ವಾಸಕ್ಕೆ ಯೋಗ್ಯವಾದ ಟಾಪ್​ 10 ನಗರಗಳಲ್ಲಿ ಭಾರತಕ್ಕಿಲ್ಲ ಸ್ಥಾನ

news18
Updated:August 14, 2018, 3:31 PM IST
ವಾಸಕ್ಕೆ ಯೋಗ್ಯವಾದ ಟಾಪ್​ 10 ನಗರಗಳಲ್ಲಿ ಭಾರತಕ್ಕಿಲ್ಲ ಸ್ಥಾನ
news18
Updated: August 14, 2018, 3:31 PM IST
-ನ್ಯೂಸ್ 18 ಕನ್ನಡ

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನಗರವು ವಿಶ್ವದಲ್ಲೇ ವಾಸಿಸಲು ಯೋಗ್ಯವಾದ ನಗರಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಸೋಮವಾರ ಬಿಡುಗಡೆಯಾದ ವಾರ್ಷಿಕ ವಾಸಯೋಗ್ಯ ನಗರಗಳ ಸಮೀಕ್ಷಾ ಪಟ್ಟಿಯಲ್ಲಿ ಆಸ್ಟ್ರೆಲಿಯಾದ ಮೆಲ್ಬೋರ್ನ್​ ನಗರವನ್ನು ಹಿಂದಕ್ಕೆ ತಳ್ಳಿ ವಿಯೆನ್ನಾ ಅಗ್ರಸ್ಥಾನಕ್ಕೇರಿದೆ. ಕಳೆದ ಏಳು ವರ್ಷಗಳವರೆಗೆ ವಾಸಿಸಲು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ಮೆಲ್ಬೋರ್ನ್​ ಮೊದಲ ಸ್ಥಾನದಲ್ಲಿತ್ತು. ವಿಯೆನ್ನಾ ಸಿಟಿ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿ ಯುರೋಪ್​ನ ನಗರವೊಂದು ಬದುಕಲು ಯೋಗ್ಯವಾದ ನಗರ ಎಂಬ ಹೆಗ್ಗಳಿಕೆ ಪಡೆದಿದೆ.

ಈ ಸಮೀಕ್ಷೆಯಲ್ಲಿ 140 ನಗರಗಳನ್ನು ಆರಿಸಿಕೊಳ್ಳಲಾಗಿತ್ತು. ಅದರಂತೆ ಅಲ್ಲಿನ ಜೀವನಮಟ್ಟ, ಅಪರಾಧ, ಸಾರಿಗೆ ವ್ಯವಸ್ಥೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ರಾಜಕೀಯ ಮತ್ತು ಆರ್ಥಿಕ ಸ್ಥಿತಿ ಗತಿಗಳಿಗೆ ಅನುಗುಣವಾಗಿ ರ್‍ಯಾಂಕ್ ನೀಡಲಾಗಿದೆ. 100 ಅಂಕಗಳನ್ನು ನೀಡಿ ನಡೆಸಲಾದ ಈ ಸಮೀಕ್ಷೆಯಲ್ಲಿ ವಿಯೆನ್ನಾ 99.1 ಅಂಕಗಳಿಸಿದರೆ, ಆಸ್ಟ್ರೇಲಿಯಾದ ಮೇಲ್ಬೋರ್ನ್ ನಗರ 98.4 ಅಂಕ ಪಡೆದು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಮೂರನೇ ಸ್ಥಾನವನ್ನು ಜಪಾನಿನ ಒಸಾಕಾ ನಗರ ಪಡೆದುಕೊಂಡಿದೆ.

ವಾಸಿಸಲು ಯೋಗ್ಯವಾದ ಸಿಟಿಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ನಗರಗಳು ಪ್ರಾಬಲ್ಯ ಮೆರೆದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​, ಸಿಡ್ನಿ(5ನೇ ಸ್ಥಾನ) ಮತ್ತು ಅಡಿಲೇಡ್(10ನೇ ಸ್ಥಾನ) ನಗರಗಳು ಟಾಪ್​10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೆ, ಕೆನಡಾದ ಕಾಲ್ಗರಿ(4ನೇ ಸ್ಥಾನ), ವ್ಯಾಂಕೂವರ್(6ನೇ ಸ್ಥಾನ) ಮತ್ತು ಟೊರಾಂಟೊ(7ನೇ ಸ್ಥಾನ) ನಗರಗಳು ಮೊದಲ ಹತ್ತರಲ್ಲಿ ಸ್ಥಾನಗಿಟ್ಟಿಸಿದೆ.

ಈ ಪಟ್ಟಿಯಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳೇ ಮೊದಲ ಹತ್ತು ನಗರಗಳಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜನ ಸಾಂದ್ರತೆ ಮಿತಿಯಲ್ಲಿರುವ ನಗರಗಳಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆ ಪ್ರಮಾಣದಲ್ಲಿದ್ದು, ಹಾಗೆಯೇ ಮೂಲ ಸೌಕರ್ಯ ವ್ಯವಸ್ಥೆ ಉತ್ತಮವಾಗಿದೆ. ಉದಾಹರಣೆಗೆ ಈ ರ್‍ಯಾಂಕಿಂಗ್ ಪಟ್ಟಿಯ ಮೊದಲ ಹತ್ತರಲ್ಲಿ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ಮತ್ತು ಕೆನಡಾದ ನಗರಗಳ ಪ್ರತಿ ಚದರ ಕಿಲೋಮೀಟರ್​ಗೆ 3.2 ಮತ್ತು 4 ಸರಾಸರಿಯಲ್ಲಿ ಜನರಿದ್ದಾರೆ. ಇದುವೇ ಜಾಗತಿಕ ಮಟ್ಟದಲ್ಲಿ ಗಮನಿಸಿದರೆ 58 ಸರಾಸರಿಯಷ್ಟಿದೆ.

ಜಪಾನಿನ ರಾಜಧಾನಿ ಟೋಕಿಯೋ ಈ ಪಟ್ಟಿಯಲ್ಲಿ ಟೊರಾಂಟೊನೊಂದಿಗೆ 7ನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದೆ. ಟೋಕಿಯೋ ನಗರದ ಜನರ ಸರಾಸರಿಯು ಪ್ರತಿ ಚದರ ಕಿಲೋ ಮೀಟರ್​ಗೆ 347 ಇದ್ದರೂ, ಅಲ್ಲಿನ ಸಾರಿಗೆ ವ್ಯವಸ್ಥೆ ಮತ್ತು ಜೀವನಮಟ್ಟವು ಅತ್ಯುತ್ತಮ ರೀತಿಯಲ್ಲಿರುವುದರಿಂದ ಈ ಪಟ್ಟಿಯಲ್ಲಿ ಸ್ಥಾನಗಳಿಸಿದೆ. ಅದೇ ರೀತಿ ಈ ರ್‍ಯಾಂಕಿಂಗ್​ನ ಟಾಪ್​ 10ರಲ್ಲಿ ಕಾಣಿಸಿಕೊಂಡ ಮತ್ತೊಂದು ಯುರೋಪ್ ನಗರವೆಂದರೆ ಕೋಪನ್ ಹ್ಯಾಗನ್(9ನೇ ಸ್ಥಾನ).

ಆರ್ಥಿಕವಾಗಿ ಅಭಿವೃದ್ದಿ ಹೊಂದಿರುವ ಶ್ರೀಮಂತ ನಗರಗಳಾದ ಪ್ಯಾರಿಸ್ (19), ಲಂಡನ್ (48) ಮತ್ತು ನ್ಯೂಯಾರ್ಕ್ (57) ಸಿಟಿಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು, ಮೂಲಭೂತ ಸೌಕರ್ಯಗಳು ಇಳಿಮುಖವಾಗುತ್ತಿದೆ. ಇದರಿಂದ ವಿಶ್ವ ಪ್ರಸಿದ್ಧ ನಗರಗಳು ಟಾಪ್​ 10 ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಈ ಪಟ್ಟಿಯಲ್ಲಿ ಡಮಾಸ್ಕಸ್ ಕೊನೆಯ ಸ್ಥಾನ ಪಡೆದರೆ ಅದಕ್ಕಿಂತ ಮೇಲಿನ ಸ್ಥಾನಗಳನ್ನು ಢಾಕಾ, ಲಾಗೋಸ್, ಕರಾಚಿ ಮತ್ತು ಪೋರ್ಟ್​ ಮೋರ್ಸ್ಬೈ ನಗರಗಳು ಹಂಚಿಕೊಂಡು ವಾಸಿಸಲು ಯೋಗ್ಯವಲ್ಲದ ನಗರ ಎಂಬ ಹಣೆಪಟ್ಟಿ ಪಡೆದುಕೊಂಡಿದೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ