ಎಷ್ಟೋ ಜನರು ತಮ್ಮ ದೇಹದ ಅತಿಯಾದ ತೂಕದಿಂದ ಬೇಸತ್ತು ತೂಕ ಕಡಿಮೆ ಮಾಡಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಆದರೂ ಎಷ್ಟೋ ಜನರ ದೇಹದ ತೂಕ ಕಡಿಮೆ ಆಗುವುದೇ ಇಲ್ಲ. ನಾವು ಏನು ತಿನ್ನುವುದನ್ನು ಕಡಿಮೆ ಮಾಡಿದರೆ ನಮ್ಮ ದೇಹದ ತೂಕ ಕಡಿಮೆ ಆಗುತ್ತದೆ ಎನ್ನುವ ವಿಷಯವನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಸರಿಸಿ, ಏನು ಕುಡಿದರೆ ಮತ್ತು ಏನು ಕುಡಿಯುವುದನ್ನು ಬಿಟ್ಟರೆ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಎಂಬುದರ ಕಡೆಗೆ ಗಮನ ಹರಿಸೋಣ.
ಕೆಲವು ಪಾನೀಯಗಳು ನಿಮ್ಮನ್ನು ಹೆಚ್ಚು ಹೊತ್ತು ಹಸಿವಾಗದಂತೆ ನೋಡಿಕೊಂಡು ದಿನವಿಡೀ ಹೆಚ್ಚುವರಿ ಕ್ಯಾಲೋರಿಗಳನ್ನು ಸೇವಿಸುವುದನ್ನು ತಡೆಗಟ್ಟುತ್ತವೆ. ಕೆಲವು ಪಾನೀಯಗಳು ನಿಮ್ಮ ದೇಹದ ಒಳಗಿನ ಚಯಾಪಚಯ ಕ್ರಿಯೆ ಹೆಚ್ಚಿಸುವುದರಿಂದ ನೀವು ಕ್ಯಾಲೋರಿಗಳನ್ನು ಪರಿಣಾಮಕಾರಿಯಾಗಿ ಕಳೆದುಕೊಳ್ಳಬಹುದು.
ನೀವು ನಿಜವಾಗಿಯೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕೆಲವು ಅತ್ಯುತ್ತಮ ಪಾನೀಯಗಳು ಇಲ್ಲಿವೆ, ಅವುಗಳನ್ನು ಸೇವಿಸಿ ನೋಡಿ.
ನೀರು
ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ನೀರು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಸಾಕಷ್ಟು ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಹಾಗೆ ಅನ್ನಿಸಿ ನೀವು ಅತಿಯಾಗಿ ಆಹಾರ ಸೇವಿಸುವುದಿಲ್ಲ ಎಂದು ಆಪ್ಶನ್ ಕೇರ್ ಹೆಲ್ತ್ನ ಪೌಷ್ಟಿಕತಜ್ಞ ಕ್ರಿಸ್ಟಿನ್ ಗಿಲ್ಲೆಸ್ಪಿ ಹೇಳುತ್ತಾರೆ.
ವಾಸ್ತವವಾಗಿ, 2019ರಲ್ಲಿ ನಡೆದ ಒಂದು ವಿಮರ್ಶೆಯ ಪ್ರಕಾರ ನೀರಿನ ಸೇವನೆಯು ದೇಹದ ತೂಕದಲ್ಲಿ ಸರಾಸರಿ 5.15 ಪ್ರತಿಶತದಂತೆ ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಪ್ರತಿನಿತ್ಯ ಸುಮಾರು 2.2 ಲೀಟರ್ ನೀರನ್ನು ಕುಡಿದರೆ ದೇಹಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.
ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ ಮತ್ತು ಕೆಫೀನ್ ಇರುತ್ತದೆ ಮತ್ತು ಇದು ಚಯಾಪಚಯ ಕ್ರಿಯೆ ಹೆಚ್ಚಿಸುವ ಎರಡು ಬಹು ಮುಖ್ಯವಾದ ಅಂಶಗಳು ಎಂದು ಗಿಲ್ಲೆಸ್ಪಿ ಹೇಳುತ್ತಾರೆ. ಕೆಫೀನ್ ನಮ್ಮ ದೇಹದಲ್ಲಿರುವ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ವಾಸ್ತವವಾಗಿ, 2005ರಲ್ಲಿ ನಡೆಸಿದ ಒಂದು ಪರೀಕ್ಷೆಯಲ್ಲಿ ಅಧಿಕ ತೂಕ ಹೊಂದಿರುವವರು ಸತತವಾಗಿ ಮೂರು ತಿಂಗಳ ಕಾಲ 150 ಮಿಲಿ ಗ್ರಾಂ ಕೆಫೀನ್ನನ್ನು ಗ್ರೀನ್ ಟೀಯೊಂದಿಗೆ ಸೇರಿಸಿ ಸೇವಿಸಿರುವುದರಿಂದ ಹೆಚ್ಚಿನ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅವರ ಸೊಂಟದ ಸುತ್ತಳತೆಯಲ್ಲಿಯೂ ಗಮನಾರ್ಹವಾದ ಇಳಿಕೆ ಕಂಡುಬಂದಿದೆ.
ಬ್ಲ್ಯಾಕ್ ಟೀ
ಗ್ರೀನ್ ಟೀಯಂತೆಯೇ, ಬ್ಲ್ಯಾಕ್ ಟೀ ಸಹ ನಿಮ್ಮ ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡುತ್ತದೆ. 2018ರಲ್ಲಿ ನಡೆದ ವಿಮರ್ಶೆಯ ಪ್ರಕಾರ ಈ ಚಹಾದಲ್ಲಿರುವ ಪಾಲಿಫಿನಾಲ್ಗಳು ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಕಡಿಮೆಯಾಗುವಂತೆ ಮಾಡುತ್ತದೆ.
2014ರಲ್ಲಿ ನಡೆಸಿದ ಒಂದು ಚಿಕ್ಕ ಅಧ್ಯಯನದಲ್ಲಿ ಪ್ರತಿದಿನ ಮೂರು ಕಪ್ಗಳಷ್ಟು ಚಹಾವನ್ನು ಮೂರು ತಿಂಗಳುಗಳ ಕಾಲ ಸತತವಾಗಿ ಕುಡಿಯುವುದರಿಂದ ಭಾಗವಹಿಸಿದವರ ತೂಕ ಕಡಿಮೆ ಮಾಡಿರುವುದು ಕಂಡು ಬಂದಿದೆ.
ಬ್ಲ್ಯಾಕ್ ಕಾಫಿ
ಈ ಕಾಫಿಯನ್ನು ಕುಡಿಯುವುದರಿಂದ ದಿನವಿಡೀ ಹಸಿವು ಕಡಿಮೆಯಾಗುತ್ತದೆ. 2020ರಲ್ಲಿ ನಡೆದಂತಹ ಅಧ್ಯಯನವು 24 ವಾರಗಳವರೆಗೆ ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುವುದರಿಂದ ಅಧಿಕ ತೂಕ ಹೊಂದಿರುವ ವಯಸ್ಕರಲ್ಲಿ 4 ಪ್ರತಿಶತ ದೇಹದ ಕೊಬ್ಬಿನಾಂಶ ಕಡಿಮೆಯಾಗಿರುವುದು ಕಂಡುಬಂದಿದೆ.
ತೂಕ ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳಿಂದ ದೂರವಿರಿ
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಈ ಕೆಳಗಿನ ಪಾನೀಯಗಳನ್ನು ಸಾಧ್ಯವಾದಷ್ಟು ದೂರವಿಡುವುದು ಉತ್ತಮ.
ಮದ್ಯಪಾನ:ನೀವು ಮದ್ಯಪಾನ ಮಾಡಿದರೆ ಅದರಲ್ಲಿ ಅಧಿಕ ಕ್ಯಾಲೋರಿಗಳಿರುತ್ತವೆ. ಅತಿಯಾಗಿ ಕುಡಿಯುವುದರಿಂದ ನಿಮ್ಮ ಆಹಾರದ ಬಯಕೆಯನ್ನು ಪ್ರಚೋದಿಸುತ್ತದೆ. ಜೊತೆಗೆ, ಮದ್ಯಪಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ.
ಸೋಡಾ:ಸೋಡಾ ಕುಡಿಯುವುದರಿಂದ ಸ್ಥೂಲಕಾಯ ಉಂಟಾಗಬಹುದು, ಏಕೆಂದರೆ ಇದು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಡಯಟ್ ಸೋಡಾ ಕೂಡ ಸೊಂಟದ ಸುತ್ತಳತೆ ಮತ್ತು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.
ಹಣ್ಣಿನ ರಸ:ಹಣ್ಣಿನ ರಸಗಳಲ್ಲಿ ಹೆಚ್ಚಾಗಿ ಸಕ್ಕರೆಯೊಂದಿಗೆ ಪ್ಯಾಕ್ ಮಾಡಲಾಗಿರುತ್ತದೆ, ಆದ್ದರಿಂದ ಪ್ಯಾಕ್ನಲ್ಲಿರುವಂತಹ ಹಣ್ಣಿನ ರಸ ಕುಡಿಯುವುದನ್ನು ಕಡಿಮೆ ಮಾಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ