ಡ್ರೈ ಫುಟ್ಸ್​ ಸೇವಿಸಲು ಉತ್ತಮ ಸಮಯ ಯಾವುದು? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಇಲ್ಲಿದೆ ಮಾಹಿತಿ

ನಟ್ಸ್‌ನಲ್ಲಿ ಹೆಚ್ಚಿನ ನಾರಿನಾಂಶ, ವಿಟಮಿನ್, ಪೋಷಕಾಂಶಗಳು ಇದ್ದು, ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಮಾಂಸಖಂಡಗಳು ಹಾಗೂ ಕೀಲು-ಸಂಧಿಗಳಿಗೆ ಶಕ್ತಿ ತುಂಬುತ್ತದೆ.

Photo: Google

Photo: Google

  • Share this:

ಉತ್ತಮ ಆಹಾರ ಉತ್ತಮ ಆರೋಗ್ಯಕ್ಕೆ ಸೋಪಾನ ಎಂದು ಹಲವು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು ಪ್ರತಿಯೊಬ್ಬ ಮನುಷ್ಯನು ಸೊಪ್ಪು, ತರಕಾರಿ, ಹಣ್ಣುಗಳು, ಒಣಹಣ್ಣುಗಳು, ನಟ್ಸ್ ಸೇರಿದಂತೆ ಇತರೆ ಪ್ರೋಟೀನ್‍ಯುಕ್ತ ಆಹಾರ ಸೇವಿಸಬೇಕೆಂದು ವೈದ್ಯರ ಸಲಹೆ. ಅದರಲ್ಲೂ ಒಣ ಹಣ್ಣುಗಳು ಹಾಗೂ ನಟ್ಸ್ ತುಂಬಾ ಆರೋಗ್ಯಯುಕ್ತವಾದ ಆಹಾರ ಎಂದು ಹೇಳಲಾಗುತ್ತದೆ. ಡಿಕೆ ಪ್ರಕಾಶನದ ಹೀಲಿಂಗ್ ಫುಡ್ಸ್ ಎಂಬ ಪುಸ್ತಕದಲ್ಲಿ ಇದರ ಪ್ರಾಮುಖ್ಯತೆಯನ್ನು ಹೇಳಲಾಗಿದೆ. ನಟ್ಸ್‌ನಲ್ಲಿ ಹೆಚ್ಚಿನ ನಾರಿನಾಂಶ, ವಿಟಮಿನ್, ಪೋಷಕಾಂಶಗಳು ಇದ್ದು, ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಮಾಂಸಖಂಡಗಳು ಹಾಗೂ ಕೀಲು-ಸಂಧಿಗಳಿಗೆ ಶಕ್ತಿ ತುಂಬುತ್ತದೆ.


ಆದರೆ ಕೆಲವು ನಟ್ಸ್​ನಲ್ಲಿ ಕೊಬ್ಬಿನಾಂಶ ಹೆಚ್ಚಿಇರುತ್ತದೆ. ಇಂತಹಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವೂ ಬೀರುವುದಿಲ್ಲ. ಫಿಟ್‍ಪಾಸ್‍ನ ಪೌಷ್ಟಿಕತಜ್ಞ ಮೆಹರ್ ರಜಪೂತ್ ಅವರ ಪ್ರಕಾರ, “ನಟ್ಸ್​ನಲ್ಲಿ ಕಬ್ಬಿಣ, ಜೀವಸತ್ವಗಳು, ಖನಿಜಗಳು, ಕ್ಯಾಲ್ಸಿಯಂ, ಒಮೆಗಾ -3 ಕೊಬ್ಬಿನಾಮ್ಲಗಳು, ಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ತಾಮ್ರ, ಮ್ಯಾಂಗನೀಸ್, ಮೆಗ್ನೀಷಿಯಮ್, ಪೋಟ್ಯಾಷಿಯಮ್ ಮತ್ತು ಸತುವಿನಂತಹ ಹಲವಾರು ರೀತಿಯ ಮ್ಯಾಕ್ರೋ ಪೋಷಕಾಂಶಗಳಿವೆ. ಸಂಕ್ಷಿಪ್ತವಾಗಿ ಇವುಗಳನ್ನು ಶಕ್ತಿ ಉತ್ಪಾದಕಗಳು ಎಂದು ಕರೆಯಲಾಗುತ್ತದೆ. ಇವುಗಳು ಆರೋಗ್ಯ ವೃದ್ಧಿಗೆ ಸಹಾಯಕವಾಗಿವೆ. ಆದರೆ ಅವರಿಂದ ಗರಿಷ್ಠ ಮಟ್ಟದ ಪ್ರಯೋಜನಗಳನ್ನು ಪಡೆಯಲು ಪ್ರತಿದಿನ ಅವುಗಳನ್ನು ವಿವಿಧ ಹಂತಗಳಲ್ಲಿ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.


ನೀವು ನಟ್ಸ್‌ನಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬೇಕೆಂದರೆ ಬೆಳಗ್ಗೆ ಸೇವಿಸಬೇಕು. ತಿಂಡಿಯ ಜೊತೆಯಲ್ಲೇ ಇವುಗಳನ್ನು ಸೇವಿಸಿದರೆ, ದೇಹದಲ್ಲಿನ ಆಯಾಸವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಚಟುವಟಿಕೆಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.


ಪೌಷ್ಟಿಕತಜ್ಞ ಮೆಹರ್ ರಜಪೂತ್ ನೀಡುವ ಸಲಹೆಗಳೇನು?


ಬೆಳಗ್ಗೆ ಯಾವುದನ್ನು ಸೇವಿಸಬೇಕು?


ಪ್ರತಿದಿನ ಮುಂಜಾನೆ ಬಾದಾಮಿಯನ್ನು ಸೇವಿಸಬೇಕು. ಇದು ನಮ್ಮ ದೇಹಾರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹಲವು ಪೋಷಕಾಂಶಗಳನ್ನು ಹೊಂದಿರುವುದರಿಂದ ಇದನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.


ಸಂಜೆಗೆ ಯಾವ ನಟ್ಸ್ ಇರಲಿ?


ಸಂಜೆಯ ವೇಳೆ ಪಿಸ್ತಾ, ಗೋಡಂಬಿ ಹಾಗೂ ಶೇಂಗಾ ಸೇವಿಸುವುದು ಉತ್ತಮ. ನಿರಂತರವಾಗಿ ಕೆಲಸ ಮಾಡಲು ದೇಹಕ್ಕೆ ಶಕ್ತಿ ತುಂಬುವುದಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.


ರಾತ್ರಿ ವೇಳೆ ಯಾವುದಿರಲಿ?


ವಾಲ್‍ನಟ್ಸ್, ಒಣದ್ರಾಕ್ಷಿ ಮತ್ತು ಡೇಟ್ಸ್ ಅನ್ನು ರಾತ್ರಿ ವೇಳೆ ಸೇವಿಸಿ. ಅವು ಕರಗಬಲ್ಲ ನಾರಿನಂಶವನ್ನು ಹೊಂದಿರುತ್ತವೆ ಮತ್ತು ಜೀರ್ಣಕ್ರಿಯೆ ಹಾಗೂ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಅವುಗಳನ್ನು ಸೇವಿಸುವುದರಿಂದ ಮರುದಿನ ಹೊಟ್ಟೆ ಉಬ್ಬುವುದು ಅಥವಾ ಮಲಬದ್ಧತೆ ಸಮಸ್ಯೆಯಿಂದ ದೂರ ಇರಬಹುದು.


ಯಾವುದರಿಂದ ದೂರವಿರಬೇಕು?


ರಾತ್ರಿಯಲ್ಲಿ ಗೋಡಂಬಿಯಂತಹ ಹೆಚ್ಚು ರುಚಿಕರ ಮತ್ತು ಪೌಷ್ಟಿಕಾಂಶ ಇರುವ ನಟ್ಸ್ ಸೇವಿಸುವುದನ್ನು ತಪ್ಪಿಸಿ. ಇವು ನಿದ್ರೆಗೆ ಭಂಗ ತಂದು ಅಜೀರ್ಣಕ್ಕೆ ಕಾರಣವಾಗಬಹುದು. ಅಲ್ಲದೆ, ಎಣ್ಣೆಯಿಂದ ಹುರಿದ ಮತ್ತು ಚಾಕೊಲೇಟ್ ಲೇಪಿತ ನಟ್ಸ್‌ನಿಂದ ದೂರವಿರಿ.


ನಟ್ಸ್ ಪ್ರತಿದಿನ ಎಷ್ಟು ಪ್ರಮಾಣದಲ್ಲಿರಲಿ?


ಪ್ರತಿದಿನ ನಮ್ಮ ಅಂಗೈ ಮುಷ್ಟಿಯಷ್ಟು ನಟ್ಸ್ ಸೇವಿಸಬೇಕು. ಅದು ಎಲ್ಲ ರೀತಿಯ ನಟ್ಸ್ ಒಳಗೊಂಡಿರಬೇಕು. ಒಂದು ದಿನಕ್ಕೆ ಸರಿ ಸುಮಾರು 20-25 ನಟ್ಸ್ ಸೇವಿಸಿದರೆ ಒಳ್ಳೆಯದು. ಇವುಗಳನ್ನು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎಂದು ವಿಂಗಡಿಸಿಕೊಂಡು ಸೇವಿಸಬೇಕು. ಇದರಿಂದ ದೇಹಕ್ಕೆ ಉತ್ತಮ ಪ್ರಯೋಜನ ದಕ್ಕುವುದು.


Published by:Harshith AS
First published: