• Home
  • »
  • News
  • »
  • lifestyle
  • »
  • Yoga: ಈ 5 ಆಸನಗಳನ್ನು ಮಾಡಿದ್ರೆ ಶ್ವಾಸಕೋಶದ ಸಮಸ್ಯೆ ಬರಲ್ವಂತೆ

Yoga: ಈ 5 ಆಸನಗಳನ್ನು ಮಾಡಿದ್ರೆ ಶ್ವಾಸಕೋಶದ ಸಮಸ್ಯೆ ಬರಲ್ವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ವಾಸಕೋಶದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಅಂಶವೆಂದರೆ ಆರೋಗ್ಯಕರ ಶ್ವಾಸಕೋಶವನ್ನು ಹೊಂದಿರುವುದು ಆಗಿದೆ.

  • Share this:

ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ ಯೋಗ (Yoga). ನಮ್ಮ ಭೂಮಿ ಭಾರತದಲ್ಲಿ (India) ಜನ್ಮತಳೆದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಭಾರತಕ್ಕೆ ಕಿರೀಟದಂತಿದೆ. ಯೋಗದ ಪ್ರಭಾವ, ಅದು ಆರೋಗ್ಯದ ಮೇಲೆ ಬೀರುವ ಆಗಾಧ ಪರಿಣಾಮ ಮತ್ತು ಅದರ ಶಕ್ತಿ ಅರಿತ ಸಹಸ್ರಾರು ವಿದೇಶಿಗರು ಭಾರತಕ್ಕೆ ಬಂದು ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಹಳೆಯ ಶೈಲಿಯ ವಿಜ್ಞಾನವನ್ನು ಯೋಗ ಎಂದು ಕರೆಯುತ್ತಾರೆ. ಯೋಗ ಮಾಡುವುದರಿಂದ ನಮ್ಮಲ್ಲಿರೋ ರೋಗಗಳೆಲ್ಲವೂ ದೂರ ಆಗುತ್ತವೆ. ಯೋಗವು ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ನಮ್ಮ ದೇಹದ ಶ್ವಾಸಕೋಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಆಮ್ಲಜನಕದ (Oxygen) ಪೂರೈಕೆ ಸರಾಗವಾಗಿ ಇರಲೇಬೇಕು.


ಶ್ವಾಸಕೋಶದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಅಂಶವೆಂದರೆ ಆರೋಗ್ಯಕರ ಶ್ವಾಸಕೋಶವನ್ನು ಹೊಂದಿರುವುದು. ಆರೋಗ್ಯಕರ ಶ್ವಾಸಕೋಶಗಳನ್ನು ಹೊಂದಬೇಕೆಂದರೆ ಅದಕ್ಕೆ ಸೂಕ್ತವಾದ ಯೋಗಗಳನ್ನು ಮಾಡಬೇಕಿದೆ.


ಯೋಗ ತಜ್ಞರು ಏನ್‌ ಹೇಳ್ತಾರೆ?:


ಹಿಮಾಲಯ ಯೋಗ ಆಶ್ರಮ ಮತ್ತು ವಿಶ್ವ ಯೋಗ ಸಂಸ್ಥೆಯ ಸ್ಥಾಪಕರಾದ ಹಿಮಾಲಯನ್ ಸಿದ್ಧಾ ಅಕ್ಷರ್ ಅವರು “ನಿಮ್ಮ ಜೀವನಶೈಲಿಯಲ್ಲಿ ಕೆಲವು ಅಂಶಗಳನ್ನು ಬದಲಾಯಿಸುವ ಮೂಲಕ ಯೋಗವನ್ನು ಪ್ರಾರಂಭಿಸಿ ಮತ್ತು ಡಯಾಫ್ರಾಗ್ಮ್ಯಾಟಿಕ್ ಉಸಿರಾಟ, ಮೂಲ ಆಳವಾದ ಉಸಿರಾಟ ಮತ್ತು ಖಂಡ್‌ನಂತಹ ಪ್ರಾಣಾಯಾಮ ವ್ಯಾಯಾಮಗಳನ್ನು ಹಂತ ಹಂತವಾಗಿ ಪ್ರಾರಂಭಿಸಿ‘ ಎಂದಿದ್ದಾರೆ.


ಇದನ್ನೂ ಓದಿ: Diabetes: ಡಯಾಬಿಟಿಸ್ ಇರೋರು ಬ್ರೆಡ್‌ ತಿನ್ನಬಹುದಾ? ಇಲ್ಲಿದೆ ಉತ್ತರ


ಪ್ರಾಣಾಯಾಮ, ಅನುಲೋಮ್ ವಿಲೋಮ್ ಮತ್ತು ಕಪಾಲ್ ಭಾತಿ ಅಭ್ಯಾಸವನ್ನು ನಿರಂತರವಾಗಿ ಮಾಡಿ. ವಾರಕ್ಕೆ ಮೂರರಿಂದ ನಾಲ್ಕು ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಯೋಗ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಅಭ್ಯಾಸ ಮಾಡಿ ಎಂದು ತಿಳಿಸಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ಯೋಗವನ್ನು ದೈನಂದಿನ ಅಭ್ಯಾಸವಾಗಿ ರೂಢಿ ಮಾಡಿಕೊಳ್ಳುವುದರಿಂದ ದೇಹದ ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎದೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಆರೋಗ್ಯಕರವಾಗಿಡುತ್ತದೆ ಎಂದು ಹೇಳುತ್ತಾರೆ.


ಶ್ವಾಸಕೋಶದ ಆರೋಗ್ಯಕ್ಕೆ ತಜ್ಞರು ಸೂಚಿಸಿರುವ 5 ಸುಲಭ ಯೋಗಗಳು:


ಹಸ್ತ ಉತ್ತಾನಾಸನ: ಮೊದಲು ನೇರವಾಗಿ ನಿಲ್ಲಿ. ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ, ನಿಮ್ಮ ಅಂಗೈಗಳನ್ನು ಪರಸ್ಪರ ಜೋಡಿಸಿ. ನಿಮ್ಮ ತಲೆಯನ್ನು ತೋಳುಗಳ ಮಧ್ಯೆ ಇರಿಸಿ. ನಂತರ ನಿಧಾನವಾಗಿ ಹಿಂದಕ್ಕೆ ಬಾಗಿ. ಆಗ ನಿಮ್ಮ ಕಣ್ಣುಗಳು ತೆರೆದಿರಬೇಕು ಮತ್ತು ಮೊಣಕಾಲುಗಳು ನೇರವಾಗಿರಬೇಕು. ಉಸಿರಾಟ ನಿಧಾನವಾಗಿರಬೇಕು. ಇದರಿಂದ ಉಸಿರಾಟದ ಚಲನೆ ಉತ್ತಮಗೊಳ್ಳುತ್ತದೆ.


ವಜ್ರಾಸನ: ಮೊದಲು ನೆಲದಮೇಲೆ ಎರಡು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ. ಈಗ ನಿಮ್ಮ ಮಂಡಿಗಳನ್ನು ಒಂದೊಂದಾಗಿ ಮಡಚಿ ಪಾದಗಳನ್ನು ಪೃಷ್ಠದ ಹತ್ತಿರ ತನ್ನಿ. ಮಂಡಿ ಒಂದಕ್ಕೊಂದು ಪರಸ್ಪರ ಕೂಡಿರಲಿ. ದೇಹದ ಸಂಪೂರ್ಣ ಭಾರ ಎರಡು ಹಿಮ್ಮಡಿಯ ಮೇಲಿರಿಸಿ. ಬೆನ್ನು ಮತ್ತು ಕತ್ತು ನೇರವಾಗಿರಲಿ. ಕೈಗಳನ್ನು ನೇರ ಮಾಡಿ ಹಸ್ತಗಳನ್ನು ಮಂಡಿಯ ಮೇಲಿರಿಸಿ. ವಜ್ರಾಸನ ಹೆಚ್ಚುಹೊತ್ತು ಅಭ್ಯಾಸ ಮಾಡುವುದರಿಂದ ದೇಹ ವಜ್ರದಷ್ಟು ಗಟ್ಟಿಯಾಗುತ್ತದೆ. ಇದೇ ಸ್ಥಿತಿಯಲ್ಲಿ ನಿಮಗೆ ಸಾಧ್ಯವಾದಷ್ಟು ಹೊತ್ತು ಇದ್ದು ನಂತರ ಕಾಲುಗಳನ್ನು ಒಂದೊಂದಾಗಿ ಮುಂದೆ ಚಾಚಿ ಶಿಥಿಲ ದಂಡಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.


ಇದನ್ನೂ ಓದಿ: Belly Fat: ಈ ವ್ಯಾಯಾಮ ಮಾಡಿದ್ರೆ ಸಾಕು ಹೊಟ್ಟೆಯ ಕೊಬ್ಬು ಬೇಗ ಕರಗುತ್ತೆ


ಪಶ್ಚಿಮೋತ್ತನಾಸನ: ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನ ಮಾಡುವ ವಿಧಾನದಲ್ಲಿ ಕೂತುಕೊಳ್ಳಿ. ನಿಮ್ಮ ಕೈಗಳನ್ನು ಮೆಲಕ್ಕೆ ಎತ್ತಿ, ಬೆನ್ನನ್ನು ನೇರವಾಗಿರಿಸಿಕೊಳ್ಳಿ. ನಂತರ ನೀವು ನಿಮ್ಮ ಸೊಂಟವನ್ನು ಬಾಗಿಸಿ, ಮುಂದಕ್ಕೆ ಬಾಗಿ. ಸ್ವಲ್ಪ ಹೊತ್ತು ವಿಶ್ರಾಂತಿ ಮಾಡಿ. ನಿಧಾನವಾಗಿ ಉಸಿರು ಬಿಡುತ್ತಾ, ಉಸಿರು ತೆಗೆದುಕೊಳ್ಳಿ.


ಉಸ್ತ್ರಾಸನ: ನೀವು ಮೊದಲು ಮಂಡಿಯೂರಿ ಕುಳಿತುಕೊಳ್ಳಿ. ನಂತರ ಸೊಂಟದ ಮೇಲೆ ನಿಮ್ಮ ಕೈಗಳನ್ನು ಇರಿಸಿ. ನಿಮ್ಮ ಬೆನ್ನನ್ನು ಹಿಂದಕ್ಕೆ ಬಾಗಿಸಿ. ಅಂಗೈಗಳನ್ನು ನಿಮ್ಮ ಪಾದಗಳ ಮೇಲಿಡಿ. ಕುತ್ತಿಗೆ ನೇರವಾಗಿರಲಿ. ಉಸಿರಾಟವು ನಿಧಾನವಾಗಿರಲಿ. ಇದನ್ನು ಕ್ರಮವಾಗಿ 5 ರಿಂದ 6 ಬಾರಿ ಮಾಡಿ.


ಬಾಲಾಸನ: ನೀವು ಮೊದಲು ಮಂಡಿಯೂರಿ, ಕೈಗಳನ್ನು ಮೇಲಕ್ಕೆ ಎತ್ತಿ. ದೇಹದ ಸಂಪೂರ್ಣ ಭಾಗವನ್ನು ಮುಂದಕ್ಕೆ ಬಾಗಿಸಿ ಉಸಿರನ್ನು ಬಿಡಿ. ನೆಲಕ್ಕೆ ಹಣೆಯನ್ನು ತಾಗಿಸಿ. ನಂತರ ಮತ್ತೆ ಮೊದಲಿನ ಕ್ರಮಕ್ಕೆ ಬಂದು ಕ್ರಮವಾಗಿ 3 ರಿಂದ 4 ಬಾರಿ ಈ ಆಸನವನ್ನು ಮಾಡಿ. ಈ ಎಲ್ಲ ಆಸನಗಳನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಉಸಿರಾಟ ಸಮಸ್ಯೆಗಳೆಲ್ಲವೂ ಪರಿಹಾರ ಆಗೋದರಲ್ಲಿ ಯಾವ್ದೆ ಡೌಟ್‌ ಇಲ್ಲ. ಇನ್ಯಾಕೆ ತಡ ಇವತ್ತೆ ಈ ಯೋಗ ಆಸನಗಳನ್ನು ಮಾಡಲು ಪ್ರಾರಂಭಿಸಿ. ಆಲ್‌ ದಿ ಬೆಸ್ಟ್‌ ನಿಮ್ಗೆ.

Published by:shrikrishna bhat
First published: