ಬೀದಿ ನಾಯಿಗಳು ನರಭಕ್ಷಕ ತೋಳಗಳಾಗಿ ಬದಲಾಗುತ್ತಿವೆ ಎಚ್ಚರ !


Updated:September 3, 2018, 3:33 PM IST
ಬೀದಿ ನಾಯಿಗಳು ನರಭಕ್ಷಕ ತೋಳಗಳಾಗಿ ಬದಲಾಗುತ್ತಿವೆ ಎಚ್ಚರ !

Updated: September 3, 2018, 3:33 PM IST
ಶಿವಾಜಿ ರತ್ನ, ನ್ಯೂಸ್18 ಕನ್ನಡ

ಹೌದು ಇನ್ನು ಕೆಲವೇ ವರ್ಷಗಳಲ್ಲಿ ಬೀದಿ ನಾಯಿಗಳೆಲ್ಲಾ ಮನುಷ್ಯರನ್ನು ಭಕ್ಷಿಸುವ ತೋಳಗಳಾಗಿ ಬದಲಾಗಲಿವೆ. ನಾವು ನೀವು ಹಾಡಹಗಲೇ ಬೀದಿ ನಾಯಿಗಳ ಹಸಿವಿಗೆ ಆಹಾರವಾಗಿಬಿಡುತ್ತೇವೆ. ಕೇಳಲು ದಿಗ್ಭ್ರಮೆಯಾದರೂ ಇದು ಸತ್ಯ. ಇದೇನೋ ಊಹಾಪೋಹವಲ್ಲ ನಮ್ಮ ನಿಮ್ಮ ಕಣ್ಮುಂದಿರುವ ಕಠೋರ ಸತ್ಯ.

ಸೃಷ್ಠಿಯಲ್ಲಿ ತುಸು ಅಧಿಕ ಯೋಚನಾಶಕ್ತಿ ಹೊಂದಿರುವ ಕಾರಣಕ್ಕಾಗಿ ಜಗತ್ತಿನಲ್ಲಿರುವ ಎಲ್ಲವೂ ತನಗಾಗಿಯೇ ಸೃಷ್ಟಿತವಾಗಿರುವುದೆಂದು ತಿಳಿದಿರುವ ಮಾನವ ತನ್ನ ದುರಾಸೆ, ದುರ್ಬುದ್ದಿಯಿಂದ ತಾನೊಬ್ಬ ಬದುಕಿದರೆ ಸಾಕು ಎಂದು ತೀರ್ಮಾನಿಸಿ ಇಂದು ಅರ್ಧ ಪ್ರಕೃತಿಯನ್ನು ತಿಂದು ನೀರು ಕುಡಿದದ್ದಾಗಿದೆ, ಎಷ್ಟೋ ಪ್ರಾಣಿ ಸಂಕುಲದ ಸರ್ವ ನಾಶಕ್ಕೆ ಕಾರಣನಾಗಿದ್ದಾನೆ. ತನ್ನ ಸ್ವಾರ್ಥ ಸಾಧನೆಗೆ ಎಂತಹ ನಿಕೃಷ್ಟ ಹಂತಕ್ಕೂ ತಲುಪಲು ಅಣಿಯಾಗಿದ್ದಾನೆಆದರೆ ಅವನಿಗೆ ತಿಳಿಯದ ಸತ್ಯವೆಂದರೆ ಇಷ್ಟೆಲ್ಲಾ ಅವನು ಮಾಡುತ್ತಿರುವುದು ಅವನ ಉಳಿವಿಗಿಗಾಗಿ ಅಲ್ಲಾ, ಅವನ ಸರ್ವನಾಶಕ್ಕೆಂದು! ಮಾನವ ತನ್ನ ದುರಾಸೆಯಿಂದ ತನಗರಿವಿಲ್ಲದಲೇ ತನ್ನನ್ನೇ ತಾನು ನಾಶಮಾಡಿಕೊಳ್ಳುತ್ತಾ ತನ್ನ ಅಂತ್ಯಕ್ಕೆ ತಾನೆ ಟೊಂಕಕಟ್ಟಿ ನಿಂತಿದ್ದಾನೆ.ನಮ್ಮ ಭೂಮಿ ಮತ್ತು ಪರಿಸರ ಉಳಿಯಬೇಕೆಂದರೆ ಪರಿಸರ ಸಮತೋಲನ ಮುಖ್ಯ. ಪ್ರಾಣಿ, ಪಕ್ಷಿ , ಕಾಡು , ಬೆಟ್ಟ-ಗುಡ್ಡ, ಪ್ರತಿಯೊಂದೂ ಅತ್ಯಮೂಲ್ಯ. ಕಾಡು ನಾಶವಾದರೆ, ಪ್ರಾಣಿಗಳು ನಾಶವಾಗುತ್ತದೆ. ಪ್ರಾಣಿಗಳು ನಾಶವಾದರೆ ಕಾಡು ನಾಶವಾಗುತ್ತದೆ.  ಎಲ್ಲಾ ಪ್ರಾಣಿಗಳು, ಜೀವ ಸಂಕುಲಗಳೂ ತಮ್ಮದೇ ಆದ ಕೊಡುಗೆಯನ್ನು ನಮ್ಮ ಪರಿಸರದ ಸಮತೋಲನಕ್ಕೆ, ನಮ್ಮ ಭೂಮಿಯ ಉಳಿವಿಗೆ ನೀಡುತ್ತಿವೆ. ಆದರೆ ಮನುಷ್ಯನೊಬ್ಬನೇ ಭೂಮಿಗೆ, ಪರಿಸರಕ್ಕೆ ಯಾವ ಕೊಡುಗೆಯನ್ನೂ ನೀಡದೆ, ಬರೀ ಪಡೆದುಕೊಳ್ಳುತ್ತಿರುವುದು.

ಭೂಮಿ ಮೇಲಿನ ಪ್ರತೀಯೊಂದು ಜೀವ ಸಂಕುಲಕ್ಕೂ ಒಂದಕ್ಕೊಂದು ನೈಸರ್ಗಿಕ ನಂಟಿದೆಅಂತೆಯೇ ಮಾನವನಿಗೂ ಸಾಕು ಪ್ರಾಣಿಗಳಿಗೂ ಅವಿನಾಭಾವ ನೈಸರ್ಗಿಕ ನಂಟಿದೆ. ಇಂದು ಕಾಡು ಪ್ರಾಣಿಗಳು ನಾಶವಾಗುತ್ತಿರುವಂತೆ, ಸಾಕು ಪ್ರಾಣಿಗಳು ಇಲ್ಲವಾದರೆ ಮಾನವನ ಸರ್ವನಾಶ ಕಟ್ಟಿಟ್ಟ ಬುತ್ತಿಯೆಂದೇ ಹೇಳಬಹುದು.
Loading...

ಶ್ವಾನಗಳ ಸಂಖ್ಯೆ ಹೆಚ್ಚಾಗಲು ಮಾನವನ ತಟಸ್ಥ ಭಾವ, ಸರ್ಕಾರದ ನಿರ್ಲಕ್ಷ್ಯವೇ ಕಾರಣ: 

ಶ್ವಾನಕ್ಕೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವರ ಸ್ಥಾನಮಾನವಿದೆ. ನಾಯಿಯನ್ನು ಕಾಲ ಬೈರವನೆಂದೂ ಕೆರೆಯುತ್ತಾರೆ. ಅವತಾರ ರೂಪಿ ಪರಶಿವನ ಎಂಟು ಅವತಾರಗಳಲ್ಲಿ ಕಾಲ ಬೈರವನ ಅವತಾರವೂ ಒಂದು. ಇಂತಹ ದೈವೀಸ್ವರೂಪ ನಾಯಿಗಳು ಅನಾದಿ ಕಾಲದಿಂದಲೂ ಮಾನವನ ಸಂಗಾತಿಯಾಗಿ, ಅವನ ಸಂಕಷ್ಟಗಳಲ್ಲಿ ಕಾವಲಾಗಿ ಬದುಕುತ್ತಿವೆ. ವಿಶ್ವಾಸ, ನಂಬಿಕೆಗೆ ಮತ್ತೊಂದು ಹೆಸರೇ ನಾಯಿ.

ಮಾನವಸ್ನೇಹಿ ನಾಯಿ ಇಂದು ಹಲವು ಕಾರಣಗಳಿಂದ ಕ್ರೂರವಾಗಿ ವರ್ತಿಸುತ್ತಿವೆ. ನಾಯಿಗಳನ್ನು ಕಂಡರೆ ಹೆದರಿ ದೂರ ಓಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಪರಿಚಿತರನ್ನು ಕಂಡಾಗ ನಾಯಿ ಬೊಗಳುವುದು, ಅಥವ ಒಮ್ಮೆ ಕಚ್ಚಿ ಸರಿಯುವುದು ಸಾಮಾನ್ಯ. ಆದರೆ ಅದೇ ನಾಯಿಗಳಿಂದು ಮನುಷ್ಯರ ಮೇಲೆ ತೋಳಗಳ ಹಾಗೆ ದಾಳಿ ಮಾಡಲು ಕಾರಣಗಳೇನು?ಇಂದು ನಮ್ಮ ದೇಶ ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನ ಹೊಂದಿದ್ದರೆ, ಬೀದಿ ನಾಯಿಗಳ ಸಂಖ್ಯೆಯಲ್ಲಿ ಮೊದಲನೇ ಸ್ಥಾನ ದೋಚಿಕೊಂಡಿದೆ. ಭಾರತದಲ್ಲಿ ಸರಿಸುಮಾರು 6 ಕೋಟಿಗೂ ಹೆಚ್ಚು ಬೀದಿ ನಾಯಿಗಳು ಆಶ್ರಯ ಪಡೆದುಕೊಂಡಿದೆ. ಅದು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಮಾನವನ ತಟಸ್ಥಭಾವ ಇಂದು ನಾಯಿಗಳ ಸಂಖ್ಯೆ ಹೆಚ್ಚಾಗಿ ಅವುಗಳಿಗೆ ಬದುಕಲು ಯೋಗ್ಯ ವಾತವರಣವಿಲ್ಲದೇ, ಸರಿಯಾದ ಊಟವಿಲ್ಲದೇ ಪರದಾಡುತ್ತಾ ಬದುಕುವಂತಾಗಿದೆ. ಮಾನವ ಬಳಸಿ ಸೃಷ್ಟಿಸುವ ತ್ಯಾಜ್ಯ ಎಷ್ಟಿದೆಯೆಂದರೆ ವಿಲೇವಾರಿಗೂ ಸ್ಥಳವಿಲ್ಲದಂತಾಗಿದೆ. ಪ್ರತಿದಿನ 600 ಕ್ಕೂ ಹೆಚ್ಚು ಟನ್ ತ್ಯಾಜ್ಯ ಬೆಂಗಳೂರು ಒಂದರಲ್ಲೇ ಪ್ರತೀದಿನ ವಿಲೇವಾರಿಯಾಗದೆ ಉಳಿದುಕೊಳ್ಳುತ್ತಿದೆ. ತಿಂಗಳಾನುಗಟ್ಟಲೇ ವಿಲೇವಾರಿಯಾಗದೆ ಉಳಿದ ಕಸದ ರಾಶಿಯ ದಿನ್ನೆಗಳೇ ಇಂದು ಬೀದಿ ನಾಯಿಗಳು ವಾಸಿಸುವ ಹಾಗೂ ಸಂತಾನುತ್ಪತ್ತಿ ಮಾಡುವ ಜಾಗವಾಗಿದೆ. ದಿನೇ ದಿನೇ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆಹಾರಕ್ಕೆ ಪರದಾಡುವ ನಾಯಿಗಳು ಅನ್ಯ ಮಾರ್ಗವಿಲ್ಲದೇ ತ್ಯಾಜ್ಯದಲ್ಲಿ ಸಿಗುವ ಕೊಳೆತ ಆಹಾರವನ್ನೇ ಅವಲಂಬಿಸಿವೆ. ಟನ್ ಗಟ್ಟಲೇ ಕಸವಿಲೇವಾರಿಯಾಗಿ ಅದು ಸೇರುವ ದ್ಯೆತ್ಯ ಗುಡ್ಡಗಳಂತಹ ಕಸದ ರಾಶಿಗಳಳಂತೂ ಡಜನ್ ಗಟ್ಟಲೇ ಮರಿಗಳನ್ನು ಹೆರುವ ಬೀದಿನಾಯಿಗಳು ಲೆಕ್ಕವಿಲ್ಲದಷ್ಟು ಗಿಜುಗುಡುತ್ತಿರುತ್ತವೆ.

ಮಾನವನ ಆಪ್ತ ಸ್ನೇಹಿತ ನಾಯಿ, ವ್ಯೆರಿಯಾದದ್ದೇಗೆ???

ನಾಯಿಗಳು ತೋಳಗಳಂತೆ ಅತೀ ಕ್ರೂರವಾಗಿ ವರ್ತಿಸಲು ಒಂದು ಮುಖ್ಯ ಕಾರಣವಿದೆ. ಮೊದಲು ನಾವು ಕ್ರೂರವಾಗಿ ವರ್ತಿಸುವ ನಾಯಿಗಳು ಎಲ್ಲಿರುತ್ತವೆ ಹಾಗು ಎಲ್ಲಿಂದ ಬರುತ್ತವೆ ಎಂಬುದನ್ನು ಗಮನಿಸೋಣ. ನಮ್ಮ ಬೀದಿಯಲ್ಲೋ ಮತ್ಯಾವುದೋ ಗಲ್ಲಿಗಳಲ್ಲೋ ವಾಸಿಸುವ ನಾಯಿಗಳು ಕ್ರೂರವಾಗಿರುವುದಿಲ್ಲ. ಅಪರಿಚಿತ ವ್ಯಕ್ತಿಗಳು ತಮ್ಮ ಗಲ್ಲಿಯನ್ನು ಹಾದು ಹೋಗುವಾಗ ಅತೀಯಾಗಿ ಬೊಗಳಬಹುದು, ಕಚ್ಚುವಂತೆ ಸಮೀಪಿಸಬಹುದು, ಒಮ್ಮೆ ಗದರಿ ಧೈರ್ಯವಾಗಿ ಮುನ್ನಡೆದರೆ ಸುಮ್ಮನಾಗುತ್ತವೆ. ಆದರೆ ಈ ದಾಳಿ ಮಾಡುವ ನಾಯಿಗಳು ಇರುವುದೆಲ್ಲಿ?

ದಾಳಿ ಮಾಡುವಂತಹ ನಾಯಿಗಳು ಊರ ಹೊರಗಿನ ದೊಡ್ಡ ಕಸದ ಗುಡ್ಡ , ದುರ್ವಾಸನೆಯ ಕಾಲುವೆಗಳು, ಊರ ಹೊರಗಿನ ಕೆರೆಯ ಕಿನಾರೆಗಳಲ್ಲಿ ಅಲೆಯುತ್ತಿರುತ್ತವೆ. ಅಥವಾ ಅಲ್ಲಿಂದ ಬಂದಿರಬಹುದಾಗಿರುತ್ತದೆ.

ಮಾನವ ನಾಗರೀಕತೆಗೂ ಮುನ್ನ ಅನ್ಯ ಮಾರ್ಗವಿಲ್ಲದೆ ಹೊಟ್ಟೆ ಹೊರುವುದಕ್ಕೆ ಪ್ರಾಣಿಗಳಂತೆ ಮಾಂಸ ತಿನ್ನುತ್ತಿದ್ದ. ನಂತರದ ದಿನಗಳಲ್ಲಿ ಸಸ್ಯಾಹಾರ ಕಂಡುಕೊಂಡ. ಮಾನವನ ದೇಹ ಮಾಂಸಾಹಾರಕ್ಕೆ ರೂಪಿತವಾದುದ್ದಲ್ಲವಾದರೂ ಅನಿವಾರ್ಯ ಕಾರಣಗಳಿಂದ ಶುರುವಾಗಿದ್ದ ಮಾಂಸಾಹಾರ ಅವನ ಆಹಾರ ಪದ್ದತಿಯಲ್ಲಿ ಶಾಶ್ವತವಾಗಿ ಸೇರಿ ಹೋಯ್ತು.

ಬೆಂಗಳೂರಿನಂಥ ನಗರಗಳಲ್ಲಿ ಮೊದಲೆಲ್ಲಾ ವಾರಕ್ಕೊಮ್ಮೆ ಮಾಂಸಾಹಾರ ಸೇವಿಸುತ್ತಿದ್ದ ಜನರು ಕ್ರಮೇಣವಾಗಿ ಅವರ ದಿನನಿತ್ಯದ ಮೆನುವಾಗಿ ಮಾಂಸವನ್ನು ಸೇರಿಸಿಕೊಂಡಿದ್ದಾರೆ. ಪರಿಣಾಮ ಇಂದು ಮಾಂಸದಂಗಡಿಗಳು ಟನ್ ಗಟ್ಟಲೆ ಮಾಂಸದ ತ್ಯಾಜ್ಯಗಳನ್ನು ಸೃಷ್ಟಿಸುತ್ತಿವೆ. ಅವು ಬೀದಿ ನಾಯಿಗಳ ಮೃಗತ್ವಕ್ಕೆ ಕಾರಣವಾಗುತ್ತಿವೆ.

ಹೌದು ಮಾಂಸದಂಗಡಿಗಳು ಸೃಷ್ಟಿಸುತ್ತಿವೆ ಈ ಅವಾಂತರಗಳನ್ನು. ಪ್ರತೀ ಮಾಂಸದಂಗಡಿಯ ತ್ಯಾಜ್ಯಗಳು ಪ್ರತೀದಿನ ಮೂಟೆಗಟ್ಟಲೇ ಸೇರುತ್ತವೆ. ಅದರಲ್ಲೂ ಕೋಳಿ ಮಾಂಸದ ತ್ಯಾಜ್ಯವಂತೂ ವಿಪರೀತ. ಪ್ರತಿದಿನ ಈ ಮೂಟೆಗಟ್ಟಲೆಯ ತ್ಯಾಜ್ಯಗಳನ್ನು ಮಾಂಸದಂಗಡಿಗಳು ಊರ ಹೊರಗಿನ ಕಸದ ರಾಶಿಗಳ ಬಳಿ ಹಾಗೂ ಕೆರೆ ಕಾಲುವೆಗಳ ಬಳಿ ಎಸೆದು ಹೋಗುತ್ತಾರೆ. ಅದರ ವಾಸನೆ ಹಿಡಿದು ಬರುವ ನಾಯಿಗಳು ಅವುಗಳನ್ನು ತಿಂದು ಅಲ್ಲೇ ಬದುಕುತ್ತವೆ.  ಬರೀ ಮಾಂಸದ ತ್ಯಾಜ್ಯಗಳನ್ನು ತಿಂದು ಬದುಕುವ ಅವು ವಿಚಿತ್ರ ಮೃಗತ್ವ ಪಡೆದುಕೊಳ್ಳುತ್ತವೆ. ಅಂತಹ ನಾಯಿಗಳನ್ನು ಸಮೀಪಿಸಲೂ ಸಾಧ್ಯವಿಲ್ಲ. ಕಿರಿಯರು, ಹಿರಿಯರು ಯಾರೇ ಸಮೀಪಿಸಿದರು ಒಮ್ಮೆಲೆ ಮೇಲೆರಗಿ ದಾಳಿ ಮಾಡುತ್ತವೆ.

ಬೀದಿ ನಾಯಿಗಳಿಗೂ ನಮ್ಮಂತೆ ಬದುಕುವ ಹಕ್ಕಿದೆ…..

ಮನುಷ್ಯ ಮಾಡುವ ತಪ್ಪಿಂದ, ಸರ್ಕಾರದ ನಿರ್ಲಕ್ಷ್ಯದಿಂದ ಬೀದಿ ನಾಯಿಗಳಿಂದು ನಮ್ಮ ದೃಷ್ಟಿಯಲ್ಲಿ ವಿಲನ್​ಗಳಾಗಿವೆ. ಪರಿಣಾಮ ಇಂದು ಬೀದಿನಾಯಿಗಳನ್ನು ಕೆಲವು ಕಡೆ ಅಮಾನವೀಯವಾಗಿ ಬಡಿದು ಕೊಲ್ಲಲಾಗುತ್ತಿವೆ. ಮಾನವನ ಅಮಾನುಷ ದಾಳಿಗೆ ತತ್ತರಿಸಿದ ಅದೆಷ್ಟೋ ನಾಯಿಗಳು ಕಾಲು, ಕಣ್ಣು, ಕಿವಿ, ಬಾಲ ಹೀಗೆ ಒಂದಲ್ಲಾ ಒಂದು ಅಂಗ ಕಳೆದುಕೊಂಡು ಯಾವುದೋ ಮೂಲೆಗಳಲ್ಲಿ ಮಾನವನಿಗೆ ಹೆದರಿ ಕುಂಯ್​ಗುಡುತ್ತಾ ಚಿಂತಾಜನಕ ಸ್ಥಿತಿಯಲ್ಲಿ ಬದುಕುತ್ತಿವೆ. ನಾಯಿಗಳೆಲ್ಲಾ ಇಂದು ಬೀದಿಗಿಳಿದು ನಮ್ಮಂತೆ ಹೋರಾಟ ಮಾಡಲಾಗದು. ಅದರ ಜವಾಬ್ದಾರಿ ಮಾನವೀಯತೆ ಹೊಂದಿದೆ ಪ್ರತಿಯೊಬ್ಬ ನಾಗರೀಕನ ಮೇಲೂ ಇದೆ.

ನಾಯಿಗಳು ಎಷ್ಟಿದ್ದರೂ ಮೂಕಜೀವಿಗಳು. ಮನುಷ್ಯನಂತೆ ಬುದ್ದಿಜೀವಿಗಳಲ್ಲಾ. ಅವುಗಳನ್ನು ನಮ್ಮೊಂದಿಗೆ ಬದುಕಲು ಬಿಟ್ಟುಕೊಂಡಿದ್ದೇವೆಂದರೆ, ಅವುಗಳಿಗೆಂದೇ ಪ್ರತ್ಯೇಕ ಕಾನೂನಿದೆ ಎಂದರೆ ಅವುಗಳ ರಕ್ಷಣೆ, ಪಾಲನೆ ಸಾರ್ವಜನಿಕರಿಂದ ಹಾಗು ಸರ್ಕಾರದಿಂದ ಆಗಬೇಕಿದೆ. ಸರ್ಕಾರ ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಸಂತಾನ ತಡೆ ಆಪರೇಶನ್​ಗಳ ಮೂಲಕ ನಾಯಿಗಳು ಸಂಖ್ಯೆ ಹೆಚ್ಚಾಗುವುದನ್ನು ತಡೆಯಬೇಕಿದೆ. ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾದಾಗ ಆಹಾರದ ಸಮಸ್ಯೆ ಕಡಿಮೆಯಾಗುತ್ತದೆ. ಬೀದಿನಾಯಿಗಳ ಆಹಾರದ ಸಮಸ್ಯೆ ನೀಗಿದಾಗ, ನಾಯಿಗಳು ಹಸಿವಿನಿಂದ ಕೊಳೆತ ಮಾಂಸದ ತ್ಯಾಜ್ಯ ತಿಂದು ಕ್ರೂರವಾಗುವುದನ್ನು ತಪ್ಪಿಸಬಹುದು. ಮಾಂಸದಂಗಡಿಯ ತ್ಯಾಜ್ಯ ಸಮರ್ಪಕ ವಿಲೇವಾರಿಗೊಂದು ಅನ್ಯ ಮಾರ್ಗ ಕಂಡುಕೊಳ್ಳಲೇಬೇಕಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ. ಜೊತೆಗೆ ನಾಯಿಗಳ ಸಂತಾನೋತ್ಪತ್ತಿ ತಡೆಯುವ ಕೆಲಸ ಸಮರ್ಪಕವಾಗಿ ಆಗದೇ ಹೋದರೆ, ಮುಂದಿನ ದಿನಗಳಲ್ಲಿ ಬೀದಿನಾಯಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿ ಆಹಾರದ ಸಮಸ್ಯೆ ದ್ವಿಗುಣವಾಗಿ  ಅನ್ಯ ಮಾರ್ಗವಿಲ್ಲದೇ ಬೀದಿನಾಯಿಗಳು ಮಾಂಸದಂಗಡಿಗಳ ಕೊಳೆತ ಮಾಂಸದ ತ್ಯಾಜ್ಯದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುತ್ತವೆ. ಬರೀ ಮಾಂಸವನ್ನೇ ತಿಂದು ಬದುಕುವ ಪ್ರಾಣಿಗಳು ಮೃಗತ್ವ ಪಡೆದುಕೊಳ್ಳುವುದು ಸ್ವಾಭಾವಿಕ. ಒಟ್ಟಾರೆ ವಿಪರೀತವಾಗಿರುವ ನಾಯಿಗಳ ಸಂಖ್ಯೆ ಕಡಿಮೆಯಾಗದೇ ಹೋದರೆ, ಮುಂದೊಂದು ದಿನ ಬೀದಿನಾಯಿಗಳೆಲ್ಲಾ ನರಭಕ್ಷ ತೋಳಗಳಾಗಿ ಬದಲಾಗುವುದರಲ್ಲಿ ಸಂಶಯವಿಲ್ಲಾ. 

 

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...