World Milk Day 2020: 8 ಬಗೆಯ ಹಾಲು ಮತ್ತು ಅದನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳು

World Milk Day 2020: ಸೋಯಾಬೀನ್ ಅಥವಾ ಸೋಯಾ ಪ್ರೋಟೀನ್‌ನಿಂದ ತಯಾರಿಸಿದ ಸೋಯಾ ಹಾಲನ್ನು ಅದರ ಪೌಷ್ಠಿಕಾಂಶದ ಗುಣಲಕ್ಷಣಗಳಿಂದಾಗಿ ಹಸುವಿನ ಹಾಲಿಗೆ ಉತ್ತಮ ಬದಲಿಯಾಗಿ ಪರಿಗಣಿಸಲಾಗುತ್ತದೆ.

news18-kannada
Updated:June 1, 2020, 2:53 PM IST
World Milk Day 2020: 8 ಬಗೆಯ ಹಾಲು ಮತ್ತು ಅದನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳು
World Milk Day
  • Share this:
ಇಂದು ವಿಶ್ವ ಹಾಲು ದಿನ. ಇಂತಹದೊಂದು ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅದರಲ್ಲೂ ಹಾಲನ್ನು ಜೀವನದ ಪ್ರಮುಖ ಭಾಗವಾಗಿರಿಸಿಕೊಂಡಿರುವ ಭಾರತೀಯರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎನ್ನಬಹುದು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಹಾಲಿನ ಪ್ರಾಮುಖ್ಯತೆ ಮತ್ತು ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲು ಪ್ರಾರಂಭಿಸಿತು.

ಭಾರತದಲ್ಲಿ ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡುತ್ತಾರೆ. ಕೆಲವರು ಕಾಫಿ/ಚಹಾದೊಂದಿಗೆ ಹಾಲು ಕುಡಿದರೆ, ಮತ್ತೆ ಕೆಲವರು ಹಾಲಿನಲ್ಲಿ ಅರಿಶಿನವನ್ನು ಮಿಶ್ರಣ ಮಾಡಿ ಮನೆಮದ್ದಾಗಿ ಪ್ರತಿನಿತ್ಯ ಸೇವಿಸುತ್ತಾರೆ. ಹಾಗೆಯೇ ಮಿಲ್ಕ್‌ಶೇಕ್‌ಗಳನ್ನು ತಯಾರಿಸಲು ಹಾಲನ್ನು ಬಳಸಲಾಗುತ್ತದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿನಿತ್ಯ ಹಾಲಿನ ಮೊರೆ ಹೋಗುವವರೇ ಹೆಚ್ಚು.

ಪ್ರತಿನಿತ್ಯ ಹಾಲು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಗಟ್ಟಿಮುಟ್ಟುಗೊಳಿಸುತ್ತವೆ. ಇದರ ಹೊರತಾಗಿಯೂ ಹಾಲಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. 2014 ರಲ್ಲಿ ನ್ಯೂಟ್ರಿಷನ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಾಲು ಕುಡಿಯುವುದರ ಬಗ್ಗೆ ಎಷ್ಟೇ ಅಭಿಪ್ರಾಯ ವ್ಯತ್ಯಾಸಗಳಿದ್ದರೂ, ಆರೋಗ್ಯಕ್ಕೆ ಹಾಲು ಅತ್ಯವಶ್ಯಕ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ತಿಳಿಸಿದೆ. ಇದಲ್ಲದೆ, ಹಾಲು ಕುಡಿಯುವುದರಿಂದ ಹೃದ್ರೋಗ, ಅನೇಕ ರೀತಿಯ ಕ್ಯಾನ್ಸರ್, ಬೊಜ್ಜು ಮತ್ತು ಮಧುಮೇಹ ಮುಂತಾದ ಕಾಯಿಲೆಗಳನ್ನು ತಡೆಯಬಹುದು ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ.

ಅಂದಹಾಗೆ ಇಂದು ನಾನಾ ಬಗೆಯ ಹಾಲುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವೆಲ್ಲವೂ ತಮ್ಮದೇ ಆದ ರೀತಿಯಲ್ಲಿ ಪ್ರಯೋಜಕಾರಿ. ವಿಶ್ವ ಹಾಲು ದಿನಾಚರಣೆಯ ಸಂದರ್ಭದಲ್ಲಿ, ನಾವು ನಿಮಗೆ 8 ಬಗೆಯ ಹಾಲು ಮತ್ತು ಅವುಗಳನ್ನು ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸುತ್ತಿದ್ದೇವೆ.

1. ಹಸುವಿನ ಹಾಲು: ಸಾಮಾನ್ಯವಾಗಿ ನಾವೆಲ್ಲರೂ ಪ್ರತಿನಿತ್ಯ ಬಳಸುವ ಹಾಲು. ಆದರೆ ವಿವಿಧ ಅಲರ್ಜಿಯಿಂದಾಗಿ ಹಸುವಿನ ಹಾಲು ಚಿಕ್ಕ ಮಕ್ಕಳಿಗೆ ಸೂಕ್ತವಲ್ಲ ಎನ್ನಲಾಗುತ್ತದೆ. ಇದರ ಹೊರತಾಗಿಯೂ ಹಸುವಿನ ಹಾಲು ಭಾರತೀಯರ ದೈನಂದಿನ ಭಾಗವಾಗಿ ಹೋಗಿದೆ. ಜರ್ನಲ್ ಆಫ್ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟ್ರಾಲಜಿ ಮತ್ತು ನ್ಯೂಟ್ರಿಷನ್ ಜರ್ನಲ್​ನಲ್ಲಿ 2017 ರಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಹಸುವಿನ ಹಾಲಿನಲ್ಲಿ ಡೈರಿಯೇತರ ಹಾಲಿಗಿಂತ ಹೆಚ್ಚಿನ ಪ್ರೋಟೀನ್ ಅಂಶವಿದೆ. ಇದು ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಇ ಅನ್ನು ನೈಸರ್ಗಿಕವಾಗಿ ಹೊಂದಿರುತ್ತದೆ. ವಿಟಮಿನ್ ಬಿ 12 ಮತ್ತು ಮಿನರಲ್ಸ್ ಮತ್ತು ಮೆಗ್ನೀಸಿಯಮ್​ನಂತಹ ಅನೇಕ ಖನಿಜಾಂಶಗಳು ಸಹ ಹಸುವಿನ ಹಾಲಿನಲ್ಲಿ ಕಂಡುಬರುತ್ತವೆ. ಇದಲ್ಲದೆ, ಹಸುವಿನ ಹಾಲಿನಲ್ಲಿ ಅನೇಕ ಪ್ರಯೋಜನಕಾರಿ ಆ್ಯಂಟಿ ಅಕ್ಸಿಡೆಂಟ್​ ಅಂಶಗಳು ಸಹ ಕಂಡುಬರುತ್ತವೆ ಎಂದು ತಿಳಿಸಿದೆ.

2. ಎಮ್ಮೆ ಹಾಲು: ಲಿಪಿಡ್ಸ್ ಇನ್ ಹೆಲ್ತ್ ಅಂಡ್ ಡಿಸೀಸ್ ನಲ್ಲಿ 2017 ರಲ್ಲಿ ಪ್ರಕಟವಾದ ಅಧ್ಯಯನವು, ವಿಶ್ವಾದ್ಯಂತ ಒಟ್ಟು ಹಾಲು ಉತ್ಪಾದನೆಯಲ್ಲಿ ಶೇಕಡಾ 12 ರಷ್ಟು ಪಾಲನ್ನು ಹೆಮ್ಮೆ ಹಾಲು ಹೊಂದಿದೆ ಎಂದು ತಿಳಿಸಿದೆ. ಹಾಗೆಯೇ ಎಮ್ಮೆ ಹಾಲು ವಾಸ್ತವವಾಗಿ ಹಸುವಿನ ಹಾಲಿಗಿಂತ ಆರೋಗ್ಯಕರ. ಎಮ್ಮೆ ಹಾಲಿನಲ್ಲಿ ಕೊಲೆಸ್ಟ್ರಾಲ್ ಸಾಂದ್ರತೆ ಕಡಿಮೆ ಇರುವುದು ಇದಕ್ಕೆ ಕಾರಣ. ಅಲ್ಲದೆ, ಎಮ್ಮೆ ಹಾಲಿನಲ್ಲಿ ಅಮೈನೋ ಆಮ್ಲಗಳು, ಸೆಲೆನಿಯಮ್, ಸತು ಮತ್ತು ಆ್ಯಂಟಿ ಅಕ್ಸಿಡೆಂಟ್​ಗಳ ಸಾಂದ್ರತೆಯು ಕಂಡುಬರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

3. ಮೇಕೆ ಹಾಲು: ಮೇಕೆ ಹಾಲು ಹಸುವಿನ ಹಾಲಿಗೆ ಉತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ನವಜಾತ ಶಿಶು ಫಾರ್ಮುಲ ಮಿಲ್ಕ್ ಬಳಕೆಯಲ್ಲಿ. 2019 ರಲ್ಲಿ ಏಷ್ಯನ್-ಆಸ್ಟ್ರೇಲಿಯನ್ ಜರ್ನಲ್ ಆಫ್ ಅನಿಮಲ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೇಕೆ ಹಾಲು ಹೆಚ್ಚು ಜೀರ್ಣಶಕ್ತಿಯನ್ನು ಹೊಂದಿರುತ್ತವೆ, ಹಾಗೆಯೇ ಹೆಚ್ಚು ಕ್ಷಾರೀಯವಾಗಿರುತ್ತದೆ ಎಂದು ತಿಳಿಸಿದೆ. ಅದೇ ರೀತಿ ಕಡಿಮೆ ಕೊಬ್ಬಿನಂಶವನ್ನು ಹೊಂದಿರುವ ಮೇಕೆ ಹಾಲು ಹಸುವಿನ ಹಾಲಿನಲ್ಲಿರುವುದಕ್ಕಿಂತ ವೈದ್ಯಕೀಯ ಗುಣಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ.4. ಒಂಟೆ ಹಾಲು: ಒಂಟೆಯ ಹಾಲು ಉಳಿದ ವಿವಿಧ ರೀತಿಯ ಹಾಲಿಗಿಂತ ಭಿನ್ನ. ಆದರೆ ಪೌಷ್ಠಿಕಾಂಶದ ದೃಷ್ಟಿಯಿಂದ ಒಂಟೆ ಹಾಲನ್ನು ತಾಯಿಯ ಎದೆ ಹಾಲಿಗೆ ಬಹಳ ಹತ್ತಿರವೆಂದು ಪರಿಗಣಿಸಲಾಗುತ್ತದೆ. 2015 ರಲ್ಲಿ ಪ್ರಕಟವಾದ ಅಧ್ಯಯನವೊಂದು, ಒಂಟೆ ಹಾಲಿನಲ್ಲಿ ಕಡಿಮೆ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಇದೆ. ಹಾಗೆಯೇ ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ಖನಿಜಗಳಾದ ಕಬ್ಬಿಣ, ಪೊಟ್ಯಾಸಿಯಮ್, ಕಾಪರ್, ಸತು ಮತ್ತು ಮೆಗ್ನೀಸಿಯಮ್ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಡೈರಿಯೇತರ ಹಾಲಿನ ಪ್ರಭೇದಗಳು ವಿಶ್ವಾದ್ಯಂತ ಬಹಳ ಪ್ರಸಿದ್ಧಿಯಾಗುತ್ತಿವೆ. ಅಂತಹ ಅತ್ಯಂತ ಜನಪ್ರಿಯ ಡೈರಿಯೇತರ ಹಾಲಿನ 4 ವಿಧಗಳು ಇಲ್ಲಿವೆ:

1. ಸೋಯಾ ಹಾಲು: ಸೋಯಾಬೀನ್ ಅಥವಾ ಸೋಯಾ ಪ್ರೋಟೀನ್‌ನಿಂದ ತಯಾರಿಸಿದ ಸೋಯಾ ಹಾಲನ್ನು ಅದರ ಪೌಷ್ಠಿಕಾಂಶದ ಗುಣಲಕ್ಷಣಗಳಿಂದಾಗಿ ಹಸುವಿನ ಹಾಲಿಗೆ ಉತ್ತಮ ಬದಲಿಯಾಗಿ ಪರಿಗಣಿಸಲಾಗುತ್ತದೆ. ಹಸುವಿನ ಹಾಲಿನಲ್ಲಿ ಅದೇ ಮಟ್ಟದ ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಕಂಡುಬರುತ್ತದೆ. ಅಲ್ಲದೆ, ಎಲ್ಲಾ ಅಗತ್ಯ ಅಮೈನೋ ಆಮ್ಲಗಳು ಇರುವುದರಿಂದ ಇದನ್ನು ಸಂಪೂರ್ಣ ಪ್ರೋಟೀನ್ ಹಾಲು ಎಂದು ಕೂಡ ಪರಿಗಣಿಸಲಾಗುತ್ತದೆ.

2. ತೆಂಗಿನ ಹಾಲು: ತೆಂಗಿನಕಾಯಿ ಹಾಲನ್ನು ತೆಂಗಿನಕಾಯಿಗೆ ಬೆರೆಸಿದ ನೀರು ಮತ್ತು ತಾಜಾ ಬಿಳಿ ಕೆನೆ ಬೆರೆಸಿ ತಯಾರಿಸಲಾಗುತ್ತದೆ. ಎಲ್ಲಾ ಡೈರಿಯೇತರ ಹಾಲಿನ ಪ್ರಭೇದಗಳಲ್ಲಿ, ತೆಂಗಿನಕಾಯಿ ಹಾಲಿನಲ್ಲಿ ಕಡಿಮೆ ಪೌಷ್ಟಿಕಾಂಶವಿದೆ. ಆದರೆ ಈ ಹಾಲನ್ನು ಭಾರತೀಯ ಉಪಖಂಡದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಹಾಲು ದೇಹದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಲು ಸಹಕಾರಿಯಾಗಿದೆ.

3. ಬಾದಾಮಿ ಹಾಲು: ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿರುವ ಜನರು ಬಾದಾಮಿ ಹಾಲು ಅಥವಾ ಅಮಂಡ್ ಹಾಲು ಕುಡಿಯಲು ಬಯಸುತ್ತಾರೆ. ಇದು ಹೆಚ್ಚಿನ ಪ್ರಮಾಣದ ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹಾಗೆಯೇ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆ ಮಟ್ಟದಲ್ಲಿರುತ್ತವೆ.

4. ಓಟ್ ಹಾಲು: ಈ ಹಾಲನ್ನು ಓಟ್ಸ್, ನೀರು ಮತ್ತು ಇತರ ಹಲವು ಪದಾರ್ಥಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಇದು ಹಸುವಿನ ಹಾಲಿಗಿಂತ ಕಡಿಮೆ ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇದರ ಹೊರತಾಗಿಯೂ, ಓಟ್ ಹಾಲನ್ನು ಆರೋಗ್ಯಕರ ಪರ್ಯಾಯವಾಗಿ ನೋಡಲಾಗುತ್ತದೆ. ಏಕೆಂದರೆ ಇದು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
First published: June 1, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading