ಹೆಚ್ಚಾದ ತೂಕವನ್ನು(Over Weight) ಕಳೆದುಕೊಳ್ಳುವುದು ಎಲ್ಲರ ಕನಸು(Dream). ಆದ್ರೆ ಆ ಕನಸು ನನಸು ಮಾಡೋಕೆ ಸಾಕಷ್ಟು ಕಷ್ಟ ಪಡಬೇಕು. ಯಾಕೆಂದ್ರೆ ಒಮ್ಮೆ ಏರಿಕೆಯಾದ ತೂಕ ಇಳಿಕೆಯಾಗೋದಿಕ್ಕೆ ತುಂಬಾ ಶ್ರಮ ಕೇಳುತ್ತೆ. ಅದರಲ್ಲೂ ಮುಖ್ಯವಾಗಿ ಕಡಿಮೆ ಪ್ರಮಾಣದ ಪೌಷ್ಠಿಕಾಂಶಯುಕ್ತ ಆಹಾರವನ್ನು ತೆಗೆದುಕೊಂಡು, ಹೆಚ್ಚಿನ ಪ್ರಮಾಣದ ದೈಹಿಕ ಚಟುವಟಿಕೆ(Physical Activity) ಮಾಡಬೇಕು ಅನ್ನೋದು ತಿಳಿದಿರುವ ಸಂಗತಿಯೇ.
ಪೌಷ್ಠಿಕ ತಜ್ಞರಾದ ಅಂಜಲಿ ಮುಖರ್ಜಿ ಅವರು ಆಗಾಗ ತೂಕ ಇಳಿಕೆಯ ಬಗ್ಗೆ, ಆರೋಗ್ಯಕರ ಅಭ್ಯಾಸಗಳ ಬಗ್ಗೆ, ಪೌಷ್ಠಿಕ ಆಹಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ತಾನೇ ಇರ್ತಾರೆ. ಇತ್ತೀಚಿಗೆ ಕೂಡ ಇನ್ ಸ್ಟಾಗ್ರಾಂ ನಲ್ಲಿ ತೂಕ ಇಳಿಕೆಯ ಬಗ್ಗೆ ಕೆಲವಷ್ಟು ಟಿಪ್ಸ್ ನೀಡಿದ್ದಾರೆ.
ತೂಕ ನಷ್ಟದ ವಿಚಾರಕ್ಕೆ ಬಂದಾಗ ನೀವು ಎಷ್ಟು ಪ್ರಮಾಣದ ಆಹಾರವನ್ನು ಎಷ್ಟು ಬಾರಿ ತಿನ್ನುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಅಲ್ಲದೇ ತೂಕ ಮತ್ತು ಕೊಬ್ಬನ್ನು ಕಳೆದುಕೊಳ್ಳಲು ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನೀವು ಬರ್ನ್ ಮಾಡಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಇದನ್ನು ಆಹಾರ ಸೇವನೆಯ ಮೇಲೆ ನಿಯಂತ್ರಣ ಹೊಂದಿದ್ದಾಗ ಹಾಗೂ ಸರಿಯಾದ, ಚಿಕ್ಕ ಚಿಕ್ಕ ಊಟದ ಮೂಲಕ ಇದನ್ನು ಸಾಧಿಸಬಹುದು ಎಂದು ಅಂಜಲಿ ಮುಖರ್ಜಿ ಹೇಳುತ್ತಾರೆ.
ನೀವು ಒಮ್ಮೆಲೇ ಹೆಚ್ಚು ಊಟ- ತಿಂಡಿ ಮಾಡುವುದಕ್ಕಿಂತ ಆಗಾಗ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು ಅಂತ ಹೇಳಲಾಗುತ್ತದೆ. ಇದರಿಂದ ಜೀರ್ಣಕ್ರಿಯೆಯೂ ಚೆನ್ನಾಗಿ ಆಗುತ್ತದೆ. ಜೊತೆಗೆ ಹಸಿವಾಗದಂತೆಯೂ ತಡೆಯುತ್ತದೆ. ಇದು ನಿಮ್ಮನ್ನು ಇನ್ನಷ್ಟು ಆಕ್ಟಿವ್ ಆಗಿ ಇಡಲು ಸಹಾಯ ಮಾಡುತ್ತದೆ. ಅಲ್ಲದೇ ಹೀಗೆ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಆಹಾರ ತೆಗೆದುಕೊಂಡರೆ ಅದು ನಿಮ್ಮ ಕೊಲೆಸ್ಟ್ರಾಲ್ ಮತ್ತು ಇನ್ಸುಲಿನ್ ಉತ್ಪಾದನೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Banana Flower: ಡಯಾಬಿಟಿಸ್ನಿಂದ ಕ್ಯಾನ್ಸರ್ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ
ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ತೂಕ ಇಳಿಕೆಗಾಗಿ 8 ಮಿನಿ ಊಟಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
1) ಬಾದಾಮಿಯೊಂದಿಗೆ 1 ಕಪ್ ಸೋಯಾ ಹಾಲನ್ನು ಸೇವಿಸುವುದು.
2) ಒಂದು ಸ್ಲೈಸ್ ವೀಟ್ ಬ್ರೆಡ್ ಗೆ ಚಿಕನ್, ಸೌತೇಕಾಯಿ, ಟೊಮ್ಯಾಟೋ ಅಥವಾ ಪನ್ನೀರ್ ಅನ್ನು ಸೇರಿಸಿ ಅರ್ಧ ಸ್ಯಾಂಡ್ ವಿಚ್ ತಯಾರಿಸಿಕೊಂಡು ತಿನ್ನಿ.
3) ಒಂದು ಬೌಲ್ ಮೊಳಕೆಯೊಡೆದ ಹೆಸರು ಕಾಳಿನ ಸಲಾಡ್ ತಿನ್ನಬಹುದು.
4) 1:1 ಅನುಪಾತದಲ್ಲಿ ಕಡಲೆ ಹಾಗೂ ಒಂದು ಹಿಡಿ ಕಡಲೆಕಾಯಿಯನ್ನು ಸೇವಿಸಿ.
5) ನೀವು ರೊಟ್ಟಿಗಳನ್ನು ತಿನ್ನುತ್ತಿದ್ದರೆ ಅದನ್ನು ವೀಟ್ ಬ್ರಾನ್ (ಗೋಧಿ ಹೊಟ್ಟು) ರೊಟ್ಟಿಗಳಿಗೆ ಬದಲಾಯಿಸಿಕೊಳ್ಳಿ. ಜೊತೆಗೆ ನೀವು ಮೊದಲು ತಿನ್ನುತ್ತಿದ್ದ ಪ್ರಮಾಣದ ಅರ್ಧದಷ್ಟು ಮಾತ್ರ ತಿನ್ನಿ.
6) 1 ಟೋಸ್ಟ್ ಜೊತೆಗೆ 2 ಮೊಟ್ಟೆಯ ಬಿಳಿಭಾಗದ ಆಮ್ಲೆಟ್ ಅಥವಾ ಒಂದು ಪೂರ್ಣ ಮೊಟ್ಟೆ ಆಮ್ಲೆಟ್.
7) ಸೇಬು, ಕಿತ್ತಳೆ , 20 ಚೆರ್ರಿ ಹಣ್ಣು ಹೀಗೆ ಯಾವುದಾದರೂ ಒಂದು ಹಣ್ಣು ಅಥವಾ 1 ಬೌಲ್ ಕಲ್ಲಂಗಡಿ ಹಣ್ಣು.
8) ಸಲಾಡ್ ಜೊತೆಗೆ ದಾಲ್ ಅಥವಾ ಮೊಸರಿನ ಬೌಲ್.
ಇದರ ಜೊತೆಗೆ ಪ್ರತಿ ಮಿನಿ ಊಟದ ನಡುವೆ 3-ಗಂಟೆಗಳ ಅಂತರವಿರಬೇಕು ಎಂದು ಅವರು ಶಿಫಾರಸು ಮಾಡುತ್ತಾರೆ. ಜೊತೆಗೆ ಒಂದು ದಿನದ ಊಟವಾಗಿ ನೀವು ಮೇಲೆ ಹೇಳಲಾಗಿರುವುದರಲ್ಲಿ ಯಾವುದಾದರೂ 6 ಅನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅಂಜಲಿ ಮುಖರ್ಜಿ ಹೇಳುತ್ತಾರೆ.
ಒಟ್ಟಾರೆ, ತೂಕ ನಷ್ಟಕ್ಕೆ ಹಲವಾರು ವಿಧಾನಗಳಿದ್ದರೂ ಹೀಗೆ ಚಿಕ್ಕ ಚಿಕ್ಕ ಊಟಗಳನ್ನು ಮಾಡೋದ್ರಿಂದ ನಿಮಗೆ ಹಸಿದುಕೊಂಡಿರುವ ಭಾವನೆ ಅಷ್ಟಾಗಿ ಬರುವುದಿಲ್ಲ. ಹಾಗಾಗಿ ಎನರ್ಜೆಟಿಕ್ ಆಗಿಯೂ ಇರಬಹುದು. ಅಲ್ಲದೇ ಸಾಕಷ್ಟು ವೆರೈಟಿ ತಿನ್ನೋದ್ರ ಖುಷಿಯನ್ನೂ ಅನುಭವಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ