ಟೀ (Tea) ಅಭ್ಯಾಸವಿರುವವರು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಚಹಾ ಕುಡಿಯುತ್ತಾರೆ. ಆದ್ರೆ ಸಾಮಾನ್ಯವಾಗಿ ಎಲ್ಲರೂ ಚಹಾ ಮಾಡಿದ ಮೇಲೆ ಅದನ್ನು ಸೋಸಿದ ಬಳಿಕ ಚಹಾ ಸೊಪ್ಪನ್ನು ಎಸೆಯುತ್ತಾರೆ. ಆದ್ರೆ ಹೀಗೆ ಎಸೆಯೋ ಬದಲು ಅದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಂತೆ. ಹೌದು, ಚಹಾ ಮಾಡಿದ ಬಳಿಕ ಸೋಸಿದ ಚಹಾಸೊಪ್ಪಿನಿಂದ (Tea Leaf) ಬಹಳಷ್ಟು ಉಪಯೋಗಗಳಿವೆ. ಅವುಗಳನ್ನು ಮರುಬಳಕೆ ಮಾಡಬಹುದು. ಜೊತೆಗೆ ಆಶ್ಚರ್ಯಕರ ರೀತಿಯಲ್ಲಿ ಬಳಸಬಹುದು ಕೂಡ. ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಹಿಡಿದು ಸ್ವಚ್ಛಗೊಳಿಸುವವರೆಗೆ (Cleaning) ಚಹಾಸೊಪ್ಪನ್ನು ಮರುಬಳಕೆ ಮಾಡಬಹುದು. ಅಲ್ಲದೇ ಆಶ್ಚರ್ಯಕರ ರೀತಿಯಲ್ಲಿ ಅದನ್ನು ಬಳಸಬಹುದು. ಹಾಗಿದ್ರೆ ಅದು ಹೇಗೆ? ಯಾವ್ಯಾವ ಪದಾರ್ಥಗಳಲ್ಲಿ ಅದನ್ನು ಬಳಸಬಹುದು? ಅದರಿಂದ ಹೇಗೆ ಸ್ವಚ್ಛಗೊಳಿಸಬಹುದು ಅನ್ನೋದನ್ನು ನೋಡೋಣ.
1.ಸಲಾಡ್ಗೆ ಬಳಸಬಹುದು: ಇದು ನಿಮಗೆ ವಿಚಿತ್ರ ಅನಿಸಬಹುದು. ಆದ್ರೆ ಚಹಾಸೊಪ್ಪು ಸಲಾಡ್ಗಳಿಗೆ ತೀಕ್ಷ್ಣವಾದ ಕಿಕ್ಅನ್ನು ನೀಡುತ್ತದೆ. ನೀವು ಉಳಿದ ತೇವದ ಚಹಾ ಸೊಪ್ಪನ್ನು ನೇರವಾಗಿ ನಿಮ್ಮ ಸಲಾಡ್ ನಲ್ಲಿ ಸೇರಿಸಬಹುದು. ಸಲಾಡ್ ಮಾಡಿದ ಬಳಿಕ ಅದರ ಮೇಲೆ ಚಿಮುಕಿಸಿದರೆ ಆಯ್ತು. ಆದರೆ ನೀವು ಚಹಾ ಮಾಡಿ ಬಳಸಿದ ದಿನವೇ ಅದನ್ನು ಬಳಸಬೇಕು ಅಷ್ಟೇ.
2.ಚಹಾಸೊಪ್ಪಿನ ಉಪ್ಪಿನಕಾಯಿ: ಈ ಚಹಾ ಸೊಪ್ಪನ್ನು ಉಪ್ಪಿನಕಾಯಿಯಂತೆ ಬಳಸಬಹುದು. ಇದನ್ನು ನಂಬಲು ಕಷ್ಟವಾದರೂ ನೀವು ಇದನ್ನು ಒಮ್ಮೆ ಪ್ರಯತ್ನಿಸಬಹುದು.
ಬಳಸಿದ ಚಹಾ ಎಲೆಗಳು, ಎಣ್ಣೆ, ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ ಮತ್ತು ಮೇಸನ್ ಜಾರ್ಗೆ ಸೇರಿಸಿ. ಇದು ಒಂದು ವಾರದವರೆಗೆ ಸರಿಯಾಗಿ ಬೆರೆಯಲಿ. ನಂತರ ನೀವು ಅದನ್ನು ಉಪ್ಪಿನಕಾಯಿಯಂತೆ ಬಳಸಬಹುದು. ಅಲ್ಲದೇ ಅದನ್ನು ಸ್ಯಾಂಡ್ವಿಚ್, ಸಲಾಡ್ಗಳು ಮತ್ತು ಇತರ ಆಹಾರಗಳಿಗೆ ಸೇರಿಸಿ ತಿನ್ನಬಹುದು.
3. ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಚಹಾಸೊಪ್ಪು: ಕಿಚನ್ನಲ್ಲಿ ಕಲೆಗಳಾಗಿದ್ದರೆ ಅಥವಾ ಚಾಪಿಂಗ್ ಬೋರ್ಡ್ನಲ್ಲಿ ಕೊಳೆ ಇದ್ದರೆ ಅದನ್ನು ಸ್ವಚ್ಛಗೊಳಿಸಲು ನೀವು ಚಹಾಸೊಪ್ಪನ್ನು ಬಳಸಬಹುದು.
ಚಹಾಸೊಪ್ಪನ್ನು ಅದರ ಮೇಲೆ ಹಾಕಿ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಚಹಾ ಎಲೆಗಳು ಕೊಳಕು, ಗ್ರೀಸ್ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ. ನಿಮ್ಮ ಕುಕ್ವೇರ್ ಮತ್ತು ಕಟ್ಲರಿಗಳಿಂದ ಕಲೆಗಳು ಮತ್ತು ವಾಸನೆಯನ್ನು ತೆಗೆದುಹಾಕಲೂ ನೀವು ಈ ಎಲೆಗಳನ್ನು ಬಳಸಬಹುದು.
ಇದನ್ನೂ ಓದಿ: ನಿದ್ರಾಹೀನತೆಯಿಂದ ದೆವ್ವ, ಆತ್ಮಗಳ ಇರುವಿಕೆ ಗೊತ್ತಾಗುತ್ತದೆಯೇ? ಸಂಶೋಧನೆ ಹೇಳಿರುವುದೇನು?
4.ಫ್ರಿಡ್ಜ್ ಒಳಗಿನ ವಾಸನೆಯನ್ನು ತೆಗೆದುಹಾಕಲು : ಆಹಾರ ಪದಾರ್ಥಗಳಿಂದ ನಿಮ್ಮ ರೆಫ್ರಿಜರೇಟರ್ ಕೆಲವೊಮ್ಮೆ ವಾಸನೆಯಾಗಿಬಿಡುತ್ತದೆ. ಅದನ್ನು ತೆರೆದಾಕ್ಷಣ ಕೆಲವೊಂದು ಆಹಾರದ ವಾಸನೆ ಬರುತ್ತದೆ.
ಇದಕ್ಕೆ ಪರಿಹಾರವಾಗಿ ನೀವು ಟೀಸೊಪ್ಪನ್ನು ಬಳಸಬಹುದು. ಚಹಾಸೊಪ್ಪು ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತವೆ ಎನ್ನಲಾಗುತ್ತದೆ. ಉಳಿದಂತಹ ಚಹಾ ಎಲೆಗಳನ್ನು ಒಣಗಿಸಿ ಮತ್ತು ಅವುಗಳನ್ನು ಮಸ್ಲಿನ್ ಬಟ್ಟೆಯಲ್ಲಿ ಪ್ಯಾಕ್ ಮಾಡಿ ಫ್ರಿಡ್ಜ್ ನಲ್ಲಿಡಬೇಕು.
ಇದರಿಂದ ಕೆಟ್ಟ ವಾಸನೆ ದೂರವಾಗುತ್ತದೆ. ಅಲ್ಲದೇ ಮೈಕ್ರೊವೇವ್ ಮತ್ತು ಓವನ್ ಅನ್ನು ಸ್ವಚ್ಛಗೊಳಿಸಲು ಮತ್ತು ವಾಸನೆಯನ್ನು ತೊಡೆದುಹಾಕಲು ಸಹ ಇದನ್ನು ಬಳಸಬಹುದು.
5.ಕುಕೀಸ್ಗಳಿಗೆ ವಿಭಿನ್ನ ಪರಿಮಳ ನೀಡುತ್ತೆ: ನೀವು ಚಹಾಸೊಪ್ಪನ್ನು ಕುಕೀಸ್, ಕೇಕ್ಗಳು ಮತ್ತು ಮಫಿನ್ ಮುಂತಾದವುಗಳ ಜೊತೆಗೆ ಬೇಯಿಸಬಹುದು.
ಹಾಗೆ ಮಾಡುವುದರ ಮೂಲಕ ಅವುಗಳಿಗೆ ಚಹಾದ ತಾಜಾ ಮತ್ತು ಗಿಡಮೂಲಿಕೆಗಳ ಪರಿಮಳವನ್ನು ಸೇರಿಸಬಹುದು. ನಿಮ್ಮ ಬೇಕಿಂಗ್ ಪದಾರ್ಥಗಳಿಗೆ ಕೆಲವು ಬಳಸಿದ ಚಹಾ ಎಲೆಗಳನ್ನು ಸೇರಿಸುವುದರ ಮೂಲಕ ವಿಭಿನ್ನ ರುಚಿಯೊಂದಿಗೆ ಚಹಾ-ಇನ್ಫ್ಯೂಸ್ಡ್ ಡೆಸರ್ಟ್ಗಳನ್ನು ಆನಂದಿಸಬಹುದು.
ಒಟ್ಟಾರೆ, ಬಳಸಿದ ಮೇಲೆ ಚಹಾಸೊಪ್ಪನ್ನು ಹೇಗೆಂದರೂ ಎಸೆಯುತ್ತೇವೆ. ಅದೇ ಮರುಬಳಕೆ ಮಾಡಿದಲ್ಲಿ ವಿಭಿನ್ನ ರುಚಿಯನ್ನು ಪಡೆಯಲು ಸಾಧ್ಯ ಎಂದಾದರೆ ಯಾಕೆ ಒಮ್ಮೆ ಪ್ರಯತ್ನಿಸಬಾರದು ? ಬರೀ ಚಹಾಸೊಪ್ಪನ್ನು ಮಾತ್ರವೇ ಅಲ್ಲ. ಇದರ ಜೊತೆಗೆ ಇಂಥ ಅನೇಕ ಪದಾರ್ಥಗಳನ್ನು ಮರುಬಳಕೆ ಮಾಡಬಹುದು. ಅದನ್ನು ತಿಳಿದುಕೊಂಡು ಬಳಸಲು ಪ್ರಯತ್ನಿಸಬೇಕಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ