ಭಾನುವಾರ ವಿಶೇಷವಾಗಿ ಚಿಕನ್ ರೆಸಿಪಿ (Chicken Recipe) ತಿನ್ನುವ ಮನಸಾಗಿದೆಯಾ? ಅದೇ ನಾರ್ಮಲ್ ಚಿಕನ್ ಸಾರು, ಚಿಕನ್ ಸುಕ್ಕ ತಿಂದು ಬೇಜಾರಾಗಿದ್ರೆ ಈ ಬಾರಿ ಏನಾದ್ರೂ ಹೊಸದನ್ನು ಟ್ರೈ ಮಾಡಿ. ದಿನಾ ತಿನ್ನುವ ರುಚಿಗಿಂತ ಡಿಫರೆಂಟಾಗಿ (Different) ಇಂದು ಬೇರೆ ಊರಿನ, ಬೇರೆ ಪಾಕ ವಿಧಾನದ ಚಿಕನ್ ಕರಿ (Chicken Curry) ಮಾಡಿ ರುಚಿ ನೋಡುವ ಮನಸಿದ್ದರೆ ಇಲ್ಲೊಂದು ಸೂಪರ್ ರೆಸಿಪಿ (Recipe) ಇದೆ. ಭಾನುವಾರ ಫ್ಯಾಮಿಲಿ ಜೊತೆ ಮನೆಯಲ್ಲೇ ಟೇಸ್ಟಿ ಚಿಕನ್ ಸಲ್ನಾ (Chicken Salna) ಮಾಡಿ ಊಟ ಮಾಡಿ.
ಮಸಾಲೆಗಳಲ್ಲಿ ನಿಧಾನವಾಗಿ, ಹದವಾಗಿ ಬೇಯಿಸಿದ ಚಿಕನ್ ಒಂದು ವಿಶೇಷವಾದ ಘಮವನ್ನು ಹೊರಸೂಸುತ್ತದೆ. ಈ ರುಚಿಕರವಾದ ಚಿಕನ್ ರೆಸಿಪಿ ಪರೋಟ, ರೊಟ್ಟಿ, ಚಪಾತಿ ಹಾಗೂ ರೈಸ್ ಜೊತೆ ಮತ್ತೊಂದು ಲೆವೆಲ್ ರುಚಿಯನ್ನು ನಿಮಗೆ ಕೊಡುತ್ತದೆ. ತಮಿಳುನಾಡು ಭಾಗದಲ್ಲಿ ಮಾಡುವ ಈ ಗ್ರಾಮೀಣ ಚಿಕನ್ ಕರಿ ರೆಸಿಪಿ ಇಲ್ಲಿದೆ.
ಬೇಕಾದ ವಸ್ತುಗಳು:
ಅರ್ಧ ಕೆಜಿ ಚಿಕನ್
2 ಈರುಳ್ಳಿ
2 ಟೊಮೆಟೋ
ಒಂದಿಂಚು ಶುಂಠಿ
4-5 ಬೆಳ್ಳುಳ್ಳಿ ಎಸಳು
10-12 ಒಗ್ಗರಣೆ ಸೊಪ್ಪು
1 ಟೇಬಲ್ ಸ್ಪೂನ್ ಗರಂ ಮಸಾಲ
ರುಚಿಗೆ ತಕ್ಕಷ್ಟು ಉಪ್ಪು
ಸಲ್ನಾ ಪೇಸ್ಟ್ಗೆ ಏನೇನು ಬೇಕು?
2 ಟೇಬಲ್ ಸ್ಪೂನ್ ಸೋಂಪು
1 ಟೇಬಲ್ ಸ್ಪೂನ್ ಕರಿಮೆಣಸು
ಕಾಲು ಕಪ್ ಫ್ರೆಶ್ ತೆಂಗಿನತುರಿ
1 ಸ್ಟಾರ್
4-5 ಲವಂಗ
2 ಟೇಬಲ್ ಸ್ಪೂನ್ ಪೀನಟ್ ಆಯಿಲ್
ದಾಲ್ಚೀನಿ
ಚಿಕನ್ ಸಲ್ನಾ ತಯಾರಿಸಲು ಪಾಕವಿಧಾನವನ್ನು ಪ್ರಾರಂಭಿಸೋಕೆ ಮೊದಲು ಸಲ್ನಾ ಪೇಸ್ಟ್ ಅನ್ನು ತಯಾರಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ, ಪೀನಟ್ ಆಯಿಲ್ ಅಥವಾ ಕಡಲೆ ಎಣ್ಣೆಯನ್ನು ದೊಡ್ಡ ಪಾತ್ರೆಯಲ್ಲಿ ಬಿಸಿ ಮಾಡಿಕೊಳ್ಳಿ. ನಂತರ ಸೋಂಪು ಬೀಜಗಳು, ಕಾಳುಮೆಣಸು, ದಾಲ್ಚಿನ್ನಿ ಕಡ್ಡಿ, ಲವಂಗ ಮತ್ತು ಸ್ಟಾರ್ ಸೇರಿಸಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ.
ನಂತರ ತಾಜಾ ತೆಂಗಿನಕಾಯಿ ತುರಿ ಸೇರಿಸಿ ಮತ್ತು ತೆಂಗಿನಕಾಯಿ ಸ್ವಲ್ಪ ಕೆಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಈ ಹುರಿಯುವ ಪ್ರಕ್ರಿಯೆಯು ಸುಮಾರು 5-7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಉರಿಯನ್ನು ಆಫ್ ಮಾಡಿ ಇವಿಷ್ಟನ್ನು ತಣ್ಣಗಾಗಲು ಬಿಟ್ಟು ಪಕ್ಕಕ್ಕೆ ಇರಿಸಿ.
ತಣ್ಣಗಾದ ನಂತರ, ಹುರಿದ ಮಸಾಲವನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ರುಬ್ಬಿಕೊಳ್ಳುವಾಗ ಹೆಚ್ಚು ನೀರು ಸೇರಿಸಬೇಡಿ.
ಅದೇ ಪಾತ್ರೆಯಲ್ಲಿ, ಮಧ್ಯಮ ಉರಿಯಲ್ಲಿ ಸ್ವಲ್ಪ ಎಣ್ಣೆಯನ್ನು (ಯಾವುದೇ ಎಣ್ಣೆಯಾದರೂ ಬಳಸಬಹುದು) ಬಿಸಿ ಮಾಡಿ, ಚಿಕನ್ ತುಂಡುಗಳು, ಅರಿಶಿನ ಮತ್ತು ಉಪ್ಪನ್ನು ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಈ ಸಂದರ್ಭ ಚಿಕನ್ ಅನ್ನು ನೀವು ಹೆಚ್ಚು ಬೇಯಿಸಬಾರದು.
ಚಿಕನ್ ತುಂಡುಗಳನ್ನು ತೆಗೆದು ಸೈಡ್ನಲ್ಲಿ ಆರಲು ಬಿಡಿ. ಬಾಣಲೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ. ಅದು ಸ್ವಲ್ಪ ಫ್ರೈ ಆಗಲು ಬಿಡಿ. ಶುಂಠಿ, ಬೆಳ್ಳುಳ್ಳಿ ಸೇರಿಸಿ. ಒಂದೆರಡು ನಿಮಿಷಗಳವರೆಗೆ ಹುರಿಯಿರಿ. ಈರುಳ್ಳಿ ಸೇರಿಸಿ ಮತ್ತು ಅದು ನಸುಗೆಂಪು ಬಣ್ಣಕ್ಕೆ ಬದಲಾಗುವ ತನಕ ನಿಧಾನಕ್ಕೆ ಹುರಿಯಿರಿ. ಮುಂದೆ ಟೊಮ್ಯಾಟೊ ಸೇರಿಸಿ ಸ್ವಲ್ಪ ಉಪ್ಪು ಹಾಕಿ ಟೊಮ್ಯಾಟೊ ಸಾಫ್ಟ್ ಆಗುವ ತನಕ ಬೇಯಿಸಿ.
ನಂತರ ಕೊನೆಯ ಹಂತದಲ್ಲಿ ಗರಂ ಮಸಾಲಾ, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಜೊತೆಗೆ ರುಬ್ಬಿದ ಮಸಾಲಾ ಪೇಸ್ಟ್ ಅನ್ನು ಪಾತ್ರೆಯಲ್ಲಿ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಪುಡಿಗಳ ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
ಈಗ ಚಿಕನ್ ತುಂಡುಗಳನ್ನು ಗ್ರೇವಿಗೆ ಸೇರಿಸಿ. ಅರ್ಧ ಕಪ್ ನೀರು, ರುಚಿಗೆ ಉಪ್ಪು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿ. ಈಗ ನಿಮ್ಮ ಚಿಕನ್ ಸಲ್ನಾ ಸವಿಯಲು ಸಿದ್ಧ. ಪರೋಟ, ಚಪಾತಿ, ರೊಟ್ಟಿ ಅಥವಾ ರೈಸ್ ಜೊತೆ ಸವಿಯಲು ಇದು ಸಖತ್ ಟೇಸ್ಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ