World Idli Day: ವಿಶ್ವ ಪ್ರಸಿದ್ಧ 'ರಾಮಸ್ಸೆರಿ ಇಡ್ಲಿ' ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

Ramasserry Idli: ಕೆಲವರಿಗೆ ಪನ್ನೀರ್‌ ಸೇರಿಸಿ ಇಡ್ಲಿ ತಯಾರಿಸುವುದು ಇಷ್ಟವಾದರೆ, ಇನ್ನು ಕೆಲವರಿಗೆ ಅಕ್ಕಿಯ ಬದಲಿಗೆ ರಾಗಿ, ಜೋಳ ಮತ್ತು ಓಟ್ಸ್ ಸೇರಿಸಿ ಆರೋಗ್ಯಕರ ಇಡ್ಲಿ ತಯಾರಿಸುವುದು ಎಂದರೆ ಇಷ್ಟ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗ್ಗಿನ ಉಪಾಹಾರಕ್ಕೆ (Breakfast) ಮೃದುವಾದ ಇಡ್ಲಿಗಳನ್ನು (Idli), ಚಟ್ನಿ ಅಥವಾ ಸಾಂಬಾರಿನಲ್ಲಿ ಅದ್ದಿಕೊಂಡು ತಿನ್ನುವುದು ನಿಮಗಿಷ್ಟವೇ..? ಹೌದಾದಲ್ಲಿ, ಭಾರತದಲ್ಲಿ ನಿಮ್ಮಂತಹ ಇಡ್ಲಿ ಪ್ರಿಯರು ಅಗಣಿತ ಸಂಖ್ಯೆಯಲ್ಲಿ ಇದ್ದಾರೆ ಎಂಬುವುದು ಕೂಡ ನಿಮಗೆ ಗೊತ್ತೇ ಇರಬಹುದು. ಏಕೆಂದರೆ, ಇಡ್ಲಿ ಮೂಲತಃ ನಮ್ಮ ದಕ್ಷಿಣ ಭಾರತದ ತಿನಿಸಾಗಿದ್ದರೂ, ಇಂದು ಇಡೀ ದೇಶದಾದ್ಯಂತ ಅತ್ಯಂತ ಜನಪ್ರಿಯ ತಿಂಡಿ ಎನಿಸಿಕೊಂಡಿದೆ. ಇನ್ನು ದಕ್ಷಿಣ ಭಾರತದಲ್ಲಂತೂ ಇಡ್ಲಿ ಸಿಗದ ಹೊಟೇಲ್‍ಗಳಿಲ್ಲ ಮತ್ತು ಇಡ್ಲಿ ಮಾಡದ ಮನೆಗಳಿಲ್ಲ ಎಂದರೆ ತಪ್ಪಾಗುವುದಿಲ್ಲ. ಇಡ್ಲಿಯನ್ನು ಮಾಡುವುದು ಸುಲಭ ಮತ್ತು ದಿನದ ಯಾವ ವೇಳೆಯಲ್ಲಿ ಬೇಕಾದರೂ, ಇಡ್ಲಿಯನ್ನು ಚಪ್ಪರಿಸಬಹುದು. ನಮ್ಮ ನಿಮ್ಮೆಲ್ಲರ ಮೆಚ್ಚಿನ ತಿನಿಸಾಗಿರುವ ಇಡ್ಲಿಯ ಖ್ಯಾತಿ ಯಾವ ಮಟ್ಟಕ್ಕೆ ಇದೆಯೆಂದರೆ, ಪ್ರತಿ ವರ್ಷ, ಮಾರ್ಚ್ 30 ಅನ್ನು ವಿಶ್ವ ಇಡ್ಲಿ ದಿನಾಚರಣೆ  (World Idli Day) ಎಂದು ಆಚರಿಸಲಾಗುತ್ತದೆ. ಚೆನ್ನೈ (Chennai) ಮೂಲದ ಇಡ್ಲಿ ವ್ಯಾಪಾರಿ ಎಣಿಯವನ್ ಅವರ ಮೂಲಕ ಇದನ್ನು 2015 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು.

ಸಾಂಪ್ರದಾಯಿಕವಾಗಿ ಇಡ್ಲಿ ಎಂದರೆ, ಹುದುಗಿದ ಅಕ್ಕಿ ಮತ್ತು ಉದ್ದಿನ ಬೇಳೆಯ ಹಿಟ್ಟನ್ನು, ಹಬೆಯಲ್ಲಿ ಬೇಯಿಸಿ ತಯಾರಿಸುವ ಒಂದು ತಿನಿಸು. ಆದರೂ, ದಕ್ಷಿಣ ಭಾರತೀಯ ಪಾಕ ಪದ್ಧತಿಯಲ್ಲಿ ವಿವಿಧ ಪ್ರಕಾರದ ಮತ್ತು ವಿಭಿನ್ನ ಬದಲಾವಣೆಗಳಿಗೆ ಒಳಗಾದ ಇಡ್ಲಿಯ ರೆಸಿಪಿಗಳನ್ನು ಕಾಣಬಹುದು. ಕೆಲವರಿಗೆ ಪನ್ನೀರ್‌ ಸೇರಿಸಿ ಇಡ್ಲಿ ತಯಾರಿಸುವುದು ಇಷ್ಟವಾದರೆ, ಇನ್ನು ಕೆಲವರಿಗೆ ಅಕ್ಕಿಯ ಬದಲಿಗೆ ರಾಗಿ, ಜೋಳ ಮತ್ತು ಓಟ್ಸ್ ಸೇರಿಸಿ ಆರೋಗ್ಯಕರ ಇಡ್ಲಿ ತಯಾರಿಸುವುದು ಎಂದರೆ ಇಷ್ಟ.

‘ಇಡ್ಲಿಗಳ ರಾಜ’ ಎಂದು ಕರೆಯಲ್ಪಡುವ ಇಡ್ಲಿ ಯಾವುದು ಗೊತ್ತೇ? ಅದುವೇ ‘ರಾಮಸ್ಸೆರಿ ಇಡ್ಲಿ'. ಹಾಗೆಂದು, ಕೇರಳ ಪ್ರವಾಸೋದ್ಯಮದ ವೆಬ್‍ಸೈಟ್‍ನಲ್ಲಿ ಉಲ್ಲೇಖಿಸಲಾಗಿದೆ. ‘ರಾಮಸ್ಸೆರಿ ಇಡ್ಲಿ' ಕೇರಳದ ಪಾಲಕ್ಕಾಡ್ ಪಟ್ಟಣದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಇಡ್ಲಿ. ಈ ಇಡ್ಲಿಗಳ ರಾಜನನ್ನು ಒಮ್ಮೆಯಾದರೂ ಮೆಲ್ಲಬೇಕು ಎಂಬ ಮನಸ್ಸಾಗುತ್ತಿದೆ ಅಲ್ಲವೇ? ಹಾಗಾದರೆ, ಮತ್ತೇಕೆ ತಡ, ಅದನ್ನು ತಯಾರಿಸಿ ರುಚಿ ನೋಡಿಯೇ ಬಿಡೋಣ. ನಿಮಗಾಗಿ ಇದೋ ಇಲ್ಲಿದೆ ‘ರಾಮಸ್ಸೆರಿ ಇಡ್ಲಿ'ಯ ರೆಸಿಪಿ.

ಇದನ್ನೂ ಓದಿ; ಬೆಳಗಿನ ಉಪಹಾರಕ್ಕಾಗಿ ರುಚಿಕರ ಅವಲಕ್ಕಿ ದೋಸೆ

ಕೇರಳ ಶೈಲಿಯ ರಾಮಸ್ಸೆರಿ ಇಡ್ಲಿ ರೆಸಿಪಿ:
ಈ ಇಡ್ಲಿಗೆ ಸಾಮಾನ್ಯ ಇಡ್ಲಿಯನ್ನು ತಯಾರಿಸಲು ಬಳಸುವ ಸಾಮಗ್ರಿಗಳೇ ಸಾಕು ಎನ್ನುತ್ತಾರೆ ಆಹಾರ ತಜ್ಞ ಅಶ್ವಿನ್ ರಾಜ್‍ಗೋಪಾಲನ್. “ಈ ಇಡ್ಲಿಗಳನ್ನು ಬೇಯಿಸುವ ವಿಧಾನ ಸಂಪೂರ್ಣ ಭಿನ್ನವಾಗಿದೆ. ಅದರಿಂದಾಗಿಯೇ ಇಡ್ಲಿಗಳು ಅತ್ಯಂತ ಮೃದುವಾಗಿರುತ್ತದೆ” ಎನ್ನುತ್ತಾರೆ ಅವರು. ರಾಮಸ್ಸೆರಿ ಇಡ್ಲಿಗಳನ್ನು ಬೇಯಿಸುವ ವಿಶಿಷ್ಟ ತಂತ್ರ, ಈ ಕುಟುಂಬಗಳ ಒಳಗೆ ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾವಣೆ ಆಗುತ್ತಾ ಬಂದಿದೆ ಎಂಬುವುದು ಅಶ್ವಿನ್ ರಾಜ್‍ಗೋಪಾಲನ್ ಅಂಬೋಣ.

ಎಲ್ಲದ್ದಕ್ಕಿಂತ ಮುಖ್ಯವಾಗಿ, ರಾಮಸ್ಸೆರಿ ಇಡ್ಲಿಯನ್ನು ವಿಶೇಷ ರೀತಿಯ ಮಣ್ಣಿನ ಪಾತ್ರೆಯಲ್ಲಿ ತಯಾರಿಸಲಾಗುತ್ತದೆ. ಇಡ್ಲಿ ಹಿಟ್ಟನ್ನು ಮಸ್ಲಿನ್ ಬಟ್ಟೆಯ ಮೇಲೆ ಹರಡಿ, ಹಬೆಯಲ್ಲಿ ಬೇಯಿಸಲು ಮಣ್ಣಿನ ಮುಚ್ಚಳದಿಂದ ಮುಚ್ಚಲಾಗುತ್ತದೆ. ಅದೇ ರೀತಿಯ ವಿಧಾನವನ್ನು ಅನುಸರಿಸಲು ನಿಮಗೆ ತುಂಬಾ ಕಷ್ಟವಾಗಬಹುದು. ಅದಕ್ಕೆಂದೇ ರಾಮಸ್ಸೆರಿ ಇಡ್ಲಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ರೆಸಿಪಿ ಇಲ್ಲಿದೆ. ಅದಕ್ಕಿಂತ ಮೊದಲು ಇಡ್ಲಿ ಹಿಟ್ಟನ್ನು ಹೇಗೆ ಮಾಡುವುದು ಎಂದು ತಿಳಿಯೋಣ.

ಇಡ್ಲಿ ಹಿಟ್ಟಿಗೆ ಬೇಕಾಗುವ ಸಾಮಗ್ರಿಗಳು ಮತ್ತು ವಿಧಾನ
• 3 ಕಪ್ ಅಕ್ಕಿ
• 1 ಕಪ್ ಉದ್ದಿನ ಬೇಳೆ
• 2 ಟೇಬಲ್ ಚಮಚ ಉಪ್ಪು
• ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ 5-6 ಗಂಟೆಗಳ ಕಾಲ ನೆನೆಸಿಡಿ.
• ಉದ್ದಿನ ಬೇಳೆಯನ್ನು ನುಣ್ಣಗೆ ಮತ್ತು ಅಕ್ಕಿಯನ್ನು ತರಿಯಾಗಿ ಪ್ರತ್ಯೇಕವಾಗಿ ರುಬ್ಬಿ.
• ಎರಡೂ ಹಿಟ್ಟನ್ನು ಚೆನ್ನಾಗಿ ಮಿಶ್ರ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
• ರಾತ್ರಿಯಿಡೀ ಹುದುಗಲು ಇಡಿ.

ಇದನ್ನೂ ಓದಿ: ತೂಕ ಇಳಿಕೆಗಾಗಿ ಡಯಟ್ ಮಾಡ್ತಿದ್ದೀರಾ? ಹಾಗಾದ್ರೆ ನಿಮ್ಮ ಬೆಳಗಿನ ತಿಂಡಿ ಮೆನು ಹೀಗಿರಲಿ

ರಾಮಸ್ಸೆರಿ ಇಡ್ಲಿ ಮಾಡುವ ವಿಧಾನ:
• ಒಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು, ಅದರ ಮೇಲೆ ಸ್ಟೀಮರ್ ತಟ್ಟೆ ಇಟ್ಟು ಕುದಿಸಿ.
• ತಟ್ಟೆಯ ಮೇಲೆ ಮಸ್ಲಿನ್ ಬಟ್ಟೆ ಹರಡಿ, ಹಿಟ್ಟನ್ನು ಅದರ ಮೇಲೆ ಸುರಿಯಿರಿ.
• ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಮತ್ತು ಬೇಯಿಸಿ.
• ಅದು ಬೆಂದ ಬಳಿಕ, ಬಿಸಿ ಬಿಸಿಯಾಗಿರುವಾಗಲೇ ಚಟ್ನಿ ಹಾಗೂ ಚಟ್ನಿ ಪುಡಿಯ ಜೊತೆ ಸವಿಯಲು ಕೊಡಿ.
ನೆನಪಿಡಿ, ರಾಮಸ್ಸೆರಿ ಇಡ್ಲಿ ಇತರ ಇಡ್ಲಿಗಳ ಗಾತ್ರ ಹೊಂದಿರುವುದಿಲ್ಲ. ಅದು ತೆಳುವಾಗಿರುತ್ತದೆ, ಮೃದುವಾಗಿರುತ್ತವೆ ಮತ್ತು ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
Published by:Sandhya M
First published: