ನಾವು ಎಳೆಯರಾಗಿದ್ದಾಗ ನಮ್ಮ ಅಜ್ಜ ಅಜ್ಜಿ ಕಥೆ (Story) ಹೇಳದೇ ನಾವು ಮಲಗುವ ಪ್ರಸಂಗವೇ ಇರಲಿಲ್ಲ. ಅವರು ಹೇಳುವ ಕಾಗಕ್ಕ ಗುಬ್ಬಕ್ಕನ ಕಥೆ ಊಹೆಯದ್ದಾದರೂ ಅವರ ಕಥೆ ಹೇಳುವ ಶೈಲಿ, ವಿಧಾನ ನಮ್ಮನ್ನು ನಿದ್ರಾ (Sleep) ಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತಿತ್ತು. ದಿನವೂ ಒಂದೇ ರೀತಿಯ ಕಥೆ ಹೇಳಿದರೂ ನಮಗದು ಎಂದಿಗೂ ಬೇಜಾರು ಬರಿಸುತ್ತಿರಲಿಲ್ಲ.ಕಾಲ ಬದಲಾಗಿದೆ ಇಂದು ಕಥೆ ಹೇಳುವ ಸಮಯ ಕೂಡ ಯಾರಿಗೂ ಇಲ್ಲ ಕಥೆ ಕೇಳಲು ಯಾರಿಗೂ ಮನಸ್ಸು ಇಲ್ಲ. ಆ ಸ್ಥಾನವನ್ನು ತಂತ್ರಜ್ಞಾನ (Technology) ತುಂಬಿರುವುದರಿಂದ ಡಿಜಿಟಲ್ ಲೋಕವೇ ಇಂದು ಕಥೆ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಆದರೂ ಸಹ ವಾರಕ್ಕೆ ಒಮ್ಮೆಯಾದರೂ ಮಕ್ಕಳಿಗೆ ಕಥೆ ಹೇಳುವುದು ಅವರ ಸಂಪೂರ್ಣ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಕೋಗಿಲೆಯೊಂದರ ಕಥೆ ಇದು
ಒಂದು ಕಾಡು, ಆ ಸುಂದರವಾದ ಕಾಡಿನಲ್ಲಿದ್ದ ದೊಡ್ಡ ಮರದ ಮೇಲೆ ಕೋಗಿಲೆಯೊಂದು ವಾಸವಾಗಿತ್ತು. ಅದೇ ಮರದ ಮೇಲೆ ವಿವಿಧ ರೀತಿಯ ಅನೇಕ ಪಕ್ಷಿಗಳು ವಾಸವಾಗಿದ್ದವು. ಈ ಎಲ್ಲಾ ಪಕ್ಷಗಳು ಅನ್ಯೋನ್ಯವಾಗಿ ವಾಸವಾಗಿದ್ದವು. ಹೀಗಿರುವಾಗ ಎಲ್ಲರಿಗೂ ಗೊತ್ತಿರುವಂತೆ ಕೋಗಿಲೆ ಸುಮಧುರವಾಗಿ ಹಾಡು ಹೇಳಲು ಹೆಸರುವಾಸಿಯಾಗಿದೆ. ಹಾಗೆಯೇ, ಈ ಮರದ ಮೇಲಿದ್ದ ಕೋಗಿಲೆಗೆ ಖುಷಿಯಾದಾಗ ಹಾಡು ಹೇಳುತ್ತಿತ್ತು.
ಕೋಗಿಲೆಯ ಹಾಡು ಇಂಪಾಗಿದ್ದರೂ ಸಹ ಪದೇ ಪದೇ ಕೇಳುವುದು ಎಲ್ಲರಿಗೂ ಹಿಂಸೆ ಆಗುತ್ತಿತ್ತು. ಹಾಗೆಯೇ, ಕೋಗಿಲೆಯ ಹಾಡಿನಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು. ಬಹಳ ದಿನಗಳಿಂದ ಕೇಳಿ ಕೇಳಿ ಬೇಸರವಾಗಿ, ಒಂದು ದಿನ ಎಲ್ಲಾ ಪಕ್ಷಿಗಳು ಸೇರಿ ಕೋಗಿಲೆಯನ್ನು ಆ ಮರದಿಂದ ಓಡಿಸಿದವು. ಇದರಿಂದ ಬಹಳ ಬೇಸರಗೊಂಡ ಈ ಕೋಗಿಲೆ ಆ ಕಾಡಿನ ಒಂದು ಒಣಮರದ ಮೇಲೆ ಹೋಗಿ ಕುಳಿತುಕೊಂಡಿತು . ಎಲ್ಲಾ ಪಕ್ಷಿಗಳು ತನ್ನನ್ನ ಮರದಿಂದ ಓಡಿಸಿದ ಕಾರಣದಿಂದ ಬಹಳ ಬೇಜಾರು ಮಾಡಿಕೊಂಡು ಅಳುತ್ತಾ ಕೂತಿತ್ತು, ಆಗ ಅಲ್ಲಿಗೆ ಮತ್ತೊಂದು ಕೋಗಿಲೆ ಬಂದು ಕುಳಿತುಕೊಂಡಿತು .
ಇದನ್ನೂ ಓದಿ: ಹಣೆ ಬರಹವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ, ಮಕ್ಕಳಿಗೆ ಈ ಕಥೆ ಹೇಳಿ
ಮತ್ತೊಂದು ಕೋಗಿಲೆ ಈ ರೀತಿ ಬೇಸರದಲ್ಲಿ ಕುಳಿತಿರುವುದನ್ನ ನೋಡಿ ಅದರ ನೋವಿಗೆ ಕಾರಣ ಏನೆಂದು ಕೇಳಿತು. ಅದಕ್ಕೆ ಬೇಸರದಲ್ಲಿದ್ದ ಕೋಗಿಲೆ, ನಾನು ಕಾಡಿನಲ್ಲಿರುವ ಒಂದು ಸುಂದರವಾದ ಮರದ ಮೇಲೆ ವಾಸಿಸುತ್ತಿದ್ದೆ, ಅಲ್ಲಿ ನನಗೆ ಖುಷಿಯಾದಾಗಲೆಲ್ಲಾ ಒಂದು ಹಾಡು ಹೇಳುತ್ತಿದ್ದೆ. ಒಂದು ದಿನ ಅಲ್ಲಿದ್ದ ಪಕ್ಷಿಗಳು ನೀನು ಏಕೆ ಹಾಡು ಹೇಳುವುದು ಎಂದು ನನ್ನ ಪ್ರಶ್ನೆ ಮಾಡಿದವು. ಅದಕ್ಕೆ ನಾನು ಸಂತೋಷಕ್ಕೆ ಹಾಡು ಹೇಳುತ್ತೇನೆ ಎಂದು ಉತ್ತರ ನೀಡಿದೆ.
ಮಾತನಾಡುವಾಗ ಜಾಣ್ಮೆ ಮುಖ್ಯ
ಅಲ್ಲದೇ, ನನಗೆ ಹಾಡು ಹೇಳದೇ ಬದುಕಿರುವುದು ಕಷ್ಟ ಎಂದು ಸಹ ಅವರಿಗೆ ಹೇಳಿದೆ. ಆದರೆ ಅವುಗಳೆಲ್ಲಾ ಸೇರಿ ನನ್ನನ್ನ ಆ ಮರದಿಂದ ಹೊರಹಾಕಿದವು ಎಂದು ತನ್ನ ನೋವನ್ನು ತೋಡಿಕೊಂಡಿತು. ಇದನ್ನು ಕೇಳಿದ ಇನ್ನೊಂದು ಕೋಗಿಲೆ, ನೀವು ಅವುಗಳಿಗೆ ಸರಿಯಾದ ಉತ್ತರ ಕೊಟ್ಟಿಲ್ಲ. ಆ ಉತ್ತರದ ಕಾರಣದಿಂದ ನಿನ್ನನ್ನ ಹೊರಗೆ ಹಾಕಿದ್ದಾರೆ ಎಂದು ಹೇಳಿತು.
ಅದಕ್ಕೆ ಮೊದಲ ಕೋಗಿಲೆ, ನನ್ನ ಉತ್ತರ ಹೇಗೆ ತಪ್ಪು ಎಂದು ಪ್ರಶ್ನೆ ಮಾಡಿತು. ನೀನಿ ನನ್ನ ಸಂತೋಷಕ್ಕಾಗಿ ಹಾಡು ಹೇಳುತ್ತೇನೆ ಎಂದು ಹೇಳಬಾರದಿತ್ತು. ನಿನ್ನ ಆ ಉತ್ತರದಿಂದ ಅವುಗಳು ನೀನು ಸ್ವಾರ್ಥಿ ಎಂದು ತಿಳಿದುಕೊಂಡಿದ್ದೇವೆ. ನಿನಗೆ ನಿನ್ನ ಮೇಲೆ ನಿಯಂತ್ರಣ ಇಲ್ಲ ಎಂದು ನಿರ್ಧಾರ ಮಾಡಿರುವ ಕಾರಣ ನಿಮ್ಮನ್ನ ಮರ ಬಿಟ್ಟು ಓಡಿಸಿವೆ ಎಂದು ಹೇಳುತ್ತದೆ. ಹಾಗೆಯೇ, ಒಮ್ಮೆ ನನಗೂ ಸಹ ಇದೇ ಪ್ರಶ್ನೆ ಕೇಳಿದ್ದವು ಅದಕ್ಕೆ ನಾನು ನಿಮ್ಮನ್ನು ಖುಷಿಪಡಿಸುವುದಕ್ಕಾಗಿ ಹಾಡುತ್ತೇನೆ ಎಂದು ಹೇಳಿರುವ ಕಾರಣ ಇನ್ನೂ ಆ ಮರದಲ್ಲಿ ಇದ್ದೇನೆ ಎಂದು ತಿಳಿಸುತ್ತದೆ.
ಇದನ್ನೂ ಓದಿ: ಜಿಪುಣತನದಿಂದ ಸ್ನೇಹ ಕಳೆದುಕೊಂಡ ಅನಾಮಿಕಾಳ ಕಥೆ
ಕಥೆಯ ನೀತಿ: ಯಾವಾಗಲೂ ನಾವು ಆಡುವ ಮಾತು ತುಂಬಾ ಯೋಚನೆ ಮಾಡಿ ಹಾಗೂ ಜಾಣ್ಮೆಯಿಂದ ಕೂಡಿರಬೇಕು. ಈ ಕಾರಣದಿಂದಲೇ ನಮ್ಮ ಹಿರಿಯರು ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳೋದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ