#HumanStory: ಗಾಲಿ ಕುರ್ಚಿಯಲ್ಲೇ ಕೂತು ಎಲ್ಲರನ್ನು ಕುಣಿಸುವ 'ಡಿಜೆ' ಕಥೆ

news18
Updated:August 15, 2018, 4:34 PM IST
#HumanStory: ಗಾಲಿ ಕುರ್ಚಿಯಲ್ಲೇ ಕೂತು ಎಲ್ಲರನ್ನು ಕುಣಿಸುವ 'ಡಿಜೆ' ಕಥೆ
news18
Updated: August 15, 2018, 4:34 PM IST
-ನ್ಯೂಸ್ 18 ಕನ್ನಡ

ವರುಣ್ ಅಲಿಯಾಸ್ ಡಿಜೆ ಅಮಿಷ್. ಭಾರತದ ಅತ್ಯುತ್ತಮ ಡಿಸ್ಕ್​ ಜಾಕಿಗಳಲ್ಲಿ ಈ ಹೆಸರು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇತರೆ ಡಿಜೆಗಳ ನಡುವೆ ವರುಣ್ ಕುಲ್ಲರ್ ಎಲ್ಲರನ್ನು ಸೆಳೆಯಲು ಒಂದು ಆಸಕ್ತಿಕರ ಕಹಾನಿ ಇದೆ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ವರುಣ್ ರಿಪೋರ್ಟಿಂಗ್ ಮಾಡದೇ ಬ್ಯಾಂಡ್ ಬಜಾಯಿಸುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ. ಇದಕ್ಕೆಲ್ಲಾ ಕಾರಣ ಆ ಒಂದು ಪ್ರವಾಸ ಎನ್ನುತ್ತಾರೆ ವರುಣ್. ಜರ್ನಲಿಸಂ ಓದುತ್ತಿದ್ದ ನಾನು ಸ್ನೇಹಿತರೊಂದಿಗೆ ವರುಣ್ ಮನಾಲಿಗೆ ಪ್ರವಾಸಕ್ಕೆ ತೆರಳಿದ್ದೆ. ಪ್ರಯಾಣದ ವೇಳೆ ಗೆಳೆಯನೊಬ್ಬ ಕಾರನ್ನು ಓಡಿಸುತ್ತಿದ್ದನು. ಎದುರಿಗೆ ವೇಗವಾಗಿ ಬಂದ ಟ್ರಕ್​ವೊಂದನ್ನು ತಪ್ಪಿಸುವ ಸಲುವಾಗಿ ಕಾರು ತಿರುಗಿಸಿದ್ದನು. ಆದರೆ ನಾವಿದ್ದ ಕಾರು ನಿಯಂತ್ರಣ ತಪ್ಪಿ 25 ಅಡಿ ಆಳಕ್ಕೆ ಉರುಳಿತ್ತು. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿರಲಿಲ್ಲ. ಎಲ್ಲರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಕಾರಿನಿಂದ ಹೊರಬಂದಿದ್ದರು. ಆದರೆ ನನ್ನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಹೇಗೆಲ್ಲಾ ಮಾಡಿ ನನ್ನನ್ನು ಮನಾಲಿ ಆಸ್ಪತ್ರೆಗೆ ದಾಖಲಿಸಿದ್ದರು. ನನ್ನ ಪರಿಸ್ಥಿತಿ ಹೇಗಿತ್ತೆಂದರೆ ಅಲ್ಲಿನ ವೈದ್ಯರು ದೆಹಲಿಯ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದರು. ನೋವಿನ ನಡುವೆ ಅಂಬುಲೆನ್ಸ್​ನಲ್ಲಿ ದೆಹಲಿಯತ್ತ ಪಯಣ ಮತ್ತು ಅಲ್ಲೇ ಚಿಕಿತ್ಸೆ ಪ್ರಾರಂಭಿಸಲಾಯಿತು.

10 ದಿನಗಳ ಕಾಲು ಐಸಿಯುನಲ್ಲಿ ನನಗೆ ಚಿಕಿತ್ಸೆ ನೀಡಲಾಗಿತ್ತು. ಮಲಗಿದ್ದ ನನಗೆ ಏನಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಕೆಲ ಬಾರಿ ಪಾದಗಳನ್ನು ಚಲಾಯಿಸಲು ಪ್ರಯತ್ನಿಸುತ್ತಿದ್ದೆ ಆದರೆ ಯಾವುದೇ ಚಲನೆ ಇರಲಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಕಾಲುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ ಎಂದು ಭಾವಿಸಿದ್ದೆ. ಜೊತೆಗಿದ್ದವರೂ ಕೂಡ ಯಾವುದೇ ವಿಷಯಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಒಂದಷ್ಟು ದಿನ ಸಹಿಸಿದ್ದ ನಾನು ನೇರವಾಗಿ ವೈದ್ಯರನ್ನು ಕೇಳಿದೆ. ಆದರೆ ಅವರ ಉತ್ತರ ನನ್ನ ಜೀವವನ್ನು ಹಿಂಡಿತ್ತು. ಹೌದು ವೈದ್ಯರು ನೀನು ಇನ್ನು ಮುಂದೆ ನಡೆಯಲಾಗುವುದಿಲ್ಲ ಎಂದು ಬಿಟ್ಟಿದ್ದರು. ನನಗೆ ದಿಕ್ಕೆ ತೋಚದಂತಾಗಿತ್ತು. ಪರಿಸ್ಥತಿ ಅರ್ಥ ಮಾಡಿಕೊಂಡಿದ್ದರೂ ನನಗೆ ನಂಬಲಾಗಲಿಲ್ಲ. ಆ ಸಮಯದಲ್ಲಿ ನಾನು ಜೀವನವೇ ಮುಗಿಯಿತು ಎಂದುಕೊಂಡಿದ್ದೆ ಎಂದು ವರುಣ್ ಹಳೆಯ ನೆನಪುಗಳಿಗೆ ಜಾರಿದರು.

ಎರಡು ತಿಂಗಳ ಕಾಲದ ನಂತರ ಆಸ್ಪತ್ರೆಯಿಂದ ಮನೆಗೆ ಮರಳಿದೆ. ಆಗಲೇ ನಿಜವಾದ ಕಷ್ಟದ ಅರಿವಾಗಿದ್ದು. ಹಾಸಿಗೆಯ ಮೇಲೆಯೇ ಮಲಗಿಕೊಂಡಿರಬೇಕಾಗಿತ್ತು. ಪ್ರತಿಯೊಂದು ವಿಷಯಗಳಿಗೂ ಸಹಾಯವನ್ನು ಯಾಚಿಸಬೇಕಿತ್ತು. ಒಂದು ಬಾರಿ ಯಾರಾದರೂ ಕುಳ್ಳಿರಿಸಿದರೆ, ಮತ್ತೆ ಮಲಗಿಸಿಕೊಳ್ಳಲು ಕಾಯಬೇಕಾಗಿತ್ತು. ಅದೊಂದು ದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಯಾಣದುದ್ದಕ್ಕೂ ನಾನು ಆಕಾಶವನ್ನು ನೋಡುತ್ತಿದ್ದೆ. ಏಕೆಂದರೆ ಅದಾಗಲೇ ನಾನು ಹೊರ ಜಗತ್ತಿನಿಂದ ದೂರ ಉಳಿದಿದ್ದೆ. ಒಂದೆರೆಡು ವರ್ಷಗಳ ಕಾಲ ಸೂರ್ಯನನ್ನೇ ನೋಡಿರಲಿಲ್ಲ ಎಂದರೆ ನನ್ನ ಪರಿಸ್ಥಿತಿ ಹೇಗಿದ್ದಿರಬಹುದು ಯೋಚಿಸಿ. ಪ್ರತಿದಿನ ಸಂಗೀತ ಆಲಿಸುತ್ತಾ ಮಲಗಿರುತ್ತಿದ್ದೆ. ಸಂಗೀತ ಕೇಳುತ್ತಾ ಮಲಗಿರುತ್ತಿದ್ದ ನನ್ನಲ್ಲಿ ಹೊಸ ತಲೆಮಾರಿನ ಹಾಡುಗಳು ಆಳವಾಗಿ ಬೇರೂರಿಯಾಗಿತ್ತು. ಅಲ್ಲಿಂದಲೇ ಸಂಗೀತದ ಮೇಲಿನ ಆಸಕ್ತಿ ಕೂಡ ನನ್ನಲ್ಲಿ ಮೊಳಕೆ ಹೊಡೆದದ್ದು ಎಂದು ವರುಣ್ ಹೇಳಿದರು.

ದೀರ್ಘಕಾಲದವರೆಗೆ ಮನೆಯಲ್ಲೇ ಕಳೆದಿದ್ದ ನನಗೆ ಹೊರ ಬರಬೇಕೆಂಬ ಆಸೆ ಚಿಗುರೊಡೆದಿತ್ತು. ಅದೊಂದು ದಿನ ದೈರ್ಯ ಮಾಡಿ ಕಾರನ್ನು ಓಡಿಸಲು ಆರಂಭಿಸಿದೆ. ಕಾರಿನಲ್ಲಿ ಹೊರ ಹೋಗಲು ಪ್ರಾರಂಭಿಸಿದೆ. ಹೇಗಾದರೂ ಮಾಡಿ ಸಂಗೀತವನ್ನು ಕಲಿಯಬೇಕೆಂದು ನಿರ್ಧರಿಸಿ ಕೆಲ ಇನ್ಸ್​ಟಿಟ್ಯೂಟ್​ಗೆ ಅರ್ಜಿಗಳನ್ನು ನೀಡಿದೆ. ಆದರೆ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ನನಗೆ ಯಾರೂ ಪ್ರವೇಶಾತಿ ನೀಡಲು ನಿರಾಕರಿಸಿದರು. ಅನೇಕ ಕಡೆ ಅಲೆದಾಡಿದ ಬಳಿಕ ಗುರ್ಗಾಂವ್​ನ ಇನ್ಸಿಟಿಟ್ಯೂಟ್ ನನಗೆ ಅವಕಾಶ ನೀಡಿತು. ಆರು ತಿಂಗಳ ಕೋರ್ಸ್​ನಲ್ಲಿ ಸಂಗೀತದ ಆಗುಹೋಗುಗಳನ್ನು ಕಲಿತಿದ್ದೆ. ಹಾಡುಗಳನ್ನು ರಿಮಿಕ್ಸ್ ಮಾಡಲು ಪ್ರಾರಂಭಿಸಿ ಕೆಲಸಗಿಟ್ಟಿಸಿಕೊಂಡಿದ್ದೆ. ಆದರೆ ಅದೆಲ್ಲವೂ ನನಗೆ ಸಹಾನುಭೂತಿಯಿಂದ ನೀಡಲಾಗುತ್ತಿದೆ ಎಂಬುದರ ಅರಿವಾಗಿತ್ತು.

ನನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಸಮಯ. ಅನೇಕ ಕ್ಲಬ್ ಮತ್ತು ಪಬ್​ಗಳಲ್ಲಿ ಅವಕಾಶ ಕೇಳಿದೆ. ಆದರೆ ಅಲ್ಲೆಲ್ಲಾ ನಾನು ಗಾಲಿ ಕುರ್ಚಿಯಲ್ಲಿ ಕೂತಿರುವುದೇ ಸಮಸ್ಯೆಯಾಗಿತ್ತು. ಎಲ್ಲರ ನಿರಾಕರಣೆಯಿಂದ ನಾನು ಹಲವಾರು ಪಾಠಗಳನ್ನು ಕಲಿಯುತ್ತಿದ್ದೆ. ಆದರೆ ನನ್ನ ಬಗ್ಗೆ ನನಗಿದ್ದ ಆತ್ಮ ವಿಶ್ವಾಸ ಎಲ್ಲೂ ಕೊನೆಯಾಗಿರಲಿಲ್ಲ.

ಇದೆಲ್ಲದಕ್ಕೂ ಒಂದು ಕೊನೆ ಇರಲಿದೆ ಎಂಬುದು ನನ್ನ ನಂಬಿಕೆಯಾಗಿತ್ತು. ಅದರಂತೆ ಕಳೆದ ವರ್ಷ ಜೂನ್​ನಲ್ಲಿ ನನಗೊಂದು ಕ್ಲಬ್​ನಲ್ಲಿ ಡಿಜೆಯಾಗಿ ಕಾರ್ಯ ನಿರ್ವಹಿಸುವ ಅವಕಾಶ ಒದಗಿತು. ಆ ಒಂದು ಕಾರ್ಯ ನನ್ನ ಜೀವನಕ್ಕೆ ಹೊಸ ಬ್ರೇಕ್​ ನೀಡಿದೆ. ಅಂದು ನಾನು ಪ್ಲೇ ಮಾಡಿದ ಸಂಗೀತಕ್ಕೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಅವರೆಲ್ಲರೂ ನನ್ನ ಪ್ರತಿಭೆಯನ್ನು ಅಭಿನಂದಿಸಿದರು.  ಭಾರತದ ಗಾಲಿ ಕುರ್ಚಿ ಡಿಜೆ ಎಂದೇ ಇಂದು ಎಲ್ಲರೂ ನನ್ನನ್ನು ಗುರುತಿಸುತ್ತಿದ್ದಾರೆ. ಇಂದು ನಾನು ಮ್ಯೂಸಿಕ್ ಪ್ಲೇ ಮಾಡುತ್ತಿದ್ದರೆ ನಿಮ್ಮ ಪಾದಗಳು ನನ್ನ ಆಜ್ಞೆಯಂತೆ ಕುಣಿಯುತ್ತದೆ ಎಂದು ಹೇಳುವಾಗ ಡಿಜೆ ಅಭಿಲಾಷ್ ಮುಖದಲ್ಲಿ ಹೊಸ ತೇಜಸ್ಸು ಕಾಣುತ್ತಿತ್ತು.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...