ಮಂಗಳ ಗ್ರಹದಲ್ಲಿ ಒಂದು ಸುತ್ತು: ಕೂತೂಹಲ ಮೂಡಿಸಿದ ಹೊಸ ಸಂಶೋಧನೆ

news18
Updated:August 5, 2018, 4:07 PM IST
ಮಂಗಳ ಗ್ರಹದಲ್ಲಿ ಒಂದು ಸುತ್ತು: ಕೂತೂಹಲ ಮೂಡಿಸಿದ ಹೊಸ ಸಂಶೋಧನೆ
news18
Updated: August 5, 2018, 4:07 PM IST
-ನ್ಯೂಸ್ 18 ಕನ್ನಡ

ಮಂಗಳ ಗ್ರಹದಲ್ಲಿ ನೀರು ಇದೆಯೆಂಬ ಸಂಶೋಧನೆಗೆ ಈಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಆ ಸುಳಿವು ಇದುವರೆಗೆ ಮಂಗಳನ ಬಗ್ಗೆ ಇದ್ದ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗಾಗುವಂತೆ ಮಾಡಿದೆ. ಮಂಗಳನಲ್ಲಿ ಬದುಕಲು ಸಾಧ್ಯವೇ ಇಲ್ಲ ಅನ್ನುತ್ತಿದ್ದ ವಿಜ್ಞಾನಿಗಳೇ ಇದೀಗ ದಂಗು ಬಡಿದುಹೋಗಿದ್ದಾರೆ. ಹಾಗಾದ್ರೆ ಏನದು ಟ್ವಿಸ್ಟ್?

ಈ ಜಗತ್ತಿನಲ್ಲಿ ಮನುಷ್ಯ ಬದುಕಲು, ಜೀವನ ನಡೆಸಲು ಇರುವ ಏಕೈಕ ಜಾಗವೇ ಭೂಮಿ. ಹೀಗಂತ ಈ ಹಿಂದೆ ನಂಬಲಾಗಿತ್ತು, ಆದ್ರೆ ಯಾವಾಗ ದೊಡ್ಡ ದೊಡ್ಡ ವಿಜ್ಞಾನಿಗಳು ಭೂಮಿಯೊಂದೇ ಅಲ್ಲ, ಭೂಮಿಯಂಥ ಲಕ್ಷಾಂತರ ಕೋಟ್ಯಂತರ ಗ್ರಹಗಳು ಈ ವಿಶಾಲ ಜಗತ್ತಿನಲ್ಲಿ ಇರಬಹುದು ಅನ್ನುವ ಆಶಾವಾದವೊಂದನ್ನು ಹೊರಹಾಕಿದ್ರು ಅಲ್ಲಿಂದಾಚೆಗೆ ಭೂಮಿಯ ಸುತ್ತಮುತ್ತಲೂ ಇರೋ ಗ್ರಹಗಳ ಬೇಟೆ ಶುರುವಾಯ್ತು. ಮೊದಲಿಗೆ ಸ್ಯಾಟಲೈಟ್​ಗಳ ಮೂಲಕ ನಂತರ ರೋವರ್​ಗಳ ಮೂಲಕ ಆನಂತರ ಮನುಷ್ಯರೇ ಗ್ರಹಗಳಿಗೆ ಕಾಲಿಡುವಂತೆ ತಂತ್ರಜ್ಞಾನ ಬೆಳೆಯಿತು. ಆದರೆ ಚಂದ್ರನಲ್ಲಿಗೆ ಹೋಗಿ ಬಂದ ವಿಜ್ಞಾನಿಗಳು ಅಲ್ಲಿ ಮನುಷ್ಯ ಬದುಕೋದು ಕಷ್ಟ ಅಂತ ಕಂಡುಕೊಂಡರು. ವಿಜ್ಞಾನಿಗಳು ತಮ್ಮ ಪ್ರಯತ್ನವನ್ನು ಮತ್ತೊಂದು ಗ್ರಹದತ್ತ ತಿರುಗಿಸಿದ್ದರು, ಆ ಗ್ರಹವೇ ಮಂಗಳ ಗ್ರಹ ಅಥವಾ ರೆಡ್ ಪ್ಲಾನೆಟ್.

ಕುತೂಹಲಗಳ ತಾಣ ರೆಡ್ ಪ್ಲಾನೆಟ್!

ಚಂದ್ರನ ಅಂಗಳದಲ್ಲಿ ಮನುಷ್ಯ ಬದುಕುಳಿಯಬಹುದಾದ ಯಾವ ಸುಳಿವೂ ಸಿಗದಿದ್ದಾಗ ಬಾಹ್ಯಾಕಾಶ ಸಂಶೋಧಕರ ಗಮನ ಹರಿದಿದ್ದು ರೆಡ್ ಪ್ಲಾನೆಟ್ ಕಡೆಗೆ. ಬರೇ ಕೆಂಪು ಮಣ್ಣಿನಿಂದಲೇ ತುಂಬಿರೋ ರೆಡ್ ಪ್ಲಾನೆಟ್ ಅಥವಾ ಮಂಗಳ ಗ್ರಹದಲ್ಲಿ ಇಂದೊಮ್ಮೆ ನೀರು ಹರಿದಿತ್ತು ಅನ್ನುವ ವಾದ 2000 ನೇ ಇಸವಿಯಲ್ಲಿ ಶುರುವಾಗಿತ್ತು. ಆಗಿನಿಂದಲೂ ಚಂದ್ರನ ಅಂಗಳದ ಬಗ್ಗೆ ಒಂದಿಲ್ಲೊಂದು ಸಂಶೋಧನೆಗಳು ನಡೆಯುತ್ತಲೇ ಇವೆ. ಸದ್ಯದಲ್ಲೇ ಮನುಷ್ಯನನ್ನೂ ಕೂಡ ಮಂಗಳನ ಅಂಗಳಕ್ಕೆ ಕಳುಹಿಸುವ ತಯಾರಿಗಳು ನಡೆಯುತ್ತಿವೆ.

ಮಂಗಳನ ಅಂಗಳದಲ್ಲಿ ನೀರಿತ್ತಾ? ಇದೆಯಾ ಅನ್ನೋ ಜಾಡು ಹಿಡಿದು 2003 ರಲ್ಲಿ ಮಂಗಳನ ಅಧ್ಯಯನಕ್ಕಾಗಿ ಕೃತಕ ಉಪಗ್ರಹವೊಂದನ್ನ ಹಾರಿಸಲಾಗಿತ್ತು, ಯೂರೋಪಿಯನ್ ಸ್ಪೇಸ್ ಏಜೆನ್ಸಿ, ಇಟಾಲಿಯನ್ ಸ್ಪೇಸ್ ಏಜೆನ್ಸಿ ಮತ್ತು ನಾಸಾ ಸಂಸ್ಥೆ ಜಂಟಿಯಾಗಿ ಉಡಾಯನಗೊಳಿಸಿದ್ದ ಆ ಕೃತಕ ಉಪಗ್ರಹವೇ ಮಾರ್ಸ್ ಎಕ್ಸ್ಪ್ರೆಸ್ ಪ್ರೋಬ್. ಸುಮಾರು 15 ವರ್ಷಗಳಿಂದಲೂ ಚಂದ್ರನ ಅಂಗಳದ ಬಗ್ಗೆ ಕುತೂಹಲದ ಕಣ್ಣಿಟ್ಟಿರುವ 'ಮಾರ್ಸ್ ಎಕ್ಸ್ಪ್ರೆಸ್ ಪ್ರೋಬ್' ಇತ್ತೀಚೆಗೆ ವಿಜ್ಞಾನಿಗಳೇ ಬೆಚ್ಚಿಬೀಳುವಂಥ ಮಾಹಿತಿಯೊಂದನ್ನು ಕಲೆಹಾಕಿದೆ.

ನೂರಾರು ವರ್ಷಗಳ ಅಧ್ಯಯನಕ್ಕೆ ಸಿಕ್ಕಿದೆ ರೋಚಕ ಟ್ವಿಸ್ಟ್!
Loading...

ಮಂಗಳನ ಸುತ್ತ ಸುತ್ತುತ್ತಿರುವ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ 'ಮಾರ್ಸ್ ಎಕ್ಸ್ಪ್ರೆಸ್ ಪ್ರೋಬ್'ನಲ್ಲಿರುವ ಮಾರ್ಸಿಸ್ ರಾಡಾರ್, ಮಂಗಳ ಗ್ರಹದಲ್ಲಿ ಬೃಹತ್ ಸರೋವರವೊಂದನ್ನು ಪತ್ತೆಹಚ್ಚಿರುವುದಾಗಿ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ. ಅಂದಹಾಗೆ ಆ ಸರೋವರ ಇರುವುದು ಮಂಗಳ ಗ್ರಹದ ದಕ್ಷಿಣ ಧೃವ ಪ್ರದೇಶದಲ್ಲಿ. ಮಂಗಳನ ನೆಲದಿಂದ ಒಂದೂವರೆ ಕಿಲೋಮೀಟರ್ಗಳಷ್ಟು ಆಳದಲ್ಲಿರುವ ಆ ಸರೋವರದಲ್ಲಿ ಉಪ್ಪುಮಿಶ್ರಿತ ನೀರು ಇದೆಯಂತೆ, ಆ ನೀರು ಧೃವ ಪ್ರದೇಶದ ಶೀತದಿಂದಾಗಿ ಹೆಪ್ಪುಗಟ್ಟಿದೆ ಎನ್ನಲಾಗಿದೆ. ವಿಶೇಷ ಅಂದ್ರೆ ಆ ಸರೋವರದಲ್ಲಿ ಈ ಹಿಂದೆ ಜೀವಿಗಳು ಬದುಕಿದ್ದವು ಅನ್ನುವ ಲೆಕ್ಕಾಚಾರಕ್ಕೆ ಹೊಸದೊಂದು ಟ್ವಿಸ್ಟ್ ಕೊಟ್ಟಿದೆ.

ಮಂಗಳ ಗ್ರಹದಲ್ಲಿ ಜೀವಿಗಳಿದ್ದವು ಎಂಬುದಕ್ಕೆ ಸಾಕ್ಷಿಯಾಗುತ್ತಾ ಸರೋವರ?
ಡಬ್ಲಿನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್​ನ ವಿಜ್ಞಾನಿ ಲಿಯೋ ಎನ್ರೈಟ್ ಪ್ರಕಾರ ಮಂಗಳ ಗ್ರಹದ ಒಡಲಲ್ಲಿ ಸರೋವರ ಕಾಣಿಸಿಕೊಂಡಿರುವುದು ಅಚ್ಚರಿಯ ವಿಷಯವಲ್ಲ. ಮೇಲ್ಮೈ ಭಾಗದಲ್ಲಿ ವಾತಾವರಣದ ಹೆಚ್ಚು ಶಾಖ ಮತ್ತು ಒತ್ತಡದಿಂದ ನೀರು ಆವಿಯಾಗಿದ್ದು, ಮಂಗಳನ ಆಳದಲ್ಲಿ ಅದರಲ್ಲೂ ಶೀತಪ್ರದೇಶದಲ್ಲಿ ನೀರು ಕಾಣಿಸಿಕೊಳ್ಳಬಹುದು ಅಂದಿದ್ದಾರೆ. ಈಗ ಪತ್ತೆಯಾಗಿರೋ ಉಪ್ಪು ನೀರಿನ ಸರೋವರ ಮುಂದೆ ಮಂಗಳ ಗ್ರಹದಲ್ಲಿ ಜೀವಿಗಳು ಬದುಕಿದ್ದವೆನ್ನುವ ಪ್ರಶ್ನೆಗೆ ಉತ್ತರ ಕೊಡಲಿದೆಯಂತೆ. ಇನ್ನು ನೀರಿರುವ ಪ್ರದೇಶದಲ್ಲಿ ಮೈನಸ್ 10 ರಿಂದ ಮೈನಸ್ 30 ಡಿಗ್ರಿ ಸೆಲ್ಸಿಯಸ್ ಶೀತ ವಾತಾವರಣ ಇರುವುದರಿಂದ ನೀರು ಉಪ್ಪಾಗಿರಬಹುದು ಅಂತ ಅಂದಾಜಿಸಲಾಗಿದೆಯಂತೆ. ಇನ್ನು ಮಿಲಿಯನ್ ವರ್ಷಗಳ ಹಿಂದೆ ನೀರು ಈ ರೂಪ ಪಡೆದುಕೊಂಡಿರಬಹುದು ಅಂತಲೂ ಅಂದಾಜಿಸಲಾಗಿದೆ.

ಶುರುವಾಗಿದೆ ಜೀವಿಗಳ ಕುರುಹುಗಳಿಗಾಗಿ ಹುಡುಕಾಟ!
ಮಂಗಳ ಗ್ರಹದಲ್ಲಿ ನೀರು ಇರುವುದು ಪಕ್ಕಾ ಅಂತ ಗೊತ್ತಾದ ಮೇಲೆ ಇದೀಗ ಸಂಶೋಧಕರು ಉತ್ಸುಕರಾಗಿದ್ದಾರೆ. ಹೀಗಾಗಿಯೇ ಒಂದಷ್ಟು ಭವಿಷ್ಯದ ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ. ಇಷ್ಟರಲ್ಲಿಯೇ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಕೆಂಪು ಗ್ರಹದ ಮೇಲೆ ತಮ್ಮ ರೋವರ್​ಗಳನ್ನು ಇಳಿಸಲು ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

ಬಹುಶಃ 2020ರ ವೇಳೆಗೆ ಅಮೆರಿಕದ ಅತ್ಯಾಧುನಿಕ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ಈ ಅತ್ಯಾಧುನಿಕ ರೋವರ್  ಜೀವಿಗಳ ಇರುವಿಕೆ ಮತ್ತು ಅಲ್ಲಿನ ವಾತಾವರಣದ ಬಗ್ಗೆ ಸಂಶೋಧನೆ ನಡೆಸಲಿದೆ. ಮಂಗಳ ಗ್ರಹದ ನೆಲ ಹೇಗಿದೆ, ಅದರಲ್ಲಿ ಯಾವ್ಯಾವ ರಾಸಾಯನಿಕಗಳಿವೆ. ಅವುಗಳಿಂದ ಏನು ಲಾಭ, ಏನು ತೊಂದರೆ.. ಹೀಗೆ ಮಂಗಳನ ನೆಲದ ಗುಣಲಕ್ಷಣಗಳನ್ನ ನೂತನ ರೋವರ್ ಪತ್ತೆಹಚ್ಚಲಿದೆ. ರಷ್ಯಾ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ 2021ಕ್ಕೆ ಎಕ್ಸೋಮಾರ್ಸ್ ರೋವರ್ ಅನ್ನು  ಮಂಗಳನ ಅಂಗಳಕ್ಕೆ ಕಳುಹಿಸಲಿದೆ. ನಾಸಾದ ಹಾದಿಯಲ್ಲೇ ಈ ರೋವರ್ ಕೂಡ ಸಂಶೋಧನೆ ನಡೆಸಲಿದೆ.

ಉಪ್ಪು ನೀರು ಮಾತ್ರಾನಾ ಅಥವಾ ?
ಮಂಗಳ ಗ್ರಹದಲ್ಲಿ ಸದ್ಯ ಉಪ್ಪು ನೀರಿನ ಸರೋವರವೇನೋ ಸಿಕ್ಕಿರೋದು ನಿಜ. ಆದ್ರೆ ಆ ನೀರು ಹೇಗಿರುತ್ತೆ? ಅದ್ರಲ್ಲಿ ಏನೇನಿರಲಿದೆ ಅನ್ನೋದೆಲ್ಲ ಗೊತ್ತಾಗಬೇಕಾದ್ರೆ ಹತ್ತಾರು ವರ್ಷಗಳೇ ಬೇಕಾಗುತ್ತವೆ. ಇದರಿಂದಾಚೆಗೆ ಮಂಗಳದಲ್ಲಿ ಇದುವರೆಗೂ ಸಿಹಿನೀರಿನ ಯಾವ ಮೂಲವೂ ಸಿಗದೇ ಇರುವುದೂ ಕೂಡ ವಿಜ್ಞಾನಿಗಳಲ್ಲಿ ಸ್ವಲ್ಪಮಟ್ಟದ ಬೇಸರವನ್ನೂ ಉಂಟುಮಾಡಿದೆ,

ಭೂಮಿಯಂತೆಯೇ ಇದೆಯಾ ರೆಡ್ ಪ್ಲಾನೆಟ್​​ನ ಅಂತರ್ಜಲ ವ್ಯವಸ್ಥೆ?

ನಮ್ಮ ಭೂಮಿಯ ಆಳದಲ್ಲಿ ಒಂದು ಅಂತರ್ಜಲ ವ್ಯವಸ್ಥೆ ಇದೆ. ಬೋರ್​ವೆಲ್​, ಬಾವಿಗಳನ್ನು ಕೊರೆದಾಗ ಭೂಮಿಯಾಳದ ಸಿಹಿನೀರು ಕುಡಿಯುವುದಕ್ಕೆ ಹಾಗೂ ಇತರ ಕೆಲಸಗಳಿಗೆ ಉಪಯೋಗವಾಗುತ್ತದೆ. ಸಂಶೋಧಕರ ಪ್ರಕಾರ ಭೂಮಿಯಾಳದಲ್ಲಿ ನೀರಿನ ನದಿಗಳೇ ಹರಿಯುತ್ತಿರಬಹುದಂತೆ, ಇದೇ ರೀತಿಯ ವ್ಯವಸ್ಥೆ ಮಂಗಳನ ಅಂಗಳದಲ್ಲಿಯೂ ಇರಬಹುದು ಅನ್ನೋದು ವಿಜ್ಞಾನಿಗಳ ನಂಬಿಕೆ. ಸಾವಿರ ಅಥವಾ ಲಕ್ಷಾಂತರ ವರ್ಷಗಳ ಹಿಂದೆ ಮಂಗಳನ ಮೇಲ್ಮೈನಲ್ಲಿ ಹರಿದ ನೀರು ಇದೀಗ ಮಂಗಳನ ಭೂಗರ್ಭ ಸೇರಿರಬಹುದು ಅನ್ನುವುದು ಸಂಶೋಧಕರ ಅಭಿಪ್ರಾಯ.

ನೂರಾರು ವರ್ಷಗಳಿಂದಲೂ ನಡೆಯುತ್ತಿರುವ ವಿಜ್ಞಾನಿಗಳ ಸಂಶೋಧನೆಗೆ ಇದೀಗ ಒಂದು ಸಣ್ಣ ಸಮಾಧಾನ ಸಿಕ್ಕಂತಾಗಿದೆ. ಆದರೆ ಸರೋವರದ ಅಡಿಯಲ್ಲಿ ನಿಜಕ್ಕೂ ಏನಿದೆ..? ಆ ನೀರಿನಲ್ಲಿ ಏನೇನು ಅಡಗಿದೆ…? ಆ ಸರೋವರದಲ್ಲಿರೋದು ನಿಜಕ್ಕೂ ನೀರಾ ಎಂಬುದೆಲ್ಲಾ ತಿಳಿಯಲು ಇನ್ನೂ ಎಷ್ಟು ವರ್ಷ ಮಂಗಳನ ನೆಲವನ್ನ ಕೆದಕಬೇಕೋ..ವಿಜ್ಞಾನಿಗಳೇ ಉತ್ತರಿಸಬೇಕಿದೆ.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...