ಶ್ರೀಮಂತ, ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾದ 2018

ಮದುವೆ ಎಂದರೆ ಅದು ಕುಟುಂಬದ ಸಂಭ್ರಮ, ಸಂತೋಷ.  ಅಂತಹ ಅದ್ಧೂರಿ ಮದುವೆಗಳು ಈ ವರ್ಷ ವಧು-ವರರ ಕುಟುಂಬಕ್ಕೆ ಮಾತ್ರವಲ್ಲದೇ ಭಾರತದ ಮಾಧ್ಯಮ ಹಾಗೂ ಅಭಿಮಾನಿ, ರಾಜಕಾರಣಿ, ಕ್ರೀಡಾ ಪ್ರೇಮಿಗಳಿಗೆ ರಸದೌತಣವನ್ನು ನೀಡಿದೆ.

Seema.R | news18
Updated:December 26, 2018, 1:14 PM IST
ಶ್ರೀಮಂತ, ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾದ 2018
ಸೆಲೆಬ್ರಿಟಿಗಳ ಮದುವೆ ಚಿತ್ರಗಳು
Seema.R | news18
Updated: December 26, 2018, 1:14 PM IST
ಈ ವರ್ಷ ಅಕ್ಷರಶಃ ಮದುವೆಯ ಸುಗ್ಗಿಯಂತಿತ್ತು. 2018ರಲ್ಲಿ ನಡೆದ ವಿವಾಹಗಳು ಕೇವಲ ರಾಷ್ಟ್ರ ಮಟ್ಟವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿವೆ. ವಿಶ್ವ ಕುಬೇರರ ಸಾಲಿನಲ್ಲಿ ನಿಲ್ಲುವ ಅಂಬಾನಿ ಮಗಳ ವಿವಾಹದಿಂದ ಹಿಡಿದು, ಪ್ರಖ್ಯಾತ ಬಾಲಿವುಡ್ ತಾರೆಯರಾದ ದೀಪಿಕಾ-ರಣವೀರ್​, ಪ್ರಿಯಾಂಕಾ-ನಿಕ್​ ಸೇರಿದಂತೆ ಹಲವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಇದಕ್ಕೆ ಪ್ರಮುಖ ಕಾರಣ.

ವರ್ಷದಲ್ಲಿ ಅಬ್ಬಾಬ್ಬ ಎಂದರೆ ಒಂದೆರಡು ಸೆಲೆಬ್ರಿಟಿ ಜೋಡಿಗಳು ಮದುವೆಯಾಗಿ ಸುದ್ದಿಯಾಗುತ್ತಿದ್ದರು. ಆದರೆ, ಈ ವರ್ಷ ಬಾಲಿವುಡ್​ ಅಂಗಳದಲ್ಲಿ ಮದುವೆಯಾಗಿದ್ದು ಐದಾರು ಜೋಡಿಗಳು. ಅದರಲ್ಲಿಯೂ ಹಾಲಿವುಡ್​-ಬಾಲಿವುಡ್​ ಅಂಗಳದಲ್ಲಿ ಹೆಸರು ಮಾಡಿ, ತಮ್ಮದೇ ಅಭಿಮಾನಿಗಳನ್ನುಹೊಂದಿರುವವರೆ.

ಸೋನಂ​ ಕಪೂರ್​, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ತಮ್ಮ ಏಕಾಂಗಿ ಜೀವನಕ್ಕೆ ಈ ವರ್ಷ ವಿದಾಯ ಹೇಳಿದ್ದಾರೆ. ಅಷ್ಟೇ ಅಲ್ಲದೇ ಅದ್ಧೂರಿಯಾಗಿ ಮದುವೆ ಆಗುವ ಮೂಲಕ ತಮ್ಮ ಅಭಿಮಾನಿಗಳ ಕಣ್ಣಿಗೆ ರಸದೌತಣವನ್ನು ನೀಡಿದ್ದು ಸುಳ್ಳಲ್ಲ.

ಬಾಲಿವುಡ್​ ತಾರೆಯರ ಮದುವೆಗಳ ಮತ್ತೊಂದು ವಿಶೇಷ ಎಂದರೆ, ಪ್ರೀತಿಸಿದವರು ಪರಸ್ಪರ ಬೇರೆ, ಜಾತಿ, ಧರ್ಮದವರಾಗಿದ್ದು, ಪ್ರೀತಿಯ ಮುಂದೆ ಅದು ನಗಣ್ಯ ಎಂದು ಜಗತ್ತಿಗೆ ಸಾರಿದ್ದು. ಜತೆಗೆ ಪರಸ್ಪರ ಎರಡು ಸಮುದಾಯಗಳ ಸಂಪ್ರದಾಯದಂತೆ ಮದುವೆಯಾಗಿದ್ದು, ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.

ದೀಪ್​ವೀರ್​ ಕಿ ಶಾದಿ....

ಬಾಲಿವುಡ್​ ಮಾತ್ರವಲ್ಲದೇ ರಾಮ್​ಲೀಲಾ ಅಭಿಮಾನಿ ಬಳಗ ಕಾದು ಕುಳಿತ ಮದುವೆ ದೀಪ್​ವೀರ್​ ವಿವಾಹ. ತಮ್ಮ ಮದುವೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬಂದ ದೀಪಿಕಾ ದೂರದ ಇಟಲಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದರು.


Loading...

ದೀಪಿಕಾ ಕನಸಿನಂತೆ ಲೆಕ್​ ಹೋಮ್​ನಲ್ಲಿ ಮದುವೆಯಾದ ರಣವೀರ್​ ಇಬ್ಬರೂ ಕುಟುಂಬದ ಸಂಪ್ರದಾಯದಂತೆ ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಮದುವೆಯಾದರು. ಇವರ ಮದುವೆ ಫೋಟೊಗಳಿಗಂತು ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದರು.

ದೀಪಿಕಾ-ರಣವೀರ್​ ಮದುವೆ ಭಾರತೀಯರಿಗೆ ಮಾತ್ರವಲ್ಲದೇ ಜಗತ್ತಿನ ಚಿತ್ರ ರಸಿಕರಿಗೆ ಹಬ್ಬದಂತೆ ಬಾಸವಾಗಿತ್ತು. ಕಾರಣ ಇವರ ಆರತಕ್ಷತೆ ತಿಂಗಳಿಡಿ ಮದುವೆ ಸಂಭ್ರಮದಲ್ಲಿಯೇ ದಿನ ಕಳೆದರು ಈ ಬಾಜಿರಾವ್​ -ಮಸ್ತಾನಿ.ಬೆಂಗಳೂರು, ಆದಾದ ಬಳಿಕ ಮುಂಬೈನಲ್ಲಿ ನಡೆದ ಇವರ ಆರತಕ್ಷತೆಯ ಫೋಟೋಗಳಿಗಾಗಿ ಮಾಧ್ಯಮಗಳು ಕಾದು ಕುಳಿತ್ತಿದ್ದವು. ಒಂದೊಂದು ಕಾರ್ಯಕ್ರಮದಲ್ಲಿಯೂ ಭಿನ್ನ ವಿಭಿನ್ನ ಉಡುಪುಗಳಲ್ಲಿ ಮಿಂಚಿದ ಈ ಜೋಡಿಯನ್ನು ನೋಡುವುದೇ ಒಂದು ಅದ್ಭುತವಾಗಿತ್ತು.

ಹಾಲಿವುಡ್​-ಬಾಲಿವುಡ್​ ಸಮಾಗಮ

ದೀಪಿಕಾ ಮದುವೆಯ ಗುಂಗಿನ್ನು ಮಾಸುವ ಮುನ್ನವೇ ಬಾಲಿವುಡ್​ ಬೆಡಗಿ, ಕೃಷ್ಣಾ ಸುಂದರಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್​ ಪಾಪ್​ ಗಾಯಕ ನಿಕ್​ ಜೋನಸ್​​ ಅವರನ್ನು ಮದುವೆಯಾದರು. ಅರಮನೆ ನಗರವಾದ ರಾಜಸ್ಥಾನದ ಜೋಧ್​​ಪುರದಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದ ಪಿಗ್ಗಿ, ತನಗಿಂತ 11 ವರ್ಷ ಸಣ್ಣ ವಯಸ್ಸಿನ ನಿಕ್​ ಜೊತೆ ಪ್ರಿಯಾಂಕಾ ಸಪ್ತಪದಿ ತುಳಿದರು.

ಒಂದು ವಾರಗಳ ಕಾಲ ಜೋಧ್​​ಪುರದಲ್ಲಿ ನಡೆದ ಮೆಹಂದಿ, ಸಂಗೀತ್​ ಸಂಭ್ರಮದಲ್ಲಿ ಹಾಲಿವುಡ್​, ಬಾಲಿವುಡ್​ ನಟ ನಟಿಯರು ಕುಣಿದು ಕುಪ್ಪಳಿಸಿದ್ದರು.ನಿಕ್​ ಜೋನಸ್​​ ಅವರ ಕುಟುಂಬದ ಪದ್ದತಿಯಂತೆ ಕ್ರೈಸ್ತ ಶೈಲಿಯಲ್ಲಿ​ ವಿವಾಹವಾದ ಈ ಜೋಡಿ ಎರಡು ಕುಟುಂಬದ ಇಚ್ಛೆಯಂತೆ ಮದುವೆ ಬಂಧನಕ್ಕೆ ಒಳಗಾದರು. ಬಾಲಿವುಡ್​ –ಹಾಲಿವುಡ್​ ಸಮಾಗಮವಾದ ಈ ಮದುವೆಯಂತು ಜೋಧ್​ಪುರದ​  ಅರಮನೆಯಲ್ಲಿ ಹೊಸ ಮೆರಗು ತಂದಿತು ಎಂದರು ತಪ್ಪಗಲಾರದು.

ಜೋಧ್​ಪುರದಲ್ಲಿ ಅದ್ದೂರಿಯಾಗಿ ಕನಸಿನ ವಿವಾಹವಾದ ಪ್ರಿಯಾಂಕಾ ಆಕಾಶದಲ್ಲಿ ಪಟಾಕಿಗಳ ಮೂಲಕ ಬಣ್ಣದ ಚಿತ್ತಾರ ಮೂಡಿಸಲು ಹೋಗಿ ವಿವಾದಕ್ಕೀಡಾದರು. ಕಾರಣ ಅಸ್ತಮಾದಿಂದ ಬಳಲುತ್ತಿರುವ ಪಿಗ್ಗಿ, ಪಟಾಕಿ ಹೊಡಿಯಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದ ಅವರು, ತಮ್ಮ ಮದುವೆಯಲ್ಲಿ ಪಟಾಕಿ ಹೊಡೆದು ಸದ್ದು ಟ್ರೋಲ್​ಗೆ ಬಲಿಯಾಗಿದ್ದರು.ಇನ್ನು ದೆಹಲಿಯಲ್ಲಿ ನಡೆದ ಅವರ ಮದುವೆ ಆರತಕ್ಷತೆಗೆ ಸಾಕ್ಷಿಯಾಗಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂಬಾನಿ ಕುಟುಂಬ. ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಆಪ್ತರಿಗಾಗಿ ಆರತಕ್ಷತೆ ನೀಡಿದ್ದ ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸುವ ಮೂಲಕ ಗಮನ ಸೆಳೆದರು.ಇಶಾ ಅಂಬಾನಿ ವಿವಾಹ

ಅಂಬಾನಿ ಎಂದರೆ ಸಾಕು ಜನರಲ್ಲಿ ಒಂದು ಕಲ್ಪನೆ ಮೂಡುತ್ತದೆ. ಫೋರ್ಬ್ಸ್​ ಪಟ್ಟಿಯಲ್ಲಿ ಹೆಸರು ಪಡೆದಿರುವ ವಿಶ್ವದ ಶ್ರೀಮಂತ ಉದ್ಯಮಿ ಮನೆಯಲ್ಲಿ ವಿವಾಹ ಎಂದರೆ ಕೇಳಬೇಕೆ. ಅಲ್ಲಿ ಸ್ವರ್ಗವೇ ಧರೆಗೆ ಇಳಿಯುತ್ತದೆ.

ರಾಜಸ್ಥಾನದ ಉದಯಪುರದಲ್ಲಿ ಒಂದು ವಾರದ ಕಾಲ ನಡೆದ ‘ರಾಜವೈಭೋಗದ ಮದುವೆ’ಗೆ ಪ್ರಪಂಚದ ಗಣ್ಯಾತಿಗಣ್ಯರು ಹಾಜರಾಗಿದ್ದರು.ಅಮೆರಿಕ ಮಾಜಿ ಪ್ರಧಾನ ಕಾರ್ಯದರ್ಶಿ ಹಿಲರಿ ಕ್ಲಿಂಟನ್​, ಬಾಲಿವುಡ್​ ತಾರಾ ಸಮಾಗಮ, ಮಮತಾ ಬ್ಯಾನರ್ಜಿ, ಪ್ರಣಬ್​ ಮುಖರ್ಜಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು, ಕ್ರೀಡಾ ದಿಗ್ಗಜರು ಸೇರಿದಂತೆ ಅನೇಕರು ಇಶಾ ಅಂಬಾನಿ ಹಾಗೂ ಆನಂದ್​ ಪಿರಮಲ್​​ ಮದುವೆಗೆ ಸಾಕ್ಷಿಯಾದರು.

ವಿವಾಹಪೂರ್ವ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗಾಗಿ 100 ಚಾರ್ಟೆರ್ಡ್ ವಿಮಾನಗಳ ವ್ಯವಸ್ಥೆ ಸಹ ಮಾಡಲಾಗಿತ್ತು. ಸುಮಾರು 710 ಕೋಟಿ ವಿವಾಹ ವೆಚ್ಚದಲ್ಲಿ ನಿರ್ಮಾಣವಾದ ಈ ಮದುವೆ ಸ್ವರ್ಗವೇ ಧರೆಗೆ ಇಳಿದಂತೆ ಇತ್ತು ಎಂದರೆ ತಪ್ಪಾಗಲಾರದು.ವಿಶೇಷ ವಿನ್ಯಾಸದ ಒಡವೆ, ಮದುವೆ ಬಟ್ಟೆಗಳಲ್ಲಿ ಮಿಂಚಿದ ಇಶಾ ತನ್ನ ಅಮ್ಮನ ಮದುವೆ ಸೀರೆಯನ್ನು ಹುಟ್ಟಿ ಗಮನ ಸೆಳೆದರು. ಸುಮಾರು 5000 ಸಾವಿರ ಜನರಿಗೆ ಇದೇ ವೇಳೆ ಅಂಬಾನಿ ಕುಟುಂಬ ಅನ್ನಸೇವೆಯನ್ನು ಏರ್ಪಡಿಸಿದ್ದರು.

ಸೋನಮ್​ ಕಪೂರ್​ ಮತ್ತು ಆನಂದ್​ ಅಹುಜಾ

ಚಿರ ಯೌವ್ವನಿಗ ಅನಿಲ್​ ಕಪೂರ್​ ಮಗಳಾದ ಸೋನಮ್​, ಉದ್ಯಮಿ ಆನಂದ್​ ಆಹೂಜ ಜೊತೆ ಸಪ್ತಪದಿ ತುಳಿದರು. ಪಂಜಾಬಿ ಶೈಲಿಯಲ್ಲಿ ನವ ಜೀವನಕ್ಕೆ ಕಾಲಿಟ್ಟ ಈ  ಜೋಡಿಯ ಮದುವೆ ಎರಡು ದಿನಗಳ ಕಾಲ ಬಾಲಿವುಡ್​ ಅಂಗಳದಲ್ಲಿ ಭರ್ಜರಿ ಸದ್ದು ಮಾಡಿತ್ತು.ಅದರಲ್ಲಿಯೂ ಸೋನಮ್​ ಮೆಹೆಂದಿ ಹಾಗೂ ಸಂಗೀತ್​ ಕಾರ್ಯಕ್ರಮದ ಚಿತ್ರಗಳು ಅಭಿಮಾನಿಗಳ ಕಣ್ಣು ತಂಪು ಮಾಡಿದ್ದವು. ಮುಂಬೈನಲ್ಲಿ ಅದ್ದೂರಿಯಾಗಿ ನಡೆದ ಆರತಕ್ಷತೆಯಲ್ಲಿ ಸೋನಮ್​ ಬಿಳಿಹಾಗೂ ಬೂದು ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದರು. ಸೋನಮ್​ರಷ್ಟೆ ಅದ್ಭುತವಾಗಿ ಸಿಂಗಾರವಾಗಿದ್ದ ಅಹುಜಾ ಆರತಕ್ಷತೆಯಲ್ಲಿ ಸ್ಪೋರ್ಟ್ಸ್​​ ಶೂ ಧರಿಸುವ ಮೂಲಕ ಹೊಸ ಟ್ರೆಂಡ್​ ಹುಟ್ಟುಹಾಕಿದರ ಜೊತೆಗೆ ಟ್ರೋಲ್​ ಸಹ  ಆದರು.

 

ಸದ್ದಿಲ್ಲದೆ ಮದುವೆಯಾದ ನೇಹಾ ಧೂಪಿಯಾ ಮತ್ತು ಅಗಂದ್​ ಬೇಡಿ

ತಮ್ಮ ಬಹುಕಾಲದ ಗೆಳೆಯ, ಮಾಡೆಲ್​ ಅಂಗದ್​ ಬೇಡಿಯೊಂದಿಗೆ  ಸದ್ದಿಲ್ಲದೇ ಮದುವೆಯಾದ ನೇಹಾ ಧೂಪಿಯಾ ತಮ್ಮ ಸ್ನೇಹಿತರು ಸೇರಿದಂತೆ ಅಭಿಮಾನಿಗಳಿಗೆ ಶಾಕ್​ ನೀಡಿದರು.ನೇಹಾ ಈ ರೀತಿ ಸದ್ದಿಲ್ಲದೆ ಮದುವೆಯಾಗುವುದಕ್ಕೆ ಕಾರಣ ಆಕೆ ವಿವಾಹಕ್ಕೆ ಮುಂಚೆಯೇ ಗರ್ಭಿಣಿಯಾಗಿದ್ದು. ಪಿಂಕ್​ ಬಣ್ಣದ ಲೆಹೆಂಗ ತೊಟ್ಟು ಮಿಂಚಿದ ನೇಹಾ ಮಾತ್ರ ನೋಡುಗರ ಗಮನ ಸೆಳೆದಿದ್ದರು.

ಮದುವೆ ಎಂದರೆ ವಧುವರ ಮಾತ್ರವಲ್ಲದೇ ಎಡರೂ ಕುಟುಂಬದವರು ಹಾಗೂ ಬಂಧು ಬಳಗದವರಿಗೆ ಸಂಭ್ರಮ... ಸಂತೋಷ... ಅಂತಹ ಅದ್ಧೂರಿ ಮದುವೆಗಳು ಈ ಬಾರಿ ವಧು-ವರರ ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಮಾಧ್ಯಮ, ಅಭಿಮಾನಿಗಳು, ರಾಜಕಾರಣಿ, ಕ್ರೀಡಾ ಪ್ರೇಮಿಗಳಿಗೆ ರಸದೌತಣವನ್ನು ನೀಡಿವೆ. ವರ್ಷದ ಕೊನೆಯಲ್ಲಿ ಆದ ಸಾಲು ಸಾಲು ಅದ್ದೂರಿ  ಹಾಗೂ ಐಷಾರಾಮಿ ಮದುವೆಗಳು ಇತರೆ ದೇಶಗಳು ತನ್ನತ್ತ ನೋಡುವಂತೆ ಮಾಡಿವೆ ಎಂದರೆ ತಪ್ಪಾಗಲಾರದು.

 
First published:December 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ