ಭಾಗ 7 | ನೋವು, ನೋವು, ನೋವು… ಸಹಿಸಲಾರದೀ ನೋವು!

ಡಾ. ಅ.ಶ್ರೀಧರ.

ಡಾ. ಅ.ಶ್ರೀಧರ.

ಮನೋವಿಶ್ಲೇಷಣೆಯ ಪಂಥದ ಸಂಸ್ಥಾಪಕನಾದ ಸಿಗ್ಮಂಡ್‌ ಫ್ರಾಯ್ಡ್‌ ಹಲ್ಲು ನೋವಿನ ಹಿಂಸೆಯನ್ನು ತಡೆದುಕೊಳ್ಳಲಾರದೇ ಅತಿಯಾಗಿ ಕೊಕೇನ್‌ ಸೇವಿಸುತ್ತಿದ್ದರು ಎನ್ನುವುದು. ಆದರೆ ಕೆಲವೊಂದು ನೋವಿನ ಮೇಲೆ ಮದ್ದಿನ ಪ್ರಭಾವವೂ ನಡೆಯುವುದಿಲ್ಲ ಎನ್ನುತ್ತವೆ ಆರೋಗ್ಯಮನೋವಿಜ್ಞಾನದ ಅಧ್ಯಯನಗಳು.

 • Share this:

  ನೋವು, ಶೂಲೆ, ಬೇನೆ ಎಂದಾಗ ಯಾರಿಗೆ ತಾನೇ ಅರ್ಥ ಆಗೋದಿಲ್ಲ? ಬಾಯಿಂದ ಸರಾಗವಾಗಿ ಹರಿದು ಬಂದುಬಿಡಬಲ್ಲ ಈ ಪದವು ವ್ಯಕ್ತಿ ಹಿತವೆನ್ನುವ ಮಾನಸಿಕ ಸುಸ್ಥಿತಿಯ ಕಟ್ಟಾ ವಿರೋಧಿ. ಆದುದರಿಂದಲೇ ಈ ಶತಮಾನವನ್ನು ʻʻಅರಿವಿಳಿಕೆಯ ಯುಗʼʼ ಅಂದರೆ ನೋವು ಶಮನಕಾರಿ ಮದ್ದುಗಳ ಅವಲಂಬನೆಯ ಶತಮಾನ ಎಂದು ಗುರುತಿಸುತ್ತವೆ ವೈದ್ಯವಲಯಗಳು.


  ಹಿಂದೊಮ್ಮೆ ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರದಂತೆ ನಾನಾ ವಿಧದ ನೋವಿನಿಂದ ಬಳಲುವವರ ಸಂಖ್ಯೆ ಸುಮಾರು ಹತ್ತುಕೋಟಿಯಷ್ಟು ವಯಸ್ಕರು ಇರುವುದು ತಿಳಿದುಬಂತು. ಇನ್ನು ನಮ್ಮ ದೇಶದ ಬಗ್ಗೆ ಹೇಳುವುದಾದರೇ ಅದೆಷ್ಟು ಕೋಟಿ ಜನರು ನೋವಿನೊಂದಿಗೆಯೇ ಇಡೀ ಬದುಕನ್ನು ಕಳೆಯುತ್ತಿರಬಹುದು. ನೋವೆನ್ನುವುದು ವ್ಯಕ್ತಿಯ ಮನೋಶಾರೀರಿಕ ಕ್ರಿಯೆ ಆಗಿರುವುದರಿಂದ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ವ್ಯಕ್ತಗೊಳ್ಳಬಲ್ಲ ಲಕ್ಷಣ ಹೊಂದಿರುತ್ತದೆ. ನೋವನ್ನು ಸಹಿಸಿಕೊಳ್ಳುವುದು, ತಡೆಗಟ್ಟುವುದು ಅಥವಾ ಇದರಿಂದ ಪರಾರಿಯಾಗುವ ಪ್ರಯತ್ನದಲ್ಲಿ ಜೀವಹಾನಿ ಮಾಡಿಕೊಂಡಿರುವುದೂ ಅಪರೂಪವಲ್ಲ.


  ಸಂಶೋಧನೆಯೊಂದರ ಪ್ರಕಾರ ಸಣ್ಣ ಮಕ್ಕಳು ಆಟವಾಡುವ ಸಮಯದಲ್ಲಿ 20 ನಿಮಿಷಗಳಿಗೊಮ್ಮೆ ನೋವಿರುವುದರ ಬಗ್ಗೆ ಮಾತಾಡುತ್ತಾರಂತೆ! ಅತಿ ಮುಖ್ಯವಾಗಿ ನೋವು ಅನಿವಾರ್ಯ ಮತ್ತು ಮನೋಶಾರೀರಿಕ ಸ್ವರೂಪದ್ದಾಗಿರುವುದೇ ಹೆಚ್ಚು.
  ಈಗಿನ ಕೊವಿಡ್-19 ವೈರಾಣುವಿನ ಸಾಂಕ್ರಾಮಿಕತೆಯ ನಡುವಿನಲ್ಲಿ ನೋವಿನಿಂದ ಬಳಲುತ್ತಿರುವವರು ನೋವು ನುಂಗಿಕೊಳ್ಳುವ ಪ್ರಯತ್ನಕ್ಕಾಗಿಯೇ ಅಗಾಧ ಮಾನಸಿಕ ಶಕ್ತಿಯನ್ನು ವಿತರಿಸುತ್ತಿರಬಹುದು. ನೋವನ್ನು ಹಂಚಿಕೊಳ್ಳುವುದೂ ಕಷ್ಟವೆನ್ನುವಂತಹ ದಿನಗಳಿರುವುದರಿಂದ ಮೂಕ ವೇದನೆಯೊಂದೇ ಸದ್ಯದ ಸುಲಭೋಪಾಯ ಎನ್ನುವಂತಾಗಿದೆ.


  ಅದರಲ್ಲಿಯೂ ಸಾಮಾನ್ಯವೆನ್ನುವಂತಹ ಹಲ್ಲು ನೋವು ಬಂದರಂತೂ ಸಾಕಪ್ಪಾ ಸಾಕು ಇದರ ಕಾಟ ಎನಿಸಿಬಿಡುತ್ತದೆ. ಈ ಮಾನಸಿಕ ಯಾತನೆಯು ಶಮನವಾಗಬೇಕೆಂದರೇ ದಂತ ವೈದ್ಯರ ಕುರ್ಚಿಯಲ್ಲಿ ಕುಳಿತು ಬಾಯಿ ತೆರೆಯಬೇಕಷ್ಟೆ. ನೋವಿನ ಕಾಟದಿಂದ ಇತರರಿಗೂ ಕಿರಿಕಿರಿ ಉಂಟುಮಾಡಿದಾಗ ವಾತ್ಸಲ್ಯದಿಂದ ಹೇಳುವ -ಬಾಯಿ ಮುಚ್ಕೊಂಡಿರಪ್ಪಾ ಕೊಂಚ ಸಮಯ- ಎನ್ನುವುದರ ತದ್ವಿರುದ್ಧದ ಮಾತು- ಬಾಯ್ತೆಗೆಯಪ್ಪಾ- ಎನ್ನುತ್ತಾರೆ ದಂತ ವೈದ್ಯರು. ನೋವಿನ ಮೂಲವನ್ನು ಗುರುತಿಸುವುದಕ್ಕೆ ಅವರು ಮಾತ್ರ ಸಮರ್ಥರಾಗಿದ್ದು ಶಮನ ಕ್ರಿಯೆಗಳನ್ನು ಕಂಡುಕೊಳ್ಳುವುದಕ್ಕೂ ನೆರವಾಗುತ್ತಾರೆ. ಈ ಸಮಯದಲ್ಲಿ ರೋಗ, ರುಜಿನಗಳಿಂದ ಶಾರೀರಿಕ ನೋವುಗಳು ಒಂದು ರೀತಿಯದ್ದಾಗಿದ್ದರೇ ಕೇವಲ ಹಲ್ಲಿನ ನೋವಿನಿಂದಲೇ ಒದ್ದಾಡುತ್ತಿರುವವರ ಸಂಖ್ಯೆ ದೊಡ್ಡದೇ ಇರಬಲ್ಲದು. ಏಕೆಂದರೆ ಹೆಚ್ಚಿನ ಸಮಯದಲ್ಲಿ ನೋವಿನ ತೀವ್ರತೆಗೆ ಮಾನಸಿಕ ದುಸ್ಥಿತಿಗಳೂ ಕಾರಣವಾಗಿರಬಲ್ಲದ್ದಾಗಿದ್ದು ಈಗಿರುವ ಸಾಮಾಜಿಕ ಸ್ಥಿತಿಗತಿಗಳು ಹಲ್ಲು ನೋವಿಗೆ ಮೂಲ ಪ್ರೇರಣೆಯೂ ಆಗಿರಬಲ್ಲದು.


  ಹಾಗೆಂದ ಮಾತ್ರಕ್ಕೆ ದಂತ ಸಮಸ್ಯೆಗಳೆಲ್ಲವು ಮಾನಸಿಕ ಕಾರಣಗಳಿಂದ ಆಗಿರುವುದು ಎನ್ನುವ ಮಾತಲ್ಲ. ಆದರೆ ಎಲ್ಲ ವಿಧದ ನಕಾರಾತ್ಮಕ ಮಾನಸಿಕ ಪ್ರತಿಕ್ರಿಯೆಗಳಿಗೂ ಇಂದಿನ ಪರಿಸರ ಪ್ರೇರಕ ಆಗಬಲ್ಲದು. ಈ ಸಮಯದಲ್ಲಿ ನನ್ನ ನೆನಪಿಗೆ ಬರುತ್ತಿರುವ ಒಂದು ಸಂಗತಿ ಎಂದರೆ ಮನೋವಿಶ್ಲೇಷಣೆಯ ಪಂಥದ ಸಂಸ್ಥಾಪಕನಾದ ಸಿಗ್ಮಂಡ್‌ ಫ್ರಾಯ್ಡ್‌ ಹಲ್ಲು ನೋವಿನ ಹಿಂಸೆಯನ್ನು ತಡೆದುಕೊಳ್ಳಲಾರದೇ ಅತಿಯಾಗಿ ಕೊಕೇನ್‌ ಸೇವಿಸುತ್ತಿದ್ದರು ಎನ್ನುವುದು. ಆದರೆ ಕೆಲವೊಂದು ನೋವಿನ ಮೇಲೆ ಮದ್ದಿನ ಪ್ರಭಾವವೂ ನಡೆಯುವುದಿಲ್ಲ ಎನ್ನುತ್ತವೆ ಆರೋಗ್ಯಮನೋವಿಜ್ಞಾನದ ಅಧ್ಯಯನಗಳು.


  ಬಹಳ ಮುಖ್ಯವಾಗಿ ನೋವು ಜೀವಿಯ ಸಹಜ ಕ್ರಿಯೆಯಾಗಿದ್ದು, ಮನುಷ್ಯರಲ್ಲಿ ಇದರ ಹಿಡಿತವು ಅಗಾಧವಾಗಿದ್ದು ವಿನೂತನ ಪರಿಹಾರದ ಮಾರ್ಗಗಳಿಗೂ ಕಾರಣವಾಗಿದೆ. ಹಾಗೇ ನೋಡಿದರೆ ನಾಗರಿಕತೆಯ ವೇಗದ ಮುನ್ನಡೆಗೆ, ಹೊಸ ಆವಿಷ್ಕಾರಗಳಿಗೆ ನೋವು ನಿವಾರಣೆಯ ಉದ್ದೇಶಗಳೂ ಸೇರಿಕೊಂಡಿರುತ್ತವೆ. ಅತಿ ಮುಖ್ಯವಾಗಿ ಆಹಾರ ಸೇವನೆಯು ಹಸಿವು ನೀಗಿಸುವುದಕ್ಕಿಂತಲೂ ಹೆಚ್ಚಾಗಿ ಮಾನಸಿಕ ತೃಪ್ತಿಯನ್ನೂ ಒದಗಿಸುತ್ತದೆ. ಕೊವಿಡ್-19ರ ಕಾರಣದಿಂದಾಗಿ ಸಾರ್ವತ್ರಿಕ ಸ್ವರೂಪದ ಚಟುವಟಿಕೆಗಳಿಗೆ ಬೀಗ ಜಡಿದಿರುವುದರಿಂದ ಮನೆಯಲ್ಲಿದ್ದಾಗ ರುಚಿಯ ಚಪಲ ಮತ್ತು ಬೇಸರ ಕಳಿಯುವ ನೆಪದಿಂದ ತಿನ್ನುವ ಬಯಕೆ ಹೆಚ್ಚಾಗಿರುವುದು. ಹೀಗಾದರೂ ಬೇಸರದಿಂದ ತಪ್ಪಸಿಕೊಳ್ಳಬೇಕೆಂದಿರುವವರಿಗೆ ದಂತ ಸಮಸ್ಯೆಗಳು ಬಂದರಂತೂ ಪರಿಹಾರ ಸಿಗುವುದು ಅಪರೂಪ. ಸರಕಾರಗಳ ದಂತ ವೈದ್ಯಕೀಯ ಸೌಲಭ್ಯದ ಮೇಲೂ ಕಡಿವಾಣ ಹೇರಿರುವುದು ದುರಂತವೇ ಸರಿ.


  ಇದನ್ನು ಓದಿ: ಭಾಗ-6 | ರೀ, ಯಾಕ್ರೀ ನಿಮಗಿಷ್ಟೊಂದು ಕೋಪ ಬರುತ್ತೆ..?


  ಕೋವಿಡ್‌ ವೈರಾಣುವಿನ ನಿಯಂತ್ರಣಕ್ಕೆ ಅನುಸರಿಸಬೇಕಾದ ಎಲ್ಲಾ ಎಚ್ಚರಿಕೆಯ ಕ್ರಮಗಳನ್ನು ರೋಗಿ ಮತ್ತು ವೈದ್ಯರಿಬ್ಬರೂ ಅನುಸರಿಸುವ ಕಠಿಣ ಮಾರ್ಗದರ್ಶನಗಳ ಮೂಲಕ ಹಲ್ಲು ನೋವನ್ನು ತಡೆಯಲಾರದೇ ಒದ್ದಾಡುತ್ತಿರುವವರ ಬಗ್ಗೆ ಕರುಣೆ ತೋರಿಸುವ ಸಮಯ ಇದಾಗಿದೆ. ಅದರಲ್ಲಿಯೂ ದಂತ ವೈದ್ಯ ಚಿಕಿತ್ಸೆಯು ಒಂದು ವಿಧದಲ್ಲಿ ಹಲ್ಲು ರೋಗದ ನಿವಾರಣೆ ಮತ್ತು ನೋವು ನಿರ್ವಹಣೆಗೆ ನೆರವಾಗುತ್ತದೆ. ನೋವಿನ ನಿಗ್ರಹ ಕ್ರಮದಲ್ಲಿ ಮನೋವಿಜ್ಞಾನದ ಪಾತ್ರವೂ ದೊಡ್ಡದು ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ಇನ್ನು, ನೋವು ನಿವಾರಣೆಯಲ್ಲಿ ಮನೋಚಿಕಿತ್ಸೆಗಳೂ ನೆರವಿಗೆ ಬರುವುದಂತೂ ಖಂಡಿತ, ಸಹಿಸಲಾಗದ ನೋವಿದ್ದ ಪಕ್ಷದಲ್ಲಿ ತಜ್ಞ ಮನೋಚಿಕಿತ್ಸಕರ ನೆರವು ಉಪಯುಕ್ತವಾಗಬಲ್ಲದು.


  ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ


  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.bruhanmati.com/

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು