• Home
  • »
  • News
  • »
  • lifestyle
  • »
  • Weekend Story: ಹಣದಿಂದ ನೆಮ್ಮದಿ ಖರೀದಿ ಮಾಡಲು ಆಗಲ್ಲ, ಜೀವನದಲ್ಲಿ ಸಂತೋಷ ಮುಖ್ಯ

Weekend Story: ಹಣದಿಂದ ನೆಮ್ಮದಿ ಖರೀದಿ ಮಾಡಲು ಆಗಲ್ಲ, ಜೀವನದಲ್ಲಿ ಸಂತೋಷ ಮುಖ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Moral Story For Kids: ಮಕ್ಕಳಿಗೆ ಕಥೆ ಹೇಳುವುದರಿಂದ ಅವರ ಬುದ್ದಿವಂತಿಕೆ ಹಾಗೂ ಯೋಚನೆ ಮಾಡುವ ಶಕ್ತಿ ಹೆಚ್ಚಾಗುತ್ತದೆ. ವಾರಕ್ಕೆ ಒಮ್ಮೆಯಾದರೂ ಒಂದು ಕಥೆ ಹೇಳುವುದು ಮುಖ್ಯ. ಈ ವಾರ ನಾವು ನಿಮ್ಮ ಮುಂದೆ ಜಿಪುಣನೊಬ್ಬನ ಕಥೆ ತಂದಿದ್ದು, ಸುಂದರವಾದ ನೀತಿಯನ್ನು ಇದು ತಿಳಿಸಿಕೊಡುತ್ತದೆ.

ಮುಂದೆ ಓದಿ ...
  • Share this:

ಒಂದಾನೊಂದು ಕಾಲದಲ್ಲಿ ಒಬ್ಬ ಜಿಪುಣ ಮಹಾಶಯನಿದ್ದ, ಆತನಷ್ಟು ಜಿಪುಣ ಬೇರೆ ಯಾರೂ ಇಲ್ಲ ಆ ಊರಿನಲ್ಲಿ (village) ಎಂದು ಪ್ರಸಿದ್ಧಿ ಪಡೆದಿದ್ದ. ಆದರೆ ಆತ ಹುಟ್ಟಿನಿಂದ ಜಿಪುಣ ಅಲ್ಲ. ಬಹಳ ಕಷ್ಟದ ಜೀವನ ನಡೆಸಿದ ಫಲ ಈ ಜಿಪುಣತನ ಎನ್ನಬಹುದು.  ಹೌದು, ಬಡ ಮನೆಯಲ್ಲಿ (Poor Family) ಹುಟ್ಟಿ, ಕಡು ಬಡತನದಲ್ಲಿ ಬೆಳೆದವ ಆತ. ಅಲ್ಲದೇ ಕಷ್ಟಗಳನ್ನು ಬಹಳ ಅನುಭವಿಸಿದ್ದ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ. ಒಂದೊಂದು ಪೈಸೆಗೂ (Money) ಬೇರೆಯವರ ಮುಂದೆ ಕೈ ಚಾಚುವ ಪರಿಸ್ಥಿತಿಯ ಕಾರಣದಿಂದ ಆತ ಜಿಪುಣನಾಗಿದ್ದ. ದೊಡ್ಡವನಾದ ಮೇಲೆ ಹಣ ಗಳಿಸಬೇಕು, ಶ್ರೀಮಂತನಾಗಿ ಹಣ ಕೂಡಿಡಬೇಕು ಎಂದು ಚಿಕ್ಕವನಿದ್ದಾಗಲೇ ನಿರ್ಧರಿಸಿದ್ದ, ಅಲ್ಲದೇ ಹಣಗಳಿಸಲು ದಾರಿ ಯಾವುದಾದರೂ ಸರಿ ಎಂದು ತೀರ್ಮಾನ ಮಾಡಿದ್ದ.


ಮಹಾಜಿಪುಣ ಈತ


ಹಾಗೆಯೇ ಹೆಚ್ಚಿನ ಹಣಗಳಿಸಲು ಆರಂಭ ಮಾಡಿದ. ಬಂದ ಹಣವನ್ನೆಲ್ಲಾ ಕೂಡಿಡುತ್ತಿದ್ದ ಹೊರತು ಯಾರಿಗೂ ಒಂದು ರೂಪಾಯಿ ಕೊಡುತ್ತಿರಲಿಲ್ಲ. ಅಲ್ಲದೇ ತಾನೂ ಸಹ ಆ ಹಣವನ್ನು ಖರ್ಚು ಮಾಡುತ್ತಿರಲಿಲ್ಲ. ಸ್ವಲ್ಪ ಹಣ ಬಂದರೂ ಸಾಕು  ಅದನ್ನು ಹೆಚ್ಚಿನ ಬಡ್ಡಿ ದರದಲ್ಲಿ ಮತ್ತೊಬ್ಬರಿಗೆ ಸಾಲ ಕೊಡುವ ಕೆಲಸ ಮಾಡುತ್ತಿದ್ದ. ಅಲ್ಲದೇ, ಕೊಟ್ಟ ಹಣವನ್ನು ಯಾವ ಮುಲಾಜಿಲ್ಲದೇ ವಸೂಲಿ ಸಹ ಮಾಡುತ್ತಿದ್ದ.


ಹೀಗೆಯೇ ಸಾಲ ಕೊಡುವ ವ್ಯವಹಾರದ ಜೊತೆ ಹೊಸ ವ್ಯಾಪರವೊಂದನ್ನು ಸಹ ಆರಂಭ ಮಾಡಿದ್ದ. ಅದರಲ್ಲೂ ಬರೀ ಮೋಸ ಮಾಡುತ್ತಿದ್ದ. ಈ ರೀತಿ ಮೋಸದಿಂದ ಬಂದ ಹಣದಿಂದಲೇ ಜಮೀನು ಖರೀದಿ ಮಾಡುತ್ತಿದ್ದ. ಆ ಜಮೀನಿನ ಬೆಲೆ ಹೆಚ್ಚಾದಾಗ ಅದನ್ನು ಮಾರಿ ಹಣಗಳಿಸುತ್ತಿದ್ದ. ಇಷ್ಟಕ್ಕೆ ಆತನಿಗೆ ತೃಪ್ತಿ ಸಿಗಲಿಲ್ಲ, ಆ ಊರಿನ ಅಧಿಕಾರಿಗೆ ಲಂಚ ನೀಡಿ ಬೇರೆಯವರ ಜಮೀನನ್ನು ಸಹ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ. ಅದನ್ನೂ ಸಹ ಮಾರಿ ಹಣಗಳಿಸಿದ್ದ.


ಆತನಿಗೆ ಹಣದ ವ್ಯಾಮೋಹ ಹೆಚ್ಚಾಗಿತ್ತು. ಹಣದ ದುರಾಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಹಣದ ಹೊಳೆಯೇ ಹರಿದು ಬರುತ್ತಿದ್ದರೂ ಆತನ ಆಸೆಗೆ ಮಿತಿ ಇರಲಿಲ್ಲ.  ಹಣ ಹೆಚ್ಚಾಗುತ್ತಿದ್ದಂತೆ ಮನೆ ಕಟ್ಟಿಸಿದ, ಅಂಗಡಿ ಮುಂಗಟ್ಟು ಖರೀದಿ ಮಾಡಿದ. ಅದನ್ನು ಬಾಡಿಗೆಗೆ ಕೊಟ್ಟು ಹಣಗಳಿಸಿದ. ನಂತರ  ವಜ್ರ, ವೈಢೂರ್ಯವನ್ನು ಖರೀದಿಸಿ ಇಟ್ಟುಕೊಂಡ, ಆದರೆ ಆತ ಮಾತ್ರ ಬಡವನ ರೀತಿ ಬದುಕು ನಡೆಸುತ್ತಿದ್ದ. ಆದರೆ ಒಂದು ದಿನ ಅವನಿಗೆ ನಾನು ರಾಜನಂತೆ ಬದುಕಬೇಕು, ನಾಳೆಯಿಂದ ಸ್ವಲ್ಪ ಬದಲಾಗೋಣ ಎಂದು ನಿರ್ಧರಿಸಿ ಮಲಗಿಕೊಳ್ಳುತ್ತಾನೆ.ಆದರೆ ಬೆಳಗಾದಾಗ ಎದ್ದು ನೋಡಿದರೆ ಕಣ್ಣು ಮಂಜಾಗಿರುತ್ತದೆ ಎದುರುಗಡೆ ಯಾರೂ ನಿಂತಿರುವಂತೆ ಕಾಣುತ್ತದೆ. ಆ ವ್ಯಕ್ತಿ ಯಾರೂ ಎಂದು ಕೇಳುತ್ತಾನೆ. ಕಣ್ಣುಜ್ಜಿಕೊಂಡು ನೋಡಿದಾಗ ವ್ಯಕ್ತಿ ಈಗ ಸ್ಪಷ್ಟವಾಗಿ ಕಾಣಿಸುತ್ತಾನೆ.  ಆ ವ್ಯಕ್ತಿ ಹೇಳುತ್ತಾನೆ, ನಾನು ಯಮಧೂತ, ಇಂದಿಗೆ ನಿನ್ನ ಆಯಸ್ಸು ಮುಗಿದಿದೆ. ಹಾಗಾಗಿ ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎನ್ನುತ್ತಾನೆ.


ಸಾಯುವ ಸಮಯದಲ್ಲಿ ಅರ್ಥವಾದ ಜೀವನ


ಇದನ್ನು ಕೇಳಿದ ಜಿಪುಣನಿಗೆ ದಿಕ್ಕೇ ತೋಚದಂತೆ ಆಯಿತು. ಅಯ್ಯೋ ಇಷ್ಟು ದಿನ ಕಷ್ಟಪಟ್ಟಿದ್ದೆ, ಇಂದಿನಿಂದ ಸುಖವಾಗಿ ಬದುಕೋಣ ಅಂತ ನಿರ್ಧಾರ ಮಾಡಿದ್ದೆ, ನಾನು ಹೇಗೆ ಬರಲಿ. ನನಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಾನೆ. ಆದರೆ ಇದಕ್ಕೆ ಯಮಧೂತ ಒಪ್ಪುವುದಿಲ್ಲ. ಆಗ ಜಿಪುಣ ಅವನ ವ್ಯಾಪಾರ ಮಾಡಲು ಹೊರಟ, ನೋಡು ನನ್ನ ಬಳಿ ಬಹಳಷ್ಟು ಹಣ ಇದೆ. ನಿನಗೆ ಸಾವಿರ ಕೋಟಿಗಳಷ್ಟು ಕೊಡುತ್ತೇನೆ ,ಕೊನೇ ಪಕ್ಷ ಆರು ತಿಂಗಳ ಅವಕಾಶ ಕೊಡು ಎಂದು ಬೇಡಿಕೊಳ್ಳುತ್ತಾನೆ.


ಇದನ್ನು ಕೇಳಿ ಕೋಪಗೊಂಡ ಯಮಧೂತ, ಒಂದೂ ಮಾತನಾಡದ ಕೊರಳಿಗೆ ಹಗ್ಗ ಎಸೆದು ಪ್ರಾಣ ಎಳೆಯಲು ಸಿದ್ದನಾಗುತ್ತಾನೆ. ಇದಕ್ಕೆ ಜಿಪುಣ ನನ್ನ ಬಳಿ ಇರುವ ಪೂರ್ತಿ  ಹಣವನ್ನು ನಿನಗೆ ಕೊಡುತ್ತೇನೆ, ಒಂದು ದಿನವಾದರೂ ಸಮಯ ಕೊಡು ಎಂದು ಗೋಗರೆಯುತ್ತಾನೆ. ಬಾಕಿ ಇರುವ ಕೆಲ ಕೆಲಸ ಮುಗಿಸುತ್ತೇನೆ ಎನ್ನುತ್ತಾನೆ.


ಇದನ್ನು ಕೇಳಿ ನಕ್ಕ ಯಮಧೂತ ನನಗೆ ನಿನ್ನ ಹಣದಿಂದ ಮಾಡುವುದು ಏನಿದೆ? ನಿನ್ನನ್ನ ನಾನು ಒಂದು ಕ್ಷಣವೂ ಬಿಡಲಾರೆ ಎನ್ನುತ್ತಾನೆ. ಇದರಿಂದ ಬೇಸರಗೊಂಡ ಜಿಪುಣ ಒಂದು ನಿಮಿಷವಾದರೂ ಸಮಯ ಕೊಡು, ನನ್ನ ರೀತಿಯ ದುಡ್ಡಿನ ಆಸೆಗೆ ಬಿದ್ದ ಜನರಿಗೆ ಕೆಲ ಮಾತುಗಳನ್ನು ಬರೆಯಬೇಕು ಎನ್ನುತ್ತಾನೆ.


ಈ ಬಾರಿ ಯಮಧೂತನಿಗೆ ಸ್ವಲ್ಪ ಕರುಣೆ ಬಂದು, ಆಯ್ತು ಬೇಗ ಮುಗಿಸು ಎಂದ. ಆಗ ಆ ಜಿಪುಣ ತನ್ನ ಬೆರಳನ್ನು ಕತ್ತರಿಸಿಕೊಂಡು, ಅದರ ರಕ್ತದಿಂದ ನಾನು ಮೂರು ಸಾವಿರ ಕೋಟಿ ಹಣಗಳಿಂದ ಜೀವನದ ಒಂದು ಕ್ಷಣವನ್ನೂ  ಹೆಚ್ಚಾಗಿ ಪಡೆಯಲು ಸಾಧ್ಯವಾಗಲಿಲ್ಲ.  ಜೀವನದ ಪ್ರತೀ ಕ್ಷಣವನ್ನೂ ಸರಿಯಾಗಿ ಬಳಸಿ, ಅನುಭವಿಸಿ. ಪ್ರತಿಕ್ಷಣದ ಬೆಲೆ ಮೂರು ಸಾವಿರ ಕೋಟಿಗಳಿಗಿಂತ  ಅಮೂಲ್ಯ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಎಂದು ಬರೆದ. ಕೆಲವೇ ಕ್ಷಣಗಳಲ್ಲಿ ಅವನ ಜೀವ ಹೋಗುತ್ತದೆ.


ಕಥೆಯ ಅರ್ಥ: ಹಣದ ಆಸೆಗೆ ಜೀವನದ ಸಂತಸದ ಕ್ಷಣಗಳನ್ನು ಕಳೆದುಕೊಳ್ಳಬಾರದು.

Published by:Sandhya M
First published: