208 ವರ್ಷ 259 ದಿನಗಳು: ವಿಶ್ವ ದಾಖಲೆ ಬರೆದ ಜಪಾನಿನ ದಂಪತಿ

news18
Updated:August 26, 2018, 4:02 PM IST
208 ವರ್ಷ 259 ದಿನಗಳು: ವಿಶ್ವ ದಾಖಲೆ ಬರೆದ ಜಪಾನಿನ ದಂಪತಿ
guinnessworldrecords.com
news18
Updated: August 26, 2018, 4:02 PM IST
-ನ್ಯೂಸ್ 18 ಕನ್ನಡ

ಜೀವನದ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಶಾಶ್ವತವಾಗಿ ಸಂಗಾತಿಯನ್ನು ಆರಿಸಿಕೊಳ್ಳುವುದನ್ನು ಮದುವೆ ಎನ್ನಬಹುದು. ಇದು ಜೊತೆಯಾಗಿ ಜೀವಿಸಲು ಸಮಾಜ ನೀಡುವ ಒಪ್ಪಿಗೆ ಎಂದರೂ ತಪ್ಪಾಗಲಾರದು. ಆದರೆ ಮದುವೆ ಹೊಸ್ತಿಲಲ್ಲಿರುವ ಪ್ರೀತಿ ನಿಧಾನಕ್ಕೆ ಕಡಿಮೆಯಾಗಲು ಪರಸ್ಪರ ಅಪನಂಬಿಕೆ-ಅಭ್ಯಾಸಗಳು ಕಾರಣವಾಗುತ್ತದೆ. ಇದರಿಂದ ದಾಂಪತ್ಯ ಜೀವನದಲ್ಲಿ ವೈಮನಸ್ಯ ಮೂಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಬದುಕುವುದು ದೊಡ್ಡ ಸಾಹಸ ಎಂಬಂತೆ ಯುವ ತಲೆಮಾರು ಭಾವಿಸಿದಂತಿದೆ. ವೈಯ್ಯುಕ್ತಿಕ ಪ್ರತಿಷ್ಠೆಗಳಿಂದ ಇಂದು ಸಂಬಂಧಗಳು ಮುರಿದು ಬೀಳುತ್ತಿದೆ. ಇಂತಹ ಕಾಲದಲ್ಲಿ ಜಪಾನಿನ ದಂಪತಿಗಳು ತಮ್ಮ ಗಟ್ಟಿ ಸಂಬಂಧದಿಂದ ವಿಶ್ವ ದಾಖಲೆ ನಿರ್ಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಮಾಸವೊ ಮಾಟ್ಸುಮೋಟೊ ಮತ್ತು ಮಿಯಕೊ ಸೊನಡಾ ದಂಪತಿ ಬರೋಬ್ಬರಿ 81 ವರ್ಷಗಳ ಕಾಲದ ದಾಂಪತ್ಯ ಜೀವನದಿಂದ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಈ ಇಬ್ಬರೂ 100 ವರ್ಷಗಳನ್ನು ದಾಟಿದವರಾಗಿದ್ದಾರೆ. 1937 ಅಕ್ಟೋಬರ್ 20 ರಂದು ವಿವಾಹವಾಗಿದ್ದ ಈ ಜೋಡಿಯ ಪ್ರೀತಿಯನ್ನು 'ವರ್ಲ್ಡ್​ ಕ್ಲಾಸ್ ಲವ್ ಸ್ಟೋರಿ' ಎಂದು ಕರೆಯಲಾಗಿದೆ.

ಜುಲೈ 25ರಂದು ಈ ದಂಪತಿಗಳನ್ನು ಗಿನ್ನಿಸ್ ಅಧಿಕಾರಿಗಳು ಭೇಟಿ ಮಾಡಿದಾಗ ಇವರ ಒಟ್ಟು ವಯಸ್ಸು 208 ವರ್ಷಗಳು ಮತ್ತು 259 ದಿನಗಳಾಗಿತ್ತು. ಅತಿ ಹೆಚ್ಚು ವಯಸ್ಸಾಗಿರುವ ದಂಪತಿಗಳು ಎಂದು ಖ್ಯಾತಿ ಪಡೆದಿರುವ ಮಾಟ್ಸುಮೋಟೊ ಮತ್ತು ಮಿಯಕೊ ಜೋಡಿ ವಿಶ್ವದ ಗಮನ ಸೆಳೆದಿದ್ದಾರೆ. ಮಾಟ್ಸುಮೋಟೊ ಮತ್ತು ಮಿಯಕೊ ದಂಪತಿಗಳಿಗೆ 66 ರಿಂದ 77 ರವರೆಗಿನ ಐದು ಜನ ಹೆಣ್ಣು ಮಕ್ಕಳಿದ್ದಾರೆ. ಹಾಗೆಯೇ 13 ಮೊಮ್ಮಕ್ಕಳು ಮತ್ತು 24 ಮರಿ ಮೊಮ್ಮಕ್ಕಳನ್ನು ಗಿನ್ನಿಸ್ ದಂಪತಿಗಳು ಹೊಂದಿದ್ದಾರೆ.

ಈ ದಂಪತಿಗಳು ಪ್ರಸ್ತುತ ಪ್ರಪಂಚದ ಅತ್ಯಂತ ಹಿರಿಯ ದಂಪತಿಗಳಾಗಿದ್ದು, 2 ವರ್ಷಗಳ ಬಳಿಕ ಮತ್ತೊಂದು ಹೊಸ ದಾಖಲೆ ಇವರ ಪಾಲಾಗುವ ನಿರೀಕ್ಷೆಯಿದೆ. ವಿಶ್ವದಲ್ಲಿ ಅತಿ ಹೆಚ್ಚು ಕಾಲ ಬಾಳಿದ ದಂಪತಿ ಎಂಬ ಕೀರ್ತಿ ನಾರ್ವೆಯ ಕಾರ್ಲ್ ಮತ್ತು ಗುಡ್ರನ್ ಡೊಲ್ವೆನ್ ಹೆಸರಲ್ಲಿದೆ. ಈ ದಂಪತಿಗಳ ಒಟ್ಟು ವಯಸ್ಸು 210 ವರ್ಷ ಮತ್ತು 65 ದಿನಗಳು. 208 ವರ್ಷಗಳು ಮತ್ತು 259 ದಿನಗಳನ್ನು ಕಳೆದಿರುವ ಮಾಸವೊ ಮಾಟ್ಸುಮೋಟೊ ಮತ್ತು ಮಿಯಕೊ ಸೊನಡಾ ದಂಪತಿ ಹೊಸ ವಿಶ್ವ ದಾಖಲೆ ಬರೆಯಲಿ ಎಂಬುದು ಎಲ್ಲರ ಆಶಯ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...