ಮಂಡ್ಯ: ಪ್ರತಿವರ್ಷ ಟಿಪ್ಪು ಸುಲ್ತಾನ್ ಹೆಸರು ರಾಜ್ಯ ರಾಜಕಾರಣದಲ್ಲಿ ಆಗಾಗ ಬಂದು ಹೋಗುತ್ತಲೇ ಇರುತ್ತದೆ. ವಿವಾದದ ಕಿಡಿ ಹೊತ್ತಿಸುತ್ತಲೇ ಇರುತ್ತದೆ. ಟಿಪ್ಪು ಸುಲ್ತಾನ್ (Tipu Sultan) ಅಂದ್ರೆ ಆತ ದೇಶ ಪ್ರೇಮಿ, ಇಂಗ್ಲೀಷರ ವಿರುದ್ಧ (British Government) ಹೋರಾಡಿದ ಮೈಸೂರು ಹುಲಿ ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗ ಅದೇ ಟಿಪ್ಪುವನ್ನ ಆತ ಮತಾಂಧ, ಆತನ ಖಡ್ಗದಲ್ಲೆ ಆತನ ಕ್ರೌರ್ಯ ಇದೆ ಎಂದು ವಾದಿಸುತ್ತದೆ. ಪ್ರತಿವರ್ಷ ಟಿಪ್ಪು ಸುಲ್ತಾನ ರಾಜಕಾರಣಿಗಳಿಗೆ (Karnataka Politics) ಆಹಾರ ಆಗುತ್ತಲೇ ಇರುತ್ತಾನೆ. ಈಗ ಅದೇ ಟಿಪ್ಪು ವಿಚಾರಕ್ಕೆ ಸಕ್ಕರೆ ನಾಡು ಮಂಡ್ಯ (Mandya) ಸದ್ದು ಮಾಡ್ತಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ಆ ಸ್ಟೋರಿ..
ಟಿಪ್ಪು ಪರ, ವಿರೋಧ ದಿನ ಆಚರಣೆಗೆ ಮುಂದಾದ ಸಂಘಟನೆಗಳು ಹೌದು, ಮೈಸೂರು ಹುಲಿ ಎಂದೆಲ್ಲಾ ಖ್ಯಾತಿಯನ್ನ ಪಡೆದಿರೋ ಟಿಪ್ಪು ಸುಲ್ತಾನ್ ಲೌಕಿಕ ಜಗತ್ತಿನಿಂದ ಮೃತಪಟ್ಟ ದಿನ ಮೇ 4. ಹೀಗಾಗಿ ಮಂಡ್ಯದ ಒಂದಷ್ಟು ಪ್ರಗತಿಪರ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳು ಟಿಪ್ಪು ಸುಲ್ತಾನ್ ಹುತಾತ್ಮ ದಿನಾಚರಣೆ ಆಚರಣೆಗೆ ಮುಂದಾಗಿವೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬಹು ಸಂಸ್ಕೃತಿ ಸಾಮರಸ್ಯ ಮೇಳ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿವೆ. ಇದು ಕೆಲವರನ್ನು ಕೆರಳಿಸುವಂತೆ ಮಾಡಿದೆ.
ಟಿಪ್ಪು ಸುಲ್ತಾನ್ ಹುತಾತ್ಮ ದಿನಾಚರಣೆಗೆ ವಿರುದ್ದವಾಗಿ ಟಿಪ್ಪು ಹತ್ಯೆ ಮಾಡಿದವರ ದಿನಾಚರಣೆ ಇನ್ನು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಹುತಾತ್ಮ ದಿನಾಚರಣೆ ಮಾಡ್ತಿರೋ ಹಿನ್ನೆಲೆಯಲ್ಲಿ ಮತ್ತೊಂದೆಡೆ ಟಿಪ್ಪು ವಿರೋಧಿಸುವ ಕೆಲ ಸಂಘಟನೆಗಳು ಟಿಪ್ಪು ಸುಲ್ತಾನ್ರನ್ನ ಹತ್ಯೆ ಮಾಡಿದ ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ದಿನಾಚರಣೆಯನ್ನ ಆಚರಣೆ ಮಾಡಲು ಮುಂದಾಗಿದ್ದಾರೆ.
ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ಫ್ಲೆಕ್ಸ್ ಪ್ರಿಂಟ್! ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಈಗಾಗಲೇ ಈ ಬಗ್ಗೆ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದ್ದು, ನಾಳೆ ಮಂಡ್ಯದಲ್ಲಿ ಟಿಪ್ಪು ಹತ್ಯೆ ದಿನಾಚರಣೆ ಕೂಡ ನಡೆಯಲಿದೆ. ಈಗಾಗಲೇ ಈ ಬಗ್ಗೆ ತಯಾರಿಗಳು ನಡೆದಿದ್ದು, ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ಫ್ಲೆಕ್ಸ್ಗಳನ್ನು ಪ್ರಿಂಟ್ ಮಾಡಿಸಲಾಗಿದೆ. ಇದು ಮಂಡ್ಯದಲ್ಲಿ ಒಂದೇ ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಅಲ್ಲದೇ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ನಾಳೆ ಟಿಪ್ಪು ದಿನಾಚರಣೆಗೆ ವಿರುದ್ದವಾಗಿ ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ದಿನ ಆಚರಣೆ ಮಾಡಲಾಗುವುದು ಎಂಬ ಸಂದೇಶಗಳನ್ನ ರವಾನೆ ಮಾಡಲಾಗ್ತಿದೆ. ಹೀಗಾಗಿ ಟಿಪ್ಪು ಹುತಾತ್ಮ ದಿನಾಚರಣೆ ಆಚರಣೆಗೆ ಸೆಡ್ಡು ಹೊಡೆದು ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ದಿನಾಚರಣೆ ಆಚರಣೆ ಮಾಡುತ್ತಿರುವುದು ಇನ್ನೊಮ್ಮೆ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ಎಲ್ಲ ಲಕ್ಷಣಗಳಿಗೂ ಬುನಾದಿ ಹಾಕುವಂತೆ ತೋರುತ್ತಿದೆ.
ಜಾಮಿಯಾ ಮಸೀದಿ ವಿವಾದವಿರುವ ಶ್ರೀರಂಗಪಟ್ಟಣದಲ್ಲಿ ಆಚರಣೆಗಳು ಬೇಕಿತ್ತಾ? ಇನ್ನು ಕೆಲ ದಿನಗಳ ಹಿಂದಷ್ಟೇ ಮಂಡ್ಯದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕೆಡವಿ ಅಲ್ಲಿ ಶ್ರೀ ಮೂಡಲ ಭಾಗಿಲ ಹನುಮನ ಮೂರ್ತಿಯನ್ನ ಪ್ರತಿಷ್ಠಾಪಿಸಬೇಕು ಎಂದು ಕಾಳಿ ಮಠದ ಋಷಿ ಕುಮಾರಸ್ವಾಮಿ ಕಿಡಿ ಹೊತ್ತಿಸಿದ್ದರು. ಇದಾದ ಬಳಿಕ ಶ್ರೀರಂಗಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಈ ಘಟನೆಗಳು ಮಾಸುವ ಮುನ್ನವೆ ಈಗ ಸಂಘಟನೆಗಳು ಶ್ರೀರಂಗಪಟ್ಟಣದಲ್ಲೆ ಟಿಪ್ಪು ಹುತಾತ್ಮ ದಿನಾಚರಣೆ ಮಾಡಲು ಮುಂದಾಗಿರೋದು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಎಚ್ಚೆತ್ತು ನಾಳಿನ ಪರ, ವಿರೋಧ ಆಚರಣೆಗಳ ಬಗ್ಗೆ ಹದ್ದಿನ ಕಣ್ಣಿಡಬೇಕಿದೆ.