• Home
  • »
  • News
  • »
  • lifestyle
  • »
  • ಧರಿಸುವ ಚಪ್ಪಲಿಯ ಹಿಂದೆ ಕೂಡ ಇದೆ ವೈಜ್ಞಾನಿಕ ಸತ್ಯಗಳು..!

ಧರಿಸುವ ಚಪ್ಪಲಿಯ ಹಿಂದೆ ಕೂಡ ಇದೆ ವೈಜ್ಞಾನಿಕ ಸತ್ಯಗಳು..!

file image

file image

ಮನೆಯೊಳಗೆ ಪ್ರವೇಶಿಸುವ ಮುನ್ನ ಬಾಗಿಲ ಬಳಿಯೇ ಪಾದರಕ್ಷೆಗಳನ್ನು ಬಿಡುವುದರಿಂದ ಏನೆಲ್ಲಾ ಅನುಕೂಲಗಳಿವೆ

  • Share this:

ಸಾಮಾನ್ಯವಾಗಿ ಮನೆಯಲ್ಲಿರುವ ಹಿರಿಯರು, ಹೊರಗಿನಿಂದ ಬಂದವರಿಗೆ ಪಾದರಕ್ಷೆಗಳನ್ನು ಹೊರಗಡೆ ಬಿಡುವಂತೆ ಬುದ್ಧಿವಾದ ಹೇಳುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಈ ರೀತಿಯಾಗಿ ನಡೆದುಕೊಳ್ಳಲು ಕಾರಣವಿತ್ತು. ರತ್ನಗಂಬಳಿಗಳು ಮತ್ತು ನೆಲ ಹಾಸು ಕಂಬಳಿಗಳ ಮೇಲೆ ಮಣ್ಣು ಅಥವಾ ಕೊಳೆ ತಪ್ಪಿಸಲು ಈ ಆಚರಣೆ ಹುಟ್ಟಿಕೊಂಡಿರಬಹುದು. ಆದರೆ ರೋಗಾಣುಗಳನ್ನು ದೂರ ಮಾಡುವುದೇ ಇದರ ಮೂಲ ಉದ್ದೇಶ ಎನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ.


ಮನೆಯೊಳಗೆ ಬರುವಾಗ ಶೂಗಳನ್ನು ಬಾಗಿಲಲ್ಲಿ ಬಿಡುವುದು ನಿಮ್ಮ ಮನೆಯನ್ನು ಸ್ವಚ್ಛವಾಗಿಡುವುದಕ್ಕೆ ನೆರವಾಗುತ್ತದೆ. ಇನ್ನೂ ಮನೆಯೊಳಗೆ ಪ್ರವೇಶಿಸುವ ಮುನ್ನ ಬಾಗಿಲ ಬಳಿಯೇ ಪಾದರಕ್ಷೆಗಳನ್ನು ಬಿಡುವುದರಿಂದ ಏನೆಲ್ಲಾ ಅನುಕೂಲಗಳಿವೆ ಎನ್ನುವುದು ಇಲ್ಲಿದೆ ನೋಡಿ.


1. ಮನೆಯೊಳಗೆ ಶೂ ಧರಿಸುವಂತಿಲ್ಲ ಎಂಬ ನೀತಿಯು ಅನಪೇಕ್ಷಿತ ಕೊಳಕು, ಎಣ್ಣೆ ಮತ್ತು ಇತರ ಕಲ್ಮಶಗಳನ್ನು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ. ಈಗ ಮಳೆಗಾಲದ ಆರಂಭ, ಕೆಸರು, ಕಸ ಮನೆಯೊಳಗೆ ಬರುವುದನ್ನು ತಪ್ಪಿಸಬಹುದು.


2. ಪದೇ ಪದೇ ನೆಲಹಾಸುಗಳನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸುತ್ತದೆ. ನೆಲವನ್ನು ಪುನಃ ಪುನಃ ಶುಚಿ ಮಾಡುವ ಬದಲಿಗೆ ಅದೇ ಸಮಯವನ್ನು ಗುಣಮಟ್ಟದ ಉತ್ಪಾದಕ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.


3. ನೀವು ಹೊರಗಿನಿಂದ ಬಂದು ಮನೆ ಪ್ರವೇಶಿಸುವಾಗ ನಿಮ್ಮ ಶೂಗಳನ್ನು ತೆಗೆದಿಡುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ. ಇಲ್ಲದಿದ್ದರೆ ರೋಗಕಾರಕ ಬ್ಯಾಕ್ಟೀರಿಯಾಗಳು ನಿಮ್ಮ ಪಾದರಕ್ಷೆಯಿಂದ ಮನೆ ಸೇರಬಹುದು. ಇದರಿಂದ ಕಾಯಿಲೆಗೆ ಆಹ್ವಾನ ನೀಡಿದಂತೆ.


ಸಾಮಾನ್ಯವಾಗಿ ರೋಗ ಹರಡುವ ಬ್ಯಾಕ್ಟಿರೀಯಾಗಳು ಶೂಗಳ ಮಧ್ಯೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಬ್ಯಾಕ್ಟಿರೀಯಾ ವೃದ್ಧಿಗೆ ಕಾರಣವಾಗುತ್ತದೆ ಎಂದು ಅರಿಜೋನಾ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸುತ್ತದೆ. ಇ ಕೋಲಿ ಎನ್ನುವುದು ಇಂತಹ ಬ್ಯಾಕ್ಟಿರಿಯಾಗಳಲ್ಲಿ ಒಂದಾಗಿದೆ.


ಕರುಳು ಮತ್ತು ಮೂತ್ರದ ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಲ್ಲಿ ಕೃಷಿ ಪ್ರಾಣಿಗಳು ಮತ್ತು ಇತರ ವನ್ಯಜೀವಿಗಳು ಜನರು ನಡೆಯುವ ಹಾದಿಯಲ್ಲೇ ಕಂಡು ಬರುತ್ತವೆ. ಸಿ. ಡಿಫ್ ಬ್ಯಾಕ್ಟೀರಿಯಾ ಬೂಟುಗಳಲ್ಲಿ ಕಂಡು ಬರುವುದಾಗಿದೆ. ಇದು ವಿಶೇಷವಾಗಿ ದುರ್ವಾಸನೆ ಬೀರುವ ಅತಿಸಾರವನ್ನು ಉಂಟುಮಾಡುವಂತಹ ಕೊಲೈಟಿಸ್ ಅಥವಾ ಕೊಲೊನ್ ಉರಿಯೂತಕ್ಕೆ ಕಾರಣವಾಗಬಹುದು.


i

ಸಿ.ಡಿಫ್ ಸೋಂಕುಗಳು ಹೆಚ್ಚಿನ ಔಷಧಿಗಳಿಗೆ ನಿರೋಧಕವಾಗಿರುವುದರಿಂದ ಚಿಕಿತ್ಸೆ ನೀಡುವುದು ಕಷ್ಟ. ಪಾದರಕ್ಷೆಗಳ ಮೇಲೆ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯವನ್ನು ಮತ್ತು ಸೂಕ್ಷ್ಮಜೀವಿಗಳನ್ನು ಸಂಶೋಧಕರು ಮತ್ತು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯ ಅತ್ಯಂತ ಅಪಾಯಕಾರಿ. ಅನವಶ್ಯಕವಾಗಿ ನಿಮ್ಮ ಮನೆಗೆ ಏಕೆ ಇದನ್ನು ಬರಮಾಡಿಕೊಳ್ಳುತ್ತೀರಿ? ಅದರಲ್ಲೂ ನಿಮ್ಮ ಮನೆಯಲ್ಲಿ ಅಂಬೆಗಾಲಿಡುವ ಮಕ್ಕಳಿದ್ದರೆ ನೀವು ಎಚ್ಚರವಹಿಸಲೇಬೇಕು.


ನಿಮ್ಮ ಮನೆಯವರು ಮಾತ್ರವಲ್ಲ, ಮನೆಗೆ ಆಗಮಿಸುವ ಅತಿಥಿಗಳಿಗೂ ನೀವು ಇದನ್ನು ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಡಿ. ಈ ನಿಟ್ಟಿನಲ್ಲಿ ನಿಮ್ಮ ಮನೆಯಲ್ಲಿ ಶೂ ತೆಗೆಯುವ ಅಭ್ಯಾಸವನ್ನು ಮಾಡಲು ಕೆಲವು ಸಲಹೆಗಳು ಇಲ್ಲಿವೆ.


1. ಮನೆಯ ಮುಖ್ಯ ಪ್ರವೇಶ ದ್ವಾರದ ಬಳಿ ಕುರ್ಚಿ ಅಥವಾ ಬೆಂಚ್ ಇರಿಸಿ:ಅತಿಥಿಗಳು ಬೂಟುಗಳನ್ನು ತೆಗೆಯುವಾಗ ಅಥವಾ ಹಾಕುವಾಗ ಅದರ ಮೇಲೆ ಕುಳಿತುಕೊಳ್ಳಬಹುದು. ಇದರಿಂದ ಅವರಿಗೂ ಖುಷಿ ಎನಿಸುತ್ತದೆ.


2. ಮುಖ್ಯ ದ್ವಾರದ ಒಳಗೆ ಪಾದರಕ್ಷೆ ಬಿಡುವುದಕ್ಕೆ ಸ್ಥಳಾವಕಾಶವಿರಲಿ:ಶೂ ಶೆಲ್ಫ್​​ನೊಂದಿಗೆ, ನಿಮ್ಮ ಬೂಟುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಬಹುದು. ಮನೆಗೆ ಬರುವ ಅತಿಥಿಗಳಿಗೂ ಅದೊಂದು ರೀತಿ ರಿಮೈಂಡರ್​ನಂತೆ ಕೆಲಸ ಮಾಡುವುದು.


3. ಮನೆಯ ಪ್ರವೇಶ ದ್ವಾರದ ಮೇಲೆ ಮ್ಯಾಟ್ ಅಥವಾ ಬೋರ್ಡ್​ ಇರಲಿ:ಕೋವಿಡ್​ನ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ. ಅದರಲ್ಲೂ ನಿಮ್ಮ ಮನೆಗೆ ಅತಿಥಿಗಳು ಬರುವಾಗ ಮ್ಯಾಟ್​ ಮೇಲೆ ನಿಮ್ಮ 'ಪಾದರಕ್ಷೆಗಳನ್ನು ಬಾಗಿಲ ಬಳಿಯೇ ಬಿಡಿ' ಎಂದು ನೋಡಿದಾಗ ಸೌಜನ್ಯಯುತವಾಗಿ ನಿಮ್ಮ ಮನವಿ ಅವರನ್ನು ತಲುಪಿರುತ್ತದೆ. ಅಲ್ಲದೇ ಇದನ್ನು ಬೋರ್ಡ್​​ ಮಾಡಿಸಿ ಹೊರಗಡೆ ತೂಗು ಹಾಕಬಹುದು.


4. ಅತಿಥಿಗಳಿಗೆ ಸೌಜನ್ಯಯುತವಾಗಿ ಮನವಿ ಮಾಡಿ:ಒಂದು ವೇಳೆ ನಿಮ್ಮ ಮನೆಗೆ ಬರುವ ಅತಿಥಿಗಳು ಯಾವುದೋ ತುರ್ತಿನಲ್ಲಿ ಮನೆ ಪ್ರವೇಶಿಸಬಹುದು. ಅವರೊಂದಿಗೆ ಸೌಮ್ಯವಾಗಿ ಮಾತನಾಡುತ್ತಾ, ಪಾದರಕ್ಷೆಗಳನ್ನು ಹೊರಗಡೆ ಬಿಡಲು ಮನವಿ ಮಾಡಿಕೊಳ್ಳಿ.


5. ಪಾದರಕ್ಷೆ ತೆಗೆಯಲು ಒಲ್ಲದವರನ್ನು ಪ್ರತ್ಯೇಕ ಕೋಣೆಯಲ್ಲಿ ಉಪಚರಿಸಿ:ಕೆಲವರಿಗೆ ಶೂ, ಸಾಕ್ಸ್​ ತೆಗೆಯುವುದು ಬಹಳ ಕಷ್ಟದ ಕೆಲಸ. ಇಂತಹವರನ್ನು ಪ್ರತ್ಯೇಕ ಕೋಣೆಯಲ್ಲಿ ಕೂರಿಸಿ, ಕಾಫಿ , ತಿಂಡಿ ಮಾಡಿಸಿ, ಕುಶಲ ಕ್ಷೇಮ ವಿಚಾರಿಸಿಕೊಳ್ಳಿ. ಅವರು ಹೋದ ನಂತರ ಆ ಸ್ಥಳವನ್ನು ಡಿಸ್​ ಇನ್​​ಫೆಕ್ಟ್​ ಸ್ಪ್ರೇ ಬಳಸಿ ಸ್ವಚ್ಛ ಮಾಡಿ.


Published by:Seema R
First published: