Baby Care: ಮಲಗು ಮಲಗೆನ್ನ ಮಗುವೆ, ಹೀಗೆ ಮಾಡಿದ್ರೆ ನಿಮ್ಮ ಕಂದಮ್ಮ ರಾತ್ರಿ ಸುಖವಾಗಿ ನಿದ್ರಿಸುತ್ತೆ

ಮಕ್ಕಳಿಗೆ ನಿದ್ದೆ ಮಾಡಿಸುವುದು ಅಂದರೆ ತಾಯಂದಿರಿಗೆ ನಿದ್ದೆ ಹಾಳಾಗುವಂತಾ ಕೆಲಸ. ಆದ್ರೆ ಈ ಟಿಪ್ಸ್ ಉಪಯೋಗಿಸಿದ್ರೆ ನಿಮ್ಮ ಕಂದಮ್ಮ ಆರಾಮಾಗಿ ನಿದ್ರಿಸುತ್ತೆ, ಜೊತೆಗೆ ನೀವೂ ಕೂಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಮಗುವಿನ (Baby) ಆಗಮನವು ಸಂತೋಷದ ಜೊತೆ ಪಾಲಕರಿಗೆ ಹೊಸ ಜವಾಬ್ದಾರಿಗಳನ್ನು ಕಲಿಸುತ್ತದೆ. ಒಂದೊಂದೇ ಮೈಲಿಗಲ್ಲನ್ನು ತಲುಪುವಾಗ ಮಗುವಿನ ಲಾಲನೆಯು (Care) ತುಂಬಾ ಸೂಕ್ಷ್ಮವಾಗಿರುತ್ತದೆ. ಅದು ಕೆಲವೊಮ್ಮೆ ತಾಯಂದಿರಿಗೆ ಚಿಂತೆ ಹಾಗೂ ಗೊಂದಲವನ್ನು ಸೃಷ್ಟಿಸುವ ಸಾಧ್ಯತೆಯೂ ಇರುತ್ತದೆ. ಅದರಲ್ಲೂ ಮಗುವಿನ ನಿದ್ರೆ (Sleep) ಹಾಗೂ ಊಟದ (Food) ವಿಷಯ ತಾಯಂದಿರಿಗೆ ದೊಡ್ಡ ಸವಾಲು. ಮಗು ಆಗಮನದ ನಂತರ ನಿದ್ರೆಗಳಿಲ್ಲದ ರಾತ್ರಿ ಕಳೆಯುವುದು ತಾಯಂದಿರಿಗೆ ರೂಢಿಯಾಗಿರುತ್ತದೆ. ಆದ್ರೆ ಇದಕ್ಕೆಲ್ಲ ಫುಲ್ ಸ್ಟಾಪ್ ಇಡೋದಕ್ಕೆ ಟಿಪ್ಸ್ ಇಲ್ಲಿದೆ.


ಮಗುವಿಗೆ ರಾತ್ರಿ ಹೊತ್ತಿನ ನಿದ್ರೆ ತುಂಬಾ ಮುಖ್ಯ

ಮಕ್ಕಳು 10-12 ಗಂಟೆ ನಿದ್ರೆ ಮಾಡುವುದು ಉತ್ತಮ. ಬೆಳೆಯುತ್ತಿರುವ ನಿಮ್ಮ ಮಗು ರಾತ್ರಿ ಸುಖವಾಗಿ ನಿದ್ರಿಸಲು, ಉತ್ತಮ ನಿದ್ದೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ರಾತ್ರಿ ಮಕ್ಕಳ ನಿದ್ರೆ ಹೇಗಿರಬೇಕು, ಯಾವೆಲ್ಲಾ ಕ್ರಮಗಳು ಅವರನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ ಮತ್ತು ಹೇಗೆ ರಾತ್ರಿಯೆಲ್ಲಾ ನಿದ್ರಿಸಬಹುದು ಎಂಬುವುದರ ಬಗ್ಗೆ ಇಲ್ಲಿವೆ ಟಿಪ್ಸ್.

ಬೆಡ್ ಟೈಮ್ ದಿನಚರಿ

ನಿಮ್ಮ ಮಗು ಮಲಗುವ ಸಮಯದ ದಿನಚರಿ ಸರಳ ಮತ್ತು ಸಮರ್ಥನೀಯವಾಗಿರಬೇಕು. ಮಗುವಿನ ಮಲಗುವ ಸಮಯವನ್ನು ನಿಗದಿಪಡಿಸಿ. ಮಗು ಮಲಗುವ ವೇಳೆ ಕಥೆ ಹೇಳುವುದು, ಪುಸ್ತಕ ತೋರಿಸುವುದು, ಲಾಲಿ ಹೇಳುವುದನ್ನು ರೂಢಿಸಿಕೊಳ್ಳಿ. ಇವುಗಳ ಜೊತೆಗೆ ಮಗುವಿಗೆ ಸ್ವ್ಯಾಡ್ಲಿಂಗ್ ಮಾಡಿ ಮಲಗಿಸುವುದು ಅವರನ್ನು ಬೆಚ್ಚಗಿರಿಸಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಸ್ವಯಂ-ಶಾಂತಗೊಳಿಸಲು ಕಲಿಸಿ

ಮಗು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ಅಳುತ್ತಿರುತ್ತದೆ. ಆಗ ಅವರನ್ನು ಪರೀಕ್ಷಿಸಿ. ಆದರೆ ನಿಮ್ಮ ಸಮಯವನ್ನು ಕಡಿಮೆ ಕೊಡಿ. ಇದು ಮಲಗುವ ಸಮಯ ಆಟವಾಡಲು ಅಥವಾ ತಿನ್ನಲು ಅಲ್ಲ ಎಂದು ಸ್ಪಷ್ಟಪಡಿಸಿ. ಅವರನ್ನು ಶಾಂತಗೊಳಿಸಲು ನಿಮ್ಮ ಕೈಯಿಂದ ಅವರ ಎದೆಯನ್ನು ತಟ್ಟಿರಿ. ಇದು ನಿಮ್ಮ ಮಗುವಿಗೆ ನೀವು ಇನ್ನೂ ಇದ್ದೀರಿ ಎಂದು ಭಾವಿಸುವಂತೆ ಮಾಡುತ್ತದೆ. ಇದು ಪ್ರತ್ಯೇಕತೆಯ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮತ್ತೆ ನಿದ್ರೆಗೆ ಸಹಕರಿಸುತ್ತದೆ.

ರಾತ್ರಿಯ ಹೊತ್ತು ಆಹಾರ/ಹಾಲು ಬಿಡಿಸಿ

ರಾತ್ರಿ ಸಮಯದಲ್ಲಿ ಹಾಲನ್ನು ನಿಲ್ಲಿಸಲು ನಿಮ್ಮ ವೈದ್ಯರಿಂದ ಸಲಹೆ ಪಡೆದ ನಂತರ, ನೀವು ನಿಧಾನವಾಗಿ ಹಾಲುಣಿಸುವುದನ್ನು ಕಡಿಮೆ ಮಾಡಿ. ಅನೇಕ ಸಂದರ್ಭಗಳಲ್ಲಿ, ನಿಮ್ಮ ಮಗುವಿಗೆ ಎಚ್ಚರವಾದಾಗಲೆಲ್ಲಾ ಅದು ಹಾಲು ಕೇಳುತ್ತದೆ. ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ನಿದ್ರೆ ಹಾಳಾಗುತ್ತದೆ. ಆದರೆ ಹಗಲಿನಲ್ಲಿ ಉತ್ತಮವಾಗಿ ಹಾಲು ಕುಡಿಸಿ.

ಇದನ್ನೂ ಓದಿ: Weekend Tips: ಯಶಸ್ವಿ ಜನರ ವಾರಾಂತ್ಯ ಹೀಗಿರುತ್ತಂತೆ, ನೀವೂ ಈ 12 ಅಭ್ಯಾಸ ಬೆಳೆಸಿಕೊಳ್ಳಿ

ವೇಳಾಪಟ್ಟಿಯನ್ನು ಅನುಸರಿಸಿ

ರಾತ್ರಿ ಸರಿಯಾಗಿ ನಿದ್ರಿಸಲು ಹಗಲಿನ ನಿದ್ರೆಯೂ ತುಂಬಾ ಮುಖ್ಯ. ನವಜಾತ ಶಿಶುಗಳಿಗೆ ಹಗಲು ಮತ್ತು ರಾತ್ರಿಯ ನಿದ್ರೆಯ ನಡುವೆ ವ್ಯತ್ಯಾಸವಿರುವುದಿಲ್ಲ. ಮಗು ಬೆಳೆಯುತ್ತಿದ್ದಂತೆ ಹಗಲಿನಲ್ಲಿ ಸ್ವಲ್ಪ ಹೊತ್ತು ಮಲಗಿಸಿ, ಹಗಲಿನಲ್ಲಿ ನಿದ್ರೆ ದೀರ್ಘವಾದರೆ ರಾತ್ರಿ ನಿದ್ರೆ ತಡವಾಗಬಹುದು. ಹಗಲು ಮತ್ತು ರಾತ್ರಿ ನಿದ್ರೆಯ ವೇಳಪಟ್ಟಿಯನ್ನು ಅನುಸರಿಸಿ.

ಶಾಂತ ವಾತಾವರಣ ಇರಲಿ

ಮಗು ಮಲಗುವ ಕೊಠಡಿಯಲ್ಲಿ ಆರಾಮದಾಯಕ ತಾಪಮಾನ ಇರಿಸಿ. ರೂಮ್ ಕತ್ತಲೆಯಾಗಿರಲಿ, ಯಾವುದಾದರೂ ಲಾಲಿ ಹಾಡನ್ನು ಕಡಿಮೆ ಶಬ್ದ ಇರಿಸಿ ಹಾಕಿ. ಮಗು ಮಲಗಿದ ಮೇಲೆ ಶಬ್ದ ಮಾಡಬೇಡಿ.

ಒಂದೇ ಸಮಯ ಪಾಲಿಸಿ

ನಿಮ್ಮ ಮಗು ಮಲಗುವ ಸಮಯವನ್ನು ಒಂದೇ ರೀತಿ ಪಾಲಿಸಿ. ಮಗು ಮಲಗುವ ಸಮಯದಲ್ಲಿ ವ್ಯತ್ಯಾಸವಾಗದೇ ಪ್ರತಿದಿನ ಅದೇ ಸಮಯದಲ್ಲಿ ಮಲಗಿಸಬೇಕು. ಮುಂದೆಯೂ ಈ ಕ್ರಮ ಅವರಿಗೆ ಅಭ್ಯಾಸವಾಗಿ ಅವರೇ ಸ್ವಯಂ ನಿದ್ರೆಗೆ ಜಾರುತ್ತಾರೆ.

ಇದನ್ನೂ ಓದಿ: Life style: ಕಾಫಿಗೆ Bye bye ಹೇಳಿ, ಕಾಫಿ ಬದಲು ನಿಮ್ಮಲ್ಲಿ ಚೈತನ್ಯ ತುಂಬೋ 5 ಪರ್ಯಾಯಗಳು ಇಲ್ಲಿವೆ ನೋಡಿ

ತಾಳ್ಮೆಯಿಂದಿರಿ

ನಿಮ್ಮ ಮಗು ಸರಿಯಾಗಿ ರಾತ್ರಿ ನಿದ್ರಿಸುತ್ತಿಲ್ಲ ಎಂದರೆ ಅದು ನಿದ್ರಾಹೀನತೆ ಅಥವಾ ಬೆಳವಣಿಗೆಯ ವೇಗದ ದೋಷವಾಗಿರಬಹುದು. ಮಗು ಕೆಲವು ಅಭ್ಯಾಸಗಳಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಈ ಸಂದರ್ಭದಲ್ಲಿ ತಾಳ್ಮೆಯಿಂದಿರಿ.

ತಾಯಂದಿರೇ ಇದನ್ನು ನೆನಪಿಡಿ

ಆದರೆ ನೆನಪಿನಲ್ಲಿಡಿ ನವಜಾತ ಶಿಶುಗಳಿಗೆ ಈ ಮೇಲಿನ ಕೆಲವು ಕ್ರಮಗಳನ್ನು ಅನುಸರಿಸಲಾಗುವುದಿಲ್ಲ. ಕಾರಣ ನವಜಾತ ಶಿಶುಗಳು ಹುಟ್ಟಿದ 3, 4 ತಿಂಗಳವರೆಗೆ ಹೆಚ್ಚು ಹೊತ್ತು ನಿದ್ರಿಸುತ್ತಾರೆ. ಇದು ಆರೋಗ್ಯವಂತ ಮಗುವಿಗೆ ಅವಶ್ಯಕವಾಗಿದೆ. ನಂತರದ ದಿನಗಳಲ್ಲಿ ಈ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸುವುದು ಅವರ ಉತ್ತಮ ನಿದ್ರೆಗೆ ಸಹಕರಿಸುತ್ತದೆ. ಹಾಗಿದ್ರೆ ಇಂದೇ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಮಗುವಿನೊಂದಿಗೆ ನೀವು ಸಹ ಸಿಹಿಯಾಗಿ ನಿದ್ದೆ ಮಾಡಿ…
Published by:Annappa Achari
First published: