯನ್ನು ತಂದಿದ್ದಾರೆ.
ಎಷ್ಟು ನೀರು ಬಳಸಿದ್ರೂ ಖಾಲಿಯಾಗಲ್ಲ!
ಚಂದ್ರಹಾಸ್ ಜಾಗದ ಪಕ್ಕದಲ್ಲೇ ಇರುವ ಸುಮಾರು ಒಂದು ಎಕರೆಯ ಗಣಿಗಾರಿಕೆ ಆಳವಾದ ಪ್ರದೇಶದಲ್ಲಿ ಮಳೆ ನೀರು ನಿಲ್ಲುವುದನ್ನು ಗಮನಿಸಿದ್ದ ಚಂದ್ರಹಾಸ್ ಆ ನೀರು ಬೇರೆಡೆ ಹರಿದು ಹೋಗದಂತೆ ಆಳ ಪ್ರದೇಶದ ಸುತ್ತ ತಡೆಯೊಡ್ಡಿದ್ದಾರೆ. ಈ ತಡೆಯೊಡ್ಡಿದ ಪರಿಣಾಮ ನೀರು ಬೇರೆಡೆಗೆ ಹರಿದುಹೋಗದೆ ಕೋರೆಯ ಗುಂಡಿಯಲ್ಲೇ ನೀರು ಸಂಗ್ರಹವಾಗಿದೆ. ಸಂಗ್ರಹವಾದ ನೀರನ್ನು ಕೃಷಿಗೆ ಬಳಸಬಹುದು ಎಂದು ಯೋಚಿಸಿದ್ದ ಚಂದ್ರಹಾಸ್ ರೈ ಅವರಿಗೆ ಈ ಗುಂಡಿಯಿಂದ ಎಷ್ಟು ನೀರು ತೆಗೆದರೂ ಮುಗಿಯದಷ್ಟು ನೀರು ಸಿಕ್ಕಿದೆ.
ಇದನ್ನೂ ಓದಿ: Dakshina Kannada: ಮಳೆ ನೀರಿಂದಲೇ ವರ್ಷಾವಧಿ ಆದಾಯ! ಈ ಕೃಷಿಕರ ಸಕ್ಸಸ್ ಸ್ಟೋರಿ ಕೇಳಿ
ಅಲ್ಲದೇ ಇಲ್ಲಿ ಸಂಗ್ರಹವಾದ ನೀರು ಪರಿಸರದ ತುಂಬೆಲ್ಲಾ ಅಂತರ್ಜಲ ಹೆಚ್ಚುವಂತೆಯೂ ಮಾಡಿದೆ. ಇದರಿಂದಾಗಿ ಬತ್ತಿಹೋಗಿದ್ದ ಹತ್ತಾರು ಕೊಳವೆಬಾವಿಗಳು ಇಂದು ನೀರಿನಿಂದ ತುಂಬಿ ತುಳುಕುತ್ತಿವೆ. ಈ ಕೋರೆಯ ನೀರನ್ನು ಚಂದ್ರಹಾಸ ಬೇಸಿಗೆಯಲ್ಲಿ ಕೃಷಿಗೆ ಬಳಸಿದರೆ, ನೀರು ಬೇಕಾದವರಿಗೆ ತಮ್ಮ ತೋಟದಲ್ಲಿರುವ ಬಾವಿ ಹಾಗೂ ಕೆರೆಗಳಿಂದಲೂ ನೀರು ಪೂರೈಸುತ್ತಿದ್ದಾರೆ.
ಇದನ್ನೂ ಓದಿ: Elephant Training: ಆನೆಗಳಿಗೆ ಪಾಠ ಹೇಳೋ ಶಾಲೆಯಿದು! ಊಟ, ಪಾಠ, ತುಂಟಾಟ ಎಲ್ಲ ಇಲ್ಲೇ
ಕೋರೆ ಗುಂಡಿಯ ನೀರಿಗೆ ತಡೆ ಹಾಕಿದ ಮೇಲೆ ಬಾಂಡೀಲು ಗ್ರಾಮದಲ್ಲಿ ನೀರಿನ ಹೊಳೆ ಹರಿಯುತ್ತಿದೆ. ಕೃಷಿಗೆ ನೀರಿಗಾಗಿ ಒಂಬತ್ತು ಕೊಳವೆ ಬಾವಿಯನ್ನು ಕೊರೆದರೂ ನೀರು ಸಿಗದಿದ್ದ ಬಾಂಡೀಲು ಕೃಷಿಕ ಸುಬ್ಬಣ್ಣ ಭಟ್ರ ಎಲ್ಲಾ ಕೊಳವೆಬಾವಿಯಲ್ಲೂ ನೀರು ತುಂಬಿದೆ. ಕೆರೆ-ಬಾವಿಯಲ್ಲೂ ಸಾಕಷ್ಟು ನೀರಿನ ಸಂಗ್ರಹವಾಗಿದೆ. ಇದರಿಂದಾಗಿ ಇಡೀ ಊರಿನ ನೀರಿನ ಸಮಸ್ಯೆ ನಿವಾರಣೆಯಾಗಿದ್ದು, ಚಂದ್ರಹಾಸ್ ರೈಯವರ ಈ ಪ್ರಯತ್ನ ಅಂತರ್ಗಂಗೆಯನ್ನೇ ಬಾಂಡೀಲು ಪ್ರದೇಶಕ್ಕೆ ಕರೆತಂದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ