• Home
  • »
  • News
  • »
  • lifestyle
  • »
  • ಭಾಗ-6 | ರೀ, ಯಾಕ್ರೀ ನಿಮಗಿಷ್ಟೊಂದು ಕೋಪ ಬರುತ್ತೆ..?

ಭಾಗ-6 | ರೀ, ಯಾಕ್ರೀ ನಿಮಗಿಷ್ಟೊಂದು ಕೋಪ ಬರುತ್ತೆ..?

ಡಾ. ಆಚಾರ್ಯ ಶ್ರೀಧರ.

ಡಾ. ಆಚಾರ್ಯ ಶ್ರೀಧರ.

ಸಿಟ್ಟು ನಮ್ಮ ಮನಸ್ಸಿಗೆ ಹಿಡಿದ ಪಟ್ಟು ಇದ್ದ ಹಾಗೆ. ಆದರೆ, ಈ ಪಟ್ಟನ್ನು ಪ್ರತಿಪಟ್ಟಿನಿಂದಲೇ ತಡೆಯಬೇಕು. ಪ್ರತಿಪಟ್ಟು ಮನೆ, ಶಾಲೆ, ಒಡನಾಡಿತನ, ಅನುಕಂಪ, ಸಮಾಧಾನ ಮತ್ತು  ಆತ್ಮವಿಶ್ವಾಸದಂತಹ ಮನೋಸಾಮಾಜಿಕ ಕ್ರಿಯೆಗಳ ಮೂಲಕ ಮಾರ್ಪಡಿಸಿಕೊಳ್ಳಲು ಸಾಧ್ಯ. ಆದರೆ ಇದನ್ನು ತಜ್ಞರ ನೆರವಿನಿಂದ ಕಲಿಯುವುದೇ ಸೂಕ್ತ.

ಮುಂದೆ ಓದಿ ...
  • Share this:

ಕೋಪ ಮಾಡಿಕೊಳ್ಳದಿರುವವರು, ಕೋಪ ಬಾರದಿರುವವರನ್ನು ನಾನಂತೂ ಕಂಡಿಲ್ಲಾ. ಕೋಪವೇ ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣ. ಇಲ್ಲ ನಮ್ಮ ಮೇಲಿನ ಸಿಟ್ಟು ಅಥವಾ ಬೇರೊಬ್ಬರ ಮೇಲಿನ ಕೋಪ.

ನಾ ಬಲ್ಲ ಚಾಲಕನೊಬ್ಬ ವಾಹನ ನಡೆಸುವಾಗ ರಸ್ತೆಯ ಉಬ್ಬುಗಳನ್ನು ಕಂಡಾಗ ಮುಖ ಕೆಂಪೇರಿ ಅತಿಯಾಗಿ ಹಾರ್ನ್ಒತ್ತುತ್ತಿದ್ದ. ಹೀಗೆ ಕೋಪಕ್ಕೆ ಹಲವಾರು ಕಾರಣಗಳು ಇರುತ್ತವೆಯಾದರೂ ಅವು ವ್ಯಕ್ತಗೊಳ್ಳಲು ಒಂದು ವಿಷಯ, ವ್ಯಕ್ತಿ, ಸನ್ನಿವೇಶ ಅಥವಾ ಸ್ಥಿತಿ ಬೇಕು. ವಿಶೇಷವೆಂದರೇ, ಕೋಪ ಹೊರಬಂದ ನಂತರ ಎಲ್ಲವೂ ಆರಾಮ, ಸನ್ನಿವೇಶ ತಿಳಿಯಾಯಿತು ಎನ್ನುವ  ಭ್ರಮೆ. ಹೀಗಾಗಿ ಮನುಷ್ಯ ವರ್ತನೆಗಳಲ್ಲಿದು ಅತಿ ವಿಸ್ಮಯಕಾರಿ ವರ್ತನೆಯೇ ಹೌದು.

ಕೋಪ ಉಂಟಾಗುವ ಮುನ್ನ ಇರುವ ಮಾನಸಿಕತೆಯು ಕೋಪ ವ್ಯಕ್ತಗೊಂಡ ನಂತರ ಇರುವುದಿಲ್ಲ. ಆದರೂ ಕೋಪದ ಮೂಲ ಮತ್ತು ಕೋಪದ ಗುರಿಗಳೇ ಅನೇಕ ವೇಳೆ ಮನಸ್ಸು ಮತ್ತು ದೇಹದ ಶಕ್ತಿಯನ್ನು ಹೀರಿ ನಿತ್ರಾಣ ಉಂಟುಮಾಡಬಲ್ಲದು. ಮನೋವಿಶ್ಲೇಷಕ ಸಿಗ್ಮಂಡ್ ಫ್ರಾಯಿಡ್ ಪ್ರಕಾರ ದಮನೀಕರಿಸಲಾದ ಖಿನ್ನತೆಯೇ ಒಳಮುಖಗೊಂಡ ಕೋಪವಾಗಿರುತ್ತದೆ. ಈ ದೃಷ್ಟಿಯಿಂದಲೇ ಸಿಟ್ಟಿನ ನಿಜ ಕಾರಣ ನೇರವಾಗಿ ಗೋಚರವಾಗದಿರುವುದು. ಸಿಟ್ಟನ್ನು ಗುಟ್ಟಾಗಿಡದೆ ಹೊರತರಬೇಕೆನ್ನುವ ಅಭಿಪ್ರಾಯ ಬಹಳವಾಗಿ ಪ್ರಚಾರದಲ್ಲಿತ್ತು. ಸಿಟ್ಟಿನ ನೇರ ಪರಿಣಾಮವು ದೇಹದ ಕಾಯಿಲೆಗಳಿಗೂ ಕಾರಣವೆನ್ನುವ ಹಳೆಯ ನಂಬಿಕೆಯನ್ನು ಇದು ಬೆಂಬಲಿಸಿತ್ತು. ಸಿಟ್ಟಿನಿಂದಲೇ ರಕ್ತದೊತ್ತಡ ಹೆಚ್ಚಾಗುವುದು. ಸಿಟ್ಟನ್ನು ಹೊರಗೆಡವಿದಾಗ ಅದು ಕಡಿಮೆಯಾಗುವುದೆನ್ನುವ ವಿವಾದಾತ್ಮಕ ಸಂಶೋಧನಾಂಶಗಳೂ ಪ್ರಕಟಗೊಂಡಿವೆ.
ಹಾಗಿದರೇ ಸಿಟ್ಟಿಗೆ ಮೂಲ ಅಂತಹದ್ದೇನಾದರೂ ಇರಬಲ್ಲದಾ ಎಂದು ಕೇಳುವುದು ಸಾಮಾನ್ಯ.

ಸುಮ್ ಸುಮ್ಮನೆ ಸಿಟ್ಟು ಮಾಡ್ಕೋಬೇಡ ಅನ್ನೋ ಮಾತಂತೂ ದಿನಕ್ಕೊಮ್ಮೆಯಾದರೂ ಕಿವಿಗೆ ಬಿದ್ದೇಬೀಳುತ್ತದೆ. ಹಾಗೆ ನೋಡಿದರೆ, ನಮ್ಮೆಲರ ದಿನನಿತ್ಯದ ಬದುಕಿನಲ್ಲಿ ಸಿಟ್ಟು ಮಾಡಿಕೊಳ್ಳದಿರುವ ದಿನಗಳೇ ವಿರಳವೆನ್ನಬಹುದು. ಅಷ್ಟೇಕೆ, ಕೆಲವರಲ್ಲಂತೂ ಗಂಟೆಗೊಮ್ಮೆಯಾದರೂ ಸಿಟ್ಟು ಬಂದೇ ಬರುತ್ತದೆ. ಸಿಟ್ಟಿನಿಂದ ಉಂಟಾಗುವ ಅನಾಹುತಗಳಿಗೇನು ಕಡಿಮೆಯಿಲ್ಲ. ಇದು ಗೊತ್ತಿದ್ದರೂ ಅದನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ. ಇದೊಂದು ಆವೇಗವಾಗಿರುವುದರಿಂದಲೇ ಮನಸ್ಸಿಗೂ  ಸಿಗದಷ್ಟು ರಭಸದಿಂದ ಹರಿದುಬರುತ್ತದೆ. ಹೀಗಿದ್ದರೂ ಸಿಟ್ಟಿನ ಮೂಲ ತಿಳಿಯುವುದು ಕಷ್ಟವೇನಲ್ಲ, ಅದರೆ, ತಿಳಿಯುವುದಕ್ಕೆ ಅಗತ್ಯವಾದ ಶ್ರಮ ಮತ್ತ ತಂತ್ರ ಬೇಕಾಗುತ್ತದೆ. ಏಕೆಂದರೆ, ಸಿಟ್ಟು ಮನುಷ್ಯ ಸಂವೇದನೆಗಳಲ್ಲಿ ಒಂದಾಗಿರುವುದರಿಂದಲೂ ಮತ್ತು ಜೀವಿಯ ಸಹಜ ರಕ್ಷಣಾ ಲಕ್ಷಣವಾಗಿರುವುದರಿಂದಲೂ. ಹೀಗಾಗಿಯೇ ನಾಗರೀಕತೆಯೊಂದಿಗೆ ಇದು ಮಾರ್ಪಾಡಾಗಿದ್ದರೂ ನಾಶವಾಗಿದೆಯೇ ಹಾಗೆಯೇ ಸಾಗಿಬಂದಿದೆ.

ಇದನ್ನು ಓದಿ: ಭಾಗ - 5 | ಸ್ಪರ್ಶ ಸುಖಕ್ಕೆ ಪರ್ಯಾಯ ಸಾಧ್ಯವೇ?

ಬಾಲ್ಯದ ಹೊಂದಾಣಿಕೆಯ ದಿನಗಳಲ್ಲಿಯೇ ಇದರ ಸ್ವರೂಪ ವ್ಯಕ್ತಗೊಳ್ಳುತ್ತದೆ. ಅದಕ್ಕೆ ಹೇಳುವುದು-ಅವನಿಗೆ ಕೋಪ ಬರೋಹಾಗೆ ಮಾಡಬೇಡ; ಅವಳು ತುಂಬಾ ಸಿಟ್ಟಿನ ಸ್ವಭಾವದವಳು- ಎನ್ನುವಂತಹ  ಎಚ್ಚರಿಕೆಯ ಮಾತುಗಳು ಎಳೆಯತನದಿಂದಲೇ ಹಣೆಪಟ್ಟಿಯ ಹಾಗೆ ನಿಲ್ಲುತ್ತದೆ. ಇನ್ನು ದೂರ್ವಾಸ, ರುದ್ರಾ, ಕೆಂಗಣ್ಣಿನ ಕಾಳಿ, ಚಾಮುಂಡಿ ಇತ್ಯಾದಿ ಪೌರಾಣಿಕ  ಪಾತ್ರಗಳೂ ಬಿರುದುಗಳಾಗಿ ಅನ್ವಯಿಸಲಾಗುತ್ತದೆ. ಬಾಲ್ಯದಿಂದಲೇ ಆರಂಭವಾಗುವ ಕೋಪದ ರೀತಿಗಳು ಸಂಪೂರ್ಣವಾಗಿ ಕಣ್ಮರೆಯಾಗುವುದು ಅಪರೂಪ . ಆದರೂ ಇದರ ತೀವ್ರತೆಯನ್ನು ತಡೆಹಿಡಿಯಲು ಸಾಧ್ಯವಿದೆ.

ಸಿಟ್ಟು ಜನ್ಮಾರಭ್ಯದಿಂದಲೇ ಬಂದಿದ್ದರೂ ಅದರ ವಿತರಣೆ, ವರ್ಗಾವಣೆ ಮತ್ತು ನಿರ್ವಹಣೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸಿಟ್ಟು ನಮ್ಮ ಮನಸ್ಸಿಗೆ ಹಿಡಿದ ಪಟ್ಟು ಇದ್ದ ಹಾಗೆ. ಆದರೆ, ಈ ಪಟ್ಟನ್ನು ಪ್ರತಿಪಟ್ಟಿನಿಂದಲೇ ತಡೆಯಬೇಕು. ಪ್ರತಿಪಟ್ಟು ಮನೆ, ಶಾಲೆ, ಒಡನಾಡಿತನ, ಅನುಕಂಪ, ಸಮಾಧಾನ ಮತ್ತು  ಆತ್ಮವಿಶ್ವಾಸದಂತಹ ಮನೋಸಾಮಾಜಿಕ ಕ್ರಿಯೆಗಳ ಮೂಲಕ ಮಾರ್ಪಡಿಸಿಕೊಳ್ಳಲು ಸಾಧ್ಯ. ಆದರೆ ಇದನ್ನು ತಜ್ಞರ ನೆರವಿನಿಂದ ಕಲಿಯುವುದೇ ಸೂಕ್ತ.

ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.bruhanmati.com/

First published: