ಈಗಿನ ದಿನಗಳಲ್ಲಿ ಮಕ್ಕಳನ್ನು (Child) ಚೆನ್ನಾಗಿ ಬೆಳೆಸುವುದು ತುಂಬಾನೇ ಕಷ್ಟದ ಕೆಲಸ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಮೊದಲೆಲ್ಲಾ ಮಕ್ಕಳಿಗೆ ಮನೆ, ಶಾಲೆ ಮತ್ತು ಸ್ನೇಹಿತರನ್ನು(Friends) ಹೊರತುಪಡಿಸಿದರೆ ಬೇರೆ ಗೊತ್ತಿರುತ್ತಿರಲಿಲ್ಲ. ಆದರೆ ಈಗಿನ ಮಕ್ಕಳಿಗೆ ಊಟ ಮಾಡುವುದಕ್ಕೂ ಮೊಬೈಲ್ ಬೇಕು (Mobile), ಮಲಗುವುದಕ್ಕೂ ಮೊಬೈಲ್ ಬೇಕು, ಆಟವಾಡಲು ಸಹ ಮೊಬೈಲ್ ಬೇಕು. ಒಟ್ಟಿನಲ್ಲಿ ಹೇಳುವುದಾದರೆ ಮೊಬೈಲ್ ಇಲ್ಲದೆ ಮಕ್ಕಳು ಇರಲಾರರು ಎಂಬಂತಾಗಿದೆ ನೋಡಿ ಈಗ. ಅದರಲ್ಲೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ (Covid Pandemic) ಹಾವಳಿಂದಾಗಿ ಸುಮಾರು ಎರಡು ವರ್ಷಗಳು ಶಾಲೆಗಳೆಲ್ಲವೂ (School) ಬೀಗ ಹಾಕಿದ್ದು, ಆನ್ಲೈನ್ ತರಗತಿಗಳಿಂದ ಮೊಬೈಲ್ ನೋಡದ ಮಕ್ಕಳಿಗೂ ಸಹ ಮೊಬೈಲ್ ಗೀಳು ಹತ್ತಿದೆ ಅಂತ ಹೇಳಬಹುದು.
‘ಹೇಗಪ್ಪಾ ಬೆಳೆಸುವುದು ಈ ಮಕ್ಕಳನ್ನ, ಈ ಎಲೆಕ್ಟ್ರಾನಿಕ್ ಸಾಧನಗಳಿಂದ ಮಕ್ಕಳನ್ನು ಹೇಗೆ ದೂರ ಮಾಡುವುದು’ ಅಂತ ಅನೇಕ ಪೋಷಕರು ತಮ್ಮ ಮಕ್ಕಳನ್ನು ಮಕ್ಕಳ ತಜ್ಞರ ಬಳಿಗೆ ಕರೆದೊಯ್ಯುವ ಪರಿಸ್ಥಿತಿ ಬಂದೊದಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ಮತ್ತು ಅವರ ಶಾಲೆಯಲ್ಲಿ ನೀಡಿರುವಂತಹ ಹೋಂ ವರ್ಕ್ ಗಳಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ ಅವರ ದೈಹಿಕ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ, ಆದರೆ ಅವರ ಮಾನಸಿಕ ಆರೋಗ್ಯವನ್ನು ಆಗಾಗ್ಗೆ ನಿರ್ಲಕ್ಷಿಸಲಾಗುತ್ತದೆ.
ಲ್ಯಾನ್ಸೆಟ್ ನಲ್ಲಿ ಪ್ರಕಟವಾದ ಅಧ್ಯಯನ ಏನ್ ಹೇಳುತ್ತೆ?
ಲ್ಯಾನ್ಸೆಟ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಎರಡರಿಂದ ಮೂರು ವರ್ಷದೊಳಗಿನ ಮಕ್ಕಳು ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಈ ಟ್ಯಾಬ್ಲೆಟ್ ಗಳು ಮತ್ತು ಟಿವಿ ಪರದೆಗಳ ಮುಂದೆ ಕಳೆಯುತ್ತಾರೆ. ಪ್ರತಿದಿನ ಒಂದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ಟಿವಿ ನೋಡುವವರಿಗೆ ಹೋಲಿಸಿದರೆ, ಈ ಮಕ್ಕಳು 5.5 ವರ್ಷ ವಯಸ್ಸಿನಲ್ಲಿ ಕಡಿಮೆ ದೈಹಿಕವಾಗಿ ಸಕ್ರಿಯರಾಗುತ್ತಾರೆ, ಇದು ಅವರ ಮಾನಸಿಕ ಆರೋಗ್ಯದ ಮೇಲೂ ಸಹ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ, ಕಲ್ಯಾಣ್ ನ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ. ಫ್ಯಾಬಿಯನ್ ಅಲ್ಮೇಡಾ ಅವರು ಮಗುವಿನ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಪೋಷಕರಿಗೆ ಸಹಾಯ ಮಾಡುವ ಐದು ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.
1. ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ
ನಿಮ್ಮ ಮಕ್ಕಳೊಂದಿಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಿರಿ, ಏಕೆಂದರೆ ಇದು ಅವರೊಂದಿಗೆ ಬಂಧವನ್ನು ಬೆಸೆಯಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ ಎಂದು ಸಾಬೀತಾಗಿದೆ. ವಸ್ತುಗಳಿಗಾಗಿ ಹಣವನ್ನು ಖರ್ಚು ಮಾಡುವ ಬದಲು, ಅವರೊಂದಿಗೆ ಸಮಯವನ್ನು ಕಳೆಯುವುದು ಹೆಚ್ಚು ಮುಖ್ಯವಾಗಿದೆ. ಇದರಿಂದ ಅವರು ಸುರಕ್ಷಿತ ಮತ್ತು ಪ್ರೀತಿಪಾತ್ರರು ಎಂದು ಭಾವಿಸುತ್ತಾರೆ. ಅವರೊಟ್ಟಿಗೆ ಆಟವಾಡುವುದು, ಚಲನಚಿತ್ರವನ್ನು ನೋಡುವುದು ಅಥವಾ ತಮ್ಮ ದಿನವನ್ನು ಚರ್ಚಿಸುವುದು ಸೇರಿದಂತೆ ಒಟ್ಟಿಗೆ ಚಟುವಟಿಕೆಗಳನ್ನು ಮಾಡಲು ಇಬ್ಬರೂ ಪೋಷಕರು ಪ್ರತಿದಿನ ಸಮಯ ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಅತಿಯಾಗಿ ಗೊರಕೆ ಹೊಡಿತೀರಾ? ಹಾಗಿದ್ರೆ ನಿಮ್ಮ ನಿದ್ದೆಯಲ್ಲೇನೋ ಸಮಸ್ಯೆ ಇದೆ!
2. ದಯವಿಟ್ಟು ನಿಮ್ಮ ಮಕ್ಕಳು ಏನು ಹೇಳುತ್ತಾರೆ ಎಂಬುದರ ಬಗ್ಗೆ ಗಮನ ಹರಿಸಿ
ಅನೇಕ ಬಾರಿ, ಪೋಷಕರು ತಮ್ಮ ಮಕ್ಕಳು ಏನು ಹೇಳುತ್ತಾರೆ ಎಂಬುದನ್ನು ನಿರ್ಲಕ್ಷಿಸುತ್ತಾರೆ. ಏಕೆಂದರೆ ಅದು ಅವಶ್ಯಕವಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಪೋಷಕರಾದವರು ಹಾಗೆ ಅಂದುಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಮಕ್ಕಳು ತಮ್ಮ ಭಾವನೆಗಳನ್ನು ತಮ್ಮ ಹೆತ್ತವರಿಗೆ ಮೌಖಿಕವಾಗಿ ಸಂವಹನ ಮಾಡಲು ಇಷ್ಟ ಪಡುತ್ತಿರುತ್ತಾರೆ. ಸರಿಯಾದ ಸಂವಹನ ಮಾರ್ಗಗಳನ್ನು ಆರಂಭದಲ್ಲಿ ರಚಿಸದಿದ್ದರೆ, ಮಕ್ಕಳು ತಮ್ಮ ಪೋಷಕರಿಂದ ಪ್ರಮುಖ ಮಾಹಿತಿಯನ್ನು ಮರೆ ಮಾಚುತ್ತಾರೆ, ಇದು ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
ಹೆಚ್ಚುವರಿಯಾಗಿ, ನಿಮ್ಮ ಮಗುವು ಸಂವಹನಶೀಲವಾಗಿಲ್ಲ ಎಂದಿಟ್ಟುಕೊಳ್ಳಿ, ಅವರು ತಮ್ಮ ಆಲೋಚನೆಗಳು, ಕನಸುಗಳು, ಮಹತ್ವಾಕಾಂಕ್ಷೆಗಳು ಮತ್ತು ಇನ್ನೂ ಹೆಚ್ಚಿನ ವಿಚಾರ ಹಂಚಿಕೊಳ್ಳಲು ಬೇರೆ ವ್ಯಕ್ತಿಯನ್ನು ಹುಡುಕಲು ಶುರು ಮಾಡುತ್ತಾರೆ. ಆದ್ದರಿಂದ ಅವರ ಮಾತುಗಳ ಕಡೆಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ.
3. ನಿಮ್ಮ ಮಗುವಿನ ಬಗ್ಗೆ ಆಗಾಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ
ಪ್ರತಿಯೊಬ್ಬ ಪೋಷಕರು ತಮ್ಮ ಮಗು ಮಾಡುವ ತಪ್ಪಿಗೆ ಸ್ವಲ್ಪವೂ ಯೋಚನೆ ಮಾಡದೆ ಛೀಮಾರಿ ಹಾಕುತ್ತಾರೆ ಮತ್ತು ಗದರಿಸುತ್ತಾರೆ. ಆದರೆ ನೀವು ಅವರಲ್ಲಿರುವ ಒಳ್ಳೆಯತನಕ್ಕೆ ಅವರನ್ನು ಹೊಗಳುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಇದನ್ನು ಮಾಡಿದಾಗ, ಇದು ಮಗುವಿಗೆ ಅತ್ಯುತ್ತಮ ನಡವಳಿಕೆಯ ಮೇಲೆ ಗಮನ ಹರಿಸಲು ಮತ್ತು ತಮ್ಮ ಬಗ್ಗೆ ಉತ್ತಮ ಭಾವನೆಯನ್ನು ಹೊಂದಲು ಸಹಾಯ ಮಾಡುತ್ತದೆ.
4. ವಾಸ್ತವಿಕ ನಿರೀಕ್ಷೆಗಳನ್ನು ಬೆಳೆಸಿಕೊಳ್ಳಿ
ನಿಮ್ಮ ಮಗುವನ್ನು ಬೇರೆಯೊಬ್ಬರ ಮಗುವಿನೊಂದಿಗೆ ಹೋಲಿಸುವುದು ಒಳ್ಳೆಯದಲ್ಲ, ಏಕೆಂದರೆ ನೀವು ಹಾಗೆ ಮಾಡುವುದರಿಂದ ನಿಮ್ಮ ಮಗುವಿಗೆ ಕೀಳರಿಮೆ ಬೆಳೆಯಲು ಶುರುವಾಗುತ್ತದೆ. ನಿಮ್ಮ ಮಕ್ಕಳ ಆತ್ಮಗೌರವವನ್ನು ಹೆಚ್ಚಿಸುವುದು ಮತ್ತು ಸ್ನೇಹಿತರು ಮತ್ತು ಒಡಹುಟ್ಟಿದವರೊಂದಿಗೆ ಹೋಲಿಸುವ ಬದಲು ಅವರ ಅನನ್ಯವಾದ ಗುಣಗಳ ಬಗ್ಗೆ ಮಾತಾಡಿ ಮತ್ತು ಅವರಿಗಿರುವ ಗುರಿಗಳನ್ನು ಸಾಧಿಸಲು ಅವರನ್ನು ಪ್ರೇರೇಪಿಸುವುದು ಅತ್ಯಗತ್ಯವಾಗುತ್ತದೆ. ಮಗುವು ಒಂದು ಸಣ್ಣ ಸಾಧನೆ ಮಾಡಿದರೂ ಸಹ ಅವರ ಪ್ರಯತ್ನಗಳಿಗಾಗಿ ಅವರನ್ನು ಶ್ಲಾಘಿಸುವುದು ಮತ್ತು ರಚನಾತ್ಮಕ ಚರ್ಚೆಗಳ ಮೂಲಕ ಅವರ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುವುದು ಅತ್ಯಗತ್ಯವಾಗುತ್ತದೆ.
ಇದನ್ನೂ ಓದಿ: ತೂಕ ಇಳಿಸುವ ಭರದಲ್ಲಿ ಈ ತಪ್ಪು ಮಾಡ್ಬೇಡಿ
5. ಒತ್ತಡ ಮತ್ತು ಆತಂಕವನ್ನು ಹೇಗೆ ನಿಭಾಯಿಸಬೇಕು ಅಂತ ಅವರಿಗೆ ಕಲಿಸಿಕೊಡಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡ ಮತ್ತು ಆತಂಕವು ಬಹುತೇಕ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ನಾವು ಹೊರ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ನಾವು ನಮ್ಮ ಮಕ್ಕಳಿಗೆ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ಕಲಿಸಬಹುದು, ಅದು ಈ ಒತ್ತಡವನ್ನು ಬಲವಂತವಾಗಿ ನಿಭಾಯಿಸಲು ಅವರಿಗೆ ಸಹಾಯ ಮಾಡುತ್ತದೆ. ಒತ್ತಡವನ್ನು ನಮ್ಮ ಜೀವನದ ಒಂದು ಭಾಗವಾಗಿ ಸ್ವೀಕರಿಸುವುದನ್ನು ಅವರಿಗೆ ಹೇಳಿಕೊಡಬೇಕು.
ಆರಂಭದ ಹಂತದಲ್ಲಿ ನಿಮ್ಮ ಮಗುವಿಗೆ ಕುಟುಂಬ ಮತ್ತು ಸ್ನೇಹಿತರಿಂದ ಎದುರಾಗುವ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಕಲಿಸಿ, ಇದರಿಂದ ಅವರು ತಮ್ಮ ಜೀವನದಲ್ಲಿ ಎದುರಿಸುವ ಒತ್ತಡ ಮತ್ತು ಆತಂಕವನ್ನು ಅವರ ಒಟ್ಟಾರೆ ಸಕಾರಾತ್ಮಕ ದೃಷ್ಟಿಕೋನದ ಮೇಲೆ ಪರಿಣಾಮ ಬೀರದಂತೆ ನಿರ್ವಹಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ