ಮಳೆಗಾಲ ಶುರುವಾಗಿದೆ. ಈ ಸಮಯದಲ್ಲಿ ಶೀತ, ಕೆಮ್ಮು, ಜ್ವರ ಸಾಮಾನ್ಯವಾಗಿದೆ. ನಾವು ಮಳೆಯಿಂದ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ದೇಹವನ್ನು ಬೆಚ್ಚಗೆ ಇಡಲು ಮನೆಯಲ್ಲೇ ಕೆಲವೊಂದು ತಯಾರಿ ಮಾಡಿಕೊಳ್ಳಬೇಕು. ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ತಡೆಯಬಹುದು. ರಸಂ ಸಂಪ್ರದಾಯಿಕ ಅಡುಗೆಯಾಗಿದೆ. ಹಿಂದಿನ ಕಾಲದಿಂದಲೂ ರಸಂ ಊಟ ಅನೇಕರಿಗೆ ಅಚ್ಚು ಮೆಚ್ಚು. 2 ಬಗೆಯ ರುಚಿಯಾದ ರಸಂ ಮಾಡುವ ವಿಧಾನ ತಿಳಿಯಿರಿ
ಬೇಕಾಗುವ ಸಾಮಾಗ್ರಿಗಳು
*ಬೆಳ್ಳುಳ್ಳಿ- 8 ಎಸಳು
*ಕಾಳುಮೆಣಸು -1 1/2 ಚಮಚ
*ಕೆಂಪು ಮೆಣಸಿನಕಾಯಿ- 2
*ಉಪ್ಪು ರುಚಿಗೆ ತಕ್ಕಷ್ಟು
*ಹುಣಸೆ ಹುಳಿ - 1 ಚಮಚ
*ಸಾಸಿವೆ - 1 ಚಮಚ
*ಟೊಮೆಟೊ - 1
*ಜೀರಿಗೆ - 1 ಚಮಚ
*ಇಂಗು - ಸ್ವಲ್ಪ
*ಅರಿಶಿನ - 1/2 ಚಮಚ
*ಎಣ್ಣೆ - 2 ಚಮಚ
*ಕರಿಬೇವಿನೆಲೆ - 5-10
*ಕೊತ್ತಂಬರಿ ಎಸಳು - 2 ಚಮಚ
*ನೀರು - 2 ಕಪ್
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
ಮಾಡುವ ವಿಧಾನ
ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ಹುಳಿಯನ್ನು 5 ನಿಮಿಷಗಳ ಕಾಲ ನೆನೆಯಿಸಿ , ನೀರಿನಲ್ಲಿ ಹುಣಸೆ ಹುಳಿಯನ್ನು ಚೆನ್ನಾಗಿ ಹಿಸುಕಿಕೊಂಡು ಅದರಿಂದ ದಪ್ಪನೆಯ ರಸ ಸಿದ್ಧಪಡಿಸಿ. ಸಾರು ಮಾಡಲು ಬೇಕಾಗುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಸಾಸಿವೆ, ಕೆಂಪು ಮೆಣಸು, ಜೀರಿಗೆ ಮತ್ತು ಇಂಗನ್ನು ಇದಕ್ಕೆ ಹಾಕಿ. ಸಾಸಿವೆ ಸಿಡಿಯುತ್ತಿದ್ದಂತೆ, ಕರಿಬೇವು ಹಾಕಿ
ಈಗ, ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಕಾಲ ಹುರಿದುಕೊಳ್ಳಿ. ಗ್ಯಾಸ್ ಉರಿಯನ್ನು ತುಸು ಕಡಿಮೆ ಮಾಡಿಕೊಳ್ಳಿ. ಇದರಿಂದ ಬೆಳ್ಳುಳ್ಳಿ ಹೊತ್ತುವ ಸಾಧ್ಯತೆ ಇರುವುದಿಲ್ಲ. ನಂತರ, ಕತ್ತರಿಸಿದ ಟೊಮೆಟೊವನ್ನು ಪ್ಯಾನ್ಗೆ ಹಾಕಿಕೊಳ್ಳಿ. ಅರಿಶಿನವನ್ನು ಹಾಕಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ತಳ ಊರದಂತೆ ನೋಡಿಕೊಳ್ಳಿ. ಕಾಳುಮೆಣಸನ್ನು ಪ್ಯಾನ್ಗೆ ಹಾಕಿ, ನೀರನ್ನು ಬೆರೆಸಿಕೊಂಡು ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ, ಚೆನ್ನಾಗಿ ಮಿಶ್ರಣವನ್ನು ಕಲಸಿ. ಉಪ್ಪನ್ನು ಹಾಕಿಕೊಂಡು ಮಿಶ್ರಣ ಮಾಡಿ 2-3 ನಿಮಿಷ ಕುದಿಯಲಿ, ಬೆಳ್ಳುಳ್ಳಿ ಮತ್ತು ಕಾಳು ಮೆಣಸಿನ ರಸಂ ಸಿದ್ಧವಾಗಿದೆ
ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಟೊಮೆಟೊ ರಸಂ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿ
ಟೊಮೆಟೊ - 3
ನೀರು - 3 ಕಪ್
ಸಿಪ್ಪೆ ಇರುವ ಬೆಳ್ಳುಳ್ಳಿ - 4 ಎಸಳು
ಕಾಳು ಮೆಣಸು - 1 ಟೀ ಚಮಚ
ಜೀರಿಗೆ - 2 ಟೀ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - 1/2 ನಿಂಬೆ ಗಾತ್ರದ್ದು
ರಸಂ ಪುಡಿ - 2 ಟೇಬಲ್ ಚಮಚ
ಎಣ್ಣೆ - 2 ಟೇಬಲ್ ಚಮಚ
ಸಾಸಿವೆ ಕಾಳು - 1 ಟೀ ಚಮಚ
ಕರಿಬೇವು/ ಒಗ್ಗರಣೆ ಸೊಪ್ಪಿನ ಎಲೆ - 8-10
ಇಂಗು - ಒಂದು ಚಿಟಕಿ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಟೊಮೆಟೊ ತೆಗೆದುಕೊಂಡು ಮೇಲ್ಭಾಗದಿಂದ ಉದ್ದವಾಗಿ ಸೀಳಿದಂತೆ ಮಾಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಲು ಇಡಿ. ಅದಕ್ಕೆ ನೀರನ್ನು ಸೇರಿಸಿ, ಸಂಪೂರ್ಣವಾಗಿ ಬೆಂದು ಮೃದುವಾಗಲು 15 ನಿಮಿಷಗಳ ಕಾಲ ಬಿಡಿ. ಒಂದು ಬೌಲ್ಗೆ ಟೊಮೆಟೊವನ್ನು ವರ್ಗಾಯಿಸಿ ಹಾಗೂ ನಂತರದ ಬಳಕೆಗೆ ನೀರನ್ನು ಒಂದೆಡೆ ಇಡಿ. . ಅವು ತಣ್ಣಗಾಗಲು 5 ನಿಮಿಷ ಬಿಡಿ. ಟೊಮೆಟೊ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಕಿವುಚಿ ಒಂದೆಡೆ ಇಡಿ. ಜಜ್ಜುವ ಕಲ್ಲಿಗೆ ಬೆಳ್ಳುಳ್ಳಿಯನ್ನು ಸೇರಿಸಿ. ನಂತರ ಕಾಳು ಮೆಣಸು ಮತ್ತು ಜೀರಿಗೆಯನ್ನು ಸೇರಿಸಿ. . ಇವೆಲ್ಲವನ್ನು ಒಟ್ಟಾಗಿ ಜಜ್ಜಿ ಒಂದು ನುಣ್ಣನೆಯ ಪೇಸ್ಟ್ನಂತೆ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡ ನೀರನ್ನು ಹಾಕಿ 2 ನಿಮಿಷ ಬಿಸಿ ಮಾಡಿ.
ಜಜ್ಜಿ ಕೊಂಡ ಪೇಸ್ಟ್ ಮತ್ತು ಕಿವುಚಿಕೊಂಡ ಟೊಮೆಟೊ ಅನ್ನು ಸೇರಿಸಿ. ಉಪ್ಪು ಮತ್ತು ಹುಣಸೇ ರಸವನ್ನು ಸೇರಿಸಿ 8-10 ನಿಮಿಷಗಳ ಕಾಲ ಬೇಯಿಸಿ. ರಸಂ ಪೌಡರ್ ಸೇರಿಸಿ. . ರಸಂ ಕುದಿಸಿ ಒಗ್ಗರಣೆ ಪಾತ್ರೆಗೆ ಎಣ್ಣೆಯನ್ನು ಸೇರಿಸಿ. ಸಾಸಿವೆ ಕಾಳು ಮತ್ತು ಜೀರಿಗೆಯನ್ನು ಸೇರಿಸಿ. ಇಂಗು ಮತ್ತು ಕರಿಬೇವನ್ನು ಸೇರಿಸಿ. ಇದು ಚೆನ್ನಾಗಿ ಸಿಡಿಯಲಿ. ಒಗ್ಗರಣೆಯನ್ನು ರಸಂಗೆ ಸುರಿಯಿರಿ. ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಬಿಸಿ ಇರುವಾಗಲೇ ಅನ್ನದೊಂದಿಗೆ ಸವಿಯಲು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ