ದೀರ್ಘಕಾಲದ ಉಸಿರಾಟ ಸಮಸ್ಯೆ (Breathing Problem) ಶ್ವಾಸಕೋಶದಲ್ಲಿ (Lungs) ಉರಿಯೂತ ಉಂಟು ಮಾಡುತ್ತದೆ. ಅಲ್ಲದೇ, ಶ್ವಾಸನಾಳವನ್ನು ಕಿರಿದಾಗಿಸುತ್ತದೆ. ಇದರಿಂದ ಗಾಳಿ ಸಂಚರಿಸಲು ತೊಡಕುಂಟಾಗಿ ಅಸ್ತಮಾಗೆ (Asthma) ಕಾರಣವಾಗುತ್ತದೆ. ಈ ಬಗ್ಗೆ ಮಾತನಾಡಿರುವ ಶ್ವಾಸಕೋಶ ತಜ್ಞ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ದಿವೇಚಾ ಸೆಂಟರ್ ಆಫ್ ಕ್ಲೈಮೆಟ್ ಚೇಂಜ್ನ ಪ್ರೊ. ಡಾ. ಎಚ್. ಪರಮೇಶ್ ಅವರು, ಅಸ್ತಮಾಕ್ಕೆ ಕಾರಣವೇನು? ಈ ಸಮಸ್ಯೆಯನ್ನು ನಿಯಂತ್ರಿಸುವುದು ಹೇಗೆ ಎಂಬುವುದರ ಕುರಿತಂತೆ ಒಂದಷ್ಟು ಮಾಹಿತಿಯನ್ನು ವಿಜಯವಾಣಿ ನಡೆಸಿದ ಸಂವಾದದಲ್ಲಿ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳಲ್ಲಿ ಅಸ್ತಮಾ ಜಾಗತಿಕವಾಗಿ ಮುಂಚೂಣಿಯಲ್ಲಿದೆ. 2015ರಲ್ಲಿ ನಡೆಸಲಾದ ಸಂಶೋಧನೆ ಪ್ರಕಾರ ಜಗತ್ತಿನಾದ್ಯಂತ ಒಂದು ಕೋಟಿ ಇದ್ದ ಅಸ್ತಮಾ ರೋಗಿಗಳ ಸಂಖ್ಯೆ 2050ರ ವೇಳೆಗೆ 4 ಕೋಟಿ ಮೀರಲಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ 1975ರಲ್ಲಿ ಅಸ್ತಮಾ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ 18 ವರ್ಷದ ಒಳಗಿನ ಮಕ್ಕಳಲ್ಲಿ ಶೇ. 8 ಇದ್ದ ಈ ರೋಗದ ಪ್ರಮಾಣ, 10 ವರ್ಷಗಳಲ್ಲಿ ಶೇ. 18ಕ್ಕೆ ಏರಿಕೆಯಾಗಿತ್ತು. 2015-20ರಲ್ಲಿ ವೇಳೆಗೆ ಈ ಪ್ರಮಾಣ ಶೇ. 29.5 ತಲುಪಿತ್ತು. ಪ್ರಸ್ತುತ ಭಾರತದಲ್ಲಿ ಅಸ್ತಮಾ ಹೊಂದಿರುವ ಮಕ್ಕಳ ಸಂಖ್ಯೆ ಶೇ. 28 ಇದೆ. ಹಿರಿಯರಲ್ಲೂ ಈ ಪ್ರಮಾಣ 4 ಪಟ್ಟು ಹೆಚ್ಚಾಗಿದೆ. ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಕಾರಣದಿಂದ ಅಸ್ತಮಾ ಹೆಚ್ಚುತ್ತಿದೆ. ಕೆಲವರಲ್ಲಿ ವಂಶವಾಹಿ ಕಾರಣಕ್ಕಾಗಿ ಈ ಸಮಸ್ಯೆ ಇದೆ ಎಂದಾದರೂ ಇದಕ್ಕೆ ವಾಯು ಮಾಲಿನ್ಯ ಪ್ರಮುಖ ಕಾರಣವಾಗಿದೆ.
ಆಹಾರ ಔಷಧ ಸಮಸ್ಯೆ: ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ನವಜಾತ ಶಿಶುಗಳಿಗೆ ಅಸ್ತಮಾ ತಾಯಿಯ ಕೊಡುಗೆ ಎನ್ನುವಂತಾಗಿದೆ. ಅಂದರೆ, ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತಾಯಿ ಸೇವಿಸುವ ಆಹಾರ (ಪಾಲಿಶ್ಡ್ ರೈಸ್ ಇತ್ಯಾದಿ) ಹಾಗೂ ತೆಗೆದುಕೊಳ್ಳುವ ಔಷಧ ಕ್ರಮದಿಂದಾಗಿ ನವಜಾತ ಶಿಶುಗಳಲ್ಲಿ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಲ್ಲದೇ, ಸಹಜ ಹೆರಿಗೆಯಿಂದ ಜನಿಸುವ ಮಕ್ಕಳಿಗೆ ಈ ಆರೋಗ್ಯ ಸಮಸ್ಯೆ ಕಡಿಮೆ. ಅದೇ ಸಿಸೇರಿಯನ್ನಿಂದ ಜನಿಸುವ ಮಕ್ಕಳಲ್ಲಿ ಇತರೆ ಆರೋಗ್ಯ ಸಮಸ್ಯೆಗಳ ಜೊತೆಗೆ ಅಸ್ತಮಾ ಸಂಬಂಧಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಸ್ಕೂಲ್ ಬ್ಯಾಗ್ ಸಮಸ್ಯೆ: ಬೆನ್ನಿನ ಮೇಲೆ ಭಾರದ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳಲ್ಲಿ ಅಸ್ತಮಾ ಪ್ರಕರಣಗಳು ವರದಿಯಾಗುತ್ತಿವೆ. ಬೆನ್ನಿನ ಮೇಲೆ ಹೆಚ್ಚು ಭಾರ ಬೀಳುವುದರಿಂದ ಮಕ್ಕಳ ಭುಜಗಳು ಬಾಗಿ ದೇಹದ ಸ್ನಾಯುಗಳು ಕುಗ್ಗುತ್ತವೆ. ಇದರಿಂದ ಸರಾಗವಾಗಿ ಉಸಿರಾಡಲು ತೊಂದರೆ ಉಂಟಾಗಿ ಕ್ರಮೇಣ ಅದು ಅಸ್ತಮಾಗೆ ಕಾರಣವಾಗುತ್ತದೆ.
ಜೊತೆಯಲ್ಲಿರಲಿ ಇನ್ಹೇಲರ್: ಅಸ್ತಮಾ ಆಘಾತ ಯಾವುದೇ ಮುನ್ನಚ್ಚರಿಕೆ ಇಲ್ಲದೆಯೇ ಎರಗುತ್ತದೆ. ಹಾಗಾಗಿ, ಈ ರೋಗದಿಂದ ಬಳಲುತ್ತಿರುವವರು ವೈದ್ಯರ ಸಲಹೆಯಂತೆ ಸದಾ ಜೊತೆಯಲ್ಲಿಯೇ ಇನ್ಹೇಲರ್ ಇಟ್ಟುಕೊಂಡಿರುವುದು ಒಳ್ಳೆಯದು. ಅಲ್ಲದೇ ಅದು ಸದಾ ಭರ್ತಿಯಾಗಿರುವಂತೆ ಎಚ್ಚರ ವಹಿಸಬೇಕು. ಅಂದರೆ ಒಂದು ಖಾಲಿಯಾಗುವ ಮುನ್ನವೇ ಹೆಚ್ಚುವರಿಯಾಗಿ ಮತ್ತೊಂದನ್ನು ಹೊಂದಿರಬೇಕು. ಹಾಗಂತ ಇದನ್ನು ಮನಬಂದಂತೆ ಬಳಕೆ ಮಾಡುವುದರಿಂದ ಅಡ್ಡ ಪರಿಣಾಮಗಳು ಬೀರುತ್ತವೆ. ಆದ್ದರಿಂದ ವೈದ್ಯರ ಸಲಹೆ ಆಧರಿಸಿ ಉಪಯೋಗಿಸಬೇಕು. ಅಸ್ತಮಾ ರೋಗಿಗಳು ಆಯಾ ಹವಾಮಾನಕ್ಕೆ ಅನುಗುಣವಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅಂದರೆ ಮಳೆಗಾಲದಲ್ಲಿ ನೆನೆಯದಂತೆ ಎಚ್ಚರ ವಹಿಸಬೇಕು. ಬೇಸಿಗೆಗಾಲದಲ್ಲಿ ಧೂಳಿನಿಂದ ಹಾಗೂ ಚಳಿಗಾಳಿಯಲ್ಲಿ ಶೀತದಿಂದ ರಕ್ಷಣೆ ಪಡೆಯಬೇಕು.
ಅಸ್ತಮಾ ದಿನ ಆಚರಣೆ: 1993ರಲ್ಲಿ ಸ್ಥಾಪನೆಯಾದ ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (ಜಿಐಎನ್ಎ) ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಸಹಯೋಗದಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನ ಆಚರಿಸಲಾಗುತ್ತದೆ. ಈ ವರ್ಷ ‘ಎಲ್ಲರಿಗೂ ಅಸ್ತಮಾ ಆರೈಕೆ’ ವಿಷಯದಡಿ ಜಾಗೃತಿ ಮೂಡಿಸಲಾಗುತ್ತಿದೆ.
ಬೆಳಕಿನ ಮಾಲಿನ್ಯ: ಹಳೆಯ ಕಾಲದಲ್ಲಿ ಬಳಸುವ ಬಲ್ಬ್ ಗಳಿಂದ, ಬ್ಲೂ ಲೈಟ್, ಕೃತಕ ಬೆಳಕು, ಮೂನ್ ಲೈಟ್, ಮರ್ಕ್ಯುರಿ ಲೈಟ್ ಸೇರಿ ಬೆಳಕಿನ ಮಾಲಿನ್ಯವೂ ಅಸ್ತಮಾ ಕಾಯಿಲೆಗೆ ಕಾರಣವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ಹಾಗಾಗಿ, ಮನೆ ಅಥವಾ ಕಚೇರಿಗಳಲ್ಲಿ ಎಲ್ಇಡಿ ಲೈಟ್ ಬಳಸುವುದಕ್ಕೆ ಆದ್ಯತೆ ನೀಡಬೇಕಿದೆ. ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರು ರಾತ್ರಿ ವೇಳೆ ಮನೆಯಲ್ಲಿ ನೀಲಿ ಬಣ್ಣದ ಬಲ್ಬ್ ಗಳನ್ನು ಬಳಕೆ ಮಾಡಬಾರದು.
ಒಳಾಂಗಣದಲ್ಲಿ ಗಿಡ ಬೆಳೆಸಿ: ಅಸ್ತಮಾಗೆ ಪ್ರಮುಖ ಕಾರಣ ವಾಯು ಮಾಲಿನ್ಯ. ಹಾಗಾಗಿ ಆರೋಗ್ಯಕರ ಶುದ್ಧಗಾಳಿ ಸೇವನೆಗೆ ಒತ್ತು ನೀಡಬೇಕು. ನಗರ ಪ್ರದೇಶದಲ್ಲಿ ಮನೆಯ ಒಳಾಂಗಣದಲ್ಲಿ ಹೂಕುಂಡಗಳಲ್ಲಿ ತುಳಸಿ, ಪುದೀನ, ಮನಿಪ್ಲಾಂಟ್, ಬಿದಿರು ಮುಂತಾದ ಆರೋಗ್ಯಕರ ಗಾಳಿ ನೀಡುವ ಗಿಡಗಳನ್ನು ಬೆಳೆಸುವುದರಿಂದ ಶುದ್ಧವಾದ ಗಾಳಿ ದೊರೆಯುತ್ತದೆ. ಅರಳಿ ಮರದಲ್ಲಿ ಶೇ. 100 ಶುದ್ಧ ಆಮ್ಲಜನಕ ಇರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಅರಳಿ ಮರದ ಗಾಳಿ ಸೇವನೆ ಆರೋಗ್ಯಕರ.
ಆಹಾರದತ್ತ ಇರಲಿ ಗಮನ: ಕೆಲವರಿಗೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ಅಸ್ತಮಾ (ಅಲರ್ಜಿ) ಕಾಣಿಸಿಕೊಳ್ಳಲಿದೆ. ಕೆಲವರಿಗೆ ಮೊಟ್ಟೆಯ ಬಿಳಿಭಾಗ, ಹಾಲು, ಕಡಲೆಬೀಜ (ಶೇಂಗ), ಸೋಯಾ, ಏಡಿ ಹಾಗೂ ಮೀನು ಸೇವನೆಯಿಂದ ಏಕಾಏಕಿ ಉಸಿರಾಟದ ಮೇಲೆ ಪರಿಣಾಮ ಉಂಟು ಮಾಡುತ್ತದೆ.
ಈ ಕಾರಣಗಳಿಂದಾಗಿ ಸಣ್ಣ ಸಣ್ಣ ಧೂಳಿನ ಕಣಗಳು ನೇರವಾಗಿ ಮನುಷ್ಯನ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಉಸಿರಾಡುವ ಸ್ಥಳದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಇದರ ಪ್ರಭಾವದಿಂದ ಮೂಗು ಸೋರುವಿಕೆ, ಹೆಚ್ಚಾದ ಸೀನು, ಮೂಗಿನ ಹೊಳ್ಳೆಗಳು ಊದಿಕೊಳ್ಳುವುದು ಎದೆ ಕಟ್ಟಿಕೊಳ್ಳುವಿಕೆ ನೀರು ತುಂಬಿದ ಕಣ್ಣುಗಳು ಮತ್ತು ಗಂಟಲು ಕೆರೆತ ಹೆಚ್ಚಾಗುತ್ತದೆ. ವ್ಯಾಯಾಮ ಮಾಡುವಾಗ ಕೆಮ್ಮು ಬರುವುದು, ಮುಂಜಾನೆ ಮತ್ತು ಸಂಜೆ ನಿಯಮಿತವಾಗಿ ಕೆಮ್ಮು, ನಿದ್ರಾಹೀನತೆ, ಉಸಿರಾಟದ ತೊಂದರೆ, ಶ್ವಾಸಕೋಶದ ಶ್ವಾಸನಾಳದಲ್ಲಿ ಬಿಗಿತ, ಬೊಜ್ಜು ಇತ್ಯಾದಿ ಅಸ್ತಮಾದ ಲಕ್ಷಣಗಳಾಗಿವೆ. ಇಂತಹವರು ದೇಹಕ್ಕೆ ಹೆಚ್ಚು ಆಯಾಸ ಆಗದಂತೆ ನೋಡಿಕೊಳ್ಳಬೇಕು. ವೈದ್ಯರ ಸಲಹೆಗಳನ್ನು ಪಾಲಿಸಬೇಕು.
ಇದನ್ನೂ ಓದಿ: Asthma: ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಹೇಗಿರಬೇಕು? ಇಲ್ಲಿದೆ ಮುನ್ನೆಚ್ಚರಿಕಾ ಕ್ರಮ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ