ಭಾರತದಲ್ಲಿ (India) ದಿನೇ ದಿನೇ ಬೇಸಿಗೆಯ ಬೇಗೆ ಹೆಚ್ಚುತ್ತಿದೆ. ಬಿಸಿಲಿನ ಕಾವಿಗೆ ಜನ, ಪ್ರಾಣಿ (Animals), ಪಕ್ಷಿಗಳು (Birds) ಹೈರಾಣವಾಗುತ್ತಿವೆ. ದಿನದಿಂದ ದಿನಕ್ಕೆ ಕಾವು ಏರತೊಡಗಿದ್ದು, ಮನೆಬಿಟ್ಟು ಬಾರದಷ್ಟು ಬಿಸಿಲು ಸುಡುತ್ತಿದೆ. ದೇಶದಲ್ಲಿ ದಿನೇ ದಿನೇ ಬಿಸಿಲಿನ ಝಳ ಏರತೊಡಗಿದ್ದು, ದೇಶದ ಕೆಲವೆಡೆ ಬಿಸಿಲಿನ ತಾಪ 45 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ತಂಪು ಪಾನೀಯ (Cooldrinks), ಎಳನೀರಿನ ಮೊರೆ ಹೋಗುತ್ತಿದ್ದಾರೆ.
ಇನ್ನು ಬೆಂಗಳೂರು ನಗರದಲ್ಲಿಯೂ ಕೂಡ ತಾಪಮಾನದಲ್ಲಿ ಹೆಚ್ಚಳ ಕಂಡಿದ್ದು, ಕಳೆದೊಂದು ವಾರದಿಂದ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇದೆ.
ಬೆಂಗಳೂರಿನಲ್ಲಿ ತಾಪಮಾನ
ಬುಧವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇತ್ತು. ಗರಿಷ್ಠ ತಾಪಮಾನ ಗುರುವಾರ 35 ಡಿಗ್ರಿ ಸೆಲ್ಸಿಯಸ್, ಶುಕ್ರವಾರ 34 ಡಿಗ್ರಿ ಸೆಲ್ಸಿಯಸ್, ಶನಿವಾರ 33 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಇನ್ಮುಂದೆ ಮನೆಯಲ್ಲೇ ತಯಾರಿಸಿ ಬಿಯರ್, ಮಾರುಕಟ್ಟೆಗೆ ಬಂದಿದೆ ಪೌಡರ್!
ಈ ಸಂಬಂಧ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲಿ ಡಯೆಟ್ ಎನ್ನುವುದು ಮುಖ್ಯವಾಗುತ್ತದೆ. ಯಥೇಚ್ಛವಾಗಿ ನೀರು, ಮಜ್ಜಿಗೆ ಕುಡಿಯಬೇಕಾಗುತ್ತದೆ. ದೇಹದ ಉಷ್ಣಾಂಶ ಹೆಚ್ಚಿಸುವ, ಖಾರ ಭರಿತ, ಮಸಾಲೆ ಭರಿತ ಆಹಾರಗಳಿಂದ ದೂರ ಉಳಿದು, ತಂಪು ನೀಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಬಿಸಿಲಿನ ಬೇಗೆ ಹೆಚ್ಚಾದಂತೆ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದುಂಟು. ಹಾಗಾಗಿ ಇದನ್ನು ಸಮತೋಲನಗೊಳಿಸುವುದಾಗಿ ಹೆಚ್ಚು ಹೆಚ್ಚು ತರಕಾರಿಗಳು, ಸೊಪ್ಪುಗಳು, ಹಣ್ಣುಗಳನ್ನು ತಿನ್ನಬೇಕಾಗುತ್ತದೆ. ಸೌತೆಕಾಯಿ, ಕಲ್ಲಂಗಡಿ ಹಣ್ಣು, ಪಾಲಕ್ ತರಹದ ಸೊಪ್ಪುಗಳು, ಸ್ಟ್ರಾಬೆರಿ ಹೀಗೆ ದೇಹದಲ್ಲಿ ನೀರಿನ ಅಂಶ ಹೆಚ್ಚಿಸುವ ಆಹಾರಗಳನ್ನು, ನಿಂಬೆ ಹಣ್ಣಿನ ಜ್ಯೂಸ್, ಎಳನೀರು ಹೀಗೆ ತಂಪು ಪಾನೀಯಗಳನ್ನು ಸೇವಿಸಬೇಕಾಗುತ್ತದೆ.
ಈ ಎಲ್ಲದರ ಹೊರತಾಗಿ ದೇಹಕ್ಕೆ ತಂಪು ನೀಡುವ ಪಾನೀಯಗಳು, ಆಹಾರಗಳ ಮಾಹಿತಿ ಇಲ್ಲಿದೆ.
1. ಮೊಸರು ಬಜ್ಜಿ: ಇದು ಮೊಸರು, ಸೌತೆಕಾಯಿ ಮತ್ತು ಟೊಮ್ಯಾಟೋ, ಈರುಳ್ಳಿ ಹೀಗೆ ಅನೇಕ ತರಕಾರಿಗಳನ್ನು ಬಳಸಿ ಮಾಡಲಾಗುತ್ತದೆ. ಇದು ದೇಹವನ್ನು ತಂಪಾಗಿರಿಸುವುದಲ್ಲದೇ ಉಲ್ಲಾಸವನ್ನು ನೀಡುತ್ತದೆ.
2. ಮಜ್ಜಿಗೆ: ಮಜ್ಜಿಗೆಯೊಂದು ತಂಪು ಪಾನೀಯ. ಇದು ದೇಹದ ಉಷ್ಣಾಂಶವನ್ನು ಹೊರ ಹಾಕುವ ಲಕ್ಷಣವನ್ನು ಹೊಂದಿದ್ದು, ಇದು ಭಾರತದ ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಕೂಡ ಬಿಸಿಲಿನ ಬೇಗೆಯಲ್ಲಿ ತಂಪುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
3. ಲಸ್ಸಿ: ಇದು ಮೊಸರು ಮತ್ತು ಸಕ್ಕರೆ ಅಥವಾ ಬೆಲ್ಲ, ಉಪ್ಪು ಈ ಎಲ್ಲಾ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಿಸಿಲಿನಲ್ಲಿ ದೇಹಕ್ಕೆ ತಂಪೆರೆಯುತ್ತದೆ.
4. ಹಣ್ಣುಗಳು: ಭಾರತದಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ವಿವಿಧ ರೀತಿಯ ಹಣ್ಣುಗಳು ಮಾರುಕಟ್ಟೆಗೆ ಈಗಾಗಲೇ ಲಗ್ಗೆಇಟ್ಟಿವೆ. ಮಾವಿನಹಣ್ಣುಗಳು, ಕಲ್ಲಂಗಡಿಗಳು, ಖರಬೂಜ ಮತ್ತು ಲಿಚಿಗಳನ್ನು ಯಥೇಚ್ಛವಾಗಿ ತಿನ್ನುವ ಮೂಲಕ ಉಷ್ಣಾಂಶವನ್ನು ನಿಯಂತ್ರಿಸಬಹುದು.
5. ಸಲಾಡ್‌ಗಳು: ಭಾರತೀಯ ಪಾಕಪದ್ಧತಿಯಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಬಳಸಿ ಕೆಲವು ಸಲಾಡ್ ಮಾಡಲಾಗುತ್ತದೆ. ಇವು ಹೊಟ್ಟೆ ತುಂಬಿಸುವುದರ ಜೊತೆಗೆ ದೇಹಕ್ಕೆ ಬೇಕಾದ ಪ್ರೋಟೀನ್ ನೀಡುವುದರ ಜೊತೆಗೆ ಆಯಾಸವಾಗದಂತೆ ನೋಡಿಕೊಳ್ಳುತ್ತದೆ.
6. ಎಳನೀರು: ಇದನ್ನು ಭಾರತದಲ್ಲಿ ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಯಥೇಚ್ಛವಾಗಿ ಕುಡಿಯುತ್ತಾರೆ. ಕೆಲವರು ಇಂತಹ ಸಮಯದಲ್ಲಿ ಎಳನೀರಿಗೆ ನಿಂಬೆಹಣ್ಣಿನ ರಸ ಹಾಕಿಕೊಂಡು ಕುಡಿಯುವುದುಂಟು. ಯಾಕೆಂದರೆ ಇದು ನೈಸರ್ಗಿಕ ಹೈಡ್ರೇಟರ್ ಮತ್ತು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಬೇಸಿಗೆಯ ದಿನದಲ್ಲಿ ಯಾವ ರೀತಿಯ ಆಹಾರಗಳಿಂದ ದೂರವಿರಬೇಕು?
1. ಮಸಾಲೆಯುಕ್ತ ಆಹಾರಗಳು: ಚೆಕ್ಕೆ, ಲವಂಗ, ದಾಲ್ಚಿನ್ನಿ ಹೀಗೆ ಮಸಾಲೆಗಳನ್ನು ಬಳಸಿ ತಯಾರಿಸಿದ ಆಹಾರಗಳಿಂದ ಬೇಸಿಗೆ ಸಮಯದಲ್ಲಿ ದೂರವಿರುವುದು ಒಳ್ಳೆಯದು. ಯಾಕೆಂದರೆ ಮಸಾಲೆಯುಕ್ತ ಆಹಾರಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
2. ಕೊಬ್ಬಿನಾಂಶಭರಿತ ಆಹಾರಗಳು: ಹೆಚ್ಚಿನ ಕೊಬ್ಬು ಮತ್ತು ಪ್ರೋಟೀನ್ ಭರಿತ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಜೊತೆಗೆ ಆಲಸ್ಯತನವನ್ನು ಹೆಚ್ಚಿಸುತ್ತದೆ.
3. ಕೆಫೀನ್ ಮತ್ತು ಆಲ್ಕೋಹಾಲ್: ಕೆಫೀನ್ ಮತ್ತು ಆಲ್ಕೋಹಾಲ್ ಎರಡೂ ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುವ ಸಂಭವವಿರುತ್ತದೆ. ಶಾಖದ ಅಲೆಯ ಸಮಯದಲ್ಲಿ ಈ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸುವುದು ಅಥವಾ ಮಿತವಾಗಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
4. ಸಂಸ್ಕರಿತ ಮತ್ತು ಉಪ್ಪು ಹೆಚ್ಚಳವಿರುವ ಆಹಾರಗಳು: ಇವು ದೇಹದಲ್ಲಿನ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಇಂತಹ ಆಹಾರದಿಂದ ದೂರವಿರುವುದೇ ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ