ಬಾಚಣಿಗೆಯಲ್ಲಿ ಕೂದಲು ಕಿತ್ತುಬರುತ್ತಾ?; ಕೂದಲು ಉದುರುವಿಕೆಗೆ ಮನೆಯಲ್ಲೇ ಇದೆ ರಾಮಬಾಣ

ಹೆಣ್ಣುಮಕ್ಕಳ ಸೌಂದರ್ಯಕ್ಕೆ ಸೊಂಪಾದ ಕೂದಲೇ ಕಳಶವಿದ್ದಂತೆ. ಆರೋಗ್ಯಯುತವಾದ ಕೂದಲಿನಿಂದ ಮುಖದ ಸೌಂದರ್ಯವೂ ಹೆಚ್ಚಾಗುತ್ತದೆ. ಕೂದಲ ರಕ್ಷಣೆ ಹೇಗೆ ಮಾಡಿಕೊಳ್ಳುವುದು ಎಂಬುದು ಬಹುತೇಕ ಎಲ್ಲ ಮಹಿಳೆಯರ ದೊಡ್ಡ ತಲೆನೋವು. ಅದಕ್ಕೆಂದೇ ಯುವತಿಯರಂತೂ ನಾನಾ ರೀತಿಯ ಔಷಧಿಗಳನ್ನು ಟ್ರೈ ಮಾಡುತ್ತಾರೆ.

sushma chakre | news18
Updated:January 31, 2019, 7:01 PM IST
ಬಾಚಣಿಗೆಯಲ್ಲಿ ಕೂದಲು ಕಿತ್ತುಬರುತ್ತಾ?; ಕೂದಲು ಉದುರುವಿಕೆಗೆ ಮನೆಯಲ್ಲೇ ಇದೆ ರಾಮಬಾಣ
ಸಾಂದರ್ಭಿಕ ಚಿತ್ರ
  • News18
  • Last Updated: January 31, 2019, 7:01 PM IST
  • Share this:
ಮೊದಲೆಲ್ಲ ಸಂಜೆಯಾಗುತ್ತಿದ್ದಂತೆ ಅಜ್ಜಿ ತಲೆಗೆ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡುತ್ತಿದ್ದಳು. ಬೆಳಗ್ಗೆ ಶಾಲೆಗೆ ಹೋಗಲು ರೆಡೆಯಾಗುತ್ತಿದ್ದಂತೆ ಕೈಗೆ ಇನ್ನೊಂದಷ್ಟು ಎಣ್ಣೆ ಸವರಿಕೊಂಡು ನೀಟಾಗಿ ಜಡೆ ಹೆಣೆದು ಕಳುಹಿಸಿದರೆ ಸಂಜೆಯವರೆಗೂ ಒಂದು ಕೂದಲು ಕೂಡ ಅಲುಗಾಡುತ್ತಿರಲಿಲ್ಲ. ಭಾನುವಾರ ಬಂತೆಂದರೆ ದಾಸವಾಳ ಸೊಪ್ಪು, ಮತ್ತಿ ಸೊಪ್ಪು ನೆನೆಸಿಟ್ಟುಕೊಂಡು ಅದನ್ನು ತಲೆಗೆ ಹಚ್ಚಿಕೊಂಡರೆ ಆ ತಂಪಿಗೆ ನೆಗಡಿಯೇ ಆಗುತ್ತಿತ್ತು. ಇನ್ನು, ಪ್ರತಿಯೊಬ್ಬರ ಬಚ್ಚಲು ಮನೆಯಲ್ಲೂ ಸೀಗೆಪುಡಿಯ ಡಬ್ಬ ಇರಲೇಬೇಕಾಗಿತ್ತು. ಆದರೀಗ, ಕೂದಲು ಫ್ರೀ ಬಿಟ್ಟುಕೊಳ್ಳುವುದೇ ಫ್ಯಾಷನ್​. ಜಡೆ ಹಾಕುವವರಂತೂ ಇಲ್ಲವೇ ಇಲ್ಲ ಎನ್ನಬಹುದು. ಹೆಚ್ಚೆಂದರೆ ಕೂದಲಿಗೆ ಒಂದು ಕ್ಲಿಪ್ ಹಾಕಿಕೊಂಡು ಬಂಧಿಸಿಡಬಹುದಷ್ಟೆ.

ಸಾಮಾನ್ಯವಾಗಿ ಚಳಿಗಾಲ ಮತ್ತು ಬೇಸಿಗೆಯಲ್ಲಿ ತಲೆಕೂದಲು ಉದುರುವುದು ಹೆಚ್ಚು. ಚಳಿಗಾಲದಲ್ಲಿ ಚರ್ಮ ಶುಷ್ಕವಾಗುವುದರಿಂದ ತಲೆಬುರುಡೆ ಒಣಗಿ ಕೂದಲು ಉದುರಲಾರಂಭಿಸುತ್ತದೆ. ಹಾಗೇ, ಬೇಸಿಗೆಯಲ್ಲಿ ದೇಹ ಬೆವರುವುದರಿಂದ ಬೆವರು ಮತ್ತು ಕೊಳೆ ಸೇರಿಕೊಂಡು ಕೂದಲ ಬುಡ ಸಡಿಲವಾಗುತ್ತದೆ. ಹೀಗಾಗಿ, ಕೂದಲು ಉದುರುವಿಕೆಯೂ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ನೀರಿಲ್ಲದೆ ಏನಿಲ್ಲ; ಜಿಮ್​ನಲ್ಲಿದ್ದಾಗ ಯಾಕೆ ನೀರು ಕುಡಿಯಬೇಕು ಗೊತ್ತಾ?

ಮನೆಯಲ್ಲಿರುವ ವಸ್ತುಗಳಿಂದಲೇ ತಲೆಕೂದಲು ಉದುರುವುದನ್ನು ತಡೆಗಟ್ಟಲು ಸಾಧ್ಯವಿದೆ. ಮನೆಯಲ್ಲೇ ಬಳಸುವ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಬ್ರಾಹ್ಮಿ, ದಾಸವಾಳ, ಸೀಗೆಕಾಯಿ ಹೀಗೆ ಆಯುರ್ವೇದಿಕ್​ ಅಂಶಗಳಿಂದ ತಲೆಕೂದಲು ಉದುರುವುದನ್ನು ತಡೆಗಟ್ಟಬಹುದು. ಹಾಗಾದರೆ, ಕೂದಲು ಉದುರುವಿಕೆ ತಡೆಗಟ್ಟಲು ಇರುವ ಸುಲಭ ಮಾರ್ಗಗಳಾದರೂ ಯಾವುದು? ಇಲ್ಲಿದೆ ಕೆಲ ಮಾಹಿತಿ...

ದೇಹದಲ್ಲಿ ಪಿತ್ತದ ಅಥವಾ ಉಷ್ಣಾಂಶದ ಪ್ರಮಾಣ ಹೆಚ್ಚಾದರೆ ಕೂದಲು ಉದುರುವಿಕೆ ಹೆಚ್ಚುತ್ತದೆ. ಹೀಗಾಗಿ, ದೇಹವನ್ನು ಎಷ್ಟು ತಂಪಾಗಿ ಇಟ್ಟುಕೊಳ್ಳುತ್ತೀರೋ ಅಷ್ಟು ಆರೋಗ್ಯವೂ ಸಮಸ್ಥಿತಿಯಲ್ಲಿರುತ್ತದೆ. ನಿಮ್ಮ ಆರೋಗ್ಯ ಹಿಡಿತಕ್ಕೆ ಸಿಕ್ಕರೆ ಕೂದಲು ಉದುರುವಿಕೆ ಪ್ರಮಾಣವೂ ಕಡಿಮೆಯಾಗುತ್ತದೆ. ಆದಷ್ಟು ಮಜ್ಜಿಗೆ ಕುಡಿಯುವುದು, ಅತಿಹೆಚ್ಚು ನೀರು ಕುಡಿಯುವುದು, ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಸಾಜ್​ ಮಾಡಿಕೊಳ್ಳುವುದು, ಕಲ್ಲಂಗಡಿ, ದ್ರಾಕ್ಷಿ, ಸೌತೆಕಾಯಿಯನ್ನು ಹೆಚ್ಚಾಗಿ ಬಳಸುವುದರಿಂದ ಕೂದಲು ಸದೃಢವಾಗುತ್ತದೆ.

ಇದನ್ನೂ ಓದಿ: ಮಲಗುವ ಮುನ್ನ ಎರಡು ಏಲಕ್ಕಿ ಸೇವಿಸಿ: ಆಮೇಲೆ ಕಾಣುವಿರಿ ಸಕಾರಾತ್ಮಕ ಪರಿಣಾಮ

ಉತ್ತಮ ಗುಣಮಟ್ಟದ ತೆಂಗಿನೆಣ್ಣೆಯ ಜೊತೆಗೆ ಭೃಂಗರಾಜ ಎಣ್ಣೆಯೂ ಕೂದಲಿಗೆ ಅತ್ಯುತ್ತಮ ಆಯ್ಕೆ. ಭೃಂಗರಾಜ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಇದರಿಂದ ಕೂದಲಿನ ಬೆಳವಣಿಗೆಯೂ ಹೆಚ್ಚುತ್ತದೆ.ಮೊಸರು ತಿಂದರೆ ದಪ್ಪ ಆಗುತ್ತೇವೆ ಎಂದು ಬಹಳಷ್ಟು ಯುವತಿಯರು ಮೊಸರನ್ನು ಬಳಸುವುದೇ ಇಲ್ಲ. ಆದರೆ, ಇದೇ ಮೊಸರನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಕಂಡೀಷನರಿಂಗ್​ ರೀತಿ ಕೆಲಸ ಮಾಡುತ್ತದೆ. ಹೊಸ ಕೂದಲು ಬೆಳೆಯಲು, ಕೂದಲಿನ ಬುಡದಲ್ಲಿರುವ ಕೊಳೆಯನ್ನು ಕಿತ್ತೊಗೆದು ಕೂದಲ ಉಸಿರಾಟಕ್ಕೆ ಉತ್ತೇಜನ ನೀಡುತ್ತದೆ. ತಲೆಸ್ನಾನ ಮಾಡುವ 15 ನಿಮಿಷಕ್ಕೂ ಮುನ್ನ ತಲೆಗೆ ಮೊಸರನ್ನು ಹಚ್ಚಿಡಿ. ಕೈ ಬೆರಳಿಂದ ಮೆಲ್ಲಗೆ ಮಸಾಜ್​ ಮಾಡಿ. ನಂತರ ಹೆಚ್ಚು ಸ್ಟ್ರಾಂಗ್​ ಇಲ್ಲದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಅತಿಯಾದ ಬಿಸಿನೀರು ಬಳಸಬೇಡಿ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾದರೆ ಮಾತ್ರವಲ್ಲ ಸೋಂಕು ತಗಲಿದರೂ ಹೃದಯಾಘಾತ ಸಂಭವಿಸುತ್ತೆ!

ಬೆಟ್ಟಗಳಲ್ಲಿ ದೊರೆಯುವ ನೆಲ್ಲಿಕಾಯಿ ಕೂಡ ತಲೆಕೂದಲ ಬೆಳವಣಿಗೆಗೆ ಅತ್ಯಂತ ಸಹಾಯ ಮಾಡಬಲ್ಲದು. ವಿಟಮಿನ್​ ಸಿ ಕೊರತೆಯಿಂದ ಕೂದಲು ಉದುರುತ್ತದೆ. ಆದರೆ, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವುದರಿಂದ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ. ಇದರಿಂದ ತಲೆಹೊಟ್ಟು ಕೂಡ ಕಡಿಮೆಯಾಗುತ್ತದೆ. ನೆಲ್ಲಿಕಾಯಿಯೊಂದಿಗೆ ತೆಂಗಿನೆಣ್ಣೆಯನ್ನು ಮಿಕ್ಸ್​ ಮಾಡಿ ಒಲೆಯ ಮೇಲಿಟ್ಟು ಕುದಿಸಿ. ಈ ಎಣ್ಣೆ ತಲೆಯ ಕೂದಲಿಗೆ ಗಾಢ ಕಪ್ಪು ಬಣ್ಣ ನೀಡುವುದರೊಂದಿಗೆ ಸದೃಢವಾಗಿಯೂ ಬೆಳೆಯುತ್ತದೆ.

ಮೆಂತೆ ಅತ್ಯಂತ ತಂಪಾದ ಅಂಶವನ್ನು ಹೊಂದಿರುವುದರಿಂದ ಕೂದಲಿಗೆ ಉತ್ತಮ ಕಂಡೀಷನರಿಂಗ್​ ಆಗಬಲ್ಲದು. ಇದರಲ್ಲಿ ಪ್ರೋಟೀನ್​ ಮತ್ತು ನಿಕೋಟಿನ್​ ಅಂಶ ಹೆಚ್ಚಾಗಿರುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಮೆಂತ್ಯೆಯನ್ನು ರುಬ್ಬಿ ಅರ್ಧ ಗಂಟೆ ತಲೆಗೆ ಹಚ್ಚಿಕೊಂಡು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

First published:January 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ