• Home
  • »
  • News
  • »
  • lifestyle
  • »
  • Mudukuthore History: ಜೀವನದಿ ಕಾವೇರಿ ದಡದಲ್ಲಿದೆ ಸುಂದರ ದೇವಾಲಯ, ಮುಡುಕುತೊರೆಯ ಇತಿಹಾಸ ಇದು

Mudukuthore History: ಜೀವನದಿ ಕಾವೇರಿ ದಡದಲ್ಲಿದೆ ಸುಂದರ ದೇವಾಲಯ, ಮುಡುಕುತೊರೆಯ ಇತಿಹಾಸ ಇದು

ಮುಡುಕುತೊರೆ

ಮುಡುಕುತೊರೆ

Mudukuthore Place History: ಮುಡುಕುತೊರೆ ಆಸ್ತಿಕ ನಾಸ್ತಿಕರಿಬ್ಬರನ್ನೂ ಸೆಳೆಯುವ ತಾಣವಾಗಿದೆ. ನೀವು ಮೈಸೂರಿನಿಂದ ಇಲ್ಲಿಗೆ ಬೈಕ್​ನಲ್ಲಿ ಕೇವಲ 1.30 ಗಂಟೆಗಳಲ್ಲಿ ಸಹ ತಲುಪಬಹುದು. ಇಲ್ಲಿಗೆ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ.

  • Share this:

ಒಂದು ಬದಿ ಜೀವ ನದಿ ಕಾವೇರಿ (Kaveri), ಇನ್ನೊಂದೆಡೆ ಹಸಿರ ಹೊದಿಕೆಯನ್ನು ಹೊದ್ದು ಮಲಗಿರುವ ಬೆಟ್ಟ ಅದರ ಮಧ್ಯೆ ದೇವಸ್ಥಾನವಿದ್ದರೆ (Temple), ನೋಡಲು ಅದೆಷ್ಟು ಸುಂದರ ಅಲ್ವಾ?. ಈ ರೀತಿಯ ಸಾವಿರಾರು ವರ್ಷಗಳ ಇತಿಹಾಸವನ್ನು (history) ಹೊಂದಿರುವ ದೇವಾಲಯವೊಂದು ನಮ್ಮ ಮೈಸೂರಿನಲ್ಲಿದೆ (Mysuru). ಹೌದು, ಬಹಳಷ್ಟು ಜನರಿಗೆ ಗೊತ್ತಿರದ ಈ ಅದ್ಭುತ ದೇವಸ್ಥಾನವೇ ಮುಡುಕುತೊರೆ (Mudukuthore) ಮಲ್ಲಿಕಾರ್ಜುನ ಸ್ವಾಮಿ. ಬೆಟ್ಟದ ಮೇಲಿರುವ ಈ ದೇವಾಲಯದ ಇತಿಹಾಸ ವಿಭಿನ್ನ. ಏನಿದರ ವಿಶೇಷತೆ ಇಲ್ಲಿದೆ ಸಂಪೂರ್ಣ ಮಾಹಿತಿ.


ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿರುವ ಮುಡುಕುತೊರೆ ಇತಿಹಾಸ ಪ್ರಸಿದ್ಧ ಸ್ಥಳ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾವೇರಿ ಶಾಂತ ಚಿತ್ತದಿಂದ ಹರಿಯುತ್ತಿದ್ದರೆ, ಅದರ ದಂಡೆಯ ಪಕ್ಕದಲ್ಲೇ ಸಸ್ಯ ಸಂಪತ್ತಿನಿಂದ ಕೂಡಿದ ಸೋಮಗಿರಿ ಬೆಟ್ಟದ ಮೇಲಿರುವ ಈ ಶ್ರೀ ಭ್ರಮರಾಂಬಿಕಾ ಸಹಿತ ಶ್ರೀ ಮಲ್ಲಿಕಾರ್ಜುನ ದೇವಾಲಯ ಸುತ್ತ ಮುತ್ತಲ ಜನರ ಆರಾಧ್ಯ ಸ್ಥಳ ಎನ್ನಬಹುದು.


ದೇವಾಲಯದ ಇತಿಹಾಸ


ಸುಮಾರು 300 ಅಡಿಗಳಷ್ಟು ಎತ್ತರದಲ್ಲಿರುವ ಬೆಟ್ಟದ ಮೇಲೆ ಗಂಗರ ಕಾಲದಲ್ಲಿ  ಇದರ ಮೂಲ ದೇವಾಲಯವನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ನಂತರ ಇದನ್ನು ವಿಜಯನಗರ ಅರಸರ ಕಾಲದಲ್ಲಿ ದೇವಾಲಯದ ಜೀರ್ಣೋದ್ದಾರ ಮಾಡಲಾಗಿದೆ. ಹಾಗೆಯೇ ಇದರ ಪ್ರವೇಶ ದ್ವಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿಸಿದ್ದು ಎಂದು ಇತಿಹಾಸಕಾರರು ಹೇಳುತ್ತಾರೆ.


ಇದನ್ನೂ ಓದಿ: ಮೂಗು ಚುಚ್ಚಿಸುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ


ಈ ದೇವಾಲಯ ಬೆಟ್ಟದ ಮೇಲಿರುವುದರಿಂದ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಮುಖ್ಯ ಪ್ರವೇಶ ದ್ವಾರದಿಂದ 101 ಮೆಟ್ಟಿಲುಗಳಿದ್ದು, ಮೂರು ಅಂತಸ್ತಿನ ಪ್ರಧಾನ ಪ್ರವೇಶ ಗೋಪುರದ ಎರಡೂ ಬದಿಯಲ್ಲಿ ಬೃಹತ್ ನಂದಿಯ ವಿಗ್ರಹಗಳನ್ನು ನಿರ್ಮಾಣ ಮಾಡಲಾಗಿದೆ.  ಈ ಮುಡುಕುತೊರೆಯ ಇತಿಹಾಸ ಮಹಾಭಾರತದ ಕಾಲದಿಂದ ಆರಂಭವಾಗುತ್ತದೆ ಎನ್ನಲಾಗುತ್ತದೆ. ಪಾಂಡವರು  ಅಜ್ಞಾತವಾಸದಲ್ಲಿದ್ದಾಗ ಅರ್ಜುನ ಈ ಮಾರ್ಗವಾಗಿ ಸಂಚರಿಸುವಾಗ  ಮಲ್ಲಿಕಾ ಪುಷ್ಪದಿಂದ ಇಲ್ಲಿದ್ದ ಶಿವಲಿಂಗಕ್ಕೆ ಪೂಜೆ ಮಾಡಿದನಂತೆ, ಅರ್ಜುನ ಮಲ್ಲಿಕಾಪುಷ್ಪದಿಂದ ಪೂಜಿಸಿದ ಈ ಲಿಂಗಕ್ಕೆ ಮಲ್ಲಿಕಾರ್ಜುನ ಎಂಬ ಹೆಸರು ಬಂದಿದೆ ಅಂತೆ.
ಇನ್ನು ಈ ಮಲ್ಲಿಕಾರ್ಜುನ ದೇವಾಲಯ ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಸುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಸಹ ಹೊಂದಿದೆ. ನವರಂಗದಲ್ಲಿರುವ ಕಂಬಗಳಲ್ಲಿ ಹಲವು ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದೆ.  ಇನ್ನು ಈ ಬೆಟ್ಟದ ಮೇಲೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲೇ ಶ್ರೀ ಭ್ರಮರಾಂಬಿಕಾ ದೇವಿಗೆ ಪ್ರತ್ಯೇಕ ಗುಡಿಯಿದೆ. ಈ ಗುಡಿ ಸಹ ಗರ್ಭಗೃಹ, ಸುಕನಾಸಿ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ಐದಡಿ ಎತ್ತರದ ಭ್ರಮರಾಂಬಿಕೆಯ ವಿಗ್ರಹ ನೋಡುಗರನ್ನು ಸೆಳೆಯದೇ ಇರದು.


ವಿಭಿನ್ನ ಹರಕೆ ಕಟ್ಟಿಕೊಳ್ಳುವ ಭಕ್ತರು


ಇನ್ನು ಈ ದೇವಾಲಯದಲ್ಲಿ 101 ಮೆಟ್ಟಿಲಿಗೂ  ತಲಾ 2 ವೀಳ್ಯದ ಎಲೆ, ಅಡಿಕೆ, ಎರಡು ಬಾಳೆಹಣ್ಣು ಹಾಗೂ 1 ತೆಂಗಿನಕಾಯಿ ಇಟ್ಟು, ಪ್ರತಿ ಮೆಟ್ಟಿಲಿಗೂ ಹೆಜ್ಜೆ ನಮಸ್ಕಾರ ಹಾಕುತ್ತಾ ದೇವರ ಬಳಿ ಜನ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ.


ಇದನ್ನೂ ಓದಿ: ಚೀಸ್​ ಡಿಪ್ ನ್ಯಾಚೋಸ್​ ಮಸ್ತ್ ಆಗಿ ಸಿಗುವ ಬೆಂಗಳೂರಿನ ಸ್ಥಳಗಳಿವು, ಒಮ್ಮೆ ವಿಸಿಟ್​ ಮಾಡಿ


ಇಲ್ಲಿ ಪ್ರತಿವರ್ಷ ಎರಡು ಜಾತ್ರೆ ನಡೆಯುತ್ತದೆ. ದೊಡ್ಡ ಜಾತ್ರೆ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ. ಇದಾದ ಮೂರು ದಿನಗಳ ಬಳಿಕ ಕಾವೇರಿ ನದಿಯಲ್ಲಿ ನಡೆಯುವ ತೆಪ್ಪೊತ್ಸವ ಹಾಗೂ ದನಗಳ ಜಾತ್ರೆ ಜಗತ್ಪ್ರಸಿದ್ಧವಾಗಿದೆ. ಮುಡುಕುತೊರೆ ಆಸ್ತಿಕ ನಾಸ್ತಿಕರಿಬ್ಬರನ್ನೂ ಸೆಳೆಯುವ ತಾಣವಾಗಿದೆ. ನೀವು ಮೈಸೂರಿನಿಂದ ಇಲ್ಲಿಗೆ ಬೈಕ್​ನಲ್ಲಿ ಕೇವಲ 1.30 ಗಂಟೆಗಳಲ್ಲಿ ಸಹ ತಲುಪಬಹುದು. ಇಲ್ಲಿಗೆ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ.

Published by:Sandhya M
First published: