102 ವರ್ಷ ವಯಸ್ಸಿನ ವೈದ್ಯರು (Doctor) ಇನ್ನೂ ಜನರಿಗೆ ಮತ್ತು ರೋಗಿಗಳಿಗೆ ಸಲಹೆ ನೀಡುತ್ತಾರೆ ಎಂದರೆ ನಿಮಗೆ ನಂಬುವುದು ಕಷ್ಟವೇ? ಬನ್ನಿ ನಾವು ನಿಮಗೆ ವೈದ್ಯರೊಬ್ಬರನ್ನು ಪರಿಚಯಿಸುತ್ತೇವೆ. ಇವರು ಬರೋಬ್ಬರಿ 102 ವರ್ಷದವರು. ಅವರಿಗೆ ಇನ್ನೂ ಕನಿಷ್ಠ 10 ವರ್ಷಗಳ ಕಾಲ ಬದುಕುತ್ತೇನೆಂಬ ವಿಶ್ವಾಸವಿದೆಯಂತೆ. ಅದಕ್ಕಾಗಿ ಅವರು ತಮ್ಮ ದಿನಚರಿಯಲ್ಲಿ ತುಂಬಾ ಧನಾತ್ಮಕ ಚಟುವಟಿಕೆಗಳನ್ನು (Positive Activity)ಒಳಗೊಂಡಿದ್ದಾರೆ.
ಆ ಮಹಿಳೆ ಯಾರು?
ಈಗ ನಿಮಗೆ ಆ ಮಹಿಳೆ ಯಾರು? ಎಲ್ಲಿಯವರು ಎಂದು ತಿಳಿದುಕೊಳ್ಳೋಣ. ಆ ಮಹಿಳೆಯ ಹೆಸರು ಗ್ಲಾಡಿ ಮ್ಯಾಕ್ ಗ್ರೇ. ಅವರು ಅಮೆರಿಕದ ಅರಿಜೋನಾದವರು. ತುಂಬಾ ಮಹತ್ವಾಕಾಂಕ್ಷಿ ಆಗಿರುವ ಇವರ ವಯಸ್ಸು ಈಗ 102. ಈಗಲೂ ತಮ್ಮ ಜೀವನದ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು 10 ವರ್ಷಗಳ ಯೋಜನೆಯನ್ನು ಇವರು ಹೊಂದಿದ್ದಾರೆ.
ಇವರು 1970 ರ ದಶಕದಲ್ಲಿ ಅತ್ಯುತ್ತಮ ವೈದ್ಯರಾಗಿ ಮತ್ತು ಜನನ ತಜ್ಞರಾಗಿ ಹೆಸರು ಮಾಡಿದ್ದು ಸಾವಿರಾರು ಶಿಶುಗಳ ಜನನಗಳಿಗೆ ಸಾಕ್ಷಿಯಾಗಿದ್ದಾರೆ. ಮ್ಯಾಕ್ ಗ್ರೇ ಅವರ ಐದು ಮಕ್ಕಳು ನಿಧನರಾಗಿದ್ದರೂ ಅವರು ಎದೆಗುಂದಲಿಲ್ಲ. ಅವರ ಜೀವನ ಉತ್ಸಾಹ ಕಡಿಮೆ ಆಗಲಿಲ್ಲ. ಬದಲಿಗೆ ಅವರು ತಮ್ಮ ಜೀವನವನ್ನು ಪ್ರೀತಿಸುತ್ತಲೇ ಹೋದರು. ಅವರಿಗೆ ಜೀವನ ಮತ್ತು ಜೀವಿಸುವುದು ಹಬ್ಬವಿದ್ದಂತೆ.
ಇದನ್ನೂ ಓದಿ: 7 ಸಾವಿರ ಬೆಲೆಯ ಹಳೇ ವಾಚ್ 41 ಲಕ್ಷಕ್ಕೆ ಮಾರಾಟ! ಅಷ್ಟಕ್ಕೂ ಇದರ ವಿಶೇಷತೆಗಳೇನು?
ಈಗ ಮ್ಯಾಕ್ ಗ್ರೇ ತನ್ನ ಮಗಳೊಂದಿಗೆ ಅರಿಜೋನಾದಲ್ಲಿ ವಾಸವಾಗಿದ್ದಾರೆ. ಜೊತೆಗೆ ಸದಾಕಾಲ ಚಟುವಟಿಕೆಯಿಂದ ಕೂಡಿರುತ್ತಾರೆ. ಇವರ ಈ ಚಟುವಟಿಕೆಯ ಸಮಯ ಜೀವನದ ಕುರಿತು ಎಲ್ಲರಿಗೂ ಆಸಕ್ತಿ ಇದೆ.
'ದಿ ವೆಲ್ ಲಿವ್ಡ್ ಲೈಫ್: ಎ 102' ಎಂಬ ಪುಸ್ತಕ
ಹೀಗಾಗಿ ಅವರು ತಮ್ಮ ಜೀವನವನ್ನು ನಿರೂಪಿಸುವ "ದಿ ವೆಲ್ ಲಿವ್ಡ್ ಲೈಫ್: ಎ 102” ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ಜೀವನ, ತಮ್ಮ ಜೀವನದ ಉದ್ದೇಶ, ಸಲಹೆಗಳು, ಪಾಲಿಸುವ ನಿಯಮಗಳು ಹೀಗೆ ಎಲ್ಲದರ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಖಂಡಿತವಾಗಿಯೂ ಉತ್ತಮ ಮಾಹಿತಿ ಸಿಗುತ್ತದೆ.
ಮ್ಯಾಕ್ ಗ್ರೇ ಅವರ ಲೈಫ್ಸ್ಟೈಲ್
ಮ್ಯಾಕ್ ಗ್ರೇ ಅವರ ಇಂದಿನ ಜೀವನ ತುಂಬಾ ಸರಳವಾಗಿದೆ. ಅವರು ತಮ್ಮ ದಿನಚರಿಯನ್ನು ಬೆಳಗಿನ ಪ್ರಾರ್ಥನೆಯೊಂದಿಗೆ ಜೀವನದ ಹೊಸ ದಿನವನ್ನು ಸ್ವಾಗತಿಸುತ್ತಾರೆ.
ನಂತರ ಬೆಳಗ್ಗೆ ಎದ್ದು ಒಣದ್ರಾಕ್ಷಿ ಮತ್ತು ಒಣದ್ರಾಕ್ಷಿಯ ನೀರನ್ನು ಸೇವಿಸುತ್ತಾರೆ. ಇವರು ಊಟದ ಸಮಯದಲ್ಲಿ ಸ್ವಲ್ಪ ಸಲಾಡ್ ಮತ್ತು ಸೂಪ್ ಸೇವಿಸುತ್ತಾರೆ. ತಮಗೆ ಅವಶ್ಯಕ ಇರುವ ಪ್ರಮಾಣದಷ್ಟೇ ಸೇವಿಸುತ್ತಾರೆ. ಇದು ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಕಾರಿ ಆಗಿದೆ. ಮ್ಯಾಕ್ ಗ್ರೇ ಅವರು ದಿನವೀಡಿ ಚಟುವಟಿಕೆಯಿಂದ ಇರುತ್ತಾರೆ. ಮ್ಯಾಕ್ ಗ್ರೇ ಹೇಳುವಂತೆ ಅವರ ನೆಚ್ಚಿನ ಚಟುವಟಿಕೆ ಎಂದರೆ ಹೆಣಿಗೆ ಹಾಕುವುದು. ಇದು ಅವರ ಕೈಗಳನ್ನು ಯಾವಾಗಲೂ ಬಿಜಿ ಆಗಿ ಇಡುತ್ತದೆಯಂತೆ.
ಹೀಗಾಗಿ ಅವರು ಯಾವಾಗಲೂ ಹೆಣಿಗೆ ಹಾಕಲು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ಅವರ ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲ. ಹೀಗಾಗಿ ಅವರು ಹೆಣಿಗೆ ಹಾಕುವುದು ಸ್ವಲ್ಪ ಕಡಿಮೆ ಆಗಿದೆಯಂತೆ. ಆದರೆ ಅವರು ತಮ್ಮ ಫೋನ್ ಮೂಲಕ ಜನರಿಗೆ ಸಲಹೆಗಳನ್ನು ನೀಡಿ ಅವರನ್ನು ಹುರುದುಂಬಿಸುತ್ತಾರಂತೆ.
ಮ್ಯಾಕ್ ಗ್ರೇ, ಹೆಣಿಗೆ ಅಥವಾ ಸಮಾಲೋಚನೆ ಮಾಡದಿದ್ದಾಗ, ಆಡಿಯೋಬುಕ್‌ಗಳನ್ನು ಕೇಳುತ್ತಾರೆ ಅಥವಾ ಸ್ನೇಹಿತರೊಂದಿಗೆ ಮಾತನಾಡುತ್ತಾರೆ. ನೀವು ಮಾಡುವ ಚಟುವಟಿಕೆಗಳು ನಿಮ್ಮ ಮನಸ್ಸಿನ ಸಂತೋಷದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ನೀವು ಸಂತೋಷವಾಗಿದ್ದಷ್ಟೂ ನಿಮ್ಮಲ್ಲಿ ಧನಾತ್ಮಕ ಶಕ್ತಿ ಬೆಳೆಯುತ್ತದೆ. ಆಗ ನೀವು ಬೇಕಾದ್ದನ್ನು ಸಾಧಿಸಬಹುದು ಎಂದು ಅವರು ಹೇಳುತ್ತಾರೆ.
ಅವರು ಇತ್ತೀಚೆಗೆ ಸ್ಟೆಮ್ ಸೆಲ್ ಇನ್ಫ್ಯೂಜನ್ ಪಡೆದಿದ್ದಾರೆ. ಅದು ಅವರ ಚೈತನ್ಯದಲ್ಲಿ ವ್ಯತ್ಯಾಸವನ್ನು ಮಾಡಿದೆ ಎಂದು ಅವರು ಭಾವಿಸುತ್ತಾರೆ - ಆದರೂ ವಿಜ್ಞಾನಿಗಳು ಈ ತಂತ್ರವು ವಯಸ್ಸಾದವರಿಗೆ ನಿಧಾನಕ್ಕೆ ಸಹಾಯ ಮಾಡುತ್ತದೆ ಎಂಬುದನ್ನು ನಿರ್ಧರಿಸಲು ಇನ್ನೂ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.
“ನಾನು ಯಾವಾಗ ಸಾಯುತ್ತೇನೆ ಎಂಬುದರ ಕುರಿತು ನಾನು ಯೋಚಿಸುವುದಿಲ್ಲ. ಸದಾಕಾಲ ಕಾರ್ಯನಿರತವಾಗಿರುವುದೇ ನನ್ನ ಉದ್ದೇಶ. ನಾನು ತುಂಬಾ ಯೋಜನೆಗಳನ್ನು ಹೊಂದಿದ್ದೇನೆ. ನೀವು ನಿಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಿರಿ.
ಮುಂದಿನ ಹತ್ತು ವರ್ಷದ ಯೋಜನೆಯನ್ನು ಹಾಕಿಕೊಳ್ಳಿರಿ. ಅದನ್ನು ಸಾಧಿಸಲು ಪ್ರಯತ್ನಿಸಿ. ಜನರೊಂದಿಗೆ ಬೆರೆಯಿರಿ. ಪರಸ್ಪರ ಕಾಳಜಿ ವಹಿಸಿರಿ. ಚಿಕ್ಕವರಿಗೆ ಸರಿಯಾದ ಸಲಹೆ ನೀಡಿ. ಉತ್ತಮ ಮಾರ್ಗಗಳನ್ನು ರಚಿಸಿ, ಸರಳವಾಗಿ ಬದುಕಿ, ಸಾಮರಸ್ಯದಿಂದ ಬದುಕಿ, ಇವೆಲ್ಲವೂ ನಿಮ್ಮ ಬದುಕನ್ನು ಸಂತೋಷಮಯಗೊಳಿಸುತ್ತದೆ” ಎಂದು ಅವರು ಹೇಳುತ್ತಾರೆ. ಇದೆ ಅಲ್ಲವೇ ಜೀವನದಲ್ಲಿ ಧನಾತ್ಮಕತೆ ಅಂದರೆ..! ಒಟ್ಟಿನಲ್ಲಿ ಮ್ಯಾಕ್ ಗ್ರೇ ಹಾಗೆ ನಾವು ನೀವು ಬದುಕನ್ನು ರಚಿಸಿಕೊಳ್ಳುವತ್ತ ಗಮನಹರಿಸೋಣ. ಏನಂತೀರಿ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ