ಸ್ಥೂಲಕಾಯ ಸಮಸ್ಯೆಗೆ ಬ್ಯಾರಿಯಾಟ್ರಿಕ್ ಸರ್ಜರಿ ಎಂಬ ಬ್ರಹ್ಮಾಸ್ತ್ರ..!

ಹೊಟ್ಟೆಯ ಚೀಲದ ಗಾತ್ರ ಕುಗ್ಗಿಸಿ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಂತೆ ನಿರ್ಬಂಧಿಸುವ ಮೂಲಕ ತೂಕ, ಮಧುಮೇಹದ ಅಡ್ಡಪರಿಣಾಮಗಳಿಂದ ಉಂಟಾಗುವ ಹೃದಯ ಸಂಬಂಧಿತ ತೊಂದರೆಗಳನ್ನು ಈ ಚಿಕಿತ್ಸೆ ನಿಯಂತ್ರಿಸುತ್ತದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಕೂಡ ಈ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದು, ಸಾಮಾನ್ಯ ಜನರಲ್ಲಿ ಕೂಡ ಆಸಕ್ತಿ ಹುಟ್ಟಿಸಿದೆ.

news18
Updated:July 31, 2019, 6:10 PM IST
ಸ್ಥೂಲಕಾಯ ಸಮಸ್ಯೆಗೆ ಬ್ಯಾರಿಯಾಟ್ರಿಕ್ ಸರ್ಜರಿ ಎಂಬ ಬ್ರಹ್ಮಾಸ್ತ್ರ..!
ಸಾಂದರ್ಭಿಕ ಚಿತ್ರ
  • News18
  • Last Updated: July 31, 2019, 6:10 PM IST
  • Share this:
ಪ್ರಸಿದ್ಧ ಗಾಯಕರಾದ ಅದ್ನಾನ್‌ ಸಮಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಫುಟ್ಬಾಲ್‌ ಲೋಕದ ದಂತಕಥೆ ಡಿಯಾಗೋ ಮರಡೋನಾ, ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಸ್ಥೂಲಕಾಯ ಸಮಸ್ಯೆಯಿಂದ ನಡೆದಾಡಲು ಕಷ್ಟಪಡುತ್ತಿದ್ದರು. ಆದರೆ, ಈಗ ಅವರೆಲ್ಲಾ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಈ ಬದಲಾವಣೆಗೆ ಒಂದು ಸರಳ ಶಸ್ತ್ರಚಿಕಿತ್ಸೆ ಕಾರಣವಾಗಿದೆ. ಆ ಶಸ್ತ್ರಚಿಕಿತ್ಸೆಯೇ ಬ್ಯಾರಿಯಾಟ್ರಿಕ್‌.

ಹೌದು, ಪುರುಷ, ಮಹಿಳೆ, ಮಕ್ಕಳೆನ್ನದೇ ಸರ್ವರನ್ನೂ ಸ್ಥೂಲಕಾಯ ಕಾಡುತ್ತಿದೆ. ಜಿಮ್‌, ವ್ಯಾಯಾಮ, ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸಿದರೂ ದೇಹದಲ್ಲಿರುವ ಬೊಜ್ಜು ಕರಗುತ್ತದೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಆದರೆ, ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮೂಲಕ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಬಹುದು ಎಂಬುದು ಸಾಬೀತಾಗಿದೆ.

ಹೊಟ್ಟೆಯ ಚೀಲದ ಗಾತ್ರ ಕುಗ್ಗಿಸಿ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಂತೆ ನಿರ್ಬಂಧಿಸುವ ಮೂಲಕ ತೂಕ, ಮಧುಮೇಹದ ಅಡ್ಡಪರಿಣಾಮಗಳಿಂದ ಉಂಟಾಗುವ ಹೃದಯ ಸಂಬಂಧಿತ ತೊಂದರೆಗಳನ್ನು ಈ ಚಿಕಿತ್ಸೆ ನಿಯಂತ್ರಿಸುತ್ತದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಕೂಡ ಈ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದು, ಸಾಮಾನ್ಯ ಜನರಲ್ಲಿ ಕೂಡ ಆಸಕ್ತಿ ಹುಟ್ಟಿಸಿದೆ.

ಸ್ಥೂಲಕಾಯ ಸಮಸ್ಯೆ: ಜಾಗತಿಕವಾಗಿ ಸ್ಥೂಲಕಾಯ ಒಂದು ಸಮಸ್ಯೆಯಾಗಿಬಿಟ್ಟಿದೆ. ವಿಪರೀತ ಜಂಕ್‌ಫುಡ್‌, ವ್ಯಾಯಾಮರಹಿತ ಜೀವನಶೈಲಿಯಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಿ ದೇಹಕ್ಕೆ ವಿಕಾರ ರೂಪ ನೀಡುತ್ತದೆ. ದೇಶದಲ್ಲಿ ಶೇ.30ಕ್ಕಿಂತ ಹೆಚ್ಚು ಪುರುಷರು, ಶೇ. 40ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಶೇ. 16ಕ್ಕಿಂತ ಹೆಚ್ಚು ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆಯ ಜೊತೆಗೆ ಮಾನಸಿಕ ಖಿನ್ನತೆಯನ್ನು ಸ್ಥೂಲಕಾಯ ಹುಟ್ಟುಹಾಕುತ್ತದೆ. ತೂಕ ಇಳಿಸುವುದೇ ಈಗ ದೊಡ್ಡ ಕೆಲಸವಾಗಿಬಿಟ್ಟಿದೆ. ಸ್ಥೂಲಕಾಯ ಚಿಕಿತ್ಸೆಗಾಗಿ ಡಯಟ್ ಎಂಡ್ ನ್ಯೂಟ್ರಿಷಿಯನ್ ಎಂಬ ಪ್ರತ್ಯೇಕ ವಿಭಾಗ ಕೂಡ ಪ್ರಾರಂಭವಾಗಿದೆ. ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸಿಯೂ ತೂಕ ಇಳಿಯುವುದಿಲ್ಲ ಅಂತ ಕೆಲವರು ಸುಮ್ಮನಾದರೆ, ಇನ್ನು ಕೆಲವರು ಪ್ರಯತ್ನ ಪಡದೆಯೇ ಸುಮ್ಮನಾಗಿಬಿಡುತ್ತಾರೆ. ಇದಕ್ಕೆಲ್ಲಾ ಬ್ಯಾರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ಪರಿಹಾರ ನೀಡುತ್ತದೆ.

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯೇ ಏಕೆ..?

ಸುಲಭವಾಗಿ ತೂಕ ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮೊದಲ ಆಯ್ಕೆಯಾಗುತ್ತದೆ. ಇದಷ್ಟೇ ಅಲ್ಲದೇ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ರೋಗಗಳನ್ನು ಸಹ ಗುಣಪಡಿಸಬಹುದು.  ಇತರೆ ವಿಧಾನಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ನೀವು ವಿಫಲರಾಗಿದ್ದರೆ,  ಮತ್ತು ನಿಮ್ಮ ಲೈಫ್ ಸ್ಟೈಲ್‌ನ್ನು ಬದಲಾಯಿಸಿಕೊಳ್ಳಲು ಬದ್ಧರಾಗಿದ್ದರೆ ನೀವು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಬಹುದಾಗಿದೆ. ಇದಲ್ಲದೇ ನೀವು ತಿನ್ನುವ ಆಹಾರದ ಪ್ರಮಾಣವನ್ನು ಈ ಶಸ್ತ್ರಚಿಕಿತ್ಸೆ ನಿರ್ಬಂಧಿಸುವುದರಿಂದ ಖಚಿತವಾಗಿ ತೂಕ ಕಡಿಮೆಯಾಗುತ್ತದೆ.

ಶಸ್ತ್ರಚಿಕಿತ್ಸೆಯ ಕ್ರಮ ಹೇಗೆ..? ಸುಧಾರಿತ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಅನುಕೂಲಕಾರಿಯಾಗಿದ್ದು, ಕಡಿಮೆ ನೋವು, ವೇಗದ ಚೇತರಿಕೆ ಮತ್ತು ಗಾಯದ ಸಮಸ್ಯೆಗಳು ಕೂಡ ಈ ವಿಧಾನದಲ್ಲಿ ಕಡಿಮೆ. ಬ್ಯಾರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಲ್ಲಿ 3 ವಿಧಾನಗಳಿದ್ದು, ಲ್ಯಾಪರೊಸ್ಕೋಪಿಕ್‌ ಸ್ಲೀವ್‌, ಲ್ಯಾಪರೊಸ್ಕೋಪಿಕ್ ರೂಕ್ಸ್-ಎನ್-ವೈ ಗ್ಯಾಸ್ಟ್ರಿಕ್ ಬೈಪಾಸ್, ಸಣ್ಣ ಗ್ಯಾಸ್ಟ್ರಿಕ್ ಬೈಪಾಸ್‌ಗಳಾಗಿವೆ.

ಲ್ಯಾಪರೊಸ್ಕೋಪಿಕ್ ಸ್ಲೀವ್ 

ಸ್ಟ್ಯಾಪ್ಲಿಂಗ್ ಮಾಡುವ ಮೂಲಕ ಹೊಟ್ಟೆಯನ್ನು ಉದ್ದವಾದ ತೆಳುವಾದ ಕೊಳವೆಯಾಗಿ ಪರಿವರ್ತಿಸಲಾಗುತ್ತದೆ. ಸಣ್ಣ ಕರುಳು ಹಾಗೂ ಗಂಟಲಿನ ನಡುವಿನ ನೈಸರ್ಗಿಕ ನಿರಂತರತೆ ಕಾಪಾಡಿಕೊಂಡು, ಹೊಟ್ಟೆಯ ಅನಗತ್ಯ ಭಾಗವನ್ನು ತೆಗೆದುಹಾಕಲಾಗುತ್ತದೆ.

ರೂಕ್ಸ್-ಎನ್-ವೈ ಗ್ಯಾಸ್ಟ್ರಿಕ್ ಬೈಪಾಸ್ 

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಈ ಶಸ್ತ್ರಚಿಕಿತ್ಸೆಯಲ್ಲಿ ಬದಲಾಯಿಸಲಾಗುತ್ತದೆ. ಸಣ್ಣ ಹೊಟ್ಟೆಯ ಪೌಚ್ ಸೃಷ್ಟಿಸಲು ಇಲ್ಲಿ ಸ್ಟ್ಯಾಪ್ಲಿಂಗ್ ಮಾಡಲಾಗುತ್ತದೆ. ಇದರಿಂದ ಸೇವಿಸುವ ಆಹಾರದ ಪ್ರಮಾಣದ ಮೇಲೆ ನಿರ್ಬಂಧ ಹೇರಿದಂತಾಗುತ್ತದೆ. ಸಣ್ಣ ಕರುಳಿನ ಒಂದು ಭಾಗ ಬೈಪಾಸ್ ಮಾಡಲಾಗುವುದರಿಂದ ಜೀರ್ಣಕಾರಿ ದ್ರವದ ಜೊತೆ ಆಹಾರ ಸೇರುವುದು ವಿಳಂಬವಾಗಿ ಹೀರಿಕೊಳ್ಳುವ ಕ್ರಿಯೆ ಕಡಿಮೆಯಾಗುತ್ತದೆ.

ಸಣ್ಣ ಗ್ಯಾಸ್ಟ್ರಿಕ್ ಬೈಪಾಸ್ 

ಇದು ರೂಕ್ಸ್-ಎನ್-ವೈ ಬೈಪಾಸ್‌ಗೆ ಪರ್ಯಾಯವಾದ ಗ್ಯಾಸ್ಟ್ರಿಕ್ ಬೈಪಾಸ್ ವಿಧಾನವಾಗಿದೆ. ರಕ್ತನಾಳಗಳ ನಡುವೆ ಸಂಪರ್ಕ ಸಾಧಿಸುವ ಶಸ್ತ್ರಚಿಕಿತ್ಸೆಯನ್ನು ತಾಂತ್ರಿಕವಾಗಿ ಸುಲಭವಾದದ್ದೆಂದು ಪರಿಗಣಿಸಲಾಗಿದೆ. ಪರಿಷ್ಕರಣೆಗೆ ಹಾಗೂ ತೂಕ ಕಡಿಮೆ ಮಾಡಲು ಸುಲಭವಾಗಿರುವುದರಿಂದ ಈ ವಿಧಾನವನ್ನು ವೈದ್ಯರು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ.

ಅಪಾಯಗಳು ಇವೆಯಾ..? 

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆಯಲ್ಲಿ ಕನಿಷ್ಠ 2-3 ದಿನಗಳವರೆಗೆ ಇರಬೇಕಾಗುತ್ತದೆ. ಸರ್ಜರಿಯಾದ ನಂತರ 7-10 ದಿನಗಳಲ್ಲಿಯೇ ನೀವು ನಿಮ್ಮ ಕೆಲಸಕ್ಕೆ ಮರಳಬಹುದು. ಆದರೆ, ಶಸ್ತ್ರಚಿಕಿತ್ಸೆಯ ಆತಂಕಕ್ಕಿಂತಲೂ ಉಳಿದಿರುವ ಬೊಜ್ಜು ಆತಂಕ ಸೃಷ್ಟಿಸುತ್ತದೆ. ತಜ್ಞರ ಸೂಕ್ತ ಚಿಕಿತ್ಸೆಯಿಂದ ಈ ಆತಂಕ ದೂರವಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವ, ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಶ್ವಾಸಕೋಶದ ಮೇಲೆ ಪರಿಣಾಮ, ಹೊಟ್ಟೆಯ ಗಾತ್ರ ಕಡಿಮೆಯಾದ ಕಾರಣ ವಾಂತಿ, ವಿಟಮಿನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡುಬರುವ ಸಾಧ್ಯತೆ ಇರುತ್ತದೆ.

ಎಷ್ಟು ತೂಕ ಕಡಿಮೆ ಆಗುತ್ತದೆ..? 

ಶಸ್ತ್ರಚಿಕಿತ್ಸೆ ಮಾಡಿದ ತಕ್ಷಣವೇ ತೂಕ ಕಡಿಮೆಯಾಗಲ್ಲ ಎಂಬುದನ್ನು ಗಮನಿಸಬೇಕು. ವಿಭಿನ್ನ ಕಾರ್ಯವಿಧಾನಗಳಿಂದ ವಿಭಿನ್ನ ರೀತಿಯಲ್ಲಿ ತೂಕ ಇಳಿಯುತ್ತದೆ. ಹೆಚ್ಚಿನ ರೋಗಿಗಳು ಹೆಚ್ಚುವರಿ ತೂಕದ ಶೇ.30 ರಿಂದ 50ರಷ್ಟು ತೂಕವನ್ನು ಮೊದಲ 6 ತಿಂಗಳಲ್ಲಿ ಕಳೆದುಕೊಂಡರೆ, ಮೊದಲ ವರ್ಷದ ಅವಧಿಯಲ್ಲಿ ಸುಮಾರು ಶೇ.77ರಷ್ಟು ತೂಕವನ್ನು ಕಳೆದುಕೊಳ್ಳುತ್ತಾರೆ. ತೂಕ ಕಡಿಮೆಯ ಪ್ರಮಾಣ ರೋಗಿಯ ಬದ್ಧತೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆಹಾರ, ವ್ಯಾಯಾಮ ಮತ್ತು ವೈದ್ಯಕೀಯ ಚಿಕಿತ್ಸೆಯ ಅನುಸರಣೆಯ ಮೇಲೆ ಅವಲಂಭಿತವಾಗಿರುತ್ತದೆ. ನಿಮ್ಮ ತೂಕ ಇಳಿಕೆಯ ಪ್ರಯಾಣದಲ್ಲಿ ಯಶಸ್ವಿಯಾಗಲು ನಿಮ್ಮ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಆಹಾರ ಮತ್ತು ದೈನಂದಿನ ವ್ಯಾಯಾಮ ನಿಮ್ಮ ಗುರಿಯಲ್ಲಿನ ಪ್ರಮುಖ ಎರಡು ಅಂಶಗಳಾಗಿದ್ದು, ವಿಶೇಷವಾಗಿ ಮೊದಲ ವರ್ಷದ ಅವಧಿಯಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ಸಲಹೆಯನ್ನು ಅನುಸರಿಸುವ ರೋಗಿಗಳು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

(ಲೇಖಕರು: ಡಾ.ಜಿ.ಶ್ರೀಕಾಂತ್, ಸಹಸ್ರ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ)
First published: July 31, 2019, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading