• Home
  • »
  • News
  • »
  • lifestyle
  • »
  • Healthy Life: ಈ 5 ಅಭ್ಯಾಸಗಳು ನಿಮ್ಮ ಮೆದುಳಿನ ಆರೋಗ್ಯವನ್ನು ಕೆಡಿಸುತ್ತವೆ, ಜೋಪಾನ!

Healthy Life: ಈ 5 ಅಭ್ಯಾಸಗಳು ನಿಮ್ಮ ಮೆದುಳಿನ ಆರೋಗ್ಯವನ್ನು ಕೆಡಿಸುತ್ತವೆ, ಜೋಪಾನ!

ಮೆದುಳಿನ ಆರೋಗ್ಯ

ಮೆದುಳಿನ ಆರೋಗ್ಯ

. ಈ ಮೆದುಳಿನ ಕಾಯಿಲೆಗಳ ಅಪಾಯಗಳಿಂದ ದೂರವಿರಲು ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ.

  • Share this:

ಈಗಿನ ಒತ್ತಡಭರಿತ ಬದುಕಿನಲ್ಲಿ ಮನಸ್ಸಿನ ಆರೋಗ್ಯ(Health) ಮತ್ತು ಮೆದುಳಿನ(Brain) ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಬಾಹ್ಯ ಕಾರಣಗಳಿಗಿಂತಲೂ ಹೆಚ್ಚಾಗಿ ನಮ್ಮ ಆಂತರಿಕ ಕಾರಣಗಳು(Reasons) ಎಂದರೆ ಅತಿಯಾಗಿ ಚಿಂತೆ ಮಾಡುವುದು, ಒತ್ತಡದಿಂದ ಬದುಕುವುದು, ಜಡತ್ವ ಜೀವನಶೈಲಿಯಿಂದ(Healthy Lifestyle) ಹೊರ ಬರದೇ ಇರುವುದೆಲ್ಲವು ಆಲ್ಝೈಮರ್ ಕಾಯಿಲೆ ಎಂದರೆ ಮರೆವಿನ ಕಾಯಿಲೆಗೆ ನಮ್ಮನ್ನು ತಳ್ಳುತ್ತದೆ. ಇದು ಹೀಗೆ ದೀರ್ಘಕಾಲದವರೆಗೆ ಮುಂದುವರೆದು ಬುದ್ಧಿಮಾಂದ್ಯತೆಯ ಅಪಾಯವನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.


ಹಾಗಾಗಿ ಕೆಲವೊಂದು ನಮ್ಮ ಅಭ್ಯಾಸಗಳೇ ನಮ್ಮ ಜೀವನಕ್ಕೆ ಮುಳ್ಳಾಗುತ್ತವೆ, ಆದ್ದರಿಂದ ಅಂತಹ ಅಭ್ಯಾಸಗಳನ್ನು ತೊರೆಯುವುದು ಮತ್ತು ಆರೋಗ್ಯಕರವಾಗಿರುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.


ವ್ಯಾಯಾಮ ಮಾಡದೇ ಸದಾ ಕುಳಿತುಕೊಂಡು ಮಾಡುವ ಕೆಲಸವು ಮನಸ್ಸನ್ನು ಮತ್ತು ಮೆದುಳನ್ನು ಇನ್ನಷ್ಟು ಕುಗ್ಗಿಸುತ್ತದೆ ಅಂತ ಹೇಳಬಹುದು. ಇಂತಹ ಜೀವನಶೈಲಿ ಮುಂದೆ ಅರಿವಿನ ಕುಸಿತಕ್ಕೂ ಸಹ ಕಾರಣವಾಗಬಹುದು ಮತ್ತು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು. ಸಕ್ಕರೆ ಇರುವ ಮತ್ತು ಹೆಚ್ಚಿನ ಕ್ಯಾಲೋರಿಯ ಆಹಾರವು ಮೆದುಳಿನ ಉರಿಯೂತಕ್ಕೆ ಕಾರಣವಾಗುವುದರಿಂದ ನಮ್ಮ ಆಹಾರ ಪದ್ಧತಿಗಳು ಸಹ ಪರಿಣಾಮ ಬೀರಬಹುದು. ಇದಲ್ಲದೆ, ಮದ್ಯ ಸೇವನೆ ಮತ್ತು ಮಾದಕವಸ್ತುಗಳ ಬಳಕೆಯು ಆರಂಭಿಕ ಮೆದುಳಿನ ಅಂಗಾಂಶ ನಷ್ಟಕ್ಕೆ ಕಾರಣವಾಗಬಹುದು.


ಇದನ್ನೂ ಓದಿ: Exercise: ದಿನಕ್ಕೆ ಇಷ್ಟು ನಿಮಿಷ ಮಾತ್ರ ವ್ಯಾಯಾಮ ಮಾಡಿ, ಜಾಸ್ತಿ ಮಾಡ್ಬೇಡಿ


ಏನಿದು ಆಲ್ಝೈಮರ್ ಕಾಯಿಲೆ ಮತ್ತು ಇದು ಹೇಗೆ ಉಂಟಾಗುತ್ತದೆ?


ಆಲ್ಝೈಮರ್ ಕಾಯಿಲೆಗೆ ಸಂಬಂಧಿಸಿದಂತೆ, ಮೆದುಳಿನ ಜೀವಕೋಶಗಳಲ್ಲಿ ಮತ್ತು ಅದರ ಸುತ್ತಲೂ ಪ್ರೋಟೀನ್ ಗಳ ಅಸಹಜ ನಿರ್ಮಾಣದಿಂದ ಇದು ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ಅಮಿಲಾಯ್ಡ್ ಎಂಬ ಪ್ರೋಟೀನ್ ಮೆದುಳಿನ ಜೀವಕೋಶಗಳ ಸುತ್ತಲೂ ಪ್ಲೇಕ್ ಗಳನ್ನು ರೂಪಿಸುತ್ತದೆ, ಆದರೆ ಮತ್ತೊಂದು ಪ್ರೋಟೀನ್ ಟಾವು ಮೆದುಳಿನ ಜೀವಕೋಶಗಳಲ್ಲಿ ತೊಡಕುಗಳನ್ನು ಉಂಟು ಮಾಡಬಹುದು. ಈ ಪ್ರಕ್ರಿಯೆಯು 40ನೇ ವಯಸ್ಸಿನಲ್ಲಿಯೇ ಪ್ರಾರಂಭವಾಗಬಹುದು, ಇದು ಆರಂಭಿಕ ಹಂತದ ಅಲ್ಝೈಮರ್ ಆಗಿರುತ್ತದೆ.


ಒತ್ತಡದ, ಜಡ ಮತ್ತು ಅನಾರೋಗ್ಯಕರ ಜೀವನಶೈಲಿಯನ್ನು ಹೊಂದಿರುವ ಯಾರಾದರೂ ಅಲ್ಝೈಮರ್ ಅಥವಾ ಬುದ್ಧಿಮಾಂದ್ಯತೆಯ ಆರಂಭಿಕ ಅಪಾಯವನ್ನು ಹೊಂದಿರಬಹುದು. ಯಾವಾಗ ಮೆದುಳಿನ ಆರೋಗ್ಯವು ಹದಗೆಡಲು ಪ್ರಾರಂಭಿಸುತ್ತದೆಯೋ, ಆಗ ಅವರು ಜೀವನವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ ಮತ್ತು ಅದು ಅವರಿಗೆ ಒಂದು ಹೊರೆಯಂತೆ ತೋರುತ್ತದೆ. ಈ ಮೆದುಳಿನ ಕಾಯಿಲೆಗಳ ಅಪಾಯಗಳಿಂದ ದೂರವಿರಲು ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ.


ಮುಂಬೈನ ಬೈಕುಲ್ಲಾದ ಮಸಿನಾ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಡಾ. ಮಝರ್ ಅಬ್ಬಾಸ್ ತುರಾಬಿ ಅವರು ಅಲ್ಝೈಮರ್ ಕಾಯಿಲೆಯ ಅಪಾಯವನ್ನುಂಟು ಮಾಡುವ ಹಾನಿಕಾರಕ ಅಭ್ಯಾಸಗಳ ಬಗ್ಗೆ ಮತ್ತು ನಮ್ಮ ಜೀವನಶೈಲಿಯನ್ನು ನಾವು ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದ್ದಾರೆ.


ಅಲ್ಝೈಮರ್ ಕಾಯಿಲೆಗೆ ಕಾರಣವಾಗಬಹುದಾದ ಹಾನಿಕಾರಕ ಅಭ್ಯಾಸಗಳು


1. ಜಡ ಜೀವನಶೈಲಿಯನ್ನು ಹೊಂದಿರುವುದು: ಜಡ ಜೀವನಶೈಲಿಯು ನಿಸ್ಸಂದೇಹವಾಗಿ ನಮ್ಮ ಮೆದುಳನ್ನು ನಿಧಾನಗೊಳಿಸುತ್ತದೆ ಮತ್ತು ಅನೇಕ ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಮಗೆ ವಯಸ್ಸಾದಂತೆ ನಮ್ಮ ಮೆದುಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಮತ್ತು ತೀಕ್ಷ್ಣವಾಗಿಟ್ಟುಕೊಳ್ಳಲು ಅರಿವಿನ ಸಮಸ್ಯೆಗಳನ್ನು ತಡೆಯುವ ಹಲವಾರು ಪ್ರಯೋಜನಗಳನ್ನು ಈ ವ್ಯಾಯಾಮವು ನೀಡುತ್ತದೆ. ವ್ಯಾಯಾಮವು ಹೃದಯ ಬಡಿತವನ್ನು ಹೆಚ್ಚಿಸುತ್ತದೆ, ಎಂಡಾರ್ಫಿನ್ ಅನ್ನು ಬಿಡುಗಡೆ ಮಾಡುತ್ತದೆ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಮೆದುಳಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತವೆ, ಇದು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.


2. ಅಸಮರ್ಪಕ ನಿದ್ರೆ: ರಾತ್ರಿ ಹೊತ್ತಿನಲ್ಲಿ ಸರಿಯಾಗಿ ನಿದ್ರೆ ಮಾಡದೆ ಇರುವುದರಿಂದ ಹಗಲು ಹೊತ್ತಿನಲ್ಲಿ ನಿದ್ರೆ ನಮ್ಮನ್ನು ಅವರಿಸಿಕೊಳ್ಳಬಹುದು. ಇದರಿಂದ ನಮ್ಮ ಕೆಲಸ ಮಾಡುವ ಕ್ಷಮತೆ ಮತ್ತು ಗಮನಕ್ಕೂ ಸಹ ಭಂಗ ಬರುವುದು. ದೀರ್ಘಕಾಲದವರೆಗೆ ನಿದ್ರೆ ಸರಿಯಾಗಿ ಮಾಡದೆ ಇರುವುದು ನಿಮ್ಮ ಮೆದುಳಿನಲ್ಲಿ ಟಾವ್ ಎಂದು ಕರೆಯಲ್ಪಡುವ ಪ್ರೋಟೀನ್ ಮಟ್ಟವನ್ನು ಹೆಚ್ಚಿಸಬಹುದು, ಇದು ಅಲ್ಝೈಮರ್ಸ್ ಕಾಯಿಲೆಗೆ ಕಾರಣವಾಗಬಹುದು.


3. ನಿರ್ಜಲೀಕರಣ: ಸಾಮಾನ್ಯವಾಗಿ, ನಾವು ದಿನಕ್ಕೆ 8 ಲೋಟಗಳಷ್ಟು ನೀರನ್ನು ಕುಡಿಯಬೇಕು ಅಂತ ವೈದ್ಯರು ಹೇಳುತ್ತಾರೆ. ದೇಹಕ್ಕೆ ಬೇಕಾಗಿರುವಷ್ಟು ನೀರನ್ನು ಕುಡಿಯದೆ ಇರುವುದು ಅಥವಾ ದ್ರವವನ್ನು ಹೊಂದಿರುವ ಆಹಾರಗಳನ್ನು ಸೇವಿಸದಿರುವುದು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಇದು ಬುದ್ಧಿಮಾಂದ್ಯತೆಗೂ ಸಹ ಕಾರಣವಾಗುತ್ತದೆ.


4. ಮಾದಕ ದ್ರವ್ಯ ಮತ್ತು ಆಲ್ಕೋಹಾಲ್ ಬಳಕೆ: ದೀರ್ಘಕಾಲದವರೆಗೆ ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸುವುದರಿಂದ ನಮ್ಮ ಮೆದುಳಿಗೆ ಹಾನಿಯಾಗಬಹುದು ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು. ಮಿತವಾಗಿ ಆಲ್ಕೋಹಾಲ್ ಸೇವನೆಯು ಡಿಮೆನ್ಶಿಯಾದ ಹೆಚ್ಚಿದ ಅಪಾಯದೊಂದಿಗೆ ಖಚಿತವಾಗಿ ಸಂಬಂಧ ಹೊಂದಿಲ್ಲ, ಅಥವಾ ಬುದ್ಧಿಮಾಂದ್ಯತೆಯ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ ಎಂದು ಸಹ ತೋರಿಸಲಾಗಿಲ್ಲ.


5. ಕಳಪೆ ಆಹಾರ ಸೇವಿಸುವುದು: ಚೀಸ್, ಬೆಣ್ಣೆ ಕೇಕ್, ಕೆಂಪು ಮಾಂಸ ಮುಂತಾದ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ, ಏಕೆಂದರೆ ಅವು ಅರಿವಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ. ಅವುಗಳ ಬದಲಿಗೆ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.


ಮೆದುಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ:


- ಆರೋಗ್ಯಕರವಾದ ಆಹಾರಗಳನ್ನು ಸೇವಿಸುವುದು


- ಆಲ್ಕೋಹಾಲ್ ಮತ್ತು ಡ್ರಗ್ಸ್ ನಿಂದ ದೂರವಿರುವುದು


- ಕೆಲಸದಿಂದ ವಿರಾಮ ತೆಗೆದುಕೊಳ್ಳಿ ಮತ್ತು ಜೀವನವನ್ನು ಆನಂದಿಸಿ


- ನಿಮ್ಮ ಕುಟುಂಬದವರೊಡನೆ ಇರಲು ಸಮಯ ತೆಗೆದುಕೊಳ್ಳಿ


- ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಿ


- ಒತ್ತಡವನ್ನು ಕಡಿಮೆ ಮಾಡಿಕೊಳ್ಳಿರಿ.

Published by:Latha CG
First published: