• Home
  • »
  • News
  • »
  • lifestyle
  • »
  • World Soil Day 2022: ನಂಬಿ ಕೆಟ್ಟವರಿಲ್ಲವೋ ಈ ಮಣ್ಣನ್ನು, ಇದೇ ಭೂಮಿಯ ಉಸಿರು

World Soil Day 2022: ನಂಬಿ ಕೆಟ್ಟವರಿಲ್ಲವೋ ಈ ಮಣ್ಣನ್ನು, ಇದೇ ಭೂಮಿಯ ಉಸಿರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

World Soil Day 2022: ನಮ್ಮ ಮುಂದಿನ ಪೀಳಿಗೆಗೆ ಮತ್ತು ನಾವು ಪ್ರಸ್ತುತ ಜೀವಿಸಲು ಮಣ್ಣು ಅತ್ಯವಶ್ಯಕ. ಹೀಗಾಗಿ ಅದರ ಸಂರಕ್ಷಣೆ, ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಬೇಕು.

  • Share this:

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು (Soil) ಎಂದೆಂದೂ, ನಂಬಿ ಕೆಟ್ಟವರಿಲ್ಲವೋ ಎಂಬ ಈ ಹಾಡಿನ (Song) ಸಾಲುಗಳನ್ನು ಡಾ. ರಾಜಕುಮಾರ್ ಅಭಿನಯದ ಒಡಹುಟ್ಟಿದವರು ಚಿತ್ರದಲ್ಲಿ ಕೇಳಿರುತ್ತೀರಿ. ಮಣ್ಣನ್ನು ನಂಬಿದವರಿಗೆ ಎಂದೂ ಮೋಸ ಇಲ್ಲ ಎನ್ನುವ ಈ ಸಾಲುಗಳು ನಿಜಕ್ಕೂ ಅರ್ಥಗರ್ಭಿತ. ಮಣ್ಣನ್ನು ನಂಬಿದ ಜೀವಿಗೆ ಮೋಸವಿಲ್ಲ ಸರಿ ಆದರೆ ಮನುಷ್ಯನಿಂದ ಮಾತ್ರ ಮಣ್ಣಿಗೆ ಸಂಚಕಾರ ಬಂದೊದಗಿದೆ. ಮನುಷ್ಯನ ಸಹಿತ ಪ್ರತಿ ಜೀವ ಸಂಕುಲಗಳಿಗೆ ಭೂಮಿ (Earth)  ನೆಲೆಯಾಗಿದೆ. ಭೂಮಿಯ ಮೇಲಿನ ಮಣ್ಣು ಎಲ್ಲರ ರಕ್ಷಕ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ಪ್ರಕೃತಿ ಸಂಪತ್ತನ್ನು ತನ್ನ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ, ಅದರಲ್ಲಿ ಮಣ್ಣು ಕೂಡ ಒಂದು.


ಭೂಮಿ ಬಗೆದು ಮಣ್ಣನ್ನು ಮಾರುತ್ತಿದ್ದಾನೆ, ಪ್ಲಾಸ್ಟಿಕ್‌ನ ಹೆಚ್ಚಿನ ಬಳಕೆ. ಲಾಭಕ್ಕಾಗಿ ಬೆಳೆಗಳಿಗೆ ರಾಸಾಯನಿಕಗಳನ್ನು ಸೇರಿಸಿ ಮಣ್ಣಿನ ಫಲವತ್ತತ್ತೆಯನ್ನು ತಗ್ಗಿಸುತ್ತಿದ್ದಾನೆ. ಒಂದಾ ಎರಡಾ, ಎಲ್ಲಾ ರೀತಿಯಿಂದಲೂ ಮಣ್ಣು ತನ್ನ ತನವನ್ನು ಕಳೆದುಕೊಳ್ಳುವಂತಾಗುತ್ತಿದೆ. ಈ ಹಿನ್ನಲೆಯಲ್ಲಿ ಮಣ್ಣಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಮಣ್ಣಿನ ದಿನವನ್ನ ಆಚರಣೆ ಮಾಡಲಾಗುತ್ತದೆ.


ವಿಶ್ವ ಮಣ್ಣಿನ ದಿನ


ಹೌದು, ಇಂದು "ವಿಶ್ವ ಮಣ್ಣಿನ ದಿನ". ಪ್ರತಿ ವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಈ ದಿನವನ್ನು 'ವಿಶ್ವ ಮಣ್ಣಿನ ದಿನ" ಎಂದು ಘೋಷಿಸಲಾಗಿದೆ.


ಮಣ್ಣು ಜೀವಿಗಳ ಸಂಜೀವಿನಿ


ನಮಗೆ ಬದುಕಲು ಆಹಾರ ಪ್ರಮುಖ ಅಂಶ. ಮಣ್ಣು ಆಹಾರ ಪ್ರಾರಂಭವಾಗುವ ಸ್ಥಳವಾಗಿದೆ. ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಮಣ್ಣು ಒದಗಿಸುವುದರಿಂದ ಇದು ಭೂಮಿಯ ಮೇಲಿನ ಜೀವನದ ಪೋಷಣೆಗೆ ಕಾರಣವಾಗಿದೆ ಎನ್ನಬಹುದು.


ಮಣ್ಣಿಲ್ಲದೇ ಮನುಷ್ಯ ಬದುಕುವುದೇ ದುಸ್ತರ, ಹೀಗಿರುವಾಗ ಪ್ರಸ್ತುತದ ಮಣ್ಣಿನ ಅವನತಿ ಸ್ಥಿತಿ ಮನುಕುಲಕ್ಕೆ ದೊಡ್ಡ ಸಮಸ್ಯೆಯೇ ಸರಿ. ಕೈಗಾರಿಕೀಕರಣ, ಅಸಮರ್ಪಕ ಬಳಕೆ, ಕೃಷಿ ಭೂಮಿಯ ಕಳಪೆ ನಿರ್ವಹಣೆ ಮಣ್ಣಿನ ಸ್ಥಿತಿಯನ್ನು ಹದಗೆಡಿಸುತ್ತಿರುವ ಮೂಲಕ ಅದರ ಪೋಷಕಾಂಶಗಳನ್ನು ಕಸಿದುಕೊಳ್ಳುತ್ತಿದೆ.


ಮಣ್ಣಲ್ಲೇ ಪೋಷಕಾಂಶಗಳೇ ಇಲ್ಲದಾಗ ಇದು ನಾವು ತಿನ್ನುವ ಆಹಾರದ ಮೇಲೆ, ಸಸ್ಯ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ಮಣ್ಣಿನ ಸಂರಕ್ಷಣೆ ಬಹಳ ಮುಖ್ಯ.
ಮಣ್ಣಿನ ಸಂರಕ್ಷಣೆ


ಮಣ್ಣಿನ ಸಂರಕ್ಷಣೆ ಪರಿಸರ ಸುಸ್ಥಿರತೆಗೆ ಪ್ರಮುಖವಾಗಿದೆ. ಇದು ಸವೆತ ಮತ್ತು ಅವನತಿಯಿಂದ ರಕ್ಷಿಸುವ ಜೊತೆಗೆ ಮಣ್ಣು ಫಲವತ್ತಾಗಿ ಮತ್ತು ಉತ್ಪಾದಕವಾಗಿ ಉಳಿಯಲು ಸಹಕಾರಿ.


ಬೆಳೆ ಸರದಿ, ಹೊದಿಕೆ ಬೆಳೆಗಳು, ಬಾಹ್ಯರೇಖೆ ಉಳುಮೆ, ಗಾಳಿ ತಡೆ ಮತ್ತು ತಾರಸಿ ಕೃಷಿ, ಮಣ್ಣನ್ನು ರಕ್ಷಿಸಲು ಇರುವಂತಹ ಕೆಲವು ಮಾರ್ಗಗಳು. ವಿಶ್ವಾದ್ಯಂತ ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮಣ್ಣಿನ ಸಂರಕ್ಷಣೆ ಮುಖ್ಯವಾಗಿದೆ. ಹಾಗಾದರೆ ನಾವಿಲ್ಲಿ ಮಣ್ಣನ್ನು ಏಕೆ ಸಂರಕ್ಷಿಬೇಕು ಅನ್ನೋ ಕೆಲ ಕಾರಣಗಳ ಬಗ್ಗೆ ತಿಳಿಯೋಣ.


ಮಣ್ಣಿನ ಸಂರಕ್ಷಣೆಯ ಪ್ರಾಮುಖ್ಯತೆ


* ಪೋಷಕಾಂಶಗಳಿಂದ ತುಂಬಿದ ಮಣ್ಣು ದೀರ್ಘಕಾಲದವರೆಗೆ ಬೆಳೆಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ.
* ಮಣ್ಣಿನ ಸಂರಕ್ಷಣೆ ಮಾಡಲು ಕಲಿಯುವುದರಿಂದ ತಮಗಾಗಿ ಮಾತ್ರವಲ್ಲದೆ ಸಮುದಾಯಕ್ಕೂ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಆಹಾರದ ಕೊರತೆ ಕಡಿಮೆಯಾಗುತ್ತದೆ.
* ಮಣ್ಣಿನ ಸವಕಳಿಯು ರೈತರು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಮಣ್ಣಿನ ಸಂರಕ್ಷಣೆಯನ್ನು ಅಭ್ಯಾಸ ಮಾಡುವುದರಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು ಮತ್ತು ಉತ್ತಮ ಫಸಲನ್ನು ನೀಡಲು ಮಣ್ಣನ್ನು ಹೆಚ್ಚು ಫಲವತ್ತಾಗಿಸಬಹುದು.


ಇದನ್ನೂ ಓದಿ: ಕಷ್ಟಪಟ್ಟು ಬೆಳೆಸಿದ ಗಿಡವನ್ನು ಹುಳ ಹಾಳು ಮಾಡ್ತಿದ್ರೆ ತಕ್ಷಣ ಈ ಕೆಲಸ ಮಾಡಿ ಸಾಕು


* ಜೀವನ ನಡೆಸಲು ಶುದ್ಧ ನೀರು ಅತ್ಯಗತ್ಯ. ಆದಾಗ್ಯೂ, ಮಣ್ಣಿನ ಸವೆತವು ಸೆಡಿಮೆಂಟೇಶನ್ ಮತ್ತು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ, ಅದನ್ನು ಕುಡಿಯಲು ಸಾಧ್ಯವಿಲ್ಲ. ಸರಿಯಾದ ಮಣ್ಣಿನ ಸಂರಕ್ಷಣಾ ಅಭ್ಯಾಸಗಳೊಂದಿಗೆ, ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕರ ಪರಿಸರ ವ್ಯವಸ್ಥೆಗೆ ಸಹಕರಿಸುತ್ತದೆ.
* ಮುಖ್ಯವಾಗಿ ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ಮಾಲಿನ್ಯ ಮುಕ್ತ ವಾತಾವರಣಕ್ಕಾಗಿ ಮಣ್ಣಿನ ಬಗ್ಗೆ ಕಾಳಜಿ ವಹಿಸಬೇಕು.


ವಿಶ್ವ ಮಣ್ಣಿನ ದಿನವನ್ನು ಹೀಗೆ ಸಾರ್ಥಕಗೊಳಿಸಿ
- ಕಾಂಪೋಸ್ಟಿಂಗ್
ನಿಮ್ಮ ಮನೆ, ಶಾಲೆ ಅಥವಾ ಸಮುದಾಯದಲ್ಲಿ ಕಾಂಪೋಸ್ಟ್ ಪಿಟ್ ಅನ್ನು ರಚಿಸಿ ಮತ್ತು ಮಣ್ಣಿನ ಗುಣಮಟ್ಟವನ್ನು ಸುಧಾರಿಸುವ ಕೆಲಸ ಮಾಡಿ. ಜೊತೆಗೆ NGOಗಳು, ವಿದ್ಯಾರ್ಥಿಗಳು ಅಥವಾ ಪ್ರಕೃತಿ ಉತ್ಸಾಹಿಗಳೊಂದಿಗೆ ಭಾಗವಹಿಸುವ ಮೂಲಕ ಬದಲಾವಣೆಯನ್ನು ತರಲು ಸಹಾಯ ಮಾಡಿ.


- ಜ್ಞಾನವನ್ನು ಹಂಚಿ
ಮಣ್ಣಿನ ಪ್ರಾಮುಖ್ಯತೆ, ಲಾಭ, ಸಂರಕ್ಷಣೆ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಿ. ಮಣ್ಣು ಇಲ್ಲದಿದ್ದರೆ, ಕಲುಷಿತಗೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ. ಈ ಬಗ್ಗೆ ನಿಮ್ಮ ಕುಟುಂಬ ಮತ್ತು ನಿಮ್ಮ ಸುತ್ತಮುತ್ತಲಿನ ಇತರರಿಗೆ ಸಾಮಾಜಿಕ ಸಂರಕ್ಷಣೆಯ ಕುರಿತು ಶಿಕ್ಷಣ ನೀಡಿ.


- ಸ್ವಂತ ಉದ್ಯಾನವನ್ನು ನಿರ್ಮಿಸಿ
ನಿಮ್ಮ ಮನೆ ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಗಿಡಗಳನ್ನು ಬೆಳೆಸಲು ಚಿಕ್ಕ ಸ್ಥಳವನ್ನು ಮೀಸಲಿಡಿ. ನೀವು ದೊಡ್ಡ ಬಾಲ್ಕನಿ ಅಥವಾ ಟೆರೇಸ್ ಹೊಂದಿದ್ದರೆ, ನೀವು ಅದನ್ನು ಉದ್ಯಾನವನ್ನಾಗಿ ಪರಿವರ್ತಿಸಬಹುದು.


ಅಥವಾ ನಿಮ್ಮ ಸುತ್ತಮುತ್ತ ಅನುಕೂಲವಿದ್ದರೆ ಬೀಜ ಬಿತ್ತನೆ ಮಾಡಿ, ಬೀಜಗಳನ್ನು ನೆಟ್ಟು ಅವುಗಳನ್ನು ನೋಡಿಕೊಳ್ಳುವ ಮೂಲಕ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳಿ.


ಇದನ್ನೂ ಓದಿ: ಉಗುರಿನ ಸುತ್ತ ಚರ್ಮ ಕಿತ್ತು ಅಂದ ಹಾಳಾಗಿದ್ಯಾ? ಇದನ್ನ ಹಚ್ಚಿದ್ರೆ ಎಲ್ಲವೂ ಸರಿಯಾಗುತ್ತೆ!


ನಮ್ಮ ಮುಂದಿನ ಪೀಳಿಗೆಗೆ ಮತ್ತು ನಾವು ಪ್ರಸ್ತುತ ಜೀವಿಸಲು ಮಣ್ಣು ಅತ್ಯವಶ್ಯಕ. ಹೀಗಾಗಿ ಅದರ ಸಂರಕ್ಷಣೆ, ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಮಣ್ಣಿನ ಮಾಲಿನ್ಯವನ್ನು ತಡೆಗಟ್ಟವು ನಿಟ್ಟಿನಲ್ಲಿ ನಾವೆಲ್ಲರೂ ಈ ದಿನದ ಪ್ರತಿಜ್ಞೆ ತೆಗೆದುಕೊಳ್ಳಬೇಕು,

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು